ಬೆಳಗಾವಿ:
ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ರವಿವಾರ ವಚನ ವಿಶ್ಲೇಷಣೆ ಕಾರ್ಯಕ್ರಮ ನಡೆಯಿತು.
‘ಹನ್ನೆರಡನೆಯ ಶತಮಾನದ ವಚನಕಾರ್ತಿಯರ ಕೊಡುಗೆ’ ವಿಷಯವಾಗಿ ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರದ ವಿಶ್ವಸ್ಥರಾದ ಸುಧಾ ಪಾಟೀಲ ಅವರು ಉಪನ್ಯಾಸ ನೀಡಿದರು.
ಬಸವಣ್ಣನವರ ದೃಷ್ಟಿಯಲ್ಲಿ ಹೆಣ್ಣು ಪ್ರತಿಭೆಯಲ್ಲಿ, ಬೌದ್ಧಿಕತೆಯಲ್ಲಿ ಪುರುಷನಷ್ಟೇ ಸರಿಸಮಾನಳು ಎಂದು ಹೇಳುತ್ತಾ 28 ಪ್ರಮುಖ ಸಂಕ್ಷಿಪ್ತ ಪರಿಚಯ ಮತ್ತು ಅವರು ಬರೆದ ವಚನಗಳ ಸಾರವನ್ನು ಹಂಚಿಕೊಂಡರು.

ಬಹಳಷ್ಟು ಜನ ಶರಣೆಯರು ತಮ್ಮ ಗಂಡನ ಕಾಯಕವೆಂಬ ಹಣತೆಯಲ್ಲಿ ಎಣ್ಣೆಯಾಗಿ, ಬತ್ತಿಯಾಗಿ, ಪತಿಗೆ ಮಾರ್ಗ ಜ್ಯೋತಿಯಾಗಿದ್ದರು. ಅವರಲ್ಲೇ ಕೆಲವರು ಎಚ್ಚರತಪ್ಪಿದ ತಮ್ಮ ಗಂಡನನ್ನು ಸರಿದಾರಿಗೆ ತರಲು ಶ್ರಮಿಸಿ ಯಶಸ್ವಿಯಾಗಿದ್ದಾರೆ.
ಕೆಲವು ಶರಣೆಯರು ತಮ್ಮ ಗಂಡನ ಹೆಸರನ್ನು ವಚನದ ಅಂಕಿತವಾಗಿಟ್ಟುಕೊಂಡರೆ ಮತ್ತೆ ಕೆಲವರು ತಮ್ಮ ಇಷ್ಟ ದೈವವನ್ನು ವಚನದ ಅಂಕಿತವಾಗಿ ಇಟ್ಟುಕೊಂಡಿದ್ದರು. ಶರಣರು ತಮ್ಮ ವಚನಗಳಲ್ಲಿ ಪ್ರಚಲಿತ ವಿದ್ಯಮಾನಗಳ ವಿಮರ್ಶೆ, ಕಾಯಕ ಪ್ರೀತಿ, ಧರ್ಮನಿಷ್ಠೆ, ಕರುಣೆ, ಮಾನವಿಯತೆ, ವಿಶ್ವಮಾನವ ಪರಿಕಲ್ಪನೆ, ನೇರನುಡಿ, ಆತ್ಮವಿಶ್ವಾಸದಿಂದ ವಚನಗಳನ್ನು ರಚಿಸಿರುವುದು ಕಂಡುಬರುತ್ತದೆ ಎಂದು ಹೇಳಿದರು.
ಅಕ್ಕಮಹಾದೇವಿ, ಗಂಗಾಂಬಿಕೆ, ನೀಲಾಂಬಿಕೆ, ಅಮುಗೆ ರಾಯಮ್ಮ, ಅಕ್ಕಮ್ಮ, ಅಕ್ಕನಾಗಮ್ಮ, ಆಯ್ದಕ್ಕಿ ಲಕ್ಕಮ್ಮ, ಕದಿರ ರೆಮ್ಮವ್ವೆ, ಕನ್ನಡಿ ಕಾಯಕದ ರೇಮವ್ವ, ಕಾಳವ್ವೆ, ಕಾಲಕಣ್ಣಿ ಕಾಮವ್ವ, ಮೋಳಿಗೆ ಮಹಾದೇವಿ ಕೊಟ್ಟಣದ ಸೋಮವ್ವ, ಕೇತಲಾದೇವಿ, ಗೊಗ್ಗವ್ವೆ, ದುಗ್ಗಳೆ, ಬೊಂತಾದೇವಿ, ಮಸಣಮ್ಮ, ರೇಕಮ್ಮ, ಲಿಂಗಮ್ಮ, ಲಕ್ಷ್ಮಮ್ಮ, ವೀರಮ್ಮ, ಸತ್ಯಕ್ಕ ಹೀಗೆ ಎಲ್ಲ ಶರಣೆಯರ ಪರಿಚಯವನ್ನು ಮಾಡಿಕೊಟ್ಟರು.
ಪ್ರಾರಂಭದಲ್ಲಿ ಲಕ್ಷ್ಮಿ ಜೇವಣಿ ಸಾಮೂಹಿಕ ಪ್ರಾಥ೯ನೆ ನಡೆಸಿಕೊಟ್ಟರು. ಮಹಾಂತೇಶ ಮೆಣಸಿನಕಾಯಿ ಪರಿಚಯಿಸಿದರು. ವಿ.ಕೆ. ಪಾಟೀಲ, ಲಕ್ಷೀ ಜೇವಣಿ, ಅಕ್ಕಮಹಾದೇವಿ ತೆಗ್ಗಿ, ಲಲಿತಾ ಪಾಟೀಲ, ಶಿವಕುಮಾರ ಪಾಟೀಲ ವಚನ ವಿಶ್ಲೇಷಣೆ ಮಾಡಿದರು.
ಲಕ್ಷೀಕಾಂತ ಗುರವ ದಾಸೋಹ ಸೇವೆಗೈದರು. ಸಂಗಮೇಶ ಅರಳಿ ನಿರೂಪಿಸಿದರು. ಸಿದ್ದಪ್ಪ ಸಾರಾಪೂರಿ, ಸದಾಶಿವ ದೇವರಮನಿ, ಶಶಿಭೂಷಣ ಪಾಟೀಲ, ಶಂಕರ ಗುಡಸ, ಬಸವರಾಜ ಕರಡಿಮಠ, ಸೋಮಶೇಖರ ಕಟ್ಟಿ, ಗುರಸಿದ್ದಪ್ಪ ರೇವಣ್ಣವರ, ಶಂಕರಪ್ಪಾ ಮೆಣಸಗಿ, ಬಾಳಗೌಡ ದೊಡಬoಗಿ, ಸುರೇಶ ಹಂಜಿ, ಕಮ್ಮಾರ, ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
