ವಿರೂಪಗೊಂಡ ಶರಣರ ಉಬ್ಬು ಚಿತ್ರಗಳನ್ನು ದುರಸ್ತಿಗೊಳಿಸಲು ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವ ಕಲ್ಯಾಣ

ಪಟ್ಟಣದ ಬಸವ ಮಹಾದ್ವಾರ ಸ್ಥಾಪಿಸಲಾಗಿರುವ ಶರಣರ ಉಬ್ಬು ಚಿತ್ರಗಳನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದು, ಅವುಗಳನ್ನು ಬೇಗನೆ ದುರಸ್ತಿಗೊಳಿಸಲು ಆಗ್ರಹಿಸಿ ಸರಕಾರಕ್ಕೆ ಮನವಿ ಮಾಡಲಾಗಿದೆ.

ಹುಲಸೂರ ಬಸವ ಕೇಂದ್ರ ಹಾಗೂ ಸಾಮಾಜಿಕ ಸಮತಾ ವೇದಿಕೆಯ ಸದಸ್ಯರು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ಆಯುಕ್ತರಿಗೆ ಸೋಮವಾರ ಮನವಿಪತ್ರ ಸಲ್ಲಿಸಿದರು.

“ಉಬ್ಬು ಚಿತ್ರಗಳ ಮೇಲೆ ಗುಟ್ಕಾ ತಿಂದು ಉಗುಳಿರುತ್ತಾರೆ ಅಲ್ಲದೇ ಸಾರಾಯಿ ಬಾಟಲಿಗಳನ್ನು ಬೀಸಾಕಿರುತ್ತಾರೆ ಇವುಗಳನ್ನು ತಡೆಯಲು ಅಲ್ಲಿ ಕಾವಲುಗಾರರನ್ನು ನೇಮಿಸಬೇಕು. ಅಲ್ಲದೇ ಸುತ್ತ-ಮುತ್ತ ಕಣ್ಗಾವಲಿಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು.

ಸಣ್ಣಪುಟ್ಟ ಅಂಗಡಿಗಳನ್ನು ತೆರೆದು ವ್ಯಾಪಾರ ಆರಂಭಿಸಿರುವುದರಿಂದ ಈ ಚಿತ್ರಗಳು ಮರೆಮಾಚಿವೆ. ಈ ಅಂಗಡಿಗಳನ್ನು ಶಿಘ್ರವೇ ತೆರವುಗೊಳಿಸಿ ಪ್ರವಾಸಿಗರಿಗೆ ಶರಣರ ಚಿತ್ರಗಳನ್ನು ಕಾಣುವಂತೆ ಮಾಡಬೇಕು.

ಮಹಾದ್ವಾರದ ಸುತ್ತ-ಮುತ್ತಲಿನ ಕಂಪೌಂಡಗಳಿಗೆ ಹಾಗೂ ಎದುರು ಪೋಸ್ಟರ್, ಬ್ಯಾನರಗಳನ್ನು ಅಂಟಿಸುತ್ತಿರುವುದರಿಂದ ಸೌಂದರ್ಯ ಹಾಳಾಗಿ ಅಸಹ್ಯತನ ಕಂಡು ಬರುತ್ತಿದೆ. ಪೋಸ್ಟರ್ ಹಾಗೂ ಬ್ಯಾನರಗಳನ್ನು ಅಳವಡಿಸದಂತೆ ಸೂಕ್ತ ಕ್ರಮವಹಿಸಬೇಕು,” ಆಗ್ರಹಿಸಲಾಗಿದೆ.

ಬಸವ ಮಹಾದ್ವಾರದ ಬಳಿ ಬಸವಣ್ಣ, ಚೆನ್ನಬಸವಣ್ಣ, ಅಕ್ಕನಾಗಮ್ಮ, ಸಮಗಾರ ಹರಳಯ್ಯ, ಅಂಬಿಗರ ಚೌಡಯ್ಯ, ನುಲಿಯ ಚಂದಯ್ಯ, ಮಡಿವಾಳ ಮಾಚಿದೇವ ಮತ್ತಿತರ ಶರಣರ ಉಬ್ಬು ಚಿತ್ರಗಳನ್ನು ನಿರ್ಮಿಸಲಾಗಿದೆ.

ಪಟ್ಟಣದ ಪ್ರವೇಶದ ಸ್ಥಳ ಅಕರ್ಷಕವಾಗಿರಲಿ ಎಂಬ ಉದ್ದೇಶದಿದ 107 ಅಡಿ ಎತ್ತರದ ಬಸವ ಮಹಾದ್ವಾರ ಸ್ಥಾಪಿಸಲಾಗಿದೆ. ದ್ವಾರದ ಮಧ್ಯಭಾಗದಲ್ಲಿ ಅಶ್ವಾರೂಢ ಬಸವೇಶ್ವರರ ಪ್ರತಿಮೆ ನಿರ್ಮಿಸಲಾಗಿದೆ.

ನಗರಕ್ಕೆ ಬರುವ ಪೂಜ್ಯರು, ಗಣ್ಯರು ಮಹಾತ್ಮ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ನಗರದೊಳಗೆ ಬರುವಂತೆ ಅನುಕೂಲವಾಗಲು ಪ್ರತಿಮೆಗೆ ಶಾಶ್ವತ ಏಣಿಗಳನ್ನು ನಿರ್ಮಿಸಲು ಮನವಿ ಮಾಡಲಾಗಿದೆ.

ಜೊತೆಗೆ ಬಸವಣ್ಣನವರ ಪ್ರತಿಮೆಗೆ ಬಣ್ಣ ಬಳಿದು ಬಹಳ ದಿವಸವಾಗಿರುವುದರಿಂದ ಶೀಘ್ರವಾಗಿ ಬಣ್ಣ ಹಚ್ಚಬೇಕೆಂದು ಕೇಳಲಾಗಿದೆ.

ಈ ಮೇಲಿನ ಬೇಡಿಕೆ ಕಾರ್ಯಗಳನ್ನು ಒಂದು ವಾರದೊಳಗೆ ಕೈಗೊಳ್ಳಬೇಕು. ಈ ಕಾರ್ಯಗಳಾಗದಿದ್ದಲ್ಲಿ ಧರಣಿ ಸತ್ಯಾಗ್ರಹ ಮಾಡಲಾಗುವುದೆಂದು ಸಂಘಟನೆಗಳು ಎಚ್ಚರಿಸಿವೆ.

ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಧ್ಯಕ್ಷ ಆಕಾಶ ಖಂಡಾಳೆ, ಪ್ರಧಾನ ಕಾರ್ಯದರ್ಶಿ ರಾಜಕುಮಾರ ತೊಂಡಾರೆ, ಉಪಾಧ್ಯಕ್ಷರಾದ ಮಹದೇವ ಮಹಾಜನ, ಮಲ್ಲಿಕಾರ್ಜುನ ದೇವಪ್ಪ, ಖಜಾಂಚಿ ಷಣ್ಮುಖ ಪಾಟೀಲ, ಯುವ ಘಟಕದ ಅಧ್ಯಕ್ಷ ಸಚಿನ್ ಕೌಟೆ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7eXkKdvSgzIz1asEX6uZh

Share This Article
Leave a comment

Leave a Reply

Your email address will not be published. Required fields are marked *