‘ಬಸವಾದಿ ಶರಣರ ವಚನಗಳಿಂದಾಗಿ ಕನ್ನಡ ಭಾಷೆಗೆ ಅಳಿವೆಂಬುದಿಲ್ಲ’

ಶಹಾಪುರ:

ಸಹನಶೀಲತೆ, ಉದಾರ ಹೃದಯ, ತಾಳ್ಮೆಯ ಮನಸ್ಸನ್ನು ಕಳೆದುಕೊಂಡ ಮನುಷ್ಯ ಕಾನೂನಿನ ಅರಿವಿಲ್ಲದೆ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾನೆ. ಮನುಷ್ಯ ವಿಚಾರ ಮಾಡುವ ಪ್ರಾಣಿಯಾಗಿ ಸಹ ಅಸಹಜವಾಗಿ ವರ್ತಿಸುತ್ತಿದ್ದಾನೆ ಇದರಿಂದ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ ಎಂದು ವಕೀಲರಾದ ಆರ್.ಎಂ. ಹೊನ್ನಾರೆಡ್ಡಿ ಅವರು ನುಡಿದರು.

ನಗರದ ಬಸವಮಾರ್ಗ ಪ್ರತಿಷ್ಠಾನದ ತಿಂಗಳ ಬಸವ ಬೆಳಕು 131ರ ಕಾರ್ಯಕ್ರಮದಲ್ಲಿ ಕಾನೂನು ಮತ್ತು ಆರೋಗ್ಯ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.

ಮನುಷ್ಯನಲ್ಲಿ ಅತಿಯಾದ ಸ್ವಾರ್ಥ ಇರುವ ಕಾರಣಕ್ಕಾಗಿ ಇತ್ತೀಚಿನ ದಿನಗಳಲ್ಲಿ ಕೋರ್ಟ್ ಮತ್ತು ಆರೋಗ್ಯ ಕೇಂದ್ರಗಳ ಸಂಖ್ಯೆ ಹೆಚ್ಚಾಗುತ್ತಿವೆ. ಸಂಬಂಧಗಳಿಗಿಂತ ಸಂಪತ್ತಿನ ಕಡೆಗೆ ಹೆಚ್ಚು ವ್ಯಾಮೋಹ ಹೊಂದಿದ್ದೇವೆ. ಕಾನೂನು ತುಳಿತಕ್ಕೆ ಒಳಗಾದವರ ಪರವಾಗಿದೆ ನಿಜ, ಆದರೆ ಅನಿವಾರ್ಯತೆ ಇಲ್ಲದೆ ಇದ್ದರೂ ಸಹ ಮಹಿಳೆಯರು ತವರು ಮನೆಯಲ್ಲಿ ಪಾಲು ಕೇಳಿ ಕರುಳಬಳ್ಳಿಯ ಸಂಬಂಧಗಳನ್ನು ಮುರಿದು ಹಾಕುತ್ತಿದ್ದಾರೆ. ಇಂಥ ಘಟನೆ ಕಳವಳವನ್ನುಂಟು ಮಾಡುವಂಥದ್ದು ಎಂದು ಖೇದ ವ್ಯಕ್ತಪಡಿಸಿದರು.

ಬೀದಿಯಲ್ಲಿ ಮಾರಾಟವಾಗುವ ಕುರುಕಲು ತಿಂಡಿ, ಗುಟ್ಕಾ, ಸಿಗರೇಟ್ ಇತ್ಯಾದಿ ದೇಹಕ್ಕೆ ಮಾರಕವಾಗುವ ಪದಾರ್ಥಗಳನ್ನು ಯಥೇಚ್ಛವಾಗಿ ಸೇವಿಸಿ ಮನುಷ್ಯ ತನ್ನ ಆರೋಗ್ಯವನ್ನು ತಾನೆ ಕಳೆದುಕೊಳ್ಳುತ್ತಿದ್ದಾನೆ. ಶ್ರೀಮಂತಿಕೆ, ರಾಜಕೀಯ, ಪ್ರತಿಷ್ಠೆ ಇತ್ಯಾದಿಗಳಿಗಿಂತಲೂ ಸದೃಢವಾದ ಮನಸ್ಸು ಮತ್ತು ದೇಹ ಬಹಳ ಮುಖ್ಯವಾದುದು.

ದೇಹ ಬಲಿಷ್ಠವಾಗಲು ಯೋಗ, ಮನಸ್ಸು ಪ್ರಪುಲ್ಲತೆಗೊಳ್ಳಲು ಅನುಭಾವಿಗಳ ಸಂಗ ತುಂಬಾ ಮಹತ್ವವಾದುದು ಎಂದು ಉದಾಹರಣೆಯ ಮೂಲಕ ಸಭೆಗೆ ಹೊನ್ನಾರೆಡ್ಡಿ ವಿವರಿಸಿದರು.

ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಸಂಚಾಲಕರಾದ ಭೀಮಾಶಂಕರ ಮಾತನಾಡಿ, ನಮ್ಮ ರಾಜ್ಯದ ಸಾಂಸ್ಕೃತಿಕ ನಾಯಕ ಬಸವಣ್ಣನವರು ವಚನಗಳನ್ನು ಕನ್ನಡದಲ್ಲಿ ಬರೆದಿರುವುದರಿಂದ ಕನ್ನಡ ಭಾಷೆಗೆ ಅಳಿವೆಂಬುದೆ ಇಲ್ಲ. ಇತ್ತೀಚಿನ ದಿನಗಳಲ್ಲಿ ಜಾನಪದ ಹೆಸರಿನ ಅಶ್ಲೀಲ ಸಾಹಿತ್ಯ ಪ್ರಸಾರವಾಗುತ್ತಿದೆ ಇದು ನಿಲ್ಲಬೇಕು. ತಾಯಂದಿರು ಹೆಚ್ಚೆಚ್ಚು ಜನಪದ ಹಾಡುಗಳನ್ನು ಕಲಿತು ಮಕ್ಕಳಿಗೆ ಹೇಳಿದರೆ ಅವರೂ ಒಳ್ಳೆಯವರಾಗಲು, ಸುಂದರ ಸಮಾಜ ನಿರ್ಮಾಣಕ್ಕೆ ಕಾರಣರಾಗುತ್ತಾರೆ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ಮಹಿಳೆಯರು ತಮ್ಮ ಮನದ ನೋವುಗಳನ್ನು ಕಳೆಯಲು ಧಾರ್ಮಿಕ ಕೇಂದ್ರಗಳಿಗೆ ಹೋಗುವ ಅವಶ್ಯಕತೆ ಇಲ್ಲ. ಧರ್ಮದ ಹೆಸರಿನ ಮೇಲೆ ಹಾಗೂ ಜ್ಯೋತಿಷ್ಯ ನಕ್ಷತ್ರ ಭವಿಷ್ಯವನ್ನು ಹೇಳುವಂತೆ ನಟಿಸುತ್ತ ನಿಮ್ಮನ್ನು ಯಾಮಾರಿಸಿ, ದೈಹಿಕವಾಗಿಯೂ ಶೋಷಿಸುತ್ತಾರೆ. ಮಹಾರಾಷ್ಟ್ರದಲ್ಲಿ ತೀರಾ ಇತ್ತೀಚೆಗೆ ಅಶೋಕ ಖರಾಟ ಎಂಬ ವ್ಯಕ್ತಿ ನೂರು ಜನ ಮಹಿಳೆಯರನ್ನು ದಾರಿತಪ್ಪಿಸಿ ಅಶ್ಲೀಲ ಸೀಡಿ ಮಾಡಿಕೊಂಡಿದ್ದಾನೆ. ಧರ್ಮದ ಹೆಸರಿನ ಮೇಲೆ ಕೋಟ್ಯಂತರ ರೂಪಾಯಿಗಳನ್ನೂ ಕಮಾಯಿಸಿದ್ದಾನೆ. ಆದ್ದರಿಂದ ನಿಮ್ಮ ನಿಮ್ಮ ನೋವುಗಳನ್ನು ನಿಮ್ಮ ನಿಮ್ಮ ಕುಟುಂಬ ವಿಶ್ವಾಸಿಕರಲ್ಲಿ ಹಂಚಿಕೊಳ್ಳಿರಿ ಎಂದು ವಿನಂತಿ ಮಾಡಿಕೊಂಡರು.

ವೇದಿಕೆಯಲ್ಲಿ ಷಣ್ಮುಖ ಬನ್ನಮ್ಮ ಜೈನ್ ಅವರನ್ನು ಪ್ರತಿಷ್ಠಾನದ ವತಿಯಿಂದ ಸತ್ಕರಿಸಲಾಯಿತು. ಅಮೋಘ ಸತ್ಯಂಪೇಟೆ ಸ್ವಾಗತಿಸಿದರು. ಶಿವಣ್ಣ ಇಜೇರಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಅನಿಲಕುಮಾರ ಐಕೂರ, ಪ್ರಮೋದ ಶಾಬಾದಿ, ಸಂಗಮ್ಮ ಹರನೂರ, ಗಂಗಮ್ಮ ತುಂಬಗಿ, ಲಕ್ಷ್ಮಣ ಲಾಳಸಂಗಿ, ಶಿವಲೀಲಾ ವಡಗೇರಿ, ಬಸವರಾಜ ನಂದಿ, ಸುರೇಶ ಅರುಣಿ, ಡಾ. ಬಸವರಾಜ ಹಾದಿಮನಿ, ಗುರಣ್ಣ ಮದರಿ, ಸಾಹೇಬಣ್ಣ ಮಡಿವಾಳಕರ್, ವಿರೂಪಾಕ್ಷಿ ಸಿಂಪಿ, ಯಲ್ಲಾಲಿಂಗ ಮತ್ತಿತರರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *