ಪ್ರಣವದ ಬೀಜವ ಬಿತ್ತಿ ಪಂಚಾಕ್ಷರಿಯ ಬೆಳೆಯ ಬೆಳೆದು,
ಪರಮಪ್ರಸಾದವನೊಂದು ರೂಪ ಮಾಡಿ ಮೆರೆದು,
ಭಕ್ತಿ ಫಲವನುಂಡಾತ ನಮ್ಮ ಬಸವಯ್ಯನು.
ಚೆನ್ನ ಬಸವನೆಂಬ ಪ್ರಸಾದಿಯ ಪಡೆದು,
ಅನುಭವ ಮಂಟಪವನು ಮಾಡಿ,
ಅನುಭವ ಮೂರ್ತಿಯಾದಾತ ನಮ್ಮ ಬಸವಯ್ಯನು.
ಅರಿವ ಸಂಪಾದಿಸಿ ಆಚಾರವನಂಗಗೊಳಿಸಿ,
ಏಳುನೂರೆಪ್ಪತ್ತು ಅಮರಗಣಂಗಳ
ಅನುಭವ ಮೂರ್ತಿಗಳ ಮಾಡಿದಾತ ನಮ್ಮ ಬಸವಯ್ಯನು
‘ಬಸವಣ್ಣ’ ಮಂತ್ರ ಸದೃಷ. ಹೆಸರು. ಅವರ ಸ್ಪರಣೆಯೇ ಚೈತನ್ಯದಾಯಕವಾದುದು. ಇನ್ನು ಆ ಮಹಾನುಭಾವರ ಸಾಧನೆಗಳತ್ತ ಕಣ್ಣು ಹಾಯಿಸಿದರೆ ನಿಜಕ್ಕೂ ಬೆರಗು ಉಂಟಾಗುವುದು .ಈ ಬೆರಗಿಗೆ ಕಾರಣವಾದ ‘ಅನುಭವ ಮಂಟಪ’ ಹೆಸರೇ ರೋಮಾಂಚನಕಾರಿ.
ಅನುಭವ ಕೇವಲ ಲೌಕಿಕವಾದುದಲ್ಲ.ಅದು ಲೌಕಿಕ ಪಾರಮಾರ್ಥಿಕಗಳ ಸಂಗಮ . ಅವೆರಡರ ಮಿಲನದಿಂದಲೇ ಬದುಕು ಗಟ್ಟಿಗೊಳ್ಳುವುದು. ಕಳೆಗಟ್ಟುವುದು. ಇಂಥ ಅನುಭವ ಮಂಟಪದ ಕಲ್ಪನೆ ಮೂಡಿದ್ದು ಬಸವಣ್ಣನವರ ಭಾವಕೋಶದಲ್ಲಿ. ಈ ಅನುಭವ ಮಂಟಪವನ್ನು ಅಸ್ತಿತ್ವದಲ್ಲಿ ತಂದವರು ಯಾರು, ಅವರ ಉದ್ದೇಶ ಏನಾಗಿತ್ತು ಆ ಮೂಲಕ ಅವರ ಸಾಧನೆಗಳೇನು ಎನ್ನುವ ಸುಳಹು ಬಸವಣ್ಣನವರ ಸಹಧರ್ಮಿಣಿ ನೀಲಮ್ಮ ತಾಯಿಯವರ ವಚನದಲ್ಲಿ ದೊರೆಯುತ್ತದೆ.
ಅನುಭಾವ ಎನ್ನುವುದು ಕೇವಲ ಅರಿವಲ್ಲ, ಅಥವಾ ಆಚಾರವಲ್ಲ.ಅರಿವು ಆಚಾರಗಳ ಸಂಗಮ.ಈ ಅರಿವು ಆಚಾರಗಳ ಸಂಗಮ ತಾವಾಗಿ ಏಳುನೂರೆಪ್ಪತ್ತು ಅಮರ ಗಣಂಗಳನ್ನು ಅನುಭವ ಮೂರ್ತಿಗಳನ್ನಾಗಿ ಮಾಡಿದರು ಬಸವಣ್ಣನವರು. ಇದೆಲ್ಲ ಸಾಧ್ಯವಾದುದು. ಅನುಭವ ಮಂಟಪದ ಮೂಲಕ.
ಅನುಭವ ಮಂಟಪದ ಸಂಪರ್ಕದಿಂದ ‘ಜ್ಯೋತಿ ಮುಟ್ಟಿ ಜ್ಯೋತಿಯನ್ನಂತೆ’ ತೀರಾ ಸಾಮಾನ್ಯರೆಂದು ಸಾರ್ವಜನಿಕರ ನಿಂದೆ, ಅವಹೇಳನ, ತಿರಸ್ಕಾರಕ್ಕೆ ಗುರಿಯಾದವರೂ ಸಹ ಅನುಭಾವಿಗಳಾದರು. ತಮ್ಮ ಅನುಭವವನ್ನು ವಚನಗಳಲ್ಲಿ ಹಿಡಿದಿಟ್ಟರು. ಅಲ್ಪಾವಧಿಯಲ್ಲೇ ಅನುಭವ ಮಂಟಪದ ಮೂಲಕ ಬಸವಣ್ಣನವರು ಸಾಧಿಸಿದ ಸಾಧನೆ ಅದ್ವಿತೀಯವಾದುದು.
ಅನುಭವ ಮಂಟಪದ ಸದಸ್ಯರೆಲ್ಲರೂ ವೇದ, ಶಾಸ್ತ್ರ, ಪುರಾಣ, ತರ್ಕ ಮುಂತಾದ ಶಾಸ್ತ್ರಗಳನ್ನೇ ಮು೦ದಿಟ್ಟುಕೊಂಡು ನಡೆದವರಲ್ಲ, ಶಾಸ್ತ್ರಗಳ ವಿಚಾರವನ್ನು ಅನುಭವಕ್ಕೆ ತ೦ದುಕೊಂಡು, ಅನುಭವವನ್ನೇ ಮುಂದಿಟ್ಟುಕೊಂಡು ನಡೆದುದರಿಂದ ಈ ಮಂಟಪವು ಅನುಭವ ಮಂಟಪವೆಂಬ ಹೆಸರು ಪಡೆದಿದೆ.
ಪ್ರಮಾಣದಲ್ಲಿ ಅನೇಕ ಪ್ರಕಾರವುಂಟು, ಆದರೆ ಅವೆಲ್ಲಕ್ಕಿಂತಲೂ ತನ್ನ ಅನುಭವೇನಿದೆಯೋ ಇದಕ್ಕಿಂತ ಮಿಗಿಲಾದ, ನಿರ್ದಿಷ್ಟವಾದ, ನೇರವಾದ ಪ್ರಮಾಣ ಬೇರೊಂದಿಲ್ಲ. ಪೂಜಾರಿಗಳನ್ನು ನಂಬಿ, ಪುರೋಹಿತರನ್ನು ನಂಬಿ, ಶಾಸ್ತ್ರಗಳನ್ನು ನಂಬಿ, ಪುಸ್ತಕಗಳನ್ನು ನಂಬಿ ಜನ ಕೆಟ್ಟದ್ದುಂಟು; ಪರರನ್ನಾಶ್ರಯಿಸಿದಲ್ಲಿ ಕೆಡಕುಗಳ ಸಂಭವವೇ ಹೆಚ್ಚು.
ತನ್ನ ಅನುಭವವೇ ತನಗೆ ಪ್ರಮಾಣವಾದಾಗ ಅದನ್ನಲ್ಲಗಳೆಯುವುದು ಸಾಧ್ಯವೇ ಇಲ್ಲ. ಶಾಸ್ತ್ರವೊಂದನ್ನು ಹೇಳಬಹುದು, ಶಾಸ್ತ್ರವು ಹೇಳುತ್ತದೆಯೆಂಬ ಕಾರಣಕ್ಕೆ ನಂಬದ ಆ ಶಾಸ್ತ್ರದ ವಿಷಯವನ್ನು ತನ್ನ ವಿವೇಚನೆಗೆ ತೆಗೆದುಕೊಂಡಾಗ ತನಗೆ ಯಾವ ಅನುಭವವಾಗುತ್ತದೆಯೋ ಅದು ಪ್ರಮಾಣ. ಇದು ಕಾರಣವೇ ಅನುಭವ ಮಂಟಪವೆಂಬ ಹೆಸರು ತಾತ್ವಿಕವಾದುದು, ಔಚಿತ್ಯ ಪೂರ್ಣವಾದುದೂ ಆಗಿದೆ.
ಅನುಭವ ಮಂಟಪವು
ಜಾತಿಭೇದ ನಿವಾರಣೆ
ಇಂದ್ರಿಯ ನಿಗ್ರಹ ನಿವಾರಣೆ
ದೇವಾಲಯಗಳ ರಚನೆಗೆ ವಿರೋಧ
ಸ್ಥಾವರಲಿಂಗ ಪೂಜಾ ಖಂಡನೆ
ಎಡಬಿಡದ ಇಷ್ಟಲಿಂಗ ಧಾರಣೆ ಹವನ ಹೋಮಾದಿಗಳ,
ಯಜ್ಞ ಯಾಗಾದಿಗಳ ನಿಷೇಧ
ಜಾತಕ, ಸೂತಕ,ಕರ್ಮಾದಿಗಳ ನಿರಾಕರಣೆ
ಹಿಂಸಾಚಾರ-ಡಂಭಾಚಾರ, ಶುಷ್ಕ ಆಚಾರಗಳ ಹಾಗೂ ಅನಂತ ದೇವತಾ ಪೂಜಾ ಖಂಡನೆ
ಕಾಯಕದಲ್ಲಿಯೇ ಕೈಲಾಸ ಕಾಣಬೇಕು ಕಾಯಕವೇ ಕೈಲಾಸ ದೇಹವೇ ದೇವಾಲಯ ಎಂಬ ತತ್ತ್ವ ಪರಿಪಾಲನೆ
ಮಾನವನ ಅಧಿಕಾರ ಐಶ್ವರ್ಯಕ್ಕಿಂತ ಶೀಲ ಸದ್ಗುಣಗಳಿಗೆ ಹೆಚ್ಚು ಪ್ರಾಶಸ್ತ್ಯ
ಕಾಯಕದಲ್ಲಿಯೇ ಕೈಲಾಸ ಕಾಣಬೇಕು. ಕಾಯಕವೇ ಕೈಲಾಸ,
ದೇಹವೇ ದೇವಾಲಯ ಎಂಬ ತತ್ತ್ವ ಪರಿಪಾಲನೆ ಪ್ರಾಧಾನ್ಯತೆಯನ್ನಿತ್ತು ಅದರಂತೆ ಆಚರಿಸಲು ಬೋಧನೆಯ ಮಾಡಲು ರಚಿಸಿದ ವೇದಿಕೆ.