ಪ್ರಥಮ ಮಹಿಳಾ ಗುರುವೆ ಬಸವನ ವರಕುವರಿ ಚಿನ್ಮೂಲಾದ್ರಿ ಚಿತ್ಕಳೆ ಮಾತಾಜಿ ನಿಮ್ಮ ಕೊಂಡಾಡಿ ತಣಿಯುವೆ.
ಚಿನ್ಮೂಲಾದ್ರಿಯ ಚಿತ್ಕಳೆಯಾದ ಪೂಜ್ಯ ಶ್ರೀ ಮಹಾಜಗದ್ಗುರು ಡಾ. ಮಾತೆ ಮಹಾದೇವಿಯವರು ಜನಿಸಿದ್ದು ಚಿತ್ರದುರ್ಗದ ಸಾಸಲಟ್ಟಿಯ ಶರಣೆ ಗಂಗಮ್ಮ ಡಾ. ಎಸ್.ಆರ್. ಬಸಪ್ಪನವರ ಚಿದ್ಗರ್ಭದಲ್ಲಿ ದಿನಾಂಕ 13-03-1946ರಂದು, ಅವರ ಜನ್ಮ ನಾಮ ರತ್ನ. ತಮ್ಮ ಚಿಕ್ಕ ವಯಸ್ಸಿನಲ್ಲಿ ಮಹಾಜಗದ್ಗುರು ಲಿಂಗಾನಂದ ಮಹಾಸ್ವಾಮೀಜಿಯವರಿಂದ ಲಿಂಗದೀಕ್ಷೆ ಮತ್ತು ಜಂಗಮದೀಕ್ಷೆ ಪಡೆದು ಮಾತೆ ಮಹಾದೇವಿ ಎಂಬ ನಾಮದೊಂದಿಗೆ ವಿಶ್ವಕ್ಕೆ ಪರಿಚಿತರಾದರು.
ಮರುಗದ ಗಿಡದಂತೆ ಹುಟ್ಟುತ್ತಲೇ ಪರಿಮಳವೆಂಬಂತೆ ಜ್ಞಾನ ಭಂಡಾರಿಯಾಗಿ, ಗುರು ಮುಟ್ಟಿ ಗುರುವಾಗಿ ಅನೇಕ ಬಿರುದುಗಳಿಂದ ಶೋಭಿಸುತಿದ್ದ ಮಾತೆ ಮಹಾದೇವಿಯವರು ತಮ್ಮ ಶಿಷ್ಯರಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದು ಮಾತಾಜಿ ಎಂದು.
ಎಂ.ಎ. ತತ್ವಜ್ಞಾನಿಗಳಾಗಿದ್ದ ಪೂಜ್ಯ ಶ್ರೀಮಾತಾಜಿಯವರು ಶ್ರೇಷ್ಠ ಸಾಹಿತಿ, ಸಂಶೋಧಕಿ, ಕವಿಯತ್ರಿ, ಲೇಖಕರಲ್ಲದೆ, ಉತ್ತಮ ವಾಗ್ಮಿಗಳಾಗಿದ್ದರು ಪೂಜ್ಯ ಮಾತಾಜಿಯವರು. ಹುಟ್ಟು ಹೋರಾಟಗಾರರಾಗಿದ್ದ ಅವರು, 12ನೇ ಶತಮಾನದಲ್ಲಿ ಧರ್ಮಗುರು ಬಸವಣ್ಣನವರು ಸಂಸ್ಥಾಪಿಸಿ ಕೊಟ್ಟ ಲಿಂಗಾಯತ ಧರ್ಮದ ಪುನುರುತ್ಥಾನಕ್ಕಾಗಿ ವಚನ ಸಾಹಿತ್ಯವನ್ನು ಆಳವಾಗಿ ಆಧ್ಯಯನಿಸಿ ಸಮಾಜದಲ್ಲಿ ಬಸವತತ್ತ್ವ ಜಾರಿಗೆ ತರಲು ಅನೇಕ ಧಾರ್ಮಿಕ ಗ್ರಂಥಗಳನ್ನು ಬರೆದು ಅವುಗಳಿಗೆ ಧಾರ್ಮಿಕ ಚೌಕಟ್ಟನ್ನು ಒದಗಿಸಿ ಆವರಗೆ ಮೂಢನಂಬಿಕೆಯಲ್ಲಿದ್ದ ಲಿಂಗಾಯತರನ್ನು ಬಡಿದೆಬ್ಬಿಸಿ ನಿಜಾಚರಣೆಗಳನ್ನು ಕಲಿಸಿದರು.
ಪೂಜ್ಯ ಮಾತಾಜಿಯವರು ಎರಡು ನೂರಕ್ಕು ಹೆಚ್ಚು ಪುಸ್ತಕಗಳನ್ನು ಸ್ವತಃ ಬರೆದು, ವಿಶ್ವಕಲ್ಯಾಣ ಮಿಷನ್ ಸುಯಿಧಾನ ಸುಗ್ರಂಥ ಮಾಲೆಯಲ್ಲಿ ಪ್ರಕಾಶಿಸಿ 100ಕ್ಕೂ ಹೆಚ್ಚು ಗ್ರಂಥಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಅದರಲ್ಲಿ ತರಂಗಿಣಿ, ಹೆಪ್ಪಿಟ್ಟ ಹಾಲು ಜನಪ್ರಿಯ ಕಾದಂಬರಿಗಳಿಗೆ ಕರ್ನಾಟಕ ರಾಜ್ಯ ಅಕಡಾಮಿ ಪ್ರಶಸ್ತಿ ಲಭಿಸಿವೆ. ಕಾಲೇಜ್ ವಿಧ್ಯಾರ್ಥಿಯಾಗಿದ್ದಾಗ ಬರೆದಿದ್ದ ಬಸವ ತತ್ತ್ವ ದರ್ಶನ ಪುಸ್ತಕವು ಎಂ ಎ ತತ್ತ್ವಜ್ಞಾನ ಓದುತ್ತಿದ್ದಾಗಿ ತಮಗೆನೇ ಪಠ್ಯ ಪುಸ್ತಕವಾಗಿ ಬಂದಿದ್ದು ಅವರ ವಿದ್ವತ್ತಿಗೆ ಹಿಡಿದ ಕೈಗನ್ನಡಿ.
ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕವಾಗಿ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದರು. ಐದು ದಶಕಗಳಿಂದಲೂ ಬಸವತತ್ವಕ್ಕಾಗಿ ತಮ್ಮ ಜೀವನವನ್ನು ಶ್ರೀಗಂಧದಂತೆ ಸವೆಸಿದ ಪೂಜ್ಯ ಮಾತಾಜಿ; ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ, ಸ್ವಾರ್ಥಕ್ಕಾಗಿ ಯಾರನ್ನು ಓಲೈಯಿಸದೆ, ನೇರ ನಡೆ-ನುಡಿ ಮತ್ತು ಜನಪರ ನಿಲುವುಗಳಿಗೆ ಹೆಸರುವಾಸಿಯಾಗಿದ್ದರಲ್ಲದೆ, ಮಹಿಳಾ ಜಗದ್ಗುರುಗಳಾಗಿ ಸಾಮಾಜಿಕವಾಗಿ ಅನೇಕ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿದವರು. ಹೊರ ರಾಜ್ಯಗಳಲ್ಲಿ ಬಸವಧರ್ಮ ಸಮ್ಮೇಳನಗಳನ್ನು ಮಾಡಿ, ದೇಶ ವಿದೇಶದಲ್ಲಿ ಸಂಚರಿಸಿ ಬಸವ ತತ್ತ್ವವನ್ನು ವ್ಯಾಪಕವಾಗಿ ಪ್ರಚಾರ ಗೈದವರಲ್ಲಿ ಮೊದಲಿಗರು.
ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿಯವರು ಕಟ್ಟಿದ ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಧರ್ಮ ಮಹಾಸಭಾ ಸಂಘಟನೆಗೆ ಶಕ್ತಿ ತುಂಬಿ ದೇಶ ವಿದೇಶದಲ್ಲಿ ಅದರ ಶಾಖೆಗಳನ್ನು ತೆರೆದು ಲಕ್ಷಾಂತರ ಬಸವಭಕ್ತರನ್ನು ತಯಾರಿಸಿದ ಕೀರ್ತಿ ಮಾತಾಜಿಯವರದು.
ಲಿಂಗಾಯತ ಒಂದು ಜಾತಿ ಅಲ್ಲ; ಅದು ಒಂದು ಸ್ವತಂತ್ರ ಧರ್ಮ ಎಂದು ಪ್ರಬಲವಾಗಿ ಪ್ರತಿಪಾದಿಸಿದ್ದರಲ್ಲದೆ, ಅದರ ಸಾಂವಿಧಾನಿಕ ಮಾನ್ಯತೆಗಾಗಿ ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲಿ ಮಹಾರ್ಯಾಲಿಗಳನ್ನು ಏರ್ಪಡಿಸಿ ಕರ್ನಾಟಕ ಸರಕಾರದಿಂದ ಶಿಫಾರಸ್ಸು ಪಡೆದು, ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸುವಲ್ಲಿ ಮುಂಚೂಣಿ ಹೋರಾಟಗಾರರಾಗಿ ಹೊರಹೊಮ್ಮಿದ್ದರು. ವಿರೋಧಿಗಳಿಗೆ ಸಿಂಹಸ್ವಪ್ನದಂತಿದ್ದ ಪೂಜ್ಯ ಮಾತಾಜಿಯವರು ಧಾರ್ಮಿಕ ಮತ್ತು ಸಾಮಾಜಿಕವಾಗಿ ಏನಾದರೂ ಅನ್ಯಾಯ ನಡೆಯುತಿದ್ದರೆ ತಕ್ಷಣವೇ ಪ್ರತಿಕ್ರಿಯಸಿ ಅದರ ಯಶಸ್ವಿಗೆ ಪ್ರಾಮಾಣಿಕ ಪ್ರಯತ್ನ ಮಾಡುತಿದ್ದರು.
ಬಸವಧರ್ಮ ಪೀಠ, ಬಸವಮಹಾಮನೆ ಚಾರಿಟೇಬಲ್ ಟ್ರಸ್ಟ್, ವಿಶ್ವಕಲ್ಯಾಣ ಮಿಷನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿದ್ದ ಅವರು ಶರಣ ಪರಂಪರೆ ಉಳಿವಿಗಾಗಿ, ಲಿಂಗಾಯತ ಧರ್ಮ ಕ್ಷೇತ್ರಗಳಾದ ಕೂಡಲಸಂಗಮ, ಬಸವಕಲ್ಯಾಣ, ಉಳವಿಯಲ್ಲಿ ತಾವು ಹಮ್ಮಿಕೊಂಡ ಅನೇಕ ಯೋಜನೆಗಳನ್ನು ಯಾವುದೇ ಸರಕಾರದ ಅನುದಾನ ಪಡೆಯದೆ, ಭಕ್ತರಿಂದ ಕಾಣಿಕೆ ಸಂಗ್ರಹಿಸಿ ಸಾಕಾರ ಮಾಡಿ ತೋರಿಸಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಬಸವಕಲ್ಯಾಣದಲ್ಲಿ ನಿರ್ಮಾಣವಾದ 108ಅಡಿ ಎತ್ತರದ ಬಸವೇಶ್ವರ ಪುತ್ಥಳಿ ಮತ್ತು ಬೆಂಗಳೂರಿನ ಮೈಸೂರು ಹೆದ್ಧಾರಿಯಲ್ಲಿರುವ ಕುಂಬಳಗೋಡಿನ ಬಸವ ಗಂಗೋತ್ರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಇಷ್ಟಲಿಂಗ ಪೂಜಾ ನಿರತ 112ಅಡಿ ಎತ್ತರದ ಬಸವೇಶ್ವರ ಪುತ್ಥಳಿ.
ಕೇವಲ ಧಾರ್ಮಿಕರಾಗಿರದೆ, ಸಾಮಾಜಿಕ ಕಳಕಳಿ ಹೊಂದಿದ್ದ ಪೂಜ್ಯ ಮಾತಾಜಿಯವರು, ತಂದೆ ತಾಯಿ ಇಲ್ಲದ 600 ಅನಾಥ ಮಕ್ಕಳಿಗೆ ಅನಾಥಾಲಯ, ವೃದ್ಧರಿಗೆ ವೃದ್ಧಾಶ್ರಮ, ವಿಧವೆಯರಿಗೆ ಮರುಮದುವೆ, ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿ ಮಾನವೀಯ ಪ್ರೇಮ ಮೆರೆದಿದ್ದರು.
ಕೇವಲ ಜಾತಿ ಜಂಗಮರು ಮಾತ್ರ ಮಠಗಳಿಗೆ ಅಧಿಕಾರಿಯಾಗಬೇಕೆಂಬ ಪದ್ಧತಿಗೆ ವಿರೋಧಿಯಾಗಿದ್ದ ಅವರು ಅದನ್ನು ಬುಡಸಮೇತ ಕಿತ್ತೆಸೆಯಲು ತೋಂಟದ ಸಿದ್ಧಲಿಂಗೇಶ್ವರಂತೆ ಯಾವುದೇ ಜಾತಿಯಿಂದ ಬಂದ ವ್ಯಕ್ತಿಗಳಿಗೆ ಬಸವತತ್ತ್ವ ಸಂಸ್ಕಾರದ ತರಬೇತಿ ನೀಡಿ ಅವರಿಗೆ ಜಂಗಮದೀಕ್ಷೆ ನೀಡಿ ಮಠಗಳಿಗೆ ಅಧಿಕಾರಿಗಳನ್ನು ಮಾಡಿ ಜಾತ್ಯಾತೀತ ಜಗದ್ಗುರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಬಸವತತ್ತ್ಬ ಪ್ರಚಾರ
ದಾರವಾಡದಲ್ಲಿ ಜಗನ್ಮಾತಾ ಅಕ್ಕಮಹಾದೇವಿ ಪೀಠ, ಕೂಡಲ ಸಂಗಮದಲ್ಲಿ ಬಸವಧರ್ಮ ಪೀಠ, ಬಸವಕಲ್ಯಾಣದಲ್ಲಿ ಅಲ್ಲಮಪ್ರಭು ಶೂನ್ಯಪೀಠ, ಬೆಂಗಳೂರಿನ ಕುಂಬಳಗೋಡ ಬಸವಗಂಗೋತ್ರಿಯಲ್ಲಿ ಚನ್ನಬಸವೇಶ್ವರ ಜ್ಞಾನಪೀಠ, ಮಹಾರಾಷ್ಟ್ರದ ಅಲ್ಲಮಗಿರಿಯಲ್ಲಿ ಅಲ್ಲಮಪ್ರಭು ಶೂನ್ಯಪೀಠ, ಉಳವಿಯಲ್ಲಿ ಅಕ್ಕನಾಗಲಾಂಬಿಕಾ ಪೀಠ ಸ್ಥಾಪಿಸಿ, 200ಕ್ಕೂ ಹೆಚ್ಚು ಜಂಗಮ ಮೂರ್ತಿಗಳನ್ನು ತಯಾರು ಮಾಡಿದ್ದಾರೆ.
ಗುರು ಬಸವಣ್ಣನವರಂತೆ ಬಹುಮುಖ ವ್ಯಕ್ತಿತ್ವ ಹೊಂದಿದ್ದ ಮಾತಾಜಿಯವರು 900 ವರ್ಷಗಳ ನಂತರ ಬಸವಣ್ಣನ ಆತ್ಮವೇ ಜನಿಸಿ ಬಂದಿತೆನೋ!!!! ಎಂಬಂತೆ; ಒಬ್ಬ ಮಹಿಳೆಯಾಗಿ ಎಷ್ಟೆಲ್ಲಾ ಕಾರ್ಯಗಳನ್ನು ಸಾಕಾರ ಮಾಡಿ ಬಸವಾತ್ಮಜೆಯಾಗಿ ಕಂಗೊಳಿಸಿದ್ದ ಅವರು ಧರ್ಮ, ಸಮಾಜ, ದೇಶ, ಶರಣ ಪರಂಪರೆಯ ಉಳಿವಿಗಾಗಿ ಹಗಳಿರುಳು ಶ್ರಮಿಸಿ, ತಾವು ಬಂದ ಮಣಿಹವನ್ನು ಪರಿಪೂರ್ಣಗೊಳಿಸುತ್ತಲೇ ದೇವನಬಕರೆಯಂತೆ ವಿಶ್ವದ ಪ್ರಪ್ರಥಮ ಮಹಿಳಾ ಮಹಾಜಗದ್ಗುರು ಡಾ. ಮಾತೆ ಮಹಾದೇವಿಯವರು. ದಿನಾಂಕ 14-03-2019ರಂದು ಲಿಂಗದೇವನಲ್ಲಿ ಲೀನವಾಗಿ ಕ್ರಿಯಾ ವಿಶ್ರಾಂತಿ ಹೊಂದಿದರು.
ಅವರು ಈ ಇಳೆಯನ್ನಗಲಿ ಇಂದಿಗೆ 6 ವರ್ಷವಾಯಿತು. ಅವರಿಲ್ಲದ ಬಸವಧರ್ಮ ತಾಯಿ ಇಲ್ಲದ ತಬ್ಬಲಿಯಂತಾಗಿದೆ. ಓ!!! ಮಾತೆ, ನಿನ್ನ ಬಸವಾತ್ಮ ಮತ್ತೊಮ್ಮೆ ಈ ಕರ್ತಾರನ ಕಮ್ಮಟದಲ್ಲಿ ಜನಿಸಿ ಬರಲಿ, ನೀನೆ ಉಲಿದಂತೆ “ಮೋಕ್ಷವನು ನಾ ಬಯಸೆ ಪ್ರಣವ ಮೂರ್ತಿಯೆ ಬಸವಾ.. ನಿನ್ನ ಸೇವೆಯೆ ನನಗೆ ಪರಮಸಾಕ್ಷಾತ್ಕಾರ” ಎಂದು ಶಪತಃ ಗೈದ ನಿನ್ನ ಹೃದಯ ವೀಣೆಯ ನುಡಿಯ ಬಲ್ಮೆ ಹುಸಿಯಾಗದಿರಲಿ. ಮತ್ತೊಮ್ಮೆ ನಿನ್ನೊಲುಮೆಗೆ ನಿನ್ನ ಕರುಣೆಯ ಕುಡಿಗಳಾದ ನಾವು ಕಾತರಿಸಿ, ಸಂಕಲ್ಪಗೈದು 79ನೇ ನಿಮ್ಮ ಜಯಂತಿ ಮತ್ತು ಆರನೇ ಲಿಂಗೈಕ್ಯ ಸಂಸ್ಮರಣೆ ಆಚರಿಸಿ ಕೃತಜ್ಞತೆಯಿಂದ ಲಿಂಗದೇವನಲ್ಲಿ ಪ್ರಾರ್ಥಿಸುವೆವು.

ಮಾತಾಜೀ
ನಿನ್ನ ಆಸೆಯಗಳನು
ಬಿತ್ತಿ ಬೆಳೆಯುವವರು
ಯಾರಿಲ್ಲ ನೋಡು.
ನೀ ದುಡಿದು ಇಟ್ಟ,
ಅನ್ನವನು ತಿಂದು ತೇಗುವರೆ
ಹೆಚ್ಚು ಇಲ್ಲಿ ನೋಡು.
ನೀ ಹೋಗಿ ಇಷ್ಟು ದಿನಗಳಾದರು
ನಿನ್ನಸೆಯ ಧರ್ಮಗ್ರಂಥ,
ಹೊರ ಬರದೆ ಕುತಂತ್ರಿಗಳ ಕೈಯಲ್ಲಿ
ಕೊಳೆಯುತಿದೆ ನೋಡು.
ಕೃತಿಚೌರ್ಯ ಆಗಿದ್ದರು ಆಗಿರ ಬಹುದು.
ನೀ ಸಂಶೋಧಿಸಿದ ಲಿಂಗದೇವನನ್ನೆ
ಹಿಂಪಡೆದ ವಾರಗಿತ್ತಿ ಆಯಮ್ಮ.
ಸ್ಥಾವರ ಬಸವನ ಮೂರ್ತಿಯನ್ನೆ
ಮುಂದಿಟ್ಟು ಕೊಂಡು,
ರಾಜಕೀಯ ಮಾಡುವದರಲ್ಲಿ ನೀಸ್ಸಿಮಳು.
ಅಂಕುಶವಿಲ್ಲದ ಆನೆ ಬಿಡಾರವನು,
ನೀ ಬಿಟ್ಡು ಹೋದಿ. ಆನೆ ನಡೆದುದೆ
ದಾರಿಯಂದು ತನಗಾಗದವರನ್ನು
ಹೊರ ದಬ್ಬುತ್ತ ಝೆಂಕರಿಸುತಿದೆ
ನೋಡು ತಾಯಿ
ಮತ್ತೊಮ್ಮೆ ಹುಟ್ಟಿ ಬಾ
ಬಸವ ಭಾರತವ ಕಟ್ಟಲು ತಾಯಿ