ಬಸವನ ಬಾಗೇವಾಡಿ, ವಿಜಯಪುರದಲ್ಲಿ ಅನುಭವ ಮಂಟಪ ರಥಯಾತ್ರೆಗೆ ಅದ್ದೂರಿ ಸ್ವಾಗತ

ಬಸವನ ಬಾಗೇವಾಡಿ

ಬಸವ ಜಯಂತಿ ಅಂಗವಾಗಿ ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದಲ್ಲಿ ಏ. 29 ಮತ್ತು 30ರಂದು ‘ಅನುಭವ ಮಂಟಪ-ಬಸವಾದಿ ಶರಣರ ವೈಭವ’ ಕಾರ್ಯಕ್ರಮ ಆಯೋಜಿಸಿದ ನಿಮಿತ್ತ ಶುಕ್ರವಾರ ಪಟ್ಟಣಕ್ಕೆ ಬಂದಿದ್ದ ರಥಯಾತ್ರೆಗೆ ಭವ್ಯ ಸ್ವಾಗತ ಕೋರಲಾಯಿತು.

ಇಂಗಳೇಶ್ವರ ಮಾರ್ಗವಾಗಿ ಪಟ್ಟಣದ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ರಥಕ್ಕೆ ಪೂಜೆ ಸಲ್ಲಿಸಿ ಬಸವೇಶ್ವರ ಮೂರ್ತಿಗೆ ಹೂಮಾಲೆ ಅರ್ಪಿಸಲಾಯಿತು.

ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ‘12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಅನುಭವ ಮಂಟಪ ಸ್ಥಾಪಿಸಿ ಸಮಾನತೆ ಸಂದೇಶ ಹಾಗೂ ಸಂಸತ್ತಿನ ಕಲ್ಪನೆಯನ್ನು ಜಗತ್ತಿಗೆ ತಿಳಿಸಲಾಯಿತು. ಬಸವ ಜಯಂತಿ ಸಂದರ್ಭದಲ್ಲಿ ಭವ್ಯ ರಥಯಾತ್ರೆ ರಾಜ್ಯದಲ್ಲಿ ಸಂಚರಿಸುತ್ತಿರುವುದು ಬಸವ ಭಕ್ತರಿಗೆ ಸಂತಸ ತಂದಿದೆ. ಇಂತಹ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಸಾಮರಸ್ಯ ಹೆಚ್ಚಲಿದೆ’ ಎಂದು ಹೇಳಿದರು.‌

ತಹಶೀಲ್ದಾರ್‌ ವೈ.ಎಸ್. ಸೋಮನಕಟ್ಟಿ ಮಾತನಾಡಿ, ‘ಸಾಂಸ್ಕೃತಿಕ ನಾಯಕ ಬಸವಣ್ಣನವರ ತತ್ವ ಹಾಗೂ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ ರಾಜ್ಯ ಸರ್ಕಾರ ಬಸವಣ್ಣನವರ ತತ್ವ, ಸಿದ್ಧಾಂತ ಜನಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಕೂಡಲಸಂಗಮದಲ್ಲಿ ಅದ್ಧೂರಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ’ ಎಂದು ಹೇಳಿದರು.

ನಿವೃತ್ತ ಶಿಕ್ಷಕ ಎಂ.ಜಿ. ಆದಿಗೊಂಡ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಡೋಣೂರ, ಬಸವರಾಜ ಹಾರಿವಾಳ, ಸಂಗಮೇಶ ಓಲೇಕಾರ, ರವಿಗೌಡ ಚಿಕ್ಕೊಂಡ, ವಿವೇಕಾನಂದ ಕಲ್ಯಾಣಶೆಟ್ಟಿ, ಸಂಜು ಬಿರಾದಾರ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್. ಚಿತ್ತರಕಿ, ಸಂಗಮೇಶ ಜಾಲಗೇರಿ, ಬಸವರಾಜ ನಾಯ್ಕೋಡಿ, ಅರವಿಂದ ಗೊಳಸಂಗಿ, ವೀರೇಶ ಗಬ್ಬೂರ, ವೈ.ಏನ್. ಮಿಣಜಗಿ, ಅಪ್ಪು ಧನಶೆಟ್ಟಿ ಇದ್ದರು.

ವಿಜಯಪುರ

ವಿಶ್ವಗುರು ಬಸವಣ್ಣನವರ ಬದುಕು, ಸಂದೇಶ ಮತ್ತು ಚಿಂತನೆ ಪ್ರಚುರಪಡಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ‘ಅನುಭವ ಮಂಟಪ-ಶರಣರ ವೈಭವ ರಥಯಾತ್ರೆ’ಯು ಶುಕ್ರವಾರ ಸಂಜೆ ನಗರಕ್ಕೆ ಆಗಮಿಸಿತು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರಥಯಾತ್ರೆಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿದರು.

ವಿಜಯಪುರಕ್ಕೆ ಆಗಮಿಸಿದ ರಥಯಾತ್ರೆಯು ಅಂಬೇಡ್ಕರ್ ವೃತ್ತದಿಂದ ಸಾಗಿ ಬಸವೇಶ್ವರ ವೃತ್ತ, ಗಾಂಧಿವೃತ್ತ, ಶಿವಾಜಿ ಸರ್ಕಲ್ ಮೂಲಕ ಸಾಗಿದ ರಥಯಾತ್ರೆಯು ತಿಕೋಟಾ ಮಾರ್ಗವಾಗಿ ಬೆಳಗಾವಿ ಜಿಲ್ಲೆಗೆ ತೆರಳಿತು.

ಅನುಭವ-ಮಂಟಪ ಮಾದರಿ ರಥದಲ್ಲಿ ಜಗಜ್ಯೋತಿ ಬಸವೇಶ್ವರ, ಗೌತಮ ಬುದ್ಧ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಶಿವಶರಣೆ ಅಕ್ಕ ಮಹಾದೇವಿ, ಸಂತ ಶಿಶುನಾಳ ಶರೀಫ, ಗುರುನಾನಕ, ಭಗವಾನ ಮಹಾವೀರ, ನಾರಾಯಣ ಗುರು, ಏಸು ಕ್ರಿಸ್ತರ ಪ್ರತಿಮೆಗಳನ್ನೊಳಗೊಂಡಿದೆ.

ಏ. 29 ಹಾಗೂ 30ರವರೆಗೆ ಕೂಡಲಸಂಗಮದಲ್ಲಿ ಆಯೋಜಿಸಿರುವ ಬಸವ ಜಯಂತಿ ಅಂಗವಾಗಿ ಅನುಭವ ಮಂಟಪ- ಬಸವಾದಿ ಶರಣರ ವೈಭವ ಕಾರ್ಯಕ್ರಮದ ಅಂಗವಾಗಿ ಈ ರಥಯಾತ್ರೆ ರಾಜ್ಯದಾದ್ಯಂತ ಸಂಚರಿಸುತ್ತಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಕ್ರೀಡಾಧಿಕಾರಿ ರಾಜಶೇಖರ ದೈವಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಚುನಾವಣಾ ತಹಶೀಲ್ದಾರ್‌ ಪ್ರೇಮಸಿಂಗ್ ಪವಾರ, ವಿಜಯಪುರ ಗ್ರೇಡ್-2 ತಹಶೀಲ್ದಾರ್‌ ಐ.ಎಚ್. ತುಂಬಗಿ, ವಿ.ಸಿ.ನಾಗಠಾಣ, ಅಭಿಷೇಕ ಚಕ್ರವರ್ತಿ, ವಿದ್ಯಾವತಿ ಅಂಕಲಗಿ, ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರ, ರವಿ ಕಿತ್ತೂರ ಸೇರಿದಂತೆ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/CMDnqQbFJjwCptS1HUXnEd

Share This Article
Leave a comment

Leave a Reply

Your email address will not be published. Required fields are marked *