ಗದಗ
ಚೆನ್ನಬಸವಣ್ಣನವರು ಅವಿರಳಜ್ಞಾನಿ ಎಂದೇ ಖ್ಯಾತರಾದವರು. ಇವರು ಬಸವಣ್ಣನವರ ಸೋದರಳಿಯ, ಅಕ್ಕನಾಗಮ್ಮನ ಮಗ. ಅತೀ ಕಿರಿಯ ವಯಸ್ಸಿನಲ್ಲೆ ಜ್ಞಾನಿಯಾಗಿದ್ದರು. ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಸಿದ್ಧರಾಮೇಶ್ವರರಂತೆ ವೈರಾಗ್ಯಮೂರ್ತಿಯಾಗಿದ್ದರು. ಅಂದಿನ ಬಹುತೇಕ ವಚನಕಾರರು ಚೆನ್ನಬಸವಣ್ಣನವರ ಬಗ್ಗೆ ತಮ್ಮ ವಚನಗಳಲ್ಲಿ ಹೊಗಳುತ್ತಾರೆ. ಮುಂದೆ ಮೂರನೇ ಶೂನ್ಯಪೀಠ ಅಲಂಕರಿಸಿದ ಮಹಿಮರಿವರು. ಅಂತಹ ಘನಮಹಿಮರ ವಚವನ್ನು ನಿರ್ವಚನ ಮಾಡುವ ಭಾಗ್ಯ ನನ್ನದಾಗಿದೆ ಎಂದು ಅನುಭಾವಿ, ಶರಣತತ್ವ ಚಿಂತಕ ಎಸ್. ಎ. ಮುಗದರವರು ಹೇಳಿದರು.
ಅವರು ಬಸವದಳದ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ, ಸಿದ್ಧಲಿಂಗ ನಗರದ ಮಹಾಂತೇಶ ಹವಾಲ್ದಾರರ ಮನೆಯಲ್ಲಿ ನಡೆದ ಬಸವಣ್ಣನವರ ೮೫೮ನೇ ಸ್ಮರಣೆಯಂಗವಾಗಿ, ‘ವಚನ ಶ್ರಾವಣ-೨೦೨೫’ರ ಐದನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆದಿ ಬಸವಣ್ಣ, ಅನಾದಿಲಿಂಗವೆಂದೆಂಬರು,
ಹುಸಿ ಹುಸಿ ಈ ನುಡಿಯ ಕೇಳಲಾಗದು.
ಆದಿ ಲಿಂಗ, ಅನಾದಿ ಬಸವಣ್ಣನು!
ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಪ್ರಸಾದವು ಬಸವಣ್ಣನನುಕರಿಸಲಾಯಿತ್ತು.
ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯಾ
ಕೂಡಲಚೆನ್ನಸಂಗಮದೇವಾ.
ಈ ವಚನ ನಿರ್ವಚನಗೈಯುತ್ತಾ ಇದು ಚೆನ್ನಬಸವಣ್ಣನವರು ಬಸವಣ್ಣನವರ ವ್ಯಕ್ತಿತ್ವದ ಕುರಿತಾಗಿ ಬರೆದ ವಚನವಾಗಿದೆ. ಅವರ ವಚನದ ಮೊದಲ ಸಾಲುಗಳಲ್ಲಿ ಬರುವ ಆದಿ ಎಂದರೆ ಹಳೆಯದಾದ, ಅನಾದಿ ಎಂದರೆ ಹಳೆಯದಕ್ಕಿಂತ ಪೂರ್ವದ್ದು ಎಂದರೆ ಆದಿಗಿಂತ ಹಿಂದಿನದ್ದು ಎಂದರ್ಥವಾಗಿದೆ. ಇಲ್ಲಿ ಲಿಂಗದ ಕುರಿತಾಗಿ ಹೇಳಲಾಗಿದೆ. ಹಲವರು ಲಿಂಗವು ಬಸವಣ್ಣನವರಿಗಿಂತಲೂ ಪೂರ್ವದಲ್ಲಿತ್ತೆಂದು ಹೇಳುವರು. ಆದರೆ ಇದು ಸಂಪೂರ್ಣವಾಗಿ ಸುಳ್ಳು. ಬಸವಣ್ಣನೇ ಮೊದಲು, ಲಿಂಗ ಉದಯದ ಪೂರ್ವದಲ್ಲಿ ಬಸವಣ್ಣನಿದ್ದ. ಬಸವಣ್ಣ ಹೇಗಿದ್ದನೆಂಬುದು ನಾವು ಅರಿಯಬೇಕಾಗಿದೆ. ಜಗತ್ತಿನ ಸೃಷ್ಠಿ ಹೇಗಾಯಿತು. ಪಂಚಭೂತಗಳು ಹೇಗೆ ಬಂದವು. ಈ ಪಂಚಭೂತಗಳಿಗೆ ಮಾತೃ ಸ್ವರೂಪಿಯಾದ ಮಹಾಲಿಂಗ ಹೇಗೆ ಬಂತು?

ಆ ಮಹಾಲಿಂಗಕ್ಕೆ ಲಿಂಗವೆಂದರು ಶರಣರು. ಮೊದಲು ಅದು ಅಣುವಿನ ರೂಪದಲ್ಲಿತ್ತು. ಅದಕ್ಕೆ ನೆನಹು ಉತ್ಪತ್ತಿಯಾಯಿತು. ಆ ನೆನಹಿಗೆ ಭಾವವೆನ್ನುವರು. ಜೊತೆಗೆ ಚಿತ್ ಎಂದು ಕೂಡಾ ಹೇಳುವರು. ಕೊನೆಗೆ ಮೂಲಜ್ಞಾನ ಉತ್ಪತ್ತಿಗೆ ಬಸವನೆಂಬುವರೆಂದು ಎಸ್. ಎ. ಮುಗದರವರ ಹೇಳಿದರು.
ಇಲ್ಲಿ ಮಹಾಲಿಂಗದ ಉತ್ಪತ್ತಿ ಬಸವಣ್ಣನಿಂದಾಯಿತು. ಯಾವಾಗ ನಿಷ್ಕಲಲಿಂಗ ಸ್ಥಿತಿ ಬರುವದೊ ಸೃಷ್ಠಿ ರಚನೆಗೆ ಬೇಕಾದ ಕಾರ್ಯಗಳು ಆರಂಭವಾಗುವವು. ಮೂಲಜ್ಞಾನ ಉತ್ಪತ್ತಿಯೂ ಬಸವಣ್ಣನಿಂದಾಯಿತು. ಜಂಗಮ ಎಂದರೆ ಚೈತನ್ಯವಾಗಿದೆ. ಚೈತನ್ಯ, ಜ್ಞಾನಗಳು ಒಂದೇ ಅರ್ಥವನ್ನು ಹೊಂದಿವೆ. ಪ್ರಸಾದ ಕೂಡಾ ಜ್ಞಾನದ ಇನ್ನೊಂದು ರೂಪವಾಗಿದೆ. ಶರಣರು ಶರೀರವನ್ನು ಕೂಡಾ ಪ್ರಸಾದಕಾಯವೆಂದರು.
ತ್ರಿವಿಧ ಜಂಗಮ ಪ್ರಸಾದ ಇವುಗಳಲೆಲ್ಲ ಬಸವಣ್ಣನವರನ್ನು ತತ್ವರೂಪದಲ್ಲಿ ಕಾಣುವರು. ಈ ವಚನದಲ್ಲಿ ಬಸವಣ್ಣನವರನ್ನು ವ್ಯಕ್ತಿಯಾಗಿ ನೋಡದೆ ತತ್ವವಾಗಿ ನೋಡಲಾಗುತ್ತದೆಂಬು ಕಾಣುತ್ತದೆ. ಮಹಾಪ್ರಕಾಶವೆ ಬಸವಣ್ಣನಾಗಿದ್ದಾನೆ. ಇಷ್ಟಲಿಂಗವು ಅರಿವಿನ ಕುರುಹಾಗಿದ್ದು, ಇಲ್ಲಿ ನಾವು ಪರಮಾತ್ಮನ ಸ್ವರೂಪಿಗಳಾಗಿದ್ದೆವೆಂದು ಹೇಳಿದರು.

ಈ ವಚನದಿಂದ ಬಸವಣ್ಣನವರ ಜ್ಞಾನ, ಅಧ್ಯಯನ, ಚಿಂತನೆಯ ಫಲವಾಗಿ ಇಷ್ಟಲಿಂಗ ಉದಯವಾಯಿತೆಂದು ನುಡಿದರು. ಜಂಗಮ ಲಿಂಗ ಚೈತನ್ಯದ ಸ್ವರೂಪವಾಗಿದೆ. ಬಸವಣ್ಣನವರ ನಡೆ, ನುಡಿಯೇ ಪ್ರಸಾದ ತತ್ವವಾಗಿದೆ ಎಂದು ಮುಗದ ಶರಣರು ನುಡಿದರು.
ನಂತರ ಶರಣತತ್ವ ಚಿಂತಕ ಅಶೋಕ ಬರಗುಂಡಿಯವರು, ಇದೇ ವಚನದ ಕುರಿತು ಆಳವಾಗಿ ವಿಶ್ಲೇಷಿಸಿದರು.
ಪ್ರಾರಂಭದಲ್ಲಿ ಬಸವದಳದ ಶರಣೆಯರಿಂದ ವಚನ ಪ್ರಾರ್ಥನೆ, ಶಿಕ್ಷಕ ಮಹಾಂತೇಶ ಹವಾಲ್ದಾರ ಸ್ವಾಗತ, ನಿರೂಪಣೆ ಎನ್. ಎಚ್. ಹಿರೇಸಕ್ಕರಗೌಡರ ಮಾಡಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.