ಬಸವಣ್ಣನವರು ಪ್ರತಿಪಾದಿಸಿದ್ದು ಜೀವಪರ, ಪ್ರಗತಿಪರ ಧರ್ಮ: ಸಂಜಯ ಮಾಕಾಲ್

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ

ಸಕಲ ಜೀವಿಗಳಿಗೆ ಲೇಸನ್ನೇ ಬಯಸುವ ಬಸವಧರ್ಮ ಪ್ರಗತಿಪರ ಧರ್ಮವಾಗಿದೆ ಎಂದು ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಸಂಜಯ ಮಾಕಾಲ್ ಅಭಿಪ್ರಾಯಪಟ್ಟರು.

ಇಲ್ಲಿಯ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ನಡೆದ ಮಾಸಿಕ ಶರಣಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಪಂಚದ ಎಲ್ಲ ಧರ್ಮಗಳು ಜೀವ, ಜಗತ್ತು, ಈಶ್ವರ ಈ ಮೂರರ ಸಂಬಂಧ ತಿಳಿಸುತ್ತವೆ. ದೇವರು ಬಹುತೇಕ ಧರ್ಮಗಳ ಕೇಂದ್ರ ಬಿಂದು. ಆದರೆ, ಬಸವ ಧರ್ಮದಲ್ಲಿ ಜೀವಿಯೇ ಕೇಂದ್ರಬಿಂದು. ಬಸವಣ್ಣನವರು ಪ್ರತಿಪಾದಿಸಿದ್ದು ಜೀವಪರ ಧರ್ಮ ಎಂದು ನುಡಿದರು.

ಮನುಕುಲ ಸೌಖ್ಯವಾಗಿರಲು ಎಲ್ಲರೂ ಕಾಯಕ ಮಾಡಲೇಬೇಕು. ಇದರಲ್ಲಿ ಯಾರಿಗೂ ವಿನಾಯಿತಿ ಇಲ್ಲ. ಪ್ರತಿಯೊಬ್ಬರೂ ದುಡಿದು ಉಂಡರೆ ದೇಶದ ಪ್ರಗತಿ ಸಾಧ್ಯ ಎಂದು ಹೇಳಿದರು.

1945ರ ಮಹಾ ಯುದ್ಧದಲ್ಲಿ ಜಪಾನ್ ಅಣುಬಾಂಬ ದಾಳಿಗೆ ತುತ್ತಾಗಿತ್ತು. ಆ ದೇಶದ ಜನರು ಕಾಯಕದಿಂದ ಕೆಲವೇ ವರ್ಷಗಳಲ್ಲಿ ತಮ್ಮ ದೇಶವನ್ನು ಮತ್ತೆ ಅಭಿವೃದ್ಧಿಹೊಂದಿದ ರಾಷ್ಟ್ರವಾಗಿ ಎದ್ದು ನಿಲ್ಲಿಸಿದರು. ಅಂತೆಯೇ ಬಸವಾದಿ ಪ್ರಮಥರು ಕಾಯಕದಲ್ಲೇ ದೇವರನ್ನು ಕಂಡರು. ಕಾಯಕವೇ ಕೈಲಾಸವೆಂದರು ಎಂದು ತಿಳಿಸಿದರು.

ಮೊದಲು ಕಾಯಕ ನಂತರ ಪೂಜೆ ಎಂದು ಕಾಯಕಕ್ಕೆ ಪ್ರಥಮ ಆದ್ಯತೆ ನೀಡಿದರು. ಶರಣರ ಕಾಯಕತತ್ವ ಪಾಲಿಸಿದರೆ ಭಾರತ ಜಗತ್ತಿನಲ್ಲೇ ಶಕ್ತಿಶಾಲಿ ರಾಷ್ಟ್ರವಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಿದರು.

ನಮ್ಮ ನಾಡಿನಲ್ಲಿ ಬಸವ ತತ್ವ ತೋರಿಸಿ ಬೆಳೆಸಿದವರು ಅಕ್ಕ ಅನ್ನಪೂರ್ಣತಾಯಿ. ಅವರ ಕಾರ್ಯ ಲಿಂಗಾಯತ ಮಹಾಮಠದಿಂದ ನಡೆಯುತ್ತಿದೆ ಎಂದರು.

ಸಾನಿಧ್ಯ ವಹಿಸಿದ್ದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಹಸಿದವರಿಗೆ ಅನ್ನವನಿಕ್ಕುವುದೇ ನಿಜವಾದ ಧರ್ಮ. ಹಸಿದವರ ಮೂಲಕ ದೇವರು ಉಣ್ಣುತ್ತಾನೆ. ಜಗತ್ತಿನಲ್ಲಿ ಯಾರೂ ಹಸಿವಿನಿಂದ ಬಳಲಬಾರದೆಂಬುದು ಬಸವಾದಿ ಶರಣರ ಆಶಯವಾಗಿತ್ತು ಎಂದು ತಿಳಿಸಿದರು.

ಶರಣರು ಜೀವಕಾರುಣ್ಯ ಉಳ್ಳವರಾಗಿದ್ದರು. ದೀನರು, ಶೋಷಿತರು, ಕೆಳಗೆ ಬಿದ್ದವರಲ್ಲಿ ದೇವರನ್ನು ಕಂಡರು. ಬಸವಣ್ಣನವರು ಅಂತರಂಗ ಶುದ್ಧಿಗೆ ಮಹತ್ವ ನೀಡಿದರು. ಬದುಕಿನಲ್ಲಿ ಉಡುವ ಬಟ್ಟೆಗಿಂತ ನಡೆವ ಬಟ್ಟೆ ಮುಖ್ಯ.

ನಡೆ-ನುಡಿ ಸರಿಯಾಗಿದ್ದರೆ ಜೀವನ ಆನಂದಮಯ. ಅದಕ್ಕಾಗಿ ಹಿಡಿದ ಆಚಾರ ಕೊನೆ ಮುಟ್ಟಿಸಬೇಕು. ಅರಿವು-ಆಚಾರಗಳ ಬುನಾದಿ ಮೇಲೆ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು. ಸಂಕಲ್ಪ- ವಿಕಲ್ಪಗಳನ್ನು ಅಳಿಸಿಕೊಂಡು ಸತ್ಯದ ದಾರಿಯಲ್ಲಿ ಸಾಗಬೇಕು ಎಂದರು.

ಅಮೆರಿಕ ಪ್ರವಾಸ ಮಾಡಿ ಬಂದ ಮಲ್ಲಮ್ಮ ಚಂದ್ರಶೇಖರ ಹೆಬ್ಬಾಳೆ, ವಿಶೇಷ ಸೇವೆಗೈದ ಪ್ರಕಾಶ ಮಠಪತಿ ಹಾಗೂ ಮಾಣಿಕಪ್ಪ ಗೋರನಾಳೆ ಅವರನ್ನು ಸನ್ಮಾನಿಸಲಾಯಿತು.

ಉದ್ಯಮಿ ಚಂದ್ರಶೇಖರ ಹೆಬ್ಬಾಳೆ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ರಮೇಶ ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಚನ್ನಬಸವ ಹಂಗರಗಿ ಅಧ್ಯಕ್ಷತೆ ವಹಿಸಿದ್ದರು. ನೀಲಮ್ಮನ ಬಳಗದ ಜಗದೇವಿ ಶಾಂತಕುಮಾರ ಪನಸಾಲೆ ಸಮ್ಮುಖ ವಹಿಸಿದ್ದರು.

ಶ್ಯಾಮಲಾ ಎಲಿ, ಸಿದ್ದಮ್ಮ ಮಠಪತಿ ವಚನ ಗಾಯನ ಮಾಡಿದರು. ಶಿಲ್ಪಾ ಮಜಗೆ ಸ್ವಾಗತಿಸಿದರು.

Share This Article
Leave a comment

Leave a Reply

Your email address will not be published. Required fields are marked *