ಬಸವಾದಿ ಶರಣರ ಹೆಸರಿನ ದುರ್ಬಳಕೆಯನ್ನು ಲಿಂಗಾಯತರು ಗಮನಿಸುತ್ತಿದ್ದಾರೆ

ಎಂ. ಎ. ಅರುಣ್
ಎಂ. ಎ. ಅರುಣ್

ಬಬಲೇಶ್ವರದಿಂದ ದಾವಣಗೆರೆಯವರೆಗೆ ಸೂಲಿಬೆಲೆ ಸಮಾವೇಶಕ್ಕೆ ಸಿದ್ಧತೆ

ಬೆಂಗಳೂರು

ಅಕ್ಟೊಬರ್ ತಿಂಗಳಲ್ಲಿ ಹಿಂದೂ ಹುಲಿ ಚಕ್ರವರ್ತಿ ಸೂಲಿಬೆಲೆ ಘೋಷಿಸಿದಂತೆ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಸಚಿವ ಎಂ ಬಿ ಪಾಟೀಲರ ಬಬಲೇಶ್ವರ ಕ್ಷೇತ್ರದಿಂದಲೇ ಶುರುವಾಗುತ್ತಿದೆ.

ಈ ಸಮಾವೇಶ ಕನ್ನೇರಿ ಶ್ರೀಗಳ ಪರವೂ ಅಲ್ಲ, ಎಂ ಬಿ ಪಾಟೀಲ್ ವಿರುದ್ದವೂ ಅಲ್ಲ, ಸಂಘ ಪರಿವಾರದ ಶಕ್ತಿ ಪ್ರದರ್ಶನವೂ ಅಲ್ಲ ಎಂದು ಶಿರೋಳದ ಶಂಕರಾರೂಢ ಸ್ವಾಮೀಜಿ ಇತ್ತೀಚಿಗೆ ಒತ್ತಿ ಒತ್ತಿ ಹೇಳಿದರು. ಕನ್ನೇರಿ ಸ್ವಾಮಿಯ ಆಪ್ತರೂ ಆಗಿರುವ ಶಂಕರಾರೂಢ ಸ್ವಾಮೀಜಿ ಸೂಲಿಬೆಲೆ ಸಮಾವೇಶದ ಮುಖ್ಯ ವಕ್ತಾರರಂತೆ ಕಾಣಿಸಿಕೊಳ್ಳುತ್ತಿದ್ದಾರೆ.

ನಡೆ ನುಡಿಗೆ ಸಂಬಂಧ ಕಲ್ಪಿಸದ ವಿಶಿಷ್ಟ ಜನ ಸಂಘಪರಿವಾರದವರು. ಇವರು ಹೇಳುವುದೊಂದು ಮಾಡುವುದೊಂದು.

ಅಕ್ಟೊಬರ್ ತಿಂಗಳಲ್ಲಿ ಕನ್ನೇರಿ ಸ್ವಾಮಿಯನ್ನು ವಿಜಯಪುರದಿಂದ ಆಚೆ ಹಾಕಿದಾಗ ಅವರ ಹಿಂದೂ ತಾಲಿಬಾನಿ ಶಾಸಕ ಬಸನಗೌಡ ಯತ್ನಾಳ ವೀರಾವೇಶದ ಭಾಷಣ ಮಾಡಿದ್ದರು.

ನ್ಯಾಯಾಲಯದಲ್ಲಿ ಗೆದ್ದು ಭವ್ಯ ಮೆರವಣಿಗೆ ಮಾಡಿಕೊಂಡೇ ವಿಜಯಪುರಕ್ಕೆ ಶ್ರೀಗಳನ್ನ ಕರೆ ತರುತ್ತೇವೆ. ಎಂ.ಬಿ.ಪಾಟೀಲರೇ ನೀವು ಸುಮ್ಮನೆ ಮುಖ, ತಿ* ಮುಚ್ಚಿಕೊಂಡು ಇರಬೇಕು ಅಷ್ಟೆ ಎಂದು ಹೇಳಿದ್ದರು.

ಬಬಲೇಶ್ವರ ಸಮಾವೇಶ ಶಕ್ತಿ ಪ್ರದರ್ಶನ ಹೌದೋ ಅಲ್ಲವೋ? ಇದನ್ನು ಉತ್ತರಿಸಲು ಯತ್ನಾಳರ ಆ ಪ್ರತಿಜ್ಞೆಯನ್ನು ನೆನಪು ಮಾಡಿಕೊಳ್ಳಬೇಕು.

ನ್ಯಾಯಾಲಯದಲ್ಲಿ ಗೆಲ್ಲುವುದಿರಲಿ ಹೈ ಕೋರ್ಟ್, ಸುಪ್ರೀಂ ಕೋರ್ಟುಗಳಲ್ಲಿ ಮಂಗಳಾರತಿ ಮಾಡಿಸಿಕೊಂಡು ಕನ್ನೇರಿ ಸ್ವಾಮಿ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ನಿರ್ಬಂಧದ ಅವಧಿ ಮುಗಿಯುವವರೆಗೆ ಕಾಯಬೇಕಾಯಿತು. ಧಾರವಾಡ ಪೀಠ ನಿರೀಕ್ಷೆಯಂತೆ ತೀರ್ಪು ಕೊಟ್ಟರೂ ಅಲ್ಲಿಗೆ ಕನ್ನೇರಿ ಸ್ವಾಮಿಯನ್ನು ಕಳಿಸುವ ಸಾಹಸ ಸಂಘ ಪರಿವಾರ ಮಾಡಲಿಲ್ಲ.

ಲಿಂಗಾಯತರ ಜೊತೆ ಈಗ ನಡೆಯುತ್ತಿರುವ ಘರ್ಷಣೆ ಮಿತಿ ದಾಟುವ ಬಗ್ಗೆ ಅವರಿಗೆ ಗಾಬರಿಯಿದೆ ಎನ್ನುವುದು ಇದರ ನೇರ, ಸ್ಪಷ್ಟ ಅರ್ಥ. ಬ್ರಿಟಿಷರಂತೆ ಸಣ್ಣ ಸಣ್ಣ ವಿವಾದ ಹುಟ್ಟುಹಾಕಿ ಲಿಂಗಾಯತರನ್ನು ಒಡೆದು ಆಳುವುದು ಇವರ ಉದ್ದೇಶ. ಘರ್ಷಣೆಯ ಮೇಲೆ ಹಿಡಿತ ತಪ್ಪಿ ಪರಿಸ್ಥಿತಿ ಕೈಮೀರಿದರೆ ಲಿಂಗಾಯತರು ಏನು ಮಾಡುತ್ತಾರೆ ಎನ್ನುವುದೂ ಅವರಿಗೆ ಗೊತ್ತು.

ಅದಕ್ಕೆ ಬಬಲೇಶ್ವರ ಸಮಾವೇಶ ಯಾರ ಪರವೂ ಅಲ್ಲ, ಯಾರ ವಿರೋದವೂ ಅಲ್ಲ ಅನ್ನೋ ನುಡಿಮುತ್ತುಗಳು ಕೇಳಿಸುತ್ತಿರುವುದು.

ಸೆಪ್ಟೆಂಬರ್ ತಿಂಗಳಿಂದ ಸಂಘ ಪರಿವಾರದವರು ನಿದ್ದೆ ಮಾಡಿಲ್ಲ ಎಂದು ಅನಿಸುತ್ತದೆ. ಅವರು ವರ್ಷಗಳಿಂದ ಸಿದ್ಧತೆ ಮಾಡಿಕೊಂಡು ನೂರಾರು ಕೋಟಿ ಖರ್ಚು ಮಾಡಿ ಸೇಡಂನಲ್ಲಿ ನಡೆಸಿದ ಭಾರತೀಯ ಸಂಸ್ಕೃತಿ ಉತ್ಸವ ಜನ ಬಾರದೆ ನೆಲಕಚ್ಚಿತು.

ನಂತರ ಎರಡೇ ತಿಂಗಳಲ್ಲಿ ಲಿಂಗಾಯತ ಮಠಾಧೀಶರು, ಬಸವ ಸಂಘಟನೆಗಳು ರಾಜ್ಯವಿಡೀ ಲಕ್ಷಾಂತರ ಜನ ಸೇರಿಸಿ ಬಸವ ಕಿಡಿ ಹಚ್ಚಿದರು. ನಾವು ಹಿಂದೂಗಳಲ್ಲ ಎನ್ನುವ ಮಾತು ಅಬ್ಬರದಿಂದ ಎಲ್ಲಾ ಲಿಂಗಾಯತರ ಕಿವಿ ಮೇಲೆ ಬಿದ್ದಿದೆ. ಒಂದು ದೊಡ್ಡ ಹಿಗ್ಗುತ್ತಿರುವ ಸಂಖ್ಯೆ ಅದನ್ನು ಒಪ್ಪಿಕೊಂಡಿದೆ. ಒಂದು ಭಾಗ ಗೊಂದಲದಲ್ಲಿದೆ ಅದೂ ಬದಲಾಗುತ್ತಿದೆ.

ಸಮಾಜ ವಿರೋಧಿ ಮಠ, ಮುಖಂಡರ ಮೇಲೂ ಬಸವ ಪ್ರಭಾವ ಬೀರಲಾರಂಭಿಸಿದೆ. ಇದು ಸಂಘ ಪರಿವಾರಕ್ಕೆ ತಲೆನೋವಾಗಿರುವ ಬಸವ ಸಂಸ್ಕೃತಿ ಅಭಿಯಾನದ ಒಟ್ಟು ಸಾಧನೆ.

ಅಭಿಯಾನಕ್ಕೆ ಕೌಂಟರ್ ಕೊಡಲು ಬಬಲೇಶ್ವರವನ್ನೇ ಏಕೆ ಸಂಘ ಪರಿವಾರ ಆಯ್ಕೆ ಮಾಡಿಕೊಂಡಿದೆ?

ಅಭಿಯಾನ ಕೆಲವು ಮಠಾಧೀಶರ ಮತ್ತು ಕಾಂಗ್ರೆಸ್ ರಾಜಕಾರಣಿಗಳ ಕೈವಾಡ. ಇವರ ಜೊತೆಗೆ ಕೆಲವು ಕಮ್ಯುನಿಸ್ಟರೂ ಇದ್ದಾರೆ. ಇವರನ್ನು ಟಾರ್ಗೆಟ್ ಮಾಡಿ ಸುಮ್ಮನಾಗಿಸಿದರೆ ಎಲ್ಲಾ ಲಿಂಗಾಯತರೂ ಬಾಯಿ ಮುಚ್ಚಿಕೊಳ್ಳುತ್ತಾರೆ. ಇದು ಅವರ ಗಂಭೀರವಾದ ಲೆಕ್ಕಾಚಾರ.

ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವ ಪ್ರಮುಖ ರಾಜಕಾರಣಿ ಎಂ ಬಿ ಪಾಟೀಲ್. ಅದಕ್ಕೆ ಬಬಲೇಶ್ವರ ಟಾರ್ಗೆಟ್.

ಲಿಂಗಾಯತ ಚಳುವಳಿಗೆ ಬಹಳ ಜನರ ಕೊಡುಗೆ, ನಾಯಕತ್ವವಿದೆ. ಈಗ ಅದು ನಿಜ ಜನಾಂದೋಲನದ ರೂಪ ಪಡೆದುಕೊಳ್ಳುತ್ತಿದೆ. ಅಭಿಯಾನದಲ್ಲಿಯೂ ಬಹಳ ಜನರ, ಸಂಘಟನೆಗಳ ಪಾತ್ರವಿತ್ತು. ಅದು ಎಲ್ಲಿಯೂ ಏಕಪಾತ್ರಾಭಿನಯವಾಗಲಿಲ್ಲ.

ಲಿಂಗಾಯತರನ್ನು ಜಾಗೃತಗೊಳ್ಳುತ್ತಿರುವುದು ವಚನಗಳು. ಅವುಗಳ ಸಂದೇಶಗಳು ಇಂದು ಅವಶ್ಯವಾದ್ದರಿಂದ ಜನ ಬದಲಾಗುತ್ತಿದ್ದಾರೆ. ಮೂಢನಂಬಿಕೆಗಳು ಬೇಡ. ಅತಿಯಾದ ಧಾರ್ಮಿಕತೆ ಬೇಡ. ಸಮಾಜಕ್ಕೆ ಮಂದಿರಕ್ಕಿಂತ ಶಾಲೆಗಳು ಬೇಕು. ಯಾರನ್ನೂ ದ್ವೇಷಿಸುವುದು ಬೇಡ. ಎಲ್ಲರೂ ಸಮಾನರು. ಎಲ್ಲರ ನೋವೂ ಒಂದೇ, ಎಲ್ಲರ ಮಕ್ಕಳೂ ಒಂದೇ. ಇದೇ ವಚನಗಳಲ್ಲಿರುವ ಬಸವ ತತ್ವ. ಇದನ್ನೇ ಎಲ್ಲರೂ ಅಪ್ಪಿಕೊಳ್ಳುತ್ತಿರುವುದು.

ಆದರೆ ಈ ಸರಳ ಸತ್ಯವನ್ನು ಒಪ್ಪಿಕೊಳ್ಳಲು ಪ್ರಾಮಾಣಿಕ ಮನಸ್ಥಿತಿಯಿರಬೇಕು, ನೋಟ ಸ್ಪಷ್ಟವಾಗಿರವೇಕು. ಜನರೇ ಮೇಲೆ ಪ್ರೀತಿಯಿರಬೇಕು. ಇವೆಲ್ಲಾ ಸಂಘ ಪರಿವಾರಕ್ಕೆ ಅಪರಿಚಿತ. ಜೊತೆಗೆ ಇಂದು ಅವರಿಗೆ ನೆಲ ಕಾಣದಷ್ಟು ಹೊಟ್ಟೆ ಬಂದಿದೆ.

ಹಿಂದೂ ಸಮಾವೇಶದ ಸಮಾರೋಪ ದಾವಣಗೆರೆಯಲ್ಲಿ ಎಂದು ಸೂಲಿಬೆಲೆ ಬೆಳಗಾವಿಯಲ್ಲಿ ಘೋಷಿಸಿದ್ದು ಶಾಮನೂರು ಶಿವಶಂಕರಪ್ಪ ಅವರಿಗೆ ಬುದ್ದಿಕಲಿಸಲು.

ವೀರಶೈವ ಮಹಾಸಭೆಯ 2023ರ ದಾವಣಗೆರೆ ಸಮಾವೇಶದಲ್ಲಿ ನಾವು ಹಿಂದೂಗಳಲ್ಲ ಎಂದು ಶಾಮನೂರು ನಿರ್ಣಯ ಓದಿದ್ದರು. ನಂತರ ಈಗ ವೈರಲ್ ಆಗಿರುವ ಸಂದರ್ಶನದಲ್ಲಿ ಅದನ್ನೇ ಸ್ಪಷ್ಟವಾಗಿ ಹೇಳಿದ್ದರು.

ಲಿಂಗಾಯತ ಚಳುವಳಿಯಲ್ಲಿ ವೀರಶೈವ ಮಹಾಸಭಾ ತನ್ನದೇ ನಿಲುವು ಹೊಂದಿದ್ದರೂ ಶಾಮನೂರು ಆ ಸಂಘಟನೆಯ ಶತಮಾನದಷ್ಟು ಹಳೆಯ ನಿಲುವನ್ನು ಬದಲಿಸಿದ್ದು ಐತಿಹಾಸಿಕ ಬೆಳವಣಿಗೆ.

ದಾವಣಗೆರೆಯಲ್ಲಿ ಸಮಾರೋಪ ನಡೆಸಲು ಸೂಲಿಬೆಲೆ ನಿರ್ಣಯಿಸಿದ್ದು ಶಾಮನೂರು ಅವರನ್ನು ಟಾರ್ಗೆಟ್ ಮಾಡಲು.

ಇಂದು ಸಂಘ ಪರಿವಾರಕ್ಕೆ ಉತ್ತರ ಕೊಡಲು ಶಾಮನೂರು ಇಲ್ಲ. ಆದರೆ ದಾವಣಗೆರೆಯಲ್ಲಿ ಅವರ ಕಟ್ಟರ್ ಅಭಿಮಾನಿ ಬಸವ ಸಂಘಟನೆಗಳಿವೆ. ಅವು ಈ ಮಂಗಾಟ ನೋಡುತ್ತಿವೆ.

ಗದಗ, ಧಾರವಾಡ, ಬೆಳಗಾವಿ, ವಿಜಯಪುರ ಮುಂತಾದ ಕಡೆಗಳಲ್ಲೂ ಸೂಲಿಬೆಲೆ ಸಮಾವೇಶ ನಡೆಸಲು ಸಂಘ ಪರಿವಾರ ಸಿದ್ಧತೆ ನಡೆದಿದೆ. ಅಲ್ಲೂ ಬಸವ ಸಂಘಟನೆಗಳು ಗಮನಿಸುತ್ತಿವೆ. ಅವುಗಳ ಮೂಲಕ ಲಿಂಗಾಯತ ಸಮಾಜವೂ ಬಸವಾದಿ ಶರಣರ ಹೆಸರಿನ ದುರ್ಬಳಕೆಯನ್ನು ಗಮನಿಸುತ್ತಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
1 Comment
  • ಸೂಲಿಬೆಲೆ ಹಿಂದುತ್ವ ಬಗ್ಗೆ ಮಾತನಾಡುವಂತೆ ; ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವವವರನ್ನು ತಯಾರಿಸಬೇಕು.

    ಇದು ಇಂದಿನ ಜರೂರ ಅಗತ್ಯ

Leave a Reply

Your email address will not be published. Required fields are marked *