ಧಾರವಾಡ ತಾಲೂಕಿನ ಮನಗುಂಡಿಯ ಶ್ರೀ ಬಸವಾನಂದ ಸ್ವಾಮಿಗಳು ರಚಿಸಿರುವ ‘ವಚನ ಹೃದಯ’ಗ್ರಂಥ ಇತ್ತೀಚೆಗೆ ಬಿಡುಗಡೆಯಾಯಿತು. ಶರಣ ಸಾಹಿತಿ ಡಾ ಸಂಗಮೇಶ ಕಲಹಾಳ ಈ ವಿನೂತನ ಪ್ರಯತ್ನದ ವಿವರವಾದ ಪರಿಚಯ ಮಾಡಿಕೊಟ್ಟಿದ್ದಾರೆ. (ಪ್ರಭುದೇವ ಪ್ರಕಾಶನ, ರಿಯಾಯತಿ ದರ 350 ರೂ, ಸಂಪರ್ಕ 8073979683, 9449227799)
ಕೊಪ್ಪಳ
ಪೂಜ್ಯ ಶ್ರೀ ಬಸವಾನಂದ ಸ್ವಾಮೀಜಿಯವರು, ಕೊಪ್ಪಳದಲ್ಲಿ ಗಟ್ಟಿಯಾಗಿ ಬಸವತತ್ವ ಮತ್ತು ಬಸವ ಅನುಯಾಯಿಗಳನ್ನು ನೆಲೆಯೂರಿಸಿದ ಲಿಂಗೈಕ್ಯ ಡಾ ಬಸಯ್ಯ ಸಸಿಮಠರವರಿಂದ ನನಗೆ ಪರಿಚಯವಾಯಿತು. ನನಗೆ ಪರಿಚಯವಿರುವ ತುಂಬಾ ಜನ ಸ್ವಾಮೀಜಿಗಳಲ್ಲಿ ಇವರು ನನಗೆ ಅಚ್ಚುಮೆಚ್ಚು.
ಯಾಕೆಂದರೆ ಇವರು ಕೇವಲ ಸ್ವಾಮೀಜಿಗಳಲ್ಲ, ಆಧ್ಯಾತ್ಮಿಕ ಪ್ರವಚನಗಳ ಮೂಲಕ ಜ್ಞಾನದಾಸೋಹಿ ಆಗಿದ್ದರಿಂದ, ನಿಸರ್ಗಚಿಕಿತ್ಸೆ ನೀಡುವ ಮೂಲಕ ಆರೋಗ್ಯದಾಸೋಹಿ ಆಗಿದ್ದರಿಂದ, ಸಾವಯವಕೃಷಿ ಮೂಲಕ ಕೃಷಿದಾಸೋಹಿ ಆಗಿದ್ದರಿಂದ, ಮಳೆಕೊಯ್ಲು ಮೂಲಕ ನಿಸರ್ಗದಾಸೋಹಿ ಆಗಿದ್ದರಿಂದ ಮತ್ತು ಗೋಬರ್ ಗ್ಯಾಸ ಬಳಕೆ ಮೂಲಕ ಇಂಧನದಾಸೋಹಿ ಆಗಿದ್ದರಿಂದ ವಿಶೇಷವಾಗಿ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಅವರ ಹತ್ತಕ್ಕೂ ಹೆಚ್ಚು ಗ್ರಂಥಗಳು ಪ್ರಕಟವಾಗಿದ್ದರೂ ಅವೆಲ್ಲವುಗಳಿಗಿಂತ “ವಚನ ಹೃದಯ” ಗ್ರಂಥವು ವಿಶಿಷ್ಠ ಮತ್ತು ವೈವಿಧ್ಯಮಯವಾಗಿದೆ. ಅವರು ರಚಿಸಿದ ಎಲ್ಲ ಗ್ರಂಥಗಳು ಅವರ ಅಂತರಂಗದ ಪ್ರತಿಧ್ವನಿಯಾಗಿವೆ.

ಪೂಜ್ಯರ ದೃಷ್ಟಿಯಲ್ಲಿ ವಚನ ವಿಶೇಷತೆಗಳು
ವಚನದ ಪ್ರಾರಂಭದಲ್ಲಿ ವ್ಯಕ್ತಿಯ ಅಥವಾ ಸಮಾಜದ ಯಾವುದಾರೂ ಸ್ಥಿತಿ, ಸಮಸ್ಯೆ, ಸಾಮಾಜಿಕ ಪಿಡುಗು, ಮೂಢನಂಬಿಕೆ, ಕಂದಾಚಾರಗಳ ಪ್ರಸ್ತಾಪವಿರುತ್ತದೆ. ಎರಡನೆಯದಾಗಿ ವಾಸ್ತವಿಕ ದೃಷ್ಟಾಂತಗಳು ಇರುತ್ತದೆ. ಮೂರನೆಯದಾಗಿ ಮೊದಲು ಹೇಳಿದ ಸಮಸ್ಯೆಯಿಂದ ಉಂಟಾಗುವ ಪರಿಣಾಮ-ಅವಾಂತರಗಳ ಪ್ರಸ್ತಾಪವಿರುತ್ತದೆ. ನಂತರ ಸಮಸ್ಯೆಗೆ ಕಾರಣವಾದ ಕುರಿತು ಪ್ರಶ್ನಿಸಲಾಗಿರುತ್ತದೆ. ಅಷ್ಟಕ್ಕೆ ಬಿಡದೇ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗಿರುತ್ತದೆ. ಪರಿಹಾರದ ಜೊತೆಗೆ ಮಾನವೀಯ ಸಂಬಂಧ ಮತ್ತು ನೈತಿಕ ಮೌಲ್ಯ ಬೋಧಿಸಲಾಗಿರುತ್ತದೆ. ಕೊನೆಯಲ್ಲಿ ವಚನಕಾರರ ವಚನಾಂಕಿತವಿರುತ್ತದೆ. ಆ ಅಂಕಿತಗಳ ವಿಶೇಷತೆ ಮತ್ತು ವೈವಿಧ್ಯತೆಗಳಿಂದ ಕೂಡಿದ ಗ್ರಂಥವೇ “ವಚನ ಹೃದಯ” ಗ್ರಂಥವಾಗಿದೆ.
ವಚನಸಾಹಿತ್ಯದ ವೈಶಿಷ್ಟ್ಯತೆಗಳು
ಆತ್ಮಕಲ್ಯಾಣ ಮತ್ತು ಲೋಕಕಲ್ಯಾಣಗಳೇ ವಚನಸಾಹಿತ್ಯದ ಗುರಿಯಾಗಿದೆ. ಸಮಗ್ರ ವಿಕಾಸವೇ ವಚನಸಾಹಿತ್ಯದ ಉದ್ದೇಶವಾಗಿದೆ. ವಿಶ್ವದ ಸಮಗ್ರ ಪರಿವರ್ತನೆಯ ಸಾಹಿತ್ಯವೇ ವಚನಸಾಹಿತ್ಯ. ವಚನಗಳಲ್ಲಿ ಪ್ರಪಂಚದ ಸಜೀವ ಮತ್ತು ನಿರ್ಜೀವಿಗಳಿಗೆ ಏನೇನು ಬೇಕೋ ಅದೆಲ್ಲವೂ ಇದೆ. ಜಗತ್ತಿನ ವಿದ್ವಾಂಸರು ವಿಶ್ವದ ಎಲ್ಲ ಸಾಹಿತ್ಯಗಳ ‘ಹೃದಯವೇ ವಚನಸಾಹಿತ್ಯ’ವೆಂದು ಹೊಗಳಿದ್ದಾರೆ.

ಹೃದಯಕ್ಕೆ ಯಾಕಿಷ್ಟು ಮಹತ್ವ? ‘ಮರೆದು ನುಡಿದು ತಲ್ಲಣಿಸುವಂಗೆ ಅವನ ಹೃದಯ ಸಾಕ್ಷಿ’ ಎಂದು ಅಲ್ಲಮಪ್ರಭುಗಳು ಹೇಳುತ್ತಾರೆ. ಏನಾದರೂ ಹೇಳಬೇಕೆಂದರೆ “ಎದೆ ಮುಟ್ಟಿಕೊಂಡು ಹೇಳು” ಅನ್ನುತ್ತೇವೆ. ಸತ್ಯವನ್ನು ಹೇಳು ಎನ್ನಲು, ಸುಳ್ಳು ಹೇಳಬಾರದು ಎನ್ನಲು ಹೀಗೆ ಹೇಳುವುದು ಜನಸಾಮಾನ್ಯರ ವಾಡಿಕೆ ಮಾತಾಗಿದೆ. ಅಂದರೆ ಹೃದಯವೆಂದರೆ ಅಂತಸ್ಸಾಕ್ಷಿಯೇ ಆಗಿದೆ.
ಇನ್ನು ವೈಜ್ಞಾನಿಕವಾಗಿ ದೇಹದಲ್ಲಿನ 30 ಲಕ್ಷ ಕೋಟಿ (30 ಟ್ರಿಲಿಯನ್) ಜೀವಕೋಶಗಳಿಗೆ ಶುದ್ಧರಕ್ತ ಪೂರೈಸುತ್ತದೆ. ಶರೀರದಲ್ಲಿ ಮೆದುಳು ಜೀವಶಕ್ತಿಗೆ ಪ್ರಧಾನವಾದರೆ, ಹೃದಯ ಜೀವಕ್ರಿಯೆಗೆ ಪ್ರಧಾನ ಅಂಗವಾಗಿದೆ. ಹೃದಯ ಇಷ್ಟೊಂದು ವಿಶಿಷ್ಠವಾಗಿರುವುದರಿಂದ ಗ್ರಂಥಕ್ಕೆ “ವಚನ ಹೃದಯ” ಹೆಸರು ಅನ್ವರ್ಥಕವಾಗಿದೆ.
ವಿದ್ವಾಂಸರು “ವಚನಸಾಹಿತ್ಯ ವಿಶ್ವಸಾಹಿತ್ಯದ ಹೃದಯವಾದರೆ – ವಚನಗಳ ಹೃದಯವೇ ವಚನಾಂಕಿತಗಳು” ಎಂದು ಹೇಳಿರುವುದರಿಂದ, ಪರಮಪೂಜ್ಯರು ಗ್ರಂಥಕ್ಕೆ ಇಟ್ಟಿರುವ “ವಚನ ಹೃದಯ” ಎಂಬುದು ಅತ್ಯಂತ ಸೂಕ್ತವಾಗಿದೆ. ವೈಜ್ಞಾನಿಕವಾಗಿ, ಆಧ್ಯಾತ್ಮಿಕವಾಗಿ, ತಾತ್ವಿಕವಾಗಿ, ಬಸವಾದಿ ಶರಣರ ಆದರ್ಶಗಳ ಹಿನ್ನೆಲೆಯಲ್ಲಿ ಗ್ರಂಥದ ಹೆಸರು ಹೆಚ್ಚು ಮೌಲ್ಯ ಮತ್ತು ಘನತೆಯುಕ್ತವಾಗಿದೆ. ಅಲ್ಲದೇ ಅವರ ಆಂತರ್ಯದ ದಿವ್ಯ ದೃಷ್ಟಿ ಮತ್ತು ಪ್ರಜ್ಞಾಚಕ್ಷÄವಿನ ಫಲವೇ ಈ “ವಚನ ಹೃದಯ” ಗ್ರಂಥವಾಗಿದೆ.
ಅಂಕಿತ ನಾಮಗಳ ಇತಿಹಾಸ
ವಿಶ್ವದ ಇತಿಹಾಸ ತಜ್ಞರು, ವಿದ್ವಾಂಸರು, ಇಂಗ್ಲೀಷ್ ಭಾಷಾ ತಜ್ಞರು ಜಗತ್ತಿನ ಸಾಹಿತ್ಯದಲ್ಲಿ “ಅಂಕಿತನಾಮ” ಇಟ್ಟುಕೊಂಡು ಬರೆದಿರುವುದು ಸಾಹಿತ್ಯ ಕಂಡುಬರುವುದಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಾಚೀನ ಭಾಷೆಯಾದ ಸಂಸ್ಕೃತದಲ್ಲಿ ರಚನೆಯಾದ ವೇದ, ಉಪನಿಷತ್ತು, ಆಗಮ, ಪುರಾಣ ಮುಂತಾದ ಸಾಹಿತ್ಯ ಪ್ರಕಾರದಲ್ಲಿ ಅಂಕಿತಗಳು ಕಂಡುಬಂದಿಲ್ಲ. ಪ್ರಾಕೃತ ಭಾಷೆಯಿಂದ ಹುಟ್ಟಿದ ಪಾಲಿ ಮತ್ತು ಅರ್ಧಮಾಗಧಿ ಭಾಷೆಯಲ್ಲಿರುವ ಬೌದ್ಧ ಮತ್ತು ಜೈನ ಸಾಹಿತ್ಯದಲ್ಲಿಯೂ ಕಂಡುಬಂದಿಲ್ಲ. ನಂತರದ ಹೆಚ್ಚು ಪ್ರಾಚೀನ ಭಾಷೆ ತಮಿಳಿನ ಪ್ರಾಚೀನ ರಚನೆಗಳಾದ ತಿರುವಳ್ಳುವಾರ್ ಅವರ ಪದ್ಯಗಳಲ್ಲಿ ಅಂಕಿತಗಳು ಕಂಡುಬಂದಿಲ್ಲ. ವಚನಸಾಹಿತ್ಯಕ್ಕೂ ಮೊದಲು ರಚಿತವಾದ ಕವಿರಾಜ ಮಾರ್ಗ, ವಡ್ಡಾರಾಧನೆ, ಪಂಪ ರನ್ನರ ರಚನೆಗಳಲ್ಲಿಯೂ ಅಂಕಿತಗಳು ಕಂಡುಬಂದಿರುವುದಿಲ್ಲ.
ಯೂರೋಪಿನ ಪ್ರಾಚೀನ ಭಾಷೆಗಳಾದ ಲ್ಯಾಟಿನ್, ಗ್ರೀಕ್, ಇಂಗ್ಲೀಷ್, ಫ್ರೆಂಚ್ ಮುಂತಾದ ಪಾಶ್ಚಿಮಾತ್ಯ ಭಾಷೆಗಳಲ್ಲಿನ ಸಾಹಿತ್ಯದಲ್ಲೂ ಅಂಕಿತನಾಮ ಪದ್ಧತಿ ಕಾಣುವುದಿಲ್ಲ. ಇಂಗ್ಲೀಷ್ ಭಾಷೆಯ ಯಾವ ಸಾಹಿತ್ಯ ಪ್ರಕಾರದಲ್ಲಿಯೂ ಅಂಕಿತಗಳ ಮಾದರಿ ಕಂಡುಬರುವುದಿಲ್ಲ ಎಂದು ಆಂಗ್ಲಭಾಷಾ ತಜ್ಞರು ಅಭಿಪ್ರಾಯಪಡುತ್ತಾರೆ. ಇದರಿಂದ ಅಂಕಿತಗಳು ಪ್ರಾರಂಭವಾಗಿದ್ದು ಕರ್ನಾಟಕದ ಕಲ್ಯಾಣದಲ್ಲಿ, ಅನುಭವ ಮಂಟಪದಲ್ಲಿ ಎಂದು ನಿಸ್ಸಂಶಯವಾಗಿ ಹೇಳಬಹುದು. ಶರಣರ ನಂತರ ಬಂದ ಮರಾಠಿ ಸಂತರು, ಹಿಂದಿ ಸಂತರು, ಕನ್ನಡದ ದಾಸರು ತಮ್ಮ ರಚನೆಗಳಿಗೆ ಅಂಕಿತಗಳನ್ನು ಇಟ್ಟುಕೊಳ್ಳುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದರು.
ಬಸವಣ್ಣನವರ “ಅಯ್ಯಾ, ಭಕ್ತಿಗೆ ಬೀಡಾದುದು ಕಲ್ಯಾಣ ಮೂವತ್ತಾರು ವರ್ಷ ; ಅಯ್ಯಾ, ಅನುಭವಕ್ಕೆ ಶಿವಸದನವಾದುದು ಇಪ್ಪತ್ತೇಳು ವರ್ಷ ; ಅಯ್ಯಾ, ಹಿಂದಿನ ಅನಂತನುಭವ ಹಿಂದಿನಂತೆ ಭಕ್ತಿಯಿಲ್ಲ ; ಮೂರುಮಾಸದೊಳಗಾಗಿ, ಇಲ್ಲಿ ಆಡಲು ಭಯವಿಲ್ಲ ಕೇಳಯ್ಯಾ ಕೂಡಲಸಂಗಮದೇವಯ್ಯ” ವಚನದ ಪ್ರಕಾರ ಮನುಕುಲ ಸಮಗ್ರ ವಿಷಯಗಳು ಚರ್ಚೆಯಾದ ಅನುಭವ ಮಂಟಪದಲ್ಲಿ ವಚನಾಂಕಿತಗಳನ್ನು ಇಟ್ಟುಕೊಳ್ಳುವ ವಿಷಯವಾಗಿ ಅನುಭವ ಮಂಟಪದಲ್ಲಿ ಚರ್ಚೆಗಳು ನಡೆದಿರುವುದನ್ನು ನಂಬಬಹುದಾಗಿದೆ.
ವಚನ ಹೃದಯ ಗ್ರಂಥ ಕೇವಲ ವಚನಾಂಕಿತಗಳ ವೈಶಿಷ್ಟ್ಯತೆ ಮತ್ತು ವೈವಿಧ್ಯತೆಗಳನ್ನು ವಿವರಿಸದೇ ವಚನ ಸಾಹಿತ್ಯದ ಅನೇಕ ವಿಷಯಗಳ ಮೇಲೆ ಬಸವಾನಂದ ಸ್ವಾಮಿಗಳು ಗಮನ ಸೆಳೆದಿದ್ದಾರೆ. ಗ್ರಂಥವನ್ನು ಓದಿ ನೀಡಿದ ತಮ್ಮ ಸಂದೇಶಗಳಲ್ಲಿ ಅತ್ಯಂತ ಸೂಕ್ಷ್ಮವಾಗಿ ಅವುಗಳನ್ನು ದಾಖಲಿಸಿದ್ದಾರೆ. ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಭಾಲ್ಕಿಯ ಡಾ ಶ್ರೀ ಬಸವಲಿಂಗ ಪಟ್ಟದ್ದೇವರು, ಗದುಗಿನ ತೋಂಟದ ಶ್ರೀ ಸಿದ್ಧರಾಮ ಮಹಾಸ್ವಾಮಿಗಳು, ಶ್ರೇಷ್ಠ ಶರಣ ಸಾಹಿತಿಗಳಾದ ಶ್ರೀ ಗೊ.ರು.ಚನ್ನಬಸಪ್ಪನವರು ಅನೇಕ ವಿಶಿಷ್ಠ ಸಂಗತಿಗಳನ್ನು ಗುರುತಿಸಿದ್ದಾರೆ:
- ವಚನಸಾಹಿತ್ಯದ ಬಗ್ಗೆ ಇದುವರೆಗಿನ ಅಸ್ಪಷ್ಟತೆಗಳು, ಅನಿಷ್ಟಗಳನ್ನು ನಿವಾರಿಸುವತ್ತ ವಿಶೇಷ ಗಮನ ಹರಿಸಿದ್ದಾರೆ. ಶರಣರ ವೈಯಕ್ತಿಕ ಜೀವನ, ಮನೋಭಾವ, ಅಭಿವ್ಯಕ್ತಿ, ಮತ್ತು ಕಾಯಕಗಳನ್ನು ಸೂಕ್ಷö್ಮವಾಗಿ ಗಮನಿಸಿ ವಚನಾಂಕಿಗಳನ್ನು ವಿವರಿಸಿದ್ದಾರೆ.
- ಇಬ್ಬರು ವಚನಕಾರರ ಸಮಾನಧ್ವನಿಗಳನ್ನು ಗುರುತಿಸಿ, ಪರಸ್ಪರ ಪೂರಕ-ಪೋಷಕ-ಪ್ರೇರಕ ಲಕ್ಷಣಗಳನ್ನು ಗುರುತಿಸಿದ್ದಾರೆ.
- ಇದುವರೆಗಿನ ಸಮಗ್ರ ವಚನಸಾಹಿತ್ಯದಲ್ಲಿ ವಚನಾಂಕಿತಗಳ ವಿಶ್ಲೇಷಣೆ ಆಗಬೇಕಿದ್ದ ಕೊರತೆಯನ್ನು ನೀಗಿಸಿದ್ದಾರೆ.
- ಅಂಕಿತನಾಮಗಳು ಕೇವಲ ವಚನಕಾರರನ್ನು ಗುರುತಿಸುವ ಸಂಕೇತಗಳಷ್ಟೇ ಅಲ್ಲಾ, ಅದರಲ್ಲಿ ತತ್ವಗಳು ಅಡಕವಾಗಿವೆ.
- ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳನ್ನು ನಿರ್ಣಯಿಸುವ-ನಿರ್ದೇಶಿಸುವ-ನಿರ್ವಹಿಸುವ ; “ಅಗೋಚರ-ಅಖಂಡ-ಅಪ್ರಮಾಣ-ಪರಿಪೂರ್ಣ” ವಿಶ್ವಶಕ್ತಿಗೆ ಅಥವಾ ವಿಶ್ವಚೈತನ್ಯಕ್ಕೆ ಶರಣಾಗುವುದೇ ಬದುಕಿನ ನಿಜವಾದ ಮಾರ್ಗವೆಂದು ನಂಬಿದ್ದ ಶರಣರು ; ಇದರ ಆಧಾರದ ಮೇಲೆ ವಚನಾಂಕಿತಗಳನ್ನು ಇಟ್ಟುಕೊಂಡಿದ್ದಾರೆ.
- ವಿಶ್ವಶಕ್ತಿ ಅಥವಾ ವಿಶ್ವಚೈತನ್ಯಕ್ಕೆ ಸಂಬAಧಿಸಿಕೊAಡು ಮತ್ತು ಆಧ್ಯಾತ್ಮಿಕ ಸಾಧನೆಯ ಉದ್ದೇಶಕ್ಕಾಗಿ ವಚನಾಂಕಿತ ಬಳಸಿದ್ದಾರೆ.
“ಅಸತ್ಯವನ್ನು ನಂಬಿಕೊAಡು ಪರಸ್ಪರ ಅವಿಶ್ವಾಸದಿಂದ ಬದುಕುವುದಕ್ಕಿಂತ, ಕಹಿ ಎನಿಸಿದರೂ ಸತ್ಯವನ್ನು ತಿಳಿದುಕೊಂಡು ಪರಸ್ಪರ ವಿಶ್ವಾಸದಿಂದ ಬದುಕುವಂತೆ ಮಾಡುವುದೇ ಸಂಶೋಧಕನ ಕೆಲಸ”. ಹೀಗೆ ವಚನಸಾಹಿತ್ಯ ಸಂಶೋಧಕರಾದ ಲಿಂಗೈಕ್ಯ ಶ್ರೀ ಎಂ ಎಂ ಕಲಬುರ್ಗಿಯವರು ನುಡಿದಿದ್ದಾರೆ. ಬಸವಾನಂದ ಸ್ವಾಮಿಗಳು ಕೇವಲ ಅಧ್ಯಯನಕಾರರಲ್ಲದೇ ಸಂಶೋಧನಾತ್ಮಕವಾಗಿಯೇ ಈ ಗ್ರಂಥ ರಚಿಸಿದ್ದಾರೆ. ಎಂ ಎಂ ಕಲಬುರ್ಗಿಯವರ ಮಾತನ್ನು ಈ ಗ್ರಂಥದಲ್ಲಿ ಸಾಕ್ಷೀಕರಿಸಿದ್ದಾರೆ.

ಗ್ರಂಥದಲ್ಲಿ:
- ವಚನಸಾಹಿತ್ಯದ ಆಂತರಿಕ ದರ್ಶನವಿದೆ.
- ವಚನಾಂಕಿತಗಳ ಬಗ್ಗೆ ವಿನೂತನ ದೃಷ್ಟಿಕೋನವಿದೆ.
•ವಚನಸಾಹಿತ್ಯದಲ್ಲಿ ಉಳಿದಿರುವ ಅನುಮಾನ – ಅಪಾರ್ಥಗಳ ನಿವಾರಣೆ ಇದೆ.
•ವಚನಸಾಹಿತ್ಯದ ಐತಿಹಾಸಿಕ ವಿವೇಚನೆಯಿದೆ.
•ಇಷ್ಟಲಿಂಗದ ಇತಿಹಾಸ ಮತ್ತು ವೈಶಿಷ್ಟö್ಯತೆ ಇದೆ.
•ಕಲ್ಯಾಣದ ಮಹಾಮನೆ, ಅನುಭವ ಮಂಟಪಗಳ ವಿವರಣೆಯಿದೆ.
•ಶರಣರ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿದ್ದಾರೆ.
•ಎಷ್ಟೋ ವಿಷಯಗಳನ್ನು ಶರಣ ಸಾಹಿತಿಗಳು ಮತ್ತು ಸಂಶೋಧಕರು ಅರ್ಥ ಮಾಡಿಕೊಳ್ಳದ ವಿಷಯಗಳನ್ನು ಅರ್ಥೈಸಿದ್ದಾರೆ.
- ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಬೇರೆ ಬೇರೆ ಅಲ್ಲಾ ಒಬ್ಬರೇ ಎಂದು ಆಧಾರ ಸಮೇತ ನಿರೂಪಿಸಿದ್ದಾರೆ.
•ಇಬ್ಬರು ಕಕ್ಕಯ್ಯನವರಿಲ್ಲ, ಒಬ್ಬರೇ ಎಂದು ಸಾಬೀತು ಮಾಡಿದ್ದಾರೆ.
•ಹಡಪದ ಅಪ್ಪಣ್ಣ ಮತ್ತು ಸಂಗಮೇಶ್ವರದ ಅಪ್ಪಣ್ಣನವರು ಬೇರೆಯಲ್ಲ, ಇವರಿಬ್ಬರ ವಚನಗಳನ್ನು ಹಡಪದ ಅಪ್ಪಣ್ಣನವರ ಹೆಸರಿನಲ್ಲಿಯೇ ಪ್ರಕಟಿಸಬೇಕೆಂದು ಸ್ಪಷ್ಟಪಡಿಸಿದ್ದಾರೆ.
•ಆದ್ಯರು, ವೇದ್ಯರು, ಪುರಾತನರು, ಪ್ರಮಥರು ಎಂದರೆ 770 ಅಮರಗಣಂಗಳೇ ಹೊರತು ಬೇರೆಯಲ್ಲ ಎಂದು ದೃಢವಾಗಿ ನಿರ್ಧರಿಸಿದ್ದಾರೆ.
•ಬಸವಪೂರ್ವ ಯುಗದ ವಚನಕಾರರು ಎನ್ನುವುದು ಅರ್ಥಹೀನ, ಈ ಶಬ್ದವನ್ನು ಬಳಸುವ ಅಗತ್ಯವಿಲ್ಲ.
•“ಸಮಗ್ರ ವಚನ ಸಂಪುಟ”ದಲ್ಲಿನ ನ್ಯೂನ್ಯತೆಗಳನ್ನು ಗುರುತಿಸಿದ್ದಾರೆ.
ಅಲ್ಲಮಪ್ರಭುಗಳು, ‘ಸತ್ಯವೆ ಮೇಲೋಗರವಾಗಿ ನಿಜತತ್ತ್ವವೆ ಸವಿಯಾಗಿ’ ಎಂದಿದ್ದಾರೆ. ಮೋಳಿಗೆ ಮಹಾದೇವಿಯವರು, ‘ಸತ್ಯವೆಲ್ಲಿದ್ದಿತ್ತು ಅಲ್ಲಿ ತಪ್ಪದೆ ಇಪ್ಪೆ ನೀನು’ ಎಂದಿದ್ದಾರೆ. ಇವರ ವಚನಗಳಂತೆ ಪೂಜ್ಯ ಶ್ರೀಗಳು ಸಂಶೋಧಕರಿಗಿAತ ಒಂದು ಹೆಜ್ಜೆ ಮುಂದೆ ಹೋಗಿ ಸತ್ಯದ ದರ್ಶನ ಮಾಡಿಸಿದ್ದಾರೆ.
ಶರಣರ ಚರಿತ್ರೆಯಲ್ಲಿ ಮತ್ತು ವಚನಗಳಲ್ಲಿ ಅಸ್ಪಷ್ಟ, ಅಸತ್ಯದ ಬರಹಗಳನ್ನು ಸ್ವಾಮೀಜಿಯವರು ಸ್ಪಷ್ಟವಾಗಿ ಖಂಡಿಸಿದ್ದಾರೆ. ಶರಣರ ಘನತೆಗೆ ಕುಂದು ಬರಬಾರದು. ಪುರಾಣ, ಪವಾಡಗಳಂತೆ ಕಾಲ್ಪನಿಕ ಮತ್ತು ಭ್ರಮೆಗಳಿಂದ ಕೂಡಿರಬಾರದು. ಪೂರ್ವಾಗ್ರಹ ಪೀಡಿತ ಮತ್ತು ಅಸೂಯೆಗಳು ಇರಬಾರದು. ಜನಪ್ರಿಯತೆ ಹುಚ್ಚಿನಿಂದ ಮನಬಂದAತೆ ವಚನಗಳನ್ನು ವ್ಯಾಖ್ಯಾನಿಸಬಾರದು ಎಂಬುದು ಅವರ ಸ್ಪಷ್ಟ ಅಭಿಪ್ರಾಯವಾಗಿದೆ. ಸ್ವಾಮೀಜಿಯವರು ನಿಜತತ್ವವನ್ನೇ ಪ್ರತಿಪಾದಿಸಿದ್ದಾರೆ. ಅಸತ್ಯ ಬರೆದಲ್ಲಿ ಶರಣರಿಗೆ ನಾವು ಮಾಡುವ ದ್ರೋಹವಾಗುತ್ತದೆ ಎಂಬುದು ಇವರ ಸ್ಪಷ್ಟ ನಿಲುವು.
ಅಂಕಿತಗಳ ವೈಶಿಷ್ಟ್ಯತೆ:
ಪೂಜ್ಯ ಶ್ರೀ ಬಸವಾನಂದ ಮಹಾಸ್ವಾಮಿಗಳವರು ಸಮಗ್ರ ವಚನಗಳನ್ನು ಚಿಕಿತ್ಸಕ ದೃಷ್ಟಿಯಿಂದ ಅಧ್ಯಯನ ಮಾಡಿ ವಚನಾಂಕಿತಗಳನ್ನು ಎಂಟು ವಿಭಾಗಗಳನ್ನಾಗಿ ವಿಭಜಿಸಿ ಪ್ರಸ್ತುತ ಕೃತಿಯಲ್ಲಿ ವಿವರಿಸಿದ್ದಾರೆ.
- ಇಷ್ಟದೈವ ಸೂಚಕ ಅಥವಾ ಸ್ಥಾವರಲಿಂಗ ಸೂಚಕಗಳಂತೆ ತೋರುವ ವಚನಾಂಕಿತಗಳು
- ಇಷ್ಟಗುರು ಅಥವಾ ಇಷ್ಟಜಂಗಮದ ಸೂಚಕವಾದ ವಚನಾಂಕಿತಗಳು
- ಪತಿಗೌರವ ಸೂಚಕ ವಚನಾಂಕಿತಗಳು
- ಕಾಯಕ ಅಥವಾ ವೃತ್ತಿಸೂಚಕ ವಚನಾಂಕಿತಗಳು
- ಸ್ವಭಾವ ಸೂಚಕ ವಚನಾಂಕಿತಗಳು
- ತತ್ವಪ್ರೇಮ ಸೂಚಕ ವಚನಾಂಕಿತಗಳು
- ಅತಿ ವಿಶಿಷ್ಟ ವಚನಾಂಕಿತಗಳು
- ತಮ್ಮ ಹೆಸರನ್ನೇ ವಚನಾಂಕಿತ ಮಾಡಿಕೊಂಡಿರುವ ವಚನಾಂಕಿತಗಳು
ಗ್ರಂಥದಲ್ಲಿ ವಚನಾಂಕಿತಗಳ ವಿಶೇಷತೆಗಳ ಅಪಾರ ಸಂಗತಿಗಳನ್ನು ಈ ಗ್ರಂಥ ಒದಗಿಸುತ್ತದೆ.
ವಚನಾಂಕಿತ ಮತ್ತು ವಚನಕಾರರ ವೈಶಿಷ್ಟ್ಯತೆ:
ವಚನಾಂಕಿತಗಳ ವೈಶಿಷ್ಟ್ಯತೆಯ ಮತ್ತು ವೈವಿಧ್ಯತೆ ಅಭೂತಪೂರ್ವವಾಗಿದೆ. ವಚನಾಂಕಿತಗಳನ್ನು ವಿವರಿಸುವಾಗ ಬಸವಣ್ಣನವರು ಮತ್ತು ಅಲ್ಲಮಪ್ರಭುಗಳನ್ನು ಹೊರತು ಪಡಿಸಿ ಉಳಿದೆಲ್ಲ ಶರಣರ ವಚನಾಂಕಿತಗಳ ಅಧ್ಯಾಯಗಳಿಗೆ ಆಯಾ ಶರಣರ ವ್ಯಕ್ತಿತ್ವದ ವಿಶೇಷತೆಯನ್ನೇ ಸೂಚಿಸುವ ಶಿರೋನಾಮೆಗಳನ್ನು ಕೊಟ್ಟಿದ್ದಾರೆ. ಇದರಿಂದ ಓದುಗರ ಕುತೂಹಲ ಹೆಚ್ಚಾಗುವಂತೆ ಮಾಡಿದ್ದಾರೆ. ಅಧ್ಯಾಯಗಳ ಶಿರೋನಾಮೆ ಹೀಗಿವೆ.
ಪೀಠಿಕಾಧ್ಯಾಯಗಳು :
- ಶುಭಹಾರೈಕೆ – ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಸುತ್ತೂರು ಮಠ, ಮೈಸೂರು.
- ಸಂದೇಶ – ಡಾ ಶ್ರೀ ಬಸವಲಿಂಗ ಪಟ್ಟದ್ದೇವರು, ಭಾಲ್ಕಿ.
- ಆಶೀರ್ವಚನ – ತೋಂಟದ ಶ್ರೀ ಸಿದ್ಧರಾಮ ಮಹಾಸ್ವಾಮಿಗಳು, ಗದಗ.
- ಭಿನ್ನಹ – ಶ್ರೀ ಗೊ. ರು. ಚನ್ನಬಸಪ್ಪನವರು, ಬೆಂಗಳೂರು.
- ಲೇಖಕರ ಮಾತು
- ಪ್ರಕಾಶಕರ ಮಾತು
ವಿಶೇಷ ಅಧ್ಯಾಯಗಳು :
- ಪೀಠಿಕಾಧ್ಯಾಯ
- ವಚನಾಂಕಿತಗಳ ಐತಿಹಾಸಿಕ ವಿವೇಚನೆ,
3.ವಚನ ಸಾಹಿತ್ಯದ ಐತಿಹಾಸಿಕ ವಿವೇಚನೆ,
4.ಆದ್ಯರು ವೇದ್ಯರು ಪುರಾತನರು ಪ್ರಮಥರು ಎಂಬ ಶಬ್ದಗಳ ವಿವೇಚನೆ,
5.ಇಷ್ಟಲಿಂಗದ ಇತಿಹಾಸ ಮತ್ತು ಸ್ವರೂಪ,
6.ಕಲ್ಯಾಣ-ಮಹಾಮನೆ-ಅನುಭವಮಂಟಪ-ಶರಣರು,
7.ವಚನಾಂಕಿತಗಳ ಎಂಟು ವಿಭಾಗಗಳಿಂದ - ಲಿಂಗಾಯತ ಧರ್ಮಗುರು ಶ್ರೀ ಗುರು ಬಸವಣ್ಣನವರ ವಚನಾಂಕಿತ ಕೂಡಲಸಂಗಮದೇವ.
- ಶೂನ್ಯಪೀಠಾಧ್ಯಕ್ಷ ಶ್ರೀಮದಲ್ಲಮಪ್ರಭುದೇವರ ವಚನಾಂಕಿತ ಗುಹೇಶ್ವರ.
- ಶಿವಯೋಗಿಯ ಗುರು ಚಿನ್ಮಯಜ್ಞಾನಿಯ ವಚನಾಂಕಿತ,
- ಕ್ರೋಧವ ಗೆದ್ದು ಸಮತೆಯ ನಿಧಿಯಾದ ಶಿವಯೋಗಿಯ ವಚನಾಂಕಿತ.
12.ತ್ರಿಮಾತೆಯರ ವಚನಾಂಕಿತ.
13.ಜೀವಜಲ ಕಾಯಕದ ಶರಣರ ವಚನಾಂಕಿತ.
14.ಗಂಭೀರ ಸ್ವಭಾವದ ಮೂವರು ಶರಣರ ವಚನಾಂಕಿತ. - ಲಿಂಗಸಾರಾಯಸುಖಿ ದಂಪತಿಗಳ ವಚನಾಂಕಿತ.
- ಸುಖಸಾರಾಮೃತ ದಂಪತಿಗಳ ವಚನಾಂಕಿತ.
- ತ್ಯಾಗಯೋಗಿ ದಂಪತಿಗಳ ವಚನಾಂಕಿತ.
- ಸೇವಾಯೋಗಿ ದಂಪತಿಗಳ ವಚನಾಂಕಿತ.
19.ಕಾಯಕತತ್ವದ ಎರಡು ಅಮರ ಕಣ್ಣುಗಳಾದ ಸತಿಪತಿಗಳ ವಚನಾಂಕಿತ. - ಏಕಕಾಲದಲ್ಲಿ ಸತಿಯು ಪತಿಯೂ ಆದ ಗುರುಪಿತನ ವಚನಾಂಕಿತ.
21.ಕ್ರಾಂತಿಕಾರಿ ಗುರುವಿನ ಭ್ರಾಂತಿರಹಿತ ಶಿಷ್ಯರ ವಚನಾಂಕಿತ. - ಗುರುಪಿತಾಮಹನ ವಚನಾಂಕಿತ
- ನಿಷ್ಠುರ ಲಿಂಗಾಚಾರಿಗಳಾದ ಸತಿಪತಿಯರ ವಚನಾಂಕಿತ.
- ಅಹಿಂಸೆ ಶಾಂತಿಗಳ ಸಾಕಾರರೂಪವಾದ ಸತಿಪತಿಯರ ವಚನಾಂಕಿತ.
- ಕಾಯದ ಕರ್ಮವ ಮೆಟ್ಟಿ ಕಾಯಕ ಧರ್ಮದಲ್ಲಿ ನಿಂದ ಸತಿಪತಿಗಳ ವಚನಾಂಕಿತ.
26.ಋಷಿಮೂಲವ ಬೆದಕಿ ಋಷಿಗಳ ಮೀರಿಸಿದ ಕಾಯಕಜೀವಿಯ ವಚನಾಂಕಿತ.
27.ಅರಿವು ಆಚಾರದ ಕಲಿ ಇಷ್ಟಲಿಂಗನಿಷ್ಠ ಶರಣನ ವಚನಾಂಕಿತ.
28.ಸರಳ ಸ್ವಭಾವದ ಇಬ್ಬರು ಶರಣರ ವಚನಾಂಕಿತ.
29.ಮಾರಿಯ ಕುಣಿಸಿದರೂ ಮಹಾನುಭಾವಿಯಾಗಿ ಬೆಳೆದ ಶರಣನ ವಚನಾಂಕಿತ.
30.ಅಣ್ಣನನ್ನೇ ಗುರುವಾಗಿಸಿಕೊಂಡ ಭಾಗ್ಯವತಿ ಸಹೋದರಿಯ ವಚನಾಂಕಿತ.
ಆಯಾ ಅಧ್ಯಾಯಗಳಲ್ಲಿ ಆಯಾ ಶರಣರ ವಚನಾಂಕಿತಗಳನ್ನು ವಿವರವಾಗಿ ನೀಡಿದ್ದಾರೆ. ಹೀಗೆ ವಚನಾಂಕಿತದೊAದಿಗೆ ವಚನಕಾರರ ವಿಶೇಷತೆಯನ್ನು ವಿವರಿಸಿದ್ದಾರೆ.
ಜನರನ್ನು ಆಕರ್ಷಿಸಬಲ್ಲ ಗ್ರಂಥದ ವಿಶೇಷತೆಗಳು :
•ಗ್ರಂಥ ವಿನ್ಯಾಸ, ಸುಂದರ ಮುಖಪುಟ, ಉತ್ತಮ ಗುಣಮಟ್ಟದ ಮುದ್ರಣವಿದೆ.
•ಒಮ್ಮೆ ಓದಲು ಪ್ರಾರಂಭಿಸಿದರೆ ಕೊನೆಯವರೆಗೂ ಬಿಡದಂತೆ ಓದಿಸಿಕೊಂಡು ಹೋಗುತ್ತದೆ.
•ಗ್ರಂಥದ ಪ್ರಾರಂಭದಲ್ಲಿರುವ ಸುತ್ತೂರು ಶ್ರೀಗಳ ‘ಶುಭಹಾರೈಕೆ’ ; ಭಾಲ್ಕಿಯ ಬಸವಲಿಂಗ ಪಟ್ಟದ್ದೇವರಸಂದೇಶ ; ಗದುಗಿನ ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಆಶೀರ್ವಚನ ; ಶರಣ ಸಾಹಿತಿಗಳಾದ ಶ್ರೀ ಗೊ.ರು.ಚನ್ನಬಸಪ್ಪನವರ ಭಿನ್ನಹ ಅಧ್ಯಾಯಗಳನ್ನು ಓದದೇ ಮುಂದೆ ಹೋಗಬೇಡಿ. ತುಂಬಾ ಸ್ವಾರಸ್ಯಕರ ಮಾಹಿತಿಗಳು ತಿಳಿಯುತ್ತವೆ.
ಅರ್ಪಣೆ :
ಎನಗೆ ಹಾಲೂಟವನಿಕ್ಕುವ ತಾಯೆ, ಎನಗೆ ಪರಿಣಾಮವ ತೋರುವ ತಾಯೆ,
ಪರಮಸುಖದೊಳಗಿಪ್ಪ ತಾಯೆ, ಪರವಸ್ತುವ ನಂಬಿದ ತಾಯೆ,
ಬಸವನ ಗುರುತಾಯೆ ಸಂಗಯ್ಯನಲ್ಲಿ , ಸ್ವಯಲಿಂಗಿಯಾದೆಯಾ ಅಕ್ಕನಾಗಮ್ಮ ತಾಯೆ
ಎಂದು ಸ್ಮರಣೆ ಮಾಡುತ್ತ ಶರಣೆ ಅಕ್ಕನಾಗಮ್ಮನವರಿಗೆ ಸಮರ್ಪಣೆ ಮಾಡಿದ್ದಾರೆ.
ಅಲ್ಲಮಪ್ರಭುಗಳು ‘ಅರಿದರಿದು ನಿಮ್ಮ ನೆನೆವ ಪರಿಕರ ಹೊಸತು’ ; ಅಕ್ಕಮಹಾದೇವಿಯವರು ‘ಚೆನ್ನಮಲ್ಲಿಕಾರ್ಜುನನ ನೆರೆವ ಪರಿಕರ ಹೊಸತು’ ; ಉರಿಲಿಂಗದೇವರು ‘ಇದು ಹೊಸತು, ಚೋದ್ಯವೀ ಸರಳ ಪರಿ ನೋಡಾ’ ; ಅಗ್ಗವಣಿ ಹಂಪಯ್ಯನವರು ‘ಆತನ ಪಥ ಲೋಕಕ್ಕೆ ಹೊಸತು’ ಮತ್ತು ಸಿದ್ಧರಾಮೇಶ್ವರರು ‘ಲೋಕದ ಪಥವಾತನಿಗೆ ಹೊಸತು. ಎಲ್ಲರ ಎಲ್ಲಂತಲ್ಲ, ನಿನ್ನ ಪರಿ ಹೊಸತು’ ಎನ್ನುವಂತೆ ಹೊಸತನದ ಮತ್ತು ವಿನೂತನ ಗ್ರಂಥವಾಗಿದೆಯೆAದು ಹೇಳಲು ತುಂಬಾ ಹೆಮ್ಮೆ ಎನಿಸುತ್ತದೆ.
ಶರಣ ಮಹಾಲಿಂಗ ಶಶಿಮೌಳಿ ಸದಾಶಿವರು, “ಭಿನ್ನ ಭಿನ್ನವಾಗಿ ಆಯಾ ಲಿಂಗಕ್ಕೆ ಸಮರ್ಪಣೆಯ ಮಾಡುವಾತನೆ ಮಹಾಪ್ರಸಾದಿಯಯ್ಯಾ” ಎನ್ನುವಂತೆ ಪರಮಪೂಜ್ಯರು ಲಿಂಗಕ್ಕೆ ಜಂಗಮಕ್ಕೆ ಗುರುವಿಗೆ ಸಮರ್ಪಿಸಿ ಮಹಾಪ್ರಸಾದಿಗಳಾಗಿದ್ದಾರೆ. ಪೂಜ್ಯರು ಗ್ರಂಥ ರಚಿಸಿ ಪುನೀತರಾಗಿದ್ದಾರೆ, ಭಾಗ್ಯವಂತರಾಗಿದ್ದಾರೆ. ಅವರ ಗ್ರಂಥ ಓದಿ ನಾವೂ ಪುನೀತರಾಗೋಣ. ಪ್ರತಿಯೊಬ್ಬರ ಮನೆಯಲ್ಲಿರಬೇಕಾದ ಗ್ರಂಥ. ಪ್ರತಿಯೊಬ್ಬರೂ ಓದುವಂತಹ ಗ್ರಂಥ. ಹೊಸ ಹೊಸ ವಿಷಯಗಳನ್ನು ವೈವಿಧ್ಯಮಯವಾದ ಸಂಗತಿಗಳನ್ನು ತಿಳಿಯಿರಿ. ಗ್ರಂಥ ಓದಿ ಆನಂದಿಸಿರಿ ಎಂದು ಶರಣ ಸಾಹಿತಿ ಡಾ ಸಂಗಮೇಶ ಕಲಹಾಳ ನುಡಿದರು.
ತುಂಬಾ ಚನ್ನಾಗಿ ಬರೆದಿದ್ದೀರಿ. ಶರಣು ಶರಣಾರ್ಥಿಗಳು