ಬಸವಕಲ್ಯಾಣ
ವಿಶ್ವಗುರು ಬಸವಣ್ಣನವರ ತತ್ವಗಳನ್ನು ವಿಶ್ವದಲ್ಲೆಡೆ ಪಸರಿಸುವ ಸದುದ್ಧೇಶದಿಂದ “ಬಸವ ಉತ್ಸವ”ವನ್ನು ಪ್ರತಿ ವರ್ಷ ಆಚರಿಸಬೇಕು ಎಂದು ಬಸವಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.
ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಪ್ರಾರಂಭಿಸಿದ “ಬಸವ ಉತ್ಸವ” ವನ್ನು ಈ ವರ್ಷದಿಂದ ಮತ್ತೆ ಶುರು ಮಾಡಬೇಕೆಂದು ಬಸವಕಲ್ಯಾಣದ ಬಸವತತ್ವ ಪ್ರಸಾರ ಕೇಂದ್ರ ಹಾಗೂ ರಾಷ್ಟ್ರೀಯ ಬಸವದಳ ಸಂಘಟನೆಗಳು ಸರ್ಕಾರವನ್ನು ಕಳಕಳಿಯಿಂದ ಕೇಳಿಕೊಂಡಿವೆ.
ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತರು, ಬಸವಕಲ್ಯಾಣ, ಮತ್ತು ಆಯುಕ್ತರು, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ, ಇವರಿಗೆ ಗುರುವಾರ ಸಲ್ಲಿಸಲಾಯಿತು.

ಸರಕಾರದ ವತಿಯಿಂದ ನವರಸೋತ್ಸವ, ಆನೆಗುಂದಿ ಉತ್ಸವ, ಹಂಪಿ ಉತ್ಸವ, ಕರಾವಳಿ ಉತ್ಸವ, ಜಲಪಾತೋತ್ಸವ, ಜನಪದೋತ್ಸವ, ಕನ್ನಡ ಸಾಹಿತ್ಯೋತ್ಸವ, ಕನಕೋತ್ಸವ, ಕದಂಬೋತ್ಸವ, ಬನಶಂಕರಿ ಉತ್ಸವ, ಕಿತ್ತೂರು ಉತ್ಸವ, ರಾಷ್ಟ್ರಕೂಟ ಉತ್ಸವ, ಬೀದರ ಉತ್ಸವ ಮುಂತಾದ ಕಾರ್ಯಕ್ರಮಗಳು ಆಗಲೇ ನಡೆಯುತ್ತಿವೆಯೆಂದು ಪತ್ರದಲ್ಲಿ ಸ್ಮರಿಸಲಾಗಿದೆ.
ಸಂಘಟನೆಯ ಪದಾಧಿಕಾರಿಗಳು, ಬಸವಾಭಿಮಾನಿಗಳಾದ ಜಯಪ್ರಕಾಶ ಸದಾನಂದೆ, ಮಹಾದೇವಪ್ಪಾ ಇಜಾರೆ, ಗಣಪತಿ ಕಾಸ್ತೆ, ಶಂಕರ ಕರುಣೆ, ಲಕ್ಷ್ಮೀಬಾಯಿ ಹೂಗಾರ, ವಿಜಯಲಕ್ಷ್ಮಿ ಗಡ್ಡೆ, ಸುಮಿತ್ರಾ ದಾವಣಗಾಂವೆ, ಸಂಗೀತಾ ಅಂಬಣ್ಣಾ, ಜಗನ್ನಾಥ ಕುಸನೂರೆ, ಈಶ್ವರ ಶೀಲವಂತ, ರವೀಂದ್ರ ಕೋಳಕುರ, ಶಿವಕುಮಾರ ಬಿರಾದಾರ, ಸಂಗಮೇಶ ತೊಗರಖೇಡೆ, ಚಂದ್ರಪ್ಪಾ ಗುಂಗೆ, ಬಸವರಾಜ ನರಶೆಟ್ಟಿ, ಚನ್ನಪ್ಪಾ ಇಜಾರೆ, ರಾಜಶೇಖರ ಬಿರಾದರ, ಶಾಮರಾವ ಪಂಡರಗೆರೆ ಮತ್ತಿತರರು ಮನವಿ ಪತ್ರಕ್ಕೆ ಸಹಿ ಮಾಡಿ, ಉಪಸ್ಥಿತರಿದ್ದರು.