ಬೆಂಗಳೂರು
ನಗರದ ಚಾಲುಕ್ಯ ವೃತ್ತದಲ್ಲಿರುವ ಬಸವಣ್ಣನವರ ಪ್ರಸಿದ್ಧ ಅಶ್ವಾರೋಡ ಪುತ್ತಳಿ ಸರಿಯಾದ ನಿರ್ವಹಣೆಯಿಲ್ಲದೆ ತುಕ್ಕು ಹಿಡಿಯುತ್ತಿದೆ.
ಪ್ರತಿಮೆ ಮುಂದೆಯಿಂದ ನೋಡಿದರೆ ಚೆನ್ನಾಗಿಯೇ ಕಾಣುತ್ತದೆ. ಆದರೆ ಹತ್ತಿರದಿಂದ ಗಮನಿಸಿದರೆ ಶಿಥಿಲವಾಗುತ್ತಿರುವುದು ಕಾಣುತ್ತದೆ ಎಂದು ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯದ್ಯಕ್ಷ ಮೋಹನ್ ಕುಮಾರ್ ಬಿ ಗುರುವಾರ ಹೇಳಿದರು.
ಈ ಪ್ರತಿಮೆಯನ್ನು ನೋಡಲೆಂದೇ ಬಹಳ ಜನ ಬರುತ್ತಾರೆ. ಅದರ ಮುಂದೆ ಆಗಾಗ ಪ್ರತಿಭಟನೆಗಳೂ ನಡೆಯುತ್ತಿವೆ. ಆದರೆ ಸರಕಾರವೂ ಸೇರಿದಂತೆ ಯಾರೂ ಅದು ನಿರ್ವಹಣೆಯಿಲ್ಲದೆ ಹಾಳಾಗುತ್ತಿರುವುದು ಗಮನಿಸಿಲ್ಲ.
ಕಂಚಿನಿಂದ ಮಾಡಿರುವ ಪ್ರತಿಮೆ ಅಲ್ಲಲ್ಲಿ ಬಿರುಕು ಬಿಡುತ್ತಿದೆ, ತುಕ್ಕು ಹಿಡಿಯುತ್ತಿದೆ. ಕುದುರೆಯ ಬಾಲ ಕಳಚಿ ಬರುವ ಸಾಧ್ಯತೆಯಿದೆ. ಈಗ ಎಚ್ಛೆತ್ತುಕೊಳ್ಳದಿದ್ದರೆ ಇನ್ನೊಂದು ವರ್ಷದಲ್ಲಿ ಪ್ರತಿಮೆ ವಿರೂಪಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು. ಮೇಲುಗಡೆ ಲೈಟುಗಳು, CCTV ಕೆಲಸ ಮಾಡುತ್ತಿಲ್ಲ. ಸುತ್ತಾ ಗುಡಿಸುವವರೂ ಯಾರೂ ಇಲ್ಲಾ, ಕಸ ಅಥವಾ ಗಲೀಜು ನೀರು ತುಂಬಿಕೊಂಡಿರುತ್ತದೆ. ಕುದುರೆ ನಿಂತಿರುವ ಕಲ್ಲಿನ ವೇದಿಕೆ, ಸುತ್ತಲಿರುವ ಅಮೃತಶಿಲೆಯಲ್ಲಿ ಕೆತ್ತಿರುವ ವಚನದ ಸಾಲುಗಳು ಎಲ್ಲಾ ಹಾಳಾಗುತ್ತಿವೆ. ಅಮೃತಶಿಲೆಯ ಬಣ್ಣವೂ ಬದಲಾಗುತ್ತಿದೆ.
ಶ್ರೀಮತಿ ಗಂಗಾಂಬಿಕೆ ಅವರು ಮೇಯರ್ ಆಗಿದ್ದಾಗ 2020ರಲ್ಲಿ ಪ್ರತಿಮೆ 1.ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕೃತಗೊಂಡು, ಮುಖ್ಯಮಂತ್ರಿಯವರಿಂದಲೇ ಲೋಕಾರ್ಪಣೆಗೊಂಡಿತು. ಅದರ ನಿರ್ವಹಣೆ ಮಾಡಬೇಕಾಗಿರುವ ಬೆಂಗಳೂರು ಮಹಾನಗರ ಪಾಲಿಕೆ ಬಿಬಿಎಂಪಿ ತನ್ನ ಜವಾಬ್ದಾರಿಯನ್ನು ನಿರ್ಲಕ್ಷಿಸಿರುವುದು ಖಂಡನೀಯ ಎಂದು ಹೇಳಿದರು.
ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ, ಈ ಪ್ರತಿಮೆ ವಿಧಾನಸೌಧದ ಕೂಗಳತೆಯಲ್ಲಿದೆ, ಆದರೂ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಬೇಸರದ ಸಂಗತಿ. ಈ ಸಮಸ್ಯೆಗಳನ್ನು ಬೆಂಗಳೂರು ಮಹಾನಗರ ಪಾಲಿಕೆ ಕಮಿಷನರ್ ತುಷಾರ್ ಗಿರಿನಾಥ್ ಅವರ ಗಮನಕ್ಕೆ ತಂದಿದ್ದೇವೆ, ಅವರ ಪ್ರತಿಕ್ರಿಯೆ ನೋಡಿ ಮುಂದಿನ ಹೆಜ್ಜೆ ನಿರ್ಧರಿಸುತ್ತೇವೆ ಎಂದು ಮೋಹನ್ ಕುಮಾರ್ ಹೇಳಿದರು.
🥲