ಬಸವಣ್ಣನ ನೆನೆಯದ ಭಕ್ತಿ ಹುರುಳಿಲ್ಲದ್ದು: ಡಾ. ರಮೇಶ ಕಲ್ಲನಗೌಡ್ರ

ಸಿದ್ದಣ್ಣ ಅಂಗಡಿ
ಸಿದ್ದಣ್ಣ ಅಂಗಡಿ

ಮುಳಗುಂದ

ಬಸವಾದಿ ಶರಣ ಸಂಕುಲದಲ್ಲಿ ಬಸವಣ್ಣನವರ ವಚನಗಳಲ್ಲಿ ತುಂಬ ವಿನೀತ ಭಾವ ಇರುತ್ತದೆ. ಅದೇ ಅಲ್ಲಮಪ್ರಭುಗಳ ವಚನಗಳತ್ತ ನೋಡಿದಾಗ ಅಲ್ಲಿ ಗಂಭೀರ ಭಾವ ಹುಟ್ಟುತ್ತದೆ. ವಚನ ಸಾಹಿತ್ಯದಲ್ಲಿ ಅಲ್ಲಮಪ್ರಭುಗಳ ವಚನ ಅರ್ಥೈಸುವಿಕೆ ಕಠಿಣತರವಾದದ್ದು, ಅದರಲ್ಲೂ ಅವರ ಬೆಡಗಿನ ವಚನಗಳು ಓದಲು ತುಸು ತ್ರಾಸವೆನ್ನಿಸಿದರೂ ಅದರಲ್ಲಿರುವ ಅರ್ಥ ಅದ್ಭುತವೆನ್ನಿಸುತ್ತದೆ.

ಬೆಡಗು ಅದು ಆಧ್ಯಾತ್ಮಿಕ ಬೆಡಗಾಗಿದ್ದು ಸಾಧಕರ ಪಾಲಿಗೆ ಆ ಬೆಡಗು ಬೆಳಗಿನಂತೆ ಗೋಚರಿಸುತ್ತದೆ. ಮತ್ತೊಂದು ವಿಶೇಷವೆಂದರೆ ಅಲ್ಲಮನ ವಚನಗಳಲ್ಲಿ ಬಯಲಾಗುವಿಕೆ ಅಂದರೆ ಸರ್ವವನ್ನು ತ್ಯಜಿಸಿದಾತ, ಸಂಪೂರ್ಣ ಬಯಕೆ ಇಲ್ಲದಾತ ಎಂಬರ್ಥದಲ್ಲಿರುತ್ತದೆ.

ಅಲ್ಲಮಪ್ರಭು ಒಂದರ್ಥದಲ್ಲಿ ಶರಣರಿಗೆ ಪ್ರಭುವೇ ಆಗಿದ್ದರು ಎಂದು ಪ್ರಾಧ್ಯಾಪಕ ಡಾ. ರಮೇಶ ಕಲ್ಲನಗೌಡ್ರ ಹೇಳಿದರು.

ಗದುಗಿನ ಬಸವದಳದ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ, ಮುಳಗುಂದದ ಶ್ರೀಬಾಲಲೀಲಾ ಮಹಾಂತ ಶಿವಯೋಗಿಗಳ ಗವಿಮಠದಲ್ಲಿ ನಡೆದ ‘ವಚನ ಶ್ರಾವಣ-೨೦೨೫’ರ ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವರ ವಚನ ನಿರ್ವಚನ ಮಾಡಿದರು.

ಎತ್ತೆತ್ತ ನೋಡಿದಡತ್ತತ್ತ ಬಸವನೆಂಬ ಬಳ್ಳಿ,
ಎತ್ತಿ ನೋಡಿದಡೆ ಲಿಂಗ ವೆಂಬ ಗೊಂಚಲು,
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ,
ಆಯತವು ಬಸವಣ್ಣನಿಂದ, ಸ್ವಾಯತವು ಬಸವಣ್ಣನಿಂದ ಸನ್ನಿಹಿತವು ಬಸವಣ್ಣನಿಂದ,
ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ, ಜಂಗಮ ಬಸವಣ್ಣನಿಂದ,
ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ
ಅತ್ತ ಬಲ್ಲಡೆ ನೀವು ಕೇಳಿರೇ, ಇತ್ತ ಬಲ್ಲಡೆ ನೀವು ಕೇಳಿರೇ,
ಬಸವ ಬಸವ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ ಶೂನ್ಯ ಕಾಣಾ ಕಲಿದೇವರದೇವಾ.

ಮಡಿವಾಳ ಮಾಚಿದೇವರು ಗಣಾಚಾರಿ ಶರಣರು. ಬಸವ ಧರ್ಮ, ವಚನ ಸಾಹಿತ್ಯ ರಕ್ಷಣೆಗಾಗಿನ ಅವರ ಹೋರಾಟ ಅವಿಸ್ಮರಣೀಯ. ಬಸವಣ್ಣನವರನ್ನು ಸ್ತುತಿಸುವ, ಅವರ ಸಮರ್ಥತೆಯನ್ನು ಸಾರುವ ವಚನವಿದಾಗಿದೆ. ಬಸವಣ್ಣ ಎಲ್ಲೆಡೆ ಹಬ್ಬಿರುವ ಬಳ್ಳಿ, ಇಡೀ ಕರುನಾಡ ತುಂಬೆಲ್ಲ ಹರಡಿದಂತಹದ್ದು, ಶರಣರು ಬಳ್ಳಿ ತೆರದಲ್ಲಿದ್ದಾರೆ. ಅವರನ್ನು ಮಾತನಾಡಿಸಿದರೆ ಅಲ್ಲಿ ಲಿಂಗತತ್ವವೇ ತುಂಬಿರುತ್ತಿತ್ತು. ಎಲ್ಲರೂ ಇಷ್ಟಲಿಂಗಧಾರಿಗಳಾಗಿದ್ದರು. ಇಲ್ಲಿ ಆಯತ, ಸ್ವಾಯತ, ಸನ್ನಿಹಿತ ಈ ಮೂರು ಶಬ್ದಗಳು ಮಹತ್ವದ್ದವಾಗಿವೆ.

ಆಯತವೆಂದರೆ ಇಷ್ಟಲಿಂಗ ತತ್ವ ಪಡೆದುಕೊಳ್ಳುವುದು. ಸ್ವಾಯತವೆಂದರೆ ಶರಣತತ್ವಗಳನ್ನು ಅಳವಡಿಸಿಕೊಳ್ಳುವುದು, ಸನ್ನಿಹಿತ ಆ ಲಿಂಗನಲ್ಲಿ ಪೂಜಿಸುತ್ತ ಲಿಂಗವೇ ತಾನಾಗುವುದು. ಬಸವಣ್ಣನೇ ಗುರುವಾಗಿ ಅರಿವನ್ನು ನೀಡಿದ, ಜಂಗಮ ಎಂಬ ಸಮಾಜವಾಗಿದೆ. ಪಾದೋದಕ ಎಂಬುದು ತತ್ವವಾಗಿದೆ. ಪ್ರಸಾದ ಪ್ರಸನ್ನ ಮನಸ್ಥಿತಿಯಾಗಿದೆ. ಅರಿವು, ಆಚಾರ, ಅನುಭಾವ ರೂಪದಲ್ಲಿ ಜ್ಞಾನ ನೀಡಿದ ಬಸವಣ್ಣ ಇಷ್ಟೆಲ್ಲಾ ಬಸವಣ್ಣನಿಂದಾದುದನ್ನು ನೀವು ಅರಿತಿದ್ದೀರಾ? ತಿಳಿದರೆ ನೀವು ಹೇಳಿರಿ. ಅರಿಯದಿದ್ದರೆ ನೀವು ಕೇಳಿರಿ ‘ಬಸವಾ ಬಸವಾ ಬಸವಾ’ ಎಂದು ಇಷ್ಟಲಿಂಗ ಮಜ್ಜನಕ್ಕೇರೆಯದವನ ಭಕ್ತಿ ಬಸವಣ್ಣ ನೆನೆಯದ ಭಕ್ತಿ ಹುರುಳಿಲ್ಲ ಎಂಬುದನ್ನು ಮಡಿವಾಳ ಮಾಚಿದೇವರು ಹೃದಯಂಗಮವಾಗಿ ಈ ವಚನದಲ್ಲಿ ಹೇಳಿದ್ದಾರೆಂದು ಕಲ್ಲನಗೌಡ್ರ ವಿಶ್ಲೇಷಿಸಿದರು.

ಬಸವ ದಳದ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ ಮಾತನಾಡಿದರು. ಹಿರಿಯರಾದ ಮಹದೇವಪ್ಪಾ ಬಟ್ಟೂರ ವೇದಿಕೆ ಮೇಲಿದ್ದರು. ಶೇಖರ ಕವಳಿಕಾಯಿ ಗದಗ ಜಿಲ್ಲಾ ಕದಳಿ ಸಮ್ಮೇಳನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಪಂಚಾಕ್ಷರಯ್ಯ ಮರಿದೇವರಮಠ ಅವರು ಬಸವ ಕವಿ ರಚಿಸಿದ ‘ಮಹಾಲಿಂಗ ಲೀಲೆ’ ಕುರಿತು ಪ್ರವಚನ ಮಾಡಿದರು.

ಬಸವದಳದ ಶರಣೆಯರ ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸರ್ವರನ್ನೂ ನ್ಯಾಯವಾದಿ ಕೆ. ಎಲ್. ಕರಿಗೌಡರ ಸ್ವಾಗತಿಸಿದರು. ಡಾ. ಎಸ್.ಸಿ. ಚವಡಿ ಹಾಗೂ ಶಿವಬಸು ಹಸಬಿ ನೇತೃತ್ವದಲ್ಲಿ ಮಠದ ಕಾರ್ಯಕರ್ತರು ಕಾರ್ಯಕ್ರಮ ಯಶಸ್ಸಿಗೆ ಶ್ರಮಿಸಿದರು.

ಕಾರ್ಯಕ್ರಮ ನಿರೂಪಣೆ ಶಿಕ್ಷಕರಾದ ಕುರುಬಗೌಳಿಯವರು ಮಾಡಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಪ್ರಸಾದ ದಾಸೋಹ ಸೇವೆಯನ್ನು ಶ್ರೀಮತಿ ಮಲ್ಲಮ್ಮ ಎಂ. ಬಟ್ಟೂರ ವಹಿಸಿಕೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bo3i1f468pxBcYJIXNRpTK

Share This Article
Leave a comment

Leave a Reply

Your email address will not be published. Required fields are marked *