ಬಸವಣ್ಣ, ಬಿಜ್ಜಳ ಅತ್ಯಾಪ್ತರಾಗಿದ್ದರು: ಚಿಂತಕ ಮಹಾಂತೇಶ ನವಲಕಲ್ಲ

ಬಿಜ್ಜಳನ ಮಗ ಸೋವಿದೇವನ ಮಹತ್ವಾಕಾಂಕ್ಷೆಯಿಂದಾಗಿ ಪಟ್ಟಭದ್ರರು ಶರಣರನ್ನು ಹಾಗೂ ಅವರ ಸಾಹಿತ್ಯವನ್ನು ನಾಶ ಮಾಡಲು ಪಟತೊಟ್ಟಂತೆ ಬೆನ್ನುಬಿದ್ದರು.

ಶಹಾಪುರ

ಬಸವಣ್ಣ ಮತ್ತು ಬಿಜ್ಜಳ ರಾಜ ಅತ್ಯಾಪ್ತರಾಗಿದ್ದುದರಿಂದಲೆ ಶರಣರ ಚಳುವಳಿ ಹನ್ನೆರಡನೆಯ ಶತಮಾನದಲ್ಲಿ ವ್ಯಾಪಕವಾಗಿ ಹಬ್ಬಲು ಸಾಧ್ಯವಾಯಿತು. ತಳ ಸಮೂಹದಿಂದ ಬಂದಿದ್ದ ಬಿಜ್ಜಳ ಚಾಲುಕ್ಯ ತೈಲಪನ ಮಾಂಡಲಿಕನಾಗಿ ನಂತರ ಸ್ವತಃ ತಾನೆ ಪಟ್ಟಕಟ್ಟಿಕೊಂಡಾಗ ಬಸವಣ್ಣನವರ ಸಹಕಾರ ಅತ್ಯಗತ್ಯವಾಗಿತ್ತು ಎಂದು ಬಸವ ತತ್ವ ಪ್ರತಿಪಾದಕ ಮಹಾಂತೇಶ ನವಲಕಲ್ಲ ಅವರು ನುಡಿದರು.

ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ಏರ್ಪಡಿಸಿದ್ದ, ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ತಿಂಗಳ ಬಸವ ಬೆಳಕು-೧೨೧ರ ಸಭೆಯಲ್ಲಿ ಶರಣ ಸಿದ್ದಲಿಂಗಪ್ಪ ಕಾಕನಾಳೆ ಮತ್ತು ಸರಸ್ವತಿ ಕಾಕನಾಳೆ ಸ್ಮರಣೋತ್ಸವ ನಿಮಿತ್ತದ ಸಭೆಯಲ್ಲಿ ಭಾಗವಹಿಸಿ ಕಲ್ಯಾಣ ಕ್ರಾಂತಿ ಎಂಬ ವಿಷಯ ಕುರಿತು ಮಾತನಾಡಿದರು. ಬಸವಣ್ಣನವರ ಸದು ವಿನಯ ಹಾಗೂ ನಿಷ್ಠುರವಾದ ಮಾತುಗಳು ಕಲ್ಯಾಣ ರಾಜ್ಯವನ್ನು ಕಟ್ಟಲು ಸಾಧ್ಯವಾಯಿತು. ಬಿಜ್ಜಳನ ಮಗ ಸೋವಿದೇವನ ಮಹತ್ವಾಕಾಂಕ್ಷೆಯಿಂದಾಗಿ ಪಟ್ಟಭದ್ರರು ಶರಣರನ್ನು ಹಾಗೂ ಅವರ ಸಾಹಿತ್ಯವನ್ನು ನಾಶ ಮಾಡಲು ಪಟತೊಟ್ಟಂತೆ ಬೆನ್ನುಬಿದ್ದರು. ವಚನ ಸಾಹಿತ್ಯ ಮತ್ತು ಶರಣರ ವಾಸ್ತವ ಬದುಕು ಪರಾವಲಂಬಿ ಜೀವಿಗಳಿಗೆ ನುಂಗದ ತುತ್ತಾಯಿತು.

ಹರಳಯ್ಯ ಮಧುವರಸರ ಕುಟುಂಬ ಸಂಬಂಧವನ್ನು ಕಂಡು ಪುರೋಹಿತರು ಕೆಂಡಾಮಂಡಲವಾದರು. ಬಸವಣ್ಣ ಮತ್ತು ಬಿಜ್ಜಳ ಸ್ನೇಹ ಅನಿವಾರ್ಯವಾಗಿ ಕಡಿದು ಹೋಯಿತು. ಇದುವರೆಗೆ ದೊರೆತಿರುವ ಶಾಸನಗಳು ಇತಿಹಾಸವನ್ನು ಸಾರಿ ಸಾರಿ ಹೇಳುತ್ತಿವೆ ಎಂದವರು ವಿವರಿಸಿದರು.

ಶ್ರೀಶೈಲ ಪೀಠದ ಮಲ್ಲಿಕಾರ್ಜುನ ಪಂಡಿತಾರಾಧ್ಯರು ಬಸವಣ್ಣನವರ ಲಿಂಗೈಕ್ಯವಾದ ಸಂಗತಿ ಕೇಳಿ ಆ ನೋವಿನಲ್ಲಿಯೆ ಕೊನೆಯ ಉಸಿರು ಎಳೆದ ಸಂಗತಿ ಅವರೇ ಬರೆದ ಚರಮಗೀತೆಯಲ್ಲಿ ಕಾಣಬಹುದಾಗಿದೆ. ಇತಿಹಾಸವನ್ನು ಓದಿ, ಲಿಂಗಾಯತರು ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕೆಂದು ಮಾರ್ಮಿಕವಾದ ಅನುಭಾವ ನೀಡಿದರು.

ಬಸವಮಾರ್ಗದ ಪರಿಚಯ ಮಾಡಿಕೊಟ್ಟು ಸತ್ಯ ನ್ಯಾಯದ ಪರವಾಗಿ ನಿಲ್ಲಲು ಮತ್ತು ಜನ ಸಾಮಾನ್ಯರ ಬದುಕಿನ ಕಷ್ಟಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ಲಿಂಗಣ್ಣ ಸತ್ಯಂಪೇಟೆಯವರು ಮಾಡಿಕೊಟ್ಟಿದ್ದಾರೆ ಎಂದು ಪತ್ರಕರ್ತ ಪ್ರಕಾಶ ದೊರೆ ಅಭಿಪ್ರಾಯ ಪಟ್ಟರು.

ಬಸವಮಾರ್ಗ ಪ್ರತಿಷ್ಠಾನದ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಲಿಂ.ಸಿದ್ಧಲಿಂಗಪ್ಪ ಕಾಕನಾಳೆ ಸಮಾಜ ಸೇವೆಯೆ ನನ್ನ ಗುರಿ ಎಂದು ದುಡಿದವರು. ಸಹಕಾರ ಕ್ಷೇತ್ರದಲ್ಲಿ ಅವರದು ಅದ್ವೀತಿಯ ಹೆಸರು. ಪ್ರಾಮಾಣಿಕತೆ ಸಾಮಾಜಿಕ ಕಾಳಜಿಯೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಕಾಕನಾಳೆ ನಮ್ಮೆಲ್ಲರಿಗೂ ಆದರ್ಶ ಎಂದು ತಿಳಿಸಿದರು.

ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಆತ್ಮೀಯತೆ ಮರೆತು ಬಿಡುತ್ತಿದ್ದೇವೆ. ಸತ್ಯ ತುಂಬಾ ಕಠೋರವಾಗಿರುತ್ತದೆ. ಆದರೆ ಅದು ಸಮಾಜವನ್ನು ತಿದ್ದುತ್ತದೆ. ಸತ್ಯವನ್ನು ಪ್ರತಿಪಾದನೆ ಮಾಡದೆ ಹೋದರೆ ನಮ್ಮ ಸಮಾಜ ಕಣ್ಣ ಮುಂದೆ ಕೊಳೆತು ಹೋಗುತ್ತದೆ. ಶರಣರ ಮಾರ್ಗವನ್ನು ನಾವು ಅನುಸರಿಸಿ ಸಮಾಜದ ಓರೆಕೋರೆಗಳನ್ನು ತಿದ್ದಬೇಕೆಂದು ಜೇವರ್ಗಿ ಪುರಸಭೆಯ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ತಿಳಿಸಿದರು.

ಚೇತನ ಮಾಲಿ ಪಾಟೀಲ ಸ್ವಾಗತಿಸಿದರು. ಶಿವಣ್ಣ ಇಜೇರಿ ನಿರೂಪಿಸಿದರು. ಕೊನೆಯಲ್ಲಿ ಶಿವಕುಮಾರ ಕರದಳ್ಳಿ ವಂದನೆಗಳನ್ನು ತಿಳಿಸಿದರು. ಫಜಲುದ್ದೀನ್ ರಹಮಾನ, ಮಹೇಶ ಪತ್ತಾರ ಹಾಗೂ ಬಸವಮಾರ್ಗದ ಚಿಣ್ಣರರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಶಾಂತಾ ಗಿರೀಶ ಕಾಕನಾಳೆ ಭಾಲ್ಕಿ ಜ್ಯೋತಿ ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಿದರು.

ಸಭೆಯಲ್ಲಿ ಬಸವರಾಜ ಹೇರುಂಡಿ, ಶಿವಯೋಗಪ್ಪ ಮುಡಬೂಳ ,ಮಲ್ಲಿಕಾರ್ಜುನ ಗುಡಿ, ಭೀಮಣ್ಣ ಮೇಟಿ, ಷಣ್ಮುಖ ಸಾಹು, ಶಿವಕುಮಾರ ಆವಂಟಿ, ಬಸವರಾಜ ಆನೇಗುಂದಿ, ಅಕ್ಕಮಹಾದೇವಿ ಬಳಗ ಶಹಾಪುರ,ಅಡಿವೆಪ್ಪ ಜಾಕಾ, ನಾಗಪ್ಪ ಬೊಮ್ಮನಳ್ಳಿ, ವಿಶ್ವನಾಥ ಬುಂಕಲದೊಡ್ಡಿ, ಸಿದ್ದರಾಮ ಹೊನ್ಕಲ್, ಹಂಪಯ್ಯ ಚಂದ್ರಕಲಾ ಕೆಂಭಾವಿ, ರೇಖಾ ಯಡ್ರಾಮಿ, ಖಾಜಾ ಪಟೇಲ್, ತಿಪ್ಪಣ್ಣ ಜಮಾದಾರ, ಮಲ್ಲಿಕಾರ್ಜುನ ಸತ್ಯಂಪೇಟೆ, ಮಲ್ಲಪ್ಪ ನಾಡಗೌಡ, ದೇವಿಂದ್ರಪ್ಪ ಬಡಿಗೇರ, ವಿರೂಪಾಕ್ಷಿ ಸಿಂಪಿ, ಭಂಡಾರಿ ವಕೀಲ,ಚೆನ್ನಪ್ಪ ಗುಂಡಾನೋರ, ಮಲ್ಲಣ್ಣ ಶಿರವಾಳ, ಭೀಮರಾಯ ಶಿರವಾಳ, ಸಿದ್ದಲಿಂಗಪ್ಪ ಆನೇಗುಂದಿ, ಗಣೇಶ ನಗರದ ಸಮಸ್ತ ಬಸವ ಬಳಗದವರು ಹಾಜರಿದ್ದರು.

Share This Article
Leave a comment

Leave a Reply

Your email address will not be published. Required fields are marked *