ಬಸವಕಲ್ಯಾಣದ ಇತಿಹಾಸಕ್ಕೆ ಕಪ್ಪು ಚುಕ್ಕೆಯಾದ ದಸರಾ ದರ್ಬಾರ್

ಬಸವಕಲ್ಯಾಣ

ವಿಶ್ವಗುರು ಬಸವಣ್ಣನವರ ಕರ್ಮಭೂಮಿ, ಶರಣಭೂಮಿ, ಲಿಂಗಾಯತ ಧರ್ಮಿಯರ ಪವಿತ್ರ ಕ್ಷೇತ್ರ ಬಸವಕಲ್ಯಾಣದಲ್ಲಿ ನಡೆಯುತ್ತಿರುವ ವೀರಶೈವವಾದಿ ರಂಭಾಪುರಿ ಶ್ರೀಗಳ ದಸರಾ(ರಾಜ) ದರ್ಬಾರ್ ಆಡಂಬರದ, ರಾಜಕಾರಣಿಗಳ ಒಡ್ಡೋಲಗವಾಗಿದೆ.

“ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ” ಎಂಬ ಬಸವಣ್ಣನವರ ಕಿಂಕರ ತತ್ವ ಮೂಲೆಗುಂಪಾಗಿದೆ. ಒಬ್ಬ ಗುರುವಾದವನು ಜನಗಳ ಆಚರಣೆಗೆ ಯೋಗ್ಯವಾಗುವ ಮಾರ್ಗವನ್ನು ಹೇಳಿಕೊಡಬೇಕೇ ವಿನಾ ರಾಜ ವೈಭವದಿಂದ ಮೆರೆಯುವುದಲ್ಲ.

“ಭಕ್ತಿ ಎಂಬುದು ತೋರಿ ಉಂಬ ಲಾಭವಲ್ಲ” ಎಂದು ಶರಣರು ಹೇಳುತ್ತಾರೆ ಆದರೆ ಶರಣರ ನಾಡಲ್ಲಿ ಆಡಂಬರದ ಭಕ್ತಿ ರಾರಾಜಿಸುತ್ತಿದೆ.

ದಸರಾ ದರ್ಬಾರಕ್ಕೆ ಜನ ಬರದಿರುವುದನ್ನು ಗಮನಿಸಿದ ಆಯೋಜಕರು ಮಹಿಳೆಯರಿಗೆ ಉಚಿತವಾಗಿ ಸೀರೆ ಕುಬ್ಬಸ ಕೊಟ್ಟು ಆಮಿಷಕ್ಕೊಳಗು ಮಾಡಿ ಕರೆಯಿಸಿಕೊಳ್ಳುತ್ತಿರುವರು. ಇದೇ ಹಣವನ್ನು ರೈತರ ಬೆಳೆ ಹಾನಿಗೆ ಪರಿಹಾರವಾಗಿ ಹಂಚಬಹುದಿತ್ತು.

ಬಸವಕಲ್ಯಾಣ ನಾಡಿನ ಜನರು ಇಂದೆಂದೂ ಕಂಡರಿಯದ ರಾಜ ವೈಭವದಿಂದ ಮೆರೆಯುವ ಗುರುಗಳನ್ನು ನೋಡಿ ದಿಗ್ಭ್ರಮೆಗೊಂಡಿರುವುದಂತೂ ಸತ್ಯ. ಸರಳ ಮತ್ತು ಸತ್ಯ ಹಾಗೂ ತತ್ವಭರಿತನಾಗಿರುವವನೇ ಗುರು ಎಂದು ಇಡೀ ಜಗತ್ತಿಗೆ ತೋರಿಸಿಕೊಟ್ಟ ಬಸವಣ್ಣನವರ ಈ ನಾಡಲ್ಲಿ ಅದಕ್ಕೆ ತದ್ವಿರುದ್ಧವಾದ ಆಚರಣೆಗೆ ಇಂಬುಕೊಟ್ಟ ರಾಜಕಾರಣಿಗಳನ್ನು ಮತ್ತು ಬಸವತತ್ವ ಮಠಾಧೀಶರ ನಡೆ ಸೋಜಿಗವನ್ನುಂಟು ಮಾಡಿದೆ.

ಹಾರಕೂಡ ಶ್ರೀಗಳ ನುಡಿಯ ಸೋಲು:
ಬಸವಣ್ಣನವರನ್ನು ನಿಂದಿಸುವವರಿಗೆ, ಟೀಕಿಸುವವರಿಗೆ ಉಳಿಗಾಲವಿಲ್ಲ ಎಂದು ಹೇಳಿದ ಹಾರಕೂಡ ಶ್ರೀಗಳ ಮಾತು ನಗೆಪಾಟಲಿಗೀಡಾಗಿದೆ. ಬಸವತತ್ವ(ಲಿಂಗಾಯತ) ವಿರೋಧಿ ಆಚರಣೆಗಳಾದ ದೇವಿ ಆರಾಧನೆ, ಸಾರ್ವಜನಿಕವಾಗಿ ಪಾದಪೂಜೆ ಮಾಡುವುದು ಆ ಪಾದದ ನೀರನ್ನು ಲಿಂಗದ ಮೇಲೆ ಹಾಕಿ ಭಕ್ತರಿಗೆ ಕುಡಿಸುವುದು, ಇದು ಬಸವಣ್ಣನವರನ್ನು ನಿಂದಿಸಿ ಮತ್ತು ಬಸವತತ್ವವನ್ನು ಅಪಮಾನಗೊಳಿಸಿದ್ದಕ್ಕೆ ಸಮವಾಗಿದೆ. ಈಗ ಹಾರಕೂಡ ಶ್ರೀಗಳ ನುಡಿಯು ನಡೆಯಿಲ್ಲದ ಶೃಂಗಾರದಂತಾಗಿದೆ.

ಬಾಲ ಬಿಚ್ಚಿದ ರಂಭಾಪುರಿ ಶ್ರೀಗಳು:
ಬಸವತತ್ವದವರ ವಿರೋಧಕ್ಕೆ ಮಣಿದು ಅಡ್ಡಪಲ್ಲಕ್ಕಿ ಪರ್ಯಾಯವಾಗಿ ಆಚರಿಸಿಕೊಳ್ಳುತ್ತೇವೆ ಎಂದು ಹೇಳಿದ ಶ್ರೀಗಳು ತ್ರಿಪುರಾಂತ ಕೆರೆ ವಿಷಯದಲ್ಲಿ ಈಗ ನಿಧಾನಕ್ಕೆ ಬಾಲ ಬಿಚ್ಚಿದ್ದಾರೆ. ಬಸವತತ್ವ ನಾಡಲ್ಲಿ ನಡೆಸಿದ ದಸರಾ ದರ್ಭಾರದಲ್ಲಿ ಒಂದು ದಿನವೂ ಬಸವಾದಿ ಪ್ರಮಥರ ವಚನಗಳ ಚಿಂತನೆಯನ್ನು ಮಾಡದ ರಂಭಾಪುರಿ ಶ್ರೀಗಳು ಬಸವ ಭೂಮಿಯ ತ್ರಿಪುರಾಂತಕ ಕೆರೆಗೆ ಕಾಲ್ಪನಿಕ ವ್ಯಕ್ತಿ ರೇಣುಕಾಚಾರ್ಯರ ಹೆಸರಿಡಬೇಕು ಮತ್ತು ರೇವಣಸಿದ್ಧ ಹೆಸರಿನ ವೃತ್ತ ಸ್ಥಾಪನೆ ಮಾಡಬೇಕು ಎಂದು ಇಲ್ಲಿನ ರಾಜಕಾರಣಿಗಳಿಗೆ ಒತ್ತಾಯ ಮಾಡುವುದರ ಹಿಂದೆ ಬಸವಣ್ಣನವರನ್ನು ಧ್ವೇಷಿಸುವ ಬಸವತತ್ವವನ್ನು ಹತ್ತಿಕ್ಕುವ, ಶರಣ ಸ್ಮಾರಕಗಳನ್ನು ಮುಚ್ಚಿಹಾಕುವ ದುರುದ್ಧೇಶ ಹೊಂದಿದ್ದಾರೆ.

ರಾಜ್ಯದ ಬಸವ ತತ್ವ ನಿಷ್ಟ ಲಿಂಗಾಯತರು ಇವರ ಈ ಹೇಳಿಕೆಯನ್ನು ಉಗ್ರವಾಗಿ ಖಂಡಿಸುವುದಲ್ಲದೆ ಬಸವತತ್ವವನ್ನು ಒಪ್ಪಿಕೊಳ್ಳೊದಿರುವ ಮತ್ತು ಬಸವತತ್ವ ವಿರೋಧಿ ಕಾರ್ಯ ಮಾಡುವ ಇವರನ್ನು ಮುಂದೆಂದು ಕಲ್ಯಾಣಕ್ಕೆ ಪ್ರವೇಶ ಮಾಡಗೊಡದಂತೆ ಹೋರಾಟ ಮಾಡಬೇಕು.

ಜಾತಿ ಜಂಗಮರ ದರ್ಬಾರ್:
ಜಂಗಮ ಜಾತಿ ಪ್ರಮಾಣ ಪತ್ರಕ್ಕೆ ಹೋರಾಟ ಮಾಡಿ ಪರಿಶಿಷ್ಟ ವರ್ಗದವರ ಹಕ್ಕು ಕಸಿದುಕೊಂಡ ಇವರು ಪಾದಪೂಜೆಗೆ ಮತ್ತು ಗುರುಸ್ಥಾನಕ್ಕೆ ಯೋಗ್ಯರೇ ಎಂಬ ಅರಿವು ಲಿಂಗಾಯತರಿಗೆ ಇರದಿರುವುದು ದುರಂತ. ಗುರುವರ್ಗದ ಜಾತಿ ಜಂಗಮರು ಕೂಡಿ ಲಿಂಗಾಯತ ಧರ್ಮಕ್ಕೆ ವಿರೋಧ ಮಾಡಿ ಬಸವಣ್ಣನವರ ತತ್ವಕ್ಕೆ ಚ್ಯುತಿ ತಂದಿರುವ ಇವರನ್ನು ಅದಾವ ಅಭಿಮಾನಕ್ಕೆ ಜೋತು ಬಿದ್ದು ಅಡ್ಡಪಲ್ಲಕ್ಕಿ ಹೋರುವಿರಿ?.

ಇವರ ಜಂಗಮ ಜಾತಿ ಅಭಿಮಾನ ಕಾರಣವಾಗಿ ಪಂಚಮಸಾಲಿ ಸಮಾಜ ಎಚ್ಚೆತ್ತುಕೊಂಡು ಇವರನ್ನು ತಿರಸ್ಕರಿಸಿದ ಹಾಗೆ ಇನ್ನಿತರ ಲಿಂಗಾಯತ ಒಳಪಂಗಡಗಳು ಇವರಿಂದ ಬೇಗ ಹೊರಗಡೆ ಬರುವುದು ಒಳಿತು. ಲಿಂಗಾಯತ ಸಮಾಜಕ್ಕೆ ಮತ್ತು ಸಮಾಜದ ನಿಮ್ನ ವರ್ಗಕ್ಕೆ ವಿರಕ್ತ ಮಠಾಧೀಶರ ಕೊಡುಗೆಗಿಂತ ಪಂಚಾಚಾರ್ಯರ ಕೊಡುಗೆ ಶೂನ್ಯವಾಗಿದೆ.

ಅವರ ವೇದಿಕೆಗಳು ಜಾತಿ ಜಂಗಮರಿಂದ ತುಂಬಿರುತ್ತವೆ ವಿನಾ ಒಬ್ಬರೇ ಒಬ್ಬ ನಿಮ್ನ ವರ್ಗದ ಅಥವಾ ಲಿಂಗಾಯತ ಮಠಾಧೀಶ ಸ್ವಾಮಿಗಳು ಇರುವುದಿಲ್ಲ. ಜಂಗಮ ಜಾತಿಯನ್ನು ಬೆಳೆಸುವ ಪಂಚಾಚಾರ್ಯರಿಂದ ಲಿಂಗಾಯತರು, ಲಿಂಗಾಯತ ಮಠಾಧೀಶರು, ಲಿಂಗಾಯತ ರಾಜಕಾರಣಿಗಳು ದೂರವಿರದಿದ್ದರೆ ನೀವು ಬಸವದ್ರೋಹಿಗಳೇ ಆಗುವಿರಿ. ಅಧಿಕಾರ ಶಾಶ್ವತವಲ್ಲ ಅಧಿಕಾರಕ್ಕಾಗಿ ಬಸವತತ್ವವನ್ನು ಬಲಿ ಕೊಡದಿರಿ ಬಸವಣ್ಣನವರ ಅವಕೃಪೆಗೆ ಪಾತ್ರರಾಗಿರುವಿರಿ.

ದುಂದುವೆಚ್ಚದ ದಸರಾ ದರ್ಭಾರ್:
ಒಂದು ಕಡೆ ಬೀದರ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯಾಗಿ ರೈತರು ಅತೀವೃಷ್ಟಿಯಿಂದ ಬಳಲುತ್ತಿದ್ದಾರೆ, ಇನ್ನೊಂದು ಕಡೆ ಇಲ್ಲಿನ ರಾಜಕಾರಣಿಗಳು ಕೋಟಿ ಕೋಟಿ ಹಣ ಸುರಿದು ದಸರಾ ದರ್ಬಾರ್ ನಡೆಸಿ ಹಣದ ದುಂದುವೆಚ್ಚ ಮಾಡುತ್ತಿರುವುದು ಯಾವ ಪುರುಷಾರಾರ್ಥಕ್ಕಾಗಿ ಎಂದು ಜನಸಾಮಾನ್ಯರು ಮಾತಾಡಿಕೊಳ್ಳುತ್ತಿದ್ದಾರೆ.

ಇಂದು ಸಮಾಜಕ್ಕೆ ಕಿಂಕರ ಸ್ವಾಮಿಗಳು ಬೇಕೇ ವಿನಾ ಅಹಂಕಾರ ದರ್ಪದ ಸ್ವಾಮಿಗಳು ಬೇಕಿಲ್ಲ. ವಿಚಾರಶೀಲರು, ವೈಜ್ಞಾನಿಕ ಮನೋಭಾವ ಉಳ್ಳವರು, ಸಮಾನತೆ ತತ್ವ ಪಾಲಿಸುವ ಗುರುಗಳಿಂದ ಸಮಾಜದ ಸ್ವಾಸ್ಥ್ಯ ಸಾಧ್ಯವೇ ಹೊರತು ಭಕ್ತರನ್ನು ಶೋಷಿಸಿ, ಅವರ ಹೆಗಲ ಮೇಲೆ ಕುಳಿತು, ಆಡಂಬರದ ಬದುಕು ಮಾಡುವ ಗುರುಗಳಿಂದ ಅಲ್ಲ. ಎಂಬ ಸತ್ಯ ಇಂದು ಸಮಾಜ ಅರ್ಥ ಮಾಡಿಕೊಳ್ಳಬೇಕು. ಹತ್ತಾರು ಕೋಟಿ ಖರ್ಚು ಮಾಡಿ ಆಡಂಬರದ ಕಾರ್ಯಕ್ರಮಗಳ ಉಪಯೋಗ ದೊಡ್ಡ ದೊಡ್ಡ ಸ್ವಾಮಿಗಳಿಗೆ, ರಾಜಕಾರಣಿಗಳಿಗೆ ಹೊರತು ಜನ ಯಸಾಮಾನ್ಯರಿಗೆ ಏನೂ ಉಪಯೋಗವಾಗದು.

ರಾಜ್ಯದಲ್ಲಿ ನಿರುದ್ಯೋಗ, ಬಡತನ, ಆತ್ಮಹತ್ಯೆಯಂತಹ ಜ್ವಲಂತ ಸಮಸ್ಯೆಗಳಿಗೆ ಯಾವ ಗುರುಗಳಿಂದ ಪರಿಹಾರ ಸಿಕ್ಕಿಲ್ಲ ಮತ್ತು ಸಿಗುವುದೂ ಇಲ್ಲ ಎಂಬ ಸತ್ಯ ಅರ್ಥ ಮಾಡಿಕೊಂಡು ಆಡಂಬರದ ಕಾರ್ಯಕ್ರಮಗಳನ್ನು, ದುಂದು ವೆಚ್ಚದ ಕಾರ್ಯಕ್ರಮಗಳನ್ನು ಧಿಕ್ಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು.

ಬಸವ ತತ್ವದ ಪೂಜ್ಯರ ಮಹಾಮೌನ ಕಾರಣವಾಗಿ ಬಸವಕಲ್ಯಾಣದ ಭೂಮಿಯಲ್ಲಿ ನಡೆದಿರುವ ಬಸವತತ್ವ ಆಚರಣೆ ವಿರೋಧಿ ದಸರಾ ದರ್ಬಾರ್ ಬಸವಕಲ್ಯಾಣ ಇತಿಹಾಸಕ್ಕೆ ಕಪ್ಪು ಚುಕ್ಕೆಯಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BvguxN7Z0AG9g7Il7l5Lzh

Share This Article
15 Comments
  • ನಿಂದಕರು ಇರಬೇಕಯ್ಯ,… ಜಗದೊಳು ಇಂತಹ ತಮಗೆ ಸಂಬಂಧಿಸದ ಮಾತುಗಳನ್ನಾಡುವವರು

    • ಬಸವ ನಿಂದೆಯನ್ನು ಕೇಳಿಯೂ ಕೇಳದಂತೆ ಇರುವವರು ಇದ್ದರೇನು ಶಿವ ಶಿವ ಹೋದರೇನು…ಇಂಥವರು ಬಸವದ್ರೋಹಿಗಳಯ್ಯ

  • ಬಂಗಾರ ತಿಪ್ಪೆಯಲ್ಲಿ ಇಟ್ಟರು ಬಂಗಾರ. ಇಷ್ಟವಾದರೆ ಸ್ವೀಕರಿಸಿ. ಕಷ್ಟವಾದರೂ ಬಿಡಿ. ಲೋಕೋಬಿನ್ನು ರುಚಿ. ಗುರು ಪರಂಪರೆಯನ್ನು ನಿಂದಿಸುವುದು ಅಕ್ಷಮ್ಯ. ಬಸವೇಶ್ವರರು ಸಹ ಜಾತವೇದ ಮುನಿಗಳಿಂದ ಇಷ್ಟಲಿಂಗ ದೀಕ್ಷೆ ಪಡೆದಿರುವುದು ಇತಿಹಾಸ. ಇತಿಹಾಸ ತಿರ ತಿರುಚುವುದು ಸಾಮಾನ್ಯ ಸಂಗತಿಯಲ್ಲ. ಇತಿಹಾಸವನ್ನು ಅರಿತರೆ ಸಮಸ್ಯೆಗಳು ಸೃಷ್ಟಿಯಾಗುವುದಿಲ್ಲ. ವೀರಶೈವ ಲಿಂಗಾಯಿತ ಅಭಿವೃದ್ಧಿಯಕ್ಕೆ ಆಚಾರ್ಯರಷ್ಟೇ ಶ್ರೀ ಬಸವೇಶ್ವರರು ಕಾರಣಕರ್ತರು

  • ಬಸವ ಪ್ರಭು ಸ್ವಾಮೀಜಿಯವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಸರಿಯಾದ ಮಾತನ್ನೇ ಹೇಳಿದ್ದಾರೆ. ಮಹಾ ಶರಣ ಮಹಾ ಮೌನ ಮುರಿದು ಈ ಅಪದ್ದ ನಡೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಸ್ಪಷ್ಟನೆ ನೀಡಲಿ.

    • ಬಸವ ಪ್ರಭು ಸ್ವಾಮೀಜಿಗಳ ಅಭಿಪ್ರಾಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಇವರಿಗೆ ಬಸವಕಲ್ಯಾಣಕ್ಕೆ ಬಂದು ದಸರಾ ದರ್ಬಾರ್ ಮಾಡುವುದಕ್ಕೆ ಅವಕಾಶಕೊಟ್ಟುದೆ ತಪ್ಪಾಯಿತು. ಬಸವ ತತ್ವ ನಾಡಿನ ತುಂಬಾ ಪ್ರಚಾರವಾಗಬೇಕೆಂದರೆ ಬಸವ ತತ್ವದ ಕ್ರಿಯಾ ಮೂರ್ತಿಗಳನ್ನು ಗ್ರಾಮ ಗ್ರಾಮಗಳಲ್ಲಿ ತರಬೇತಿ ಕೊಟ್ಟು ಅವರನ್ನು ತಯಾರು ಮಾಡಬೇಕು. ಲಿಂಗಾಯತರಲ್ಲಿ ಹುಟ್ಟು ಸಾವಿನ ಮಧ್ಯದಲ್ಲಿ ಬರುವ ಎಲ್ಲಾ ಕ್ರಿಯೆಗಳಿಗೆ ಜಾತಿ ಜಂಗಮರನ್ನೇ ಭಕ್ತರು ಕರೆಯುತ್ತಿದ್ದಾರೆ. ಹೀಗಾಗಿ ಬಸವ ತತ್ವ ಪ್ರಚಾರ ಆಗುತ್ತಿಲ್ಲ. ನಾಡಿನ ವಿರಕ್ತ ಮಠಾಧೀಶರು ಮತ್ತು ಬಸವ ತತ್ವ ಪ್ರಚಾರಕರಲ್ಲಿ ಒಂದು ಮನವಿ ಏನಂದರೆ, ಯುದ್ಧೋಪಾದಿಯಲ್ಲಿ ಬಸವ ತತ್ವ ಕ್ರಿಯಾಮೂರ್ತಿಗಳನ್ನು ಪ್ರತಿ ಜಿಲ್ಲೆಯಲ್ಲಿ ತರಬೇತಿ ಕೊಟ್ಟು ಕಳುಹಿಸಿದರೆ ಮಾತ್ರ ಬಸವ ತತ್ವ ಪ್ರಚಾರವಾಗುತ್ತದೆ. ಇಲ್ಲದಿದ್ದರೆ ಬುನಾದಿ ಇಲ್ಲದ ಮನೆ ಕಟ್ಟಿದಂತಾಗುತ್ತದೆ.

      • ಹೌದು ಹೌದು ಅವಕಾಶ ನೀಡಿದ್ದು ಇದು ತಮ್ಮದೇ ನಾಡು ನೋಡಿ ಅದಕ್ಕೆ….. ಅಹಂ ಭ್ರಹಂಸ್ಮಿ ಮಾತು

    • ಇಷ್ಟಲಿಂಗ ಬಸವಣ್ಣನವರ ಉದರದಲ್ಲಿ ಹುಟ್ಟಿತು ಅಂತ ವಚನ ವಿದೆ

  • ಜನರು ಇಂಥ ಆಷಾಢ ಭೂತಿ, ಜನರ ಹೆಗಲ ಮೇಲೆ ಕುಳಿತು
    ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಇವರುಗಳ ನಡೆಯನ್ನು ಜನ ಅರ್ಥ ಮಾಡಿಕೊಳ್ಳಬೇಕು. ಕುರಿಗಳಾಗಿ
    ಅವರ ಹಿಂದೆ ಹೋಗುವದನ್ನು ಬೀಡಬೇಕು.
    ಜನರು ಬಸವ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಇಲ್ಲದಿದ್ದರೆ
    ನಿಮ್ಮ ತೆಲೆ ಮೇಲೆ ಪಾದ ಇಟ್ಟು ನಿಮ್ಮನ್ನು ತುಳಿದು
    ಹಾಕುತ್ತಾರೆ . ಬಸವ ಪ್ರಭು ಸ್ವಾಮೀಜಿಯವರು
    ಹಾವಿಗೆ ಹಾಲನ್ನು ನೀಡಿದರೆ ಅದು ವಿಷ ಕಕ್ಕುವದು
    ಬಿಡುವುದೇ ಎಂಬ ಸತ್ಯ ಹೇಳುವ ಮೂಲಕ ಗುರು
    ಅನಿಸಿಕೊಳ್ಳಲಿಕ್ಕೆ ಯೋಗ್ಯರಲ್ಲದ ರಂಭಾಪುರಿ ಶ್ರೀಗಳ
    ರಂಭಾಟ ದೊಂಬರಾಟಕ್ಕೆ ಕಡಿವಾಣ ಹಾಕಬೇಕು
    ಎನ್ನುವ ಮಾತು ಸತ್ಯ ಈ ಮಾತನ್ನು ಗಮನದಲ್ಲಿ ಇಟ್ಟುಕೊಂಡು ಬಸವಕಲ್ಯಾಣದ ಇತರೆ ಬಸವ ತತ್ವ
    ಸ್ವಾಮೀಜಿಗಳು, ಬಸವ ಸಂಘಟಕರು ಕೇವಲ ಮಾತಿನ
    ಶೂರರು ಆಗದೇ ಬಸವನಾಡಿನ ನೆಲದ ಮೇಲೆ ಕಾಲಿಡದ
    ಆಗೇ ಮಾಡುವ ಸಂಘಟಿತ ಪ್ರಯತ್ನ, ಗಣನಿಷ್ಟೆಯ
    ಬಸವ ಪ್ರಜ್ಞೆ ಬೆಳೆಸಿಕೊಳ್ಳುವದು ಇಂದಿನ ಜರೂರ ಕೆಲಸವಾಗಬೇಕು ಆಗಿದೆ. ಇಂಥವರ ವಿರುದ್ಧ ಒಂಟಿಸಲಗನಂತೆ ಪ್ರತಿಧ್ವನಿಸುವ ಪೂಜ್ಯ ಬಸವಪ್ರಭು ಸ್ವಾಮೀಜಿಯವರ ಗಣಾಚಾರ ನಿಷ್ಠೆಗೆ ಅಭಿನಂದನೆಗಳು

  • ವೀರಶೈವರ ಮೇಲೆ ಯಾಕಿಷ್ಟು ದ್ವೇಷ. ಇದೆ ದ್ವೇಷವನ್ನು ದೇಶದ ಒಳಿತಿಗಾಗಿ ಹಾಗೂ ದೇಶದ್ರೋಹಿ ಆಚರಣೆಯನ್ನು ಮಾಡುತ್ತಿರುವ ಕಾಂಗ್ರೆಸ್ ಮತ್ತು ಇತರರ ಮೇಲೆ ಉಪಯುಗಿಸುವದು ಸೂಕ್ತ ಅಲ್ಲವೇ

  • ಈ ದಸರಾ ದರ್ಬಾರಕ್ಕೆ ಶಿವಾಚಾರ್ಯ ಪರಂಪರೆಯ ಸ್ವಾಮಿಗಳು ರಾಜಕಾರಣಿಗಳನ್ನು ಮುಂದುಮಾಡಿ ಇಂತಹ ಹೊಲಸುರಡಿ ಎಬ್ಬಿಸಿ ತಮಾಸೆ ಮಾಡುತ್ತಿದ್ದಾರೆ.

    • ಸರಿಯಾಗಿ ಲಿಂಗಾಯತದ ಇತಿಹಾಸವನ್ನು ತಿಳಿದುಕೊಳ್ಳಿ

Leave a Reply

Your email address will not be published. Required fields are marked *

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.