ಇಂದು ಬಸವಣ್ಣನವರ ಜನ್ಮಸ್ಥಳದಲ್ಲಿ ‘ಕ್ರಾಂತಿವೀರ ಬ್ರಿಗೇಡ್‌’ ಚಾಲನೆ

ಬಸವ ಮೀಡಿಯಾ
ಬಸವ ಮೀಡಿಯಾ

ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ, 1ಲಕ್ಷ ಜನ ಸೇರುವ ನಿರೀಕ್ಷೆ: ಕೆ ಎಸ್ ಈಶ್ವರಪ್ಪ

ವಿಜಯಪುರ

ಕ್ರಾಂತಿ ಪುರುಷ ಬಸವೇಶ್ವರ ಜನ್ಮ ಸ್ಥಳ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಮಾಜಿ ಉಪಮುಖ್ಯ ಮಂತ್ರಿ ಕೆ ಎಸ್ ಈಶ್ವರಪ್ಪ ನೇತೃತ್ವದ ಕ್ರಾಂತಿವೀರ ಬ್ರಿಗೇಡ್‌ ಮಂಗಳವಾರ ಉದ್ಘಾಟನೆಗೊಳ್ಳಲಿದೆ.

ಈ ಹಿನ್ನೆಲೆಯಲ್ಲಿ ಪಟ್ಟಣದ ಗುರುಕೃಪ ಶಾಲೆ ಪಕ್ಕದ ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿ, ಬಸವನಬಾಗೇವಾಡಿ ಪಟ್ಟಣದ ವಿವಿಧ ಕಡೆಗಳಲ್ಲಿ ಕೆಸರಿ ಬಟ್ಟೆಯಿಂದ ಸ್ವಾಗತ ಕಮಾನುಗಳನ್ನ, ವಿವಿಧ ಮುಖಂಡರ ಸ್ವಾಗತ ಕೋರುವ ಬ್ಯಾನರ್ ಗಳನ್ನ ಕಟ್ಟಲಾಗಿದೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ‘ಕ್ರಾಂತಿವೀರ ಬ್ರಿಗೇಡ್’ನ ಸಂಚಾಲಕರೂ ಆಗಿರುವ ಈಶ್ವರಪ್ಪ, ಹಿಂದೂ ಸಮಾಜದ ರಕ್ಷಣೆಯ ದೃಷ್ಟಿಯಿಂದ ಈ ಬ್ರಿಗೇಡ್ ಸೃಜಿಸಲಾಗಿದೆ. ಇದು ರಾಜಕೀಯ ರಹಿತ ಸಂಘಟನೆ ಕೇಂದ್ರಿತ ಬ್ರಿಗೇಡ್ ಆಗಿದ್ದು, ಯಾವುದೇ ರಾಜಕೀಯದ ನಾಯಕರು ಬಂದರೂ ಸ್ವಾಗತ ಮಾಡುತ್ತೇವೆ. ಬ್ರಿಗೇಡ್‍ಗೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಣೆ ನೀಡಿದರು.

ನಿರೀಕ್ಷೆ ಮೀರಿ ಉತ್ತರ ಕರ್ನಾಟಕದಲ್ಲಿ ಬೆಂಬಲ ಸಿಗುತ್ತಿದೆ. 1008 ಸ್ವಾಮಿಗಳು ಪಾದಪೂಜೆ ಮೂಲಕ ಬ್ರಿಗೇಡ್ ಉದ್ಘಾಟನೆಯಾಗಲಿದ್ದು, ಕನ್ನೇರಿಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕಾಗಿನೆಲೆ ಗುರುಪೀಠ ತಿಂಥಣಿ ಪೀಠದ ಶ್ರೀ ಸಿದ್ಧರಾಮಾನಂದ ಸ್ವಾಮೀಜಿ ಸೇರಿದಂತೆ ಹರ-ಗುರು-ಚರ ಮೂರ್ತಿಗಳ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, 1ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಎಲ್ಲ ಗುರು ಪೀಠಗಳ ಸ್ವಾಮೀಜಿಗಳು ತಾವೇ ಸ್ವಯಂಪ್ರೇರಿತವಾಗಿ ಬರುತ್ತೇವೆಂದು ಹೇಳಿದ್ದಾರೆ. ಅನೇಕ ಸ್ವಾಮೀಜಿಗಳು ಇಂದಿಗೂ ಗುಡಿಸಲಿನಲ್ಲಿ ವಾಸವಾಗಿದ್ದಾರೆ, ಸಮಾಜಕ್ಕೆ ಆಧ್ಯಾತ್ಮ ಹಾಗೂ ಜ್ಞಾನ ಬಲ ತುಂಬುವ ಈ ಮಠಾಧೀಶರ ಮೇಲೆ ಜನರಿಗೆ ಅಪಾರವಾದ ನಂಬಿಕೆ ಹಾಗೂ ಭಕ್ತಿ ಇದೆ. ಅನೇಕ ಅರ್ಚಕರಲ್ಲಿ ಭಕ್ತಿ ತುಂಬಿ ತುಳುಕುತ್ತದೆ, ಆದರೆ ತರಬೇತಿ ಕೊರತೆ ಇದೆ, ಹೀಗಾಗಿ ತರಬೇತಿ ನೀಡುವ ಉದ್ದೇಶವನ್ನೂ ಬ್ರಿಗೇಡ್ ಹೊಂದಿದೆ. ಈ ಎಲ್ಲರ ನೋವಿಗೆ ಸ್ಪಂದಿಸುವುದೇ ಬ್ರಿಗೇಡ್ ಗುರಿಯಾಗಿದೆ ಎಂದರು.

ಕರ್ನಾಟಕದಲ್ಲಿ ರಾಜಕಾರಣ ಗಬ್ಬೆದು ಹೋಗಿದೆ. ರಾಜಕೀಯ ಕಾರ್ಯಕರ್ತರು ನಾಚಿಕೆ ಪಡುವಂತೆ ಆಗಿದೆ. ರಾಷ್ಟ್ರೀಯ ನಾಯಕರು ಇದ್ದರೋ, ಇಲ್ಲವೋ ಇಲ್ಲ ಗೊತ್ತಾಗುತ್ತಿಲ್ಲ. ಬಿಜೆಪಿ ಒಂದು ಕುಟುಂಬದ ಕೈಯಲ್ಲಿ ಸಿಲುಕಿದೆ. ಹೊಂದಾಣಿಕೆ ರಾಜಕೀಯವು ಹಿರಿಯ ಕಾರ್ಯಕರ್ತರಿಗೆ ನೋವಾಗಿದೆ ಎಂದು ಈಶ್ವರಪ್ಪ ತಿಳಿಸಿದರು.

ಖರ್ಗೆ ಅವರ ಬಗ್ಗೆ ನನಗೆ ಗೌರವವಿದೆ, ಆದರೆ ಕುಂಭಮೇಳಕ್ಕೆ ಸಂಬಂಧಿಸಿದಂತೆ ಅವರು ನೀಡಿದ ಹೇಳಿಕೆ ಖಂಡನೀಯ ಎಂದರು. ಡಿ.ಕೆ.ಶಿವಕುಮಾರ್, ಕುಂಭಮೇಳದಲ್ಲಿ ಭಾಗಿಯಾದ ಯು.ಟಿ.ಖಾದರ್ ಅವರ ನಡೆಯನ್ನು ಖಂಡಿಸುತ್ತೀರಾ? ಕಾಂಗ್ರೆಸ್‍ನಿಂದ ಯಾರೂ ಭಾಗಿಯಾಗಬೇಡಿ ಎಂದು ಹೇಳಲು ಸಾಧ್ಯವೇ? ಎಂದು ಈಶ್ವರಪ್ಪ ಪ್ರಶ್ನಿಸಿದರು.

Share This Article
3 Comments
  • ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಟೀಷರಿಗೆ ಸಿಂಹ ಸ್ವಪ್ನ ಆಗಿದ್ದ ಅಪ್ರತಿಮ ಸೇನಾನಿ,,, ಆದರೆ ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟವರ ಪಾದ ಪೂಜೆ ಮಾಡುವ ನಕಲಿ ರಾಷ್ಟ್ರವಾದಿಗಳ ಪಕ್ಷದಲ್ಲಿ ಗುರುತಿಸಿಕೊಂಡು ಮೂಲೆಗುಂಪಾಗಿ, ತನ್ನದೇ ಸಮುದಾಯದ ಮಾಸ್ ಲೀಡರ್ ವಿರುದ್ಧ ದಲಿತ ಹಿಂದುಳಿದ ವರ್ಗಗಳ ಕಡುವಿರೋದಿಗಳು ಮನುವ್ಯಾದಿಗಳ ವಾದ್ಯಕ್ಕೆ ಕುಣಿಯುವ ಸೋ ಕಾಲ್ಡ್ ಹಿಂದುಳಿದ ವರ್ಗದ ಸವಕಲು ನಾಯಕ,ಇಂಥವರಿಂದಲೆ ಆ ವರ್ಗಗಳು ಇನ್ನೂ ಹಿಂದುಳಿದವರು ಅನ್ನುವ ಹಣೆಪಟ್ಟಿಯಿಂದ ಹೊರಗೆ ಬರಲಿಲ್ಲ

  • ಯಾವುದೇ ಸಂಘಟನೆ ಯಾಗಲಿ ಅಲ್ಲಿ ರಾಜಕೀಯ ವಾಸನೆ ಇದ್ದೇ ಇರುತ್ತದೆ ಇಲ್ಲ ಅನ್ನುವುದು ಬರೀ ಬೊಗಳೆ

  • “ಸನಾತನ ಸಂವಿಧಾನ”ದ ತಯಾರಿ ಮತ್ತು ಮಾತುಗಳನ್ನಾಡುತ್ತಿರುವ ಸನಾತನಿಗಳು ರೂಪಿಸಿರುವ ಮಾನವತಾ ವಿರೋಧೀ ಸಂಸ್ಕೃತಿಯ ಕಪಿಮುಷ್ಠಿಯಿಂದ ಈ ಅವೈದಿಕರು ಎಷ್ಟು ಬೇಗ ಹೊರಬರುತ್ತಾರೋ ಅಷ್ಟು ಒಳ್ಳೆಯದು. ಸನಾತನ ಸಂವಿದಾನ ಕಾರ್ಯರೂಪಕ್ಕೆ ಬಂದರೆ ಈಶ್ವರಪ್ಪ, ಕಾಡಸಿದ್ದೇಶ್ವರ ಸ್ವಾಮೀಜಿಯವರ ಸ್ಥಾನಮಾನವೇನು? ಬಹುಶಃ ಅವರಿಗೆ ಗೊತ್ತಿದ್ದಂತಿಲ್ಲ.

Leave a Reply

Your email address will not be published. Required fields are marked *