ಬಸವಣ್ಣ ಹಿಂದೂವೇ? ಲಿಂಗಾಯತ ಹೋರಾಟ ಧರ್ಮ ದ್ರೋಹವೇ?

ಬೆಂಗಳೂರು

“ಬಸವಣ್ಣ ಹಿಂದೂ ಅಲ್ಲ ಎನ್ನುವುದು ತಪ್ಪು,” “ಲಿಂಗಾಯತ ಪ್ರತ್ಯೇಕ ಧರ್ಮ ಎನ್ನುವುದು ದ್ರೋಹ.”

ಇಂತಹ ಮಾತುಗಳು, ಆರೋಪಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿಗೆ ಕೇಳಿ ಬರುತ್ತಿವೆ. ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ನೆಪದಲ್ಲಿ ಹಿಂದೂ ಧರ್ಮಕ್ಕೂ, ಕೊನೆಗೆ ಬಸವಣ್ಣನವರಿಗೂ ದ್ರೋಹವಾಗುತ್ತಿದೆ ಎಂಬ ವಾದವನ್ನು ಕೆಲ ರಾಜಕೀಯ, ಧಾರ್ಮಿಕ ಗುಂಪುಗಳು ನಿರಂತರವಾಗಿ ಮುಂದಿಡುತ್ತಿವೆ.

ಬಬಲೇಶ್ವರದಲ್ಲಿ ಬಸವಾದಿ ಶರಣರ ಹೆಸರ ದುರ್ಬಳಕೆ ಮಾಡಿಕೊಂಡು ಹಿಂದೂ ಸಮಾವೇಶ ನಡೆಸುತ್ತಿರುವವರ ಬಾಯಲ್ಲೂ ಇದೇ ಮಾತುಗಳು ಬರುತ್ತಿವೆ.

ಹೀಗಾಗಿ ಸತ್ಯವೇನು? ಲಿಂಗಾಯತರು ಹಿಂದೂಗಳೇ? ಬಸವಣ್ಣ ಕೇವಲ ಧರ್ಮ ಸುಧಾರಕನೇ ಅಥವಾ ಹೊಸ ಧಾರ್ಮಿಕ ದರ್ಶನದ ಸ್ಥಾಪಕನೇ?

ಈ ಪ್ರಶ್ನೆಗೆ ಉತ್ತರ ಹುಡುಕಲು ಘೋಷಣೆಗಳಲ್ಲ, ಇತಿಹಾಸ–ವಚನ–ಸಾಮಾಜಿಕ ಆಚರಣೆಗಳತ್ತ ನೋಡುವುದು ಅಗತ್ಯ.

ಬಸವಣ್ಣ ಕಟ್ಟಿದ ಪರ್ಯಾಯ

ಬಸವಣ್ಣ 12ನೇ ಶತಮಾನದ ಸಮಾಜದಲ್ಲಿ ಕ್ರಾಂತಿಕಾರಕ ಚಿಂತನೆಗಳನ್ನು ಮುಂದಿಟ್ಟರು. ಅವರು ಕಂಡುಕೊಂಡ ಲಿಂಗಾಯತ ದರ್ಶನವು ಕೇವಲ “ಸುಧಾರಣೆ” ಅಲ್ಲ; ಅದು ಪೂರ್ಣ ತತ್ತ್ವಶಾಸ್ತ್ರೀಯ ಪರ್ಯಾಯ.

ವರ್ಣಾಶ್ರಮ ಧರ್ಮದ ನಿರಾಕರಣೆ, ಜನ್ಮಾಧಾರಿತ ಶ್ರೇಣಿಕರಣದ ವಿರುದ್ಧತೆ, ಯಜ್ಞ–ಹೋಮ–ಬ್ರಾಹ್ಮಣೀಯ ಕರ್ಮಕಾಂಡಗಳ ತಿರಸ್ಕಾರ, ಮಧ್ಯಸ್ಥ ಪೂಜಾರಿಗಳ ಅನಾವಶ್ಯಕತೆ – ಇವೆಲ್ಲವೂ ವಚನಗಳಲ್ಲಿ ಸ್ಪಷ್ಟವಾಗಿ ದಾಖಲಾಗಿವೆ.

ಬಸವಣ್ಣನ ಲಿಂಗಾಯತ ಧರ್ಮದಲ್ಲಿ ವೇದಪ್ರಾಮಾಣ್ಯಕ್ಕೆ ಕೇಂದ್ರಸ್ಥಾನವಿಲ್ಲ

ಆತ್ಮ–ಪರಮಾತ್ಮ ಲಿಂಗಾಯತರ ನೇರ ಅನುಭವದ ವಿಷಯ.

ಇಷ್ಟಲಿಂಗ ಧಾರಣೆ ವೈಯಕ್ತಿಕ–ನೈತಿಕ ಬದ್ಧತೆ

ಕೈಲಾಸವೆಂಬುದು ಮರಣಾನಂತರ ಇರುವ ಲೋಕವಲ್ಲ; ಇಲ್ಲಿಯೇ ಈ ಜಗತ್ತಿನಲ್ಲಿಯೇ ಸಾಧ್ಯವಾಗುವ ಸಾಮಾಜಿಕ–ನೈತಿಕ ಸ್ಥಿತಿ.

ಇವುಗಳನ್ನೆಲ್ಲಾ ಕೇವಲ “ಹಿಂದೂ ಧರ್ಮದ ಒಳಗಿನ ಸುಧಾರಣೆ” ಎಂದು ಕುಗ್ಗಿಸುವುದು, ಬಸವ ದರ್ಶನದ ತೀವ್ರತೆಯನ್ನು ನಿರಾಕರಿಸಿದಂತೆಯೇ ಆಗುತ್ತದೆ!

ಲಿಂಗಾಯತ, ವೀರಶೈವ, ಹಿಂದೂ

ಇತ್ತೀಚೆಗೆ RSS– ಭಜರಂಗ ದಳ–BJP ಬೆಂಬಲಿತ ವಲಯಗಳಿಂದ “ವೀರಶೈವ–ಲಿಂಗಾಯತ ಎರಡೂ ಒಂದೇ, ಎರಡೂ ಹಿಂದು ಧರ್ಮದೊಳಗೆ ಬರುತ್ತವೆ” ಎಂಬ ವಾದವನ್ನು ವ್ಯವಸ್ಥಿತವಾಗಿ ಹರಡಲಾಗುತ್ತಿದೆ. ಗದಗದ ಶಿವಾನಂದ ಸ್ವಾಮಿ, ಕನ್ನೇರಿ ಸ್ವಾಮಿಗಳಂತಹ ಮಠಾಧೀಶರ ಮೂಲಕ ಸಭೆ–ಸಮಾರಂಭಗಳು, ಪುಸ್ತಕ ಪ್ರಕಟಣೆಗಳು ನಡೆಯುತ್ತಿವೆ.

ಆದರೆ ಇತಿಹಾಸ ಏನು ಹೇಳುತ್ತದೆ?

ವೀರಶೈವ ಪದ್ಧತಿ ಶೈವ ಆಗಮಿಕ ಪರಂಪರೆಯಿಂದ ಬಂದದ್ದು. ಅದರಲ್ಲಿ ಮಠ–ಪೂಜೆ–ಆಚಾರಗಳಿವೆ. ಲಿಂಗಾಯತವು ವಚನಾಧಾರಿತ, ಅನುಭವಮೂಲಕ ದರ್ಶನ.

ವೀರಶೈವ ಹಾಗೂ ಲಿಂಗಾಯತ ಇವೆರಡರ ನಡುವೆ ಐತಿಹಾಸಿಕವಾಗಿ ಸಂವಾದವೂ ಇದೆ, ಸಂಘರ್ಷವೂ ಇದೆ.! ಎರಡನ್ನೂ “ಒಂದೇ” ಎಂದು ಹೇಳುವುದು ವೈಚಾರಿಕತೆಯನ್ನು ಸರಳೀಕರಣಗೊಳಿಸಿದಂತೆ.

ಅದಕ್ಕಿಂತ ಮುಖ್ಯವಾಗಿ, ಎರಡನ್ನೂ ಹಿಂದೂ ಧರ್ಮದ ವ್ಯಾಪ್ತಿಯೊಳಗೆ ಕಟ್ಟಿಹಾಕುವುದು ರಾಜಕೀಯ ಅವಶ್ಯಕತೆಯಿಂದ.

ಧರ್ಮವೋ, ಮತ ಬ್ಯಾಂಕೋ?

ಕರ್ನಾಟಕದಲ್ಲಿ ಯಡಿಯೂರಪ್ಪ ಕುಟುಂಬ, ಬೊಮ್ಮಾಯಿ, ಜಗದೀಶ ಶೆಟ್ಟರ್, ಶಶಿಕಲಾ ಜೊಲ್ಲೆ, ಅರವಿಂದ ಬೆಲ್ಲದ ಬಸವನಗೌಡ ಯತ್ನಾಳ್ , ಲಿಂಗಾಯತ ವೀರಶೈವರೇ ಅಲ್ಲದ ಕೆ. ಎಸ್ . ಈಶ್ವರಪ್ಪ ಮೊದಲಾದ ರಾಜಕೀಯ ನಾಯಕರ ಮೂಲಕ ಲಿಂಗಾಯತವನ್ನು “ಹಿಂದೂ ಧರ್ಮದ ಒಳಗೇ ಉಳಿಸಿಕೊಳ್ಳುವ” ಪ್ರಯತ್ನ ನಡೆಯುತ್ತಿದೆ.

ಇದು ಧಾರ್ಮಿಕ ಚರ್ಚೆಯಲ್ಲ, ಇದು ಮತಬ್ಯಾಂಕ್ ರಾಜಕೀಯ, ಎನ್ನುವುದು ಲಿಂಗಾಯತರಿಗೆ ಅರ್ಥವಾಗಿದೆ.

ಲಿಂಗಾಯತ ಪ್ರತ್ಯೇಕ ಧರ್ಮವಾದರೆ

ಜನಗಣತಿಯಲ್ಲಿ ಪ್ರತ್ಯೇಕವಾಗಿ ಗುರುತಿಸಬೇಕಾಗುತ್ತದೆ. ಲಿಂಗಾಯತ ಶಿಕ್ಷಣ, ಸಂಸ್ಕೃತಿ, ಸಂಸ್ಥೆಗಳಿಗೆ ಸ್ವಾಯತ್ತತೆ ನೀಡಬೇಕಾಗುತ್ತದೆ.

ರಾಜಕೀಯ ಪ್ರಾತಿನಿಧ್ಯತ್ವದ ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ

ಇವೆಲ್ಲವೂ ಕೆಲವು ರಾಜಕೀಯ ಶಕ್ತಿಗಳಿಗೆ ಅಸಹನೆಯನ್ನುಂಟು ಮಾಡುತ್ತವೆ . ಆದ್ದರಿಂದ “ಬಸವಣ್ಣ ಹಿಂದೂ, ಲಿಂಗಾಯತ ಹಿಂದೂ” ಎಂಬ ಹತಾಶೆಯ ಘೋಷಣೆಗಳು ಬರುತ್ತಿವೆ.

ಯಾರು ಬಸವತತ್ವ ದ್ರೋಹಿಗಳು

ಪ್ರತ್ಯೇಕ ಧರ್ಮದ ಹೋರಾಟಗಾರರ ಮೇಲೆ “ಬಸವಸತ್ವಕ್ಕೆ ದ್ರೋಹಿಗಳು” ಎಂಬ ಆರೋಪ ಮಾಡಲಾಗುತ್ತಿದೆ. ಆದರೆ ಪ್ರಶ್ನೆ ಇರುವುದು:
ವರ್ಣಾಶ್ರಮವನ್ನು ತಿರಸ್ಕರಿಸಿದ ಬಸವಣ್ಣನನ್ನು, ವರ್ಣಾಶ್ರಮದೊಳಗೆ ಮರಳಿಸುವುದೇ ದ್ರೋಹವಲ್ಲವೇ?

ವೇದ–ಶಾಸ್ತ್ರಗಳನ್ನು ಪ್ರಶ್ನಿಸಿದ ವಚನಕಾರರನ್ನು, ವೇದಪ್ರಾಮಾಣ್ಯಕ್ಕೆ ಒಳಪಡಿಸುವುದೇ ದ್ರೋಹವಲ್ಲವೇ? ಇಲ್ಲಿ ದ್ರೋಹ ಎನ್ನುವ ಪದವನ್ನು ಬಳಸುವ ಮೊದಲು, ಬಸವ ತತ್ತ್ವದ ಮೂಲಭೂತ ಅಂಶಗಳಿಗೆ ನಿಷ್ಠರಾಗಿದ್ದೇವೆಯೇ ಎಂಬುದನ್ನು ಪ್ರಶ್ನಿಸಬೇಕಾಗಿದೆ.

ಮಾಧ್ಯಮ ಚರ್ಚೆಗಳು

ಈ ವಿಷಯದಲ್ಲಿ ಮಾಧ್ಯಮ ವರದಿಗಳು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾದ ಚರ್ಚೆಗಳು ನಡೆಯುತ್ತಿವೆ. ಇಲ್ಲಿ ದುರದೃಷ್ಟದಿಂದ ವಚನಗಳ ಆಳವಾದ ಅಧ್ಯಯನಕ್ಕಿಂತ ಘೋಷಣೆಗಳೇ ಮೇಲುಗೈ ಸಾಧಿಸುತ್ತಿವೆ. ಕೇವಲ ಮತ ಬ್ಯಾಂಕ್ ಗಳ ಮೇಲೆ ದೃಷ್ಟಿಯನ್ನಿರಿಸಿಕೊಂಡು ರಾಜಕೀಯ ಪಕ್ಷಗಳು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸುವ ಪ್ರವೃತ್ತಿ ಹೆಚ್ಚುತ್ತಿದೆ.

ಅಂತಿಮವಾಗಿ

“ಲಿಂಗಾಯತ ಹಿಂದು ಹೌದೇ ಅಲ್ಲವೇ?” ಎಂಬ ಪ್ರಶ್ನೆಗೆ ಒಂದು ಸಾಲಿನ ಉತ್ತರ ಸಾಧ್ಯವಿಲ್ಲ. ಆದರೆ ಒಂದು ವಿಷಯವಂತೂ ಸ್ಪಷ್ಟ:

ಬಸವಣ್ಣನ ಲಿಂಗಾಯತ ದರ್ಶನವನ್ನು ಹಿಂದು ಧರ್ಮದೊಳಗೆ ಬಲವಂತವಾಗಿ ಹೊಂದಿಸುವ ಪ್ರಯತ್ನವೂ, ಆ ದರ್ಶನದ ವೈಶಿಷ್ಟ್ಯವನ್ನು ನಿರಾಕರಿಸುವ ಪ್ರಯತ್ನವೂ – ಎರಡೂ ಬಸವ ತತ್ತ್ವಕ್ಕೆ ಮಾಡುವ ಅನ್ಯಾಯವೇ.

ಪ್ರತ್ಯೇಕ ಧರ್ಮದ ಮಾನ್ಯತೆ ಕೇಳುವುದು ದ್ರೋಹವೋ ಅಲ್ಲವೋ ಎಂಬುದನ್ನು ನಿರ್ಧರಿಸಬೇಕಾದದ್ದು ಘೋಷಣೆಗಳಿಂದಲ್ಲ. ವಚನ–ಇತಿಹಾಸ–ಸಾಮಾಜಿಕ ಆಚರಣೆಗಳ ನಿಷ್ಠಾವಂತ ಅಧ್ಯಯನದಿಂದ.

ಬಸವಣ್ಣನ ತತ್ತ್ವವನ್ನು ರಾಜಕೀಯದ ಕೈಗೊಂಬೆಯಾಗಿಸುವುದನ್ನು ನಿಲ್ಲಿಸದೆ ಹೋದರೆ ಸೋಲುವುದು ಬಸವ ಮಾನವತಾವಾದವೇ. ಎಚ್ಚರ!

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
7 Comments
  • ನನ್ನ ಸತ್ವ, ಇಷ್ಟಲಿಂಗ
    ನನ್ನ ತತ್ವ, ಬಸವ ತತ್ವ
    ನನ್ನ ಅಸ್ತಿತ್ವ ಪ್ರಜಾಪ್ರಭುತ್ವ
    ರಾಜಕೀಯ ಸಾಕು
    ಪ್ರಜಾಕೀಯ ಬೇಕು.
    ಬದಲಾವಣೆಯ
    ಗಾಳಿ ಬಿಸ ಬೇಕು
    ಜೆಸಿಬಿಯನ್ನು ಕಿತ್ತೆಸೆಯ ಬೇಕು.
    ನವ ಕರ್ನಾಟಕವ ಕಟ್ಟ ಬನ್ನಿ
    ರಾಮ ಕೃಷ್ಣರನ್ನು ಹಿಂದೆ ತಳ್ಳಿ
    ಬುದ್ದ ಬಸವ ಅಂಬೇಡ್ಕರನ್ನು
    ಮುನ್ನಲೆಗೆ ತನ್ನಿ.
    ಕನ್ನಡವ ಉಳಿಸೋಣ
    ಬಸವನ ಬೆಳೆಸೋಣ
    ಜೈ ಕನ್ನಡ ಭಾರತಿ
    ಜೈ ಬಸವ ಭಾರತ.

  • ಸಾಧ್ಯವಿಲ್ಲ ಎಂಬುದನ್ನು ದಯವಿಟ್ಟು “ಸಾಧ್ಯವಿಲ್ಲ”! ಎಂಬುದಾಗಿ ಓದಿಕೊಳ್ಳಿ.

  • ನನ್ನ ದೇಶ ಭಾರತ. ನನ್ನ ಧರ್ಮ ಲಿಂಗಾಯತ ನನ್ನ ತತ್ವ ವಚನ ತತ್ವ ,…. ಲಿಂಗಾಯತ ಪ್ರಗತಿಶೀಲ.. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ನಮ್ಮ ಬೆಂಬಲ..

  • ಅಣ್ಣ ಬಸವಣ್ಣ ನವರು ಕೊಟ್ಟಿರುವ ವಚನಾಮೃತ ಪಥದಲ್ಲಿ ಜೀವನ ನಡಿಸಿಕೊಂಡು ಹೋಗೋಣ ಬೊಗಳುವವರು ಬೊಗಳಿಕೊಂಡು ಹೋಗಳಿ

  • ರಾಷ್ಟ್ರ. ರಾಷ್ಟ್ರೀಯತೆ
    ಪಾಕಿಸ್ಥಾನ. ಪಾಕಿ
    ಬಲೂಚಿಸ್ತಾನ. ಬಲೂಚಿ
    ಅಫಘಾನಿಸ್ತಾನ. ಅಫಘಾನಿ
    ತುರ್ಕಿಸ್ಥಾನ ತುರ್ಕಿ
    ಹಿಂದುಸ್ಥಾನ ಹಿಂದೂ
    ಅರ್ಮೇನಿಸ್ಥಾನ. ಅರ್ಮೆನಿ,
    ಇಂಡಿಯಾ. ಇಂಡಿಯನ್
    ಭಾರತ. ಭಾರತೀಯ,ಇತ್ಯಾದಿ
    ಈ ರೀತಿ ನಾವು ಹಿಂದೂ ರಾಷ್ಟ್ರೀಯತೆಲ್ಲವರು. ಹಿಂದೂ ಧರ್ಮದ ವಲ್ಲ. ಅದಕ್ಕೆ ಒಂದು ಧ್ವಜ, ಒಂದು ಧರ್ಮ, ಒಬ್ಬ ಗುರು, ಒಂದು ದೈವ(ದೇವರು), ಒಂದು ಸರಳ ಭಾಷೆ, ಇತ್ಯಾದಿ ಇರಬೇಕು. ಹಿಂದೂ ಕೇವಲ ರಾಷ್ಟ್ರೀಯತೆ. ಅದೊಂದು ಧರ್ಮವಲ್ಲ. ಏಕೆಂದರೆ ಈ ಎಲ್ಲ ವಿಚಾರಗಳನ್ನು ನಾವು ಹಿಂದೂ ಧರ್ಮದಲ್ಲಿ

    • ಮಹಾನಂದಾತಾಯಿ ಹಿರೇಮಠ ಬಸವ ಮಂಟಪ ಮುಗುಳಿ ತಾ ಅಕ್ಕಲಕೋಟೆ ಜಿ ಸೋಲಾಪೂರ ಮಹಾರಾಷ್ಟ್ರ says:

      ಕರೆಕ್ಟ್.

  • ಹಿಂದು ಧರ್ಮವಲ್ಲ ಅದು ರಾಷ್ಟ್ರೀಯತೆ ಹಾಗಾದರೆ ಲಿಂಗಾಯತ ಹಿಂದು ಅಲ್ಲ ಅಂತಾ ಹೇಳಿದರೆ ರಾಷ್ಟ್ರ ದ್ರೋಹ ಆಗುವದಿಲ್ಲವೇ

Leave a Reply

Your email address will not be published. Required fields are marked *