ಬಸವಣ್ಣ ಉದ್ಯಾನ ಯೋಜನೆ ರೂಪಿಸಿದ ಈಶ್ವರ ಖಂಡ್ರೆಗೆ ಒಕ್ಕೂಟದ ಅಭಿನಂದನೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ:

‘ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ ಯೋಜನೆಗೆ’ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ ಹಿನ್ನಲೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆಯವರಿಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಅಭಿನಂದನೆ ತಿಳಿಸಿದ್ದಾರೆ.

ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವಮಂಟಪ ಸ್ಥಾಪಿಸುವ ಮೂಲಕ ಜಗತ್ತಿಗೆ ಪ್ರಪ್ರಥಮವಾಗಿ ಸಂಸತ್ತಿನ ಕಲ್ಪನೆ ನೀಡಿದರು. ಅಂದಿನ ಕಾಲದಲ್ಲಿ ತುಳಿತಕ್ಕೆ ಒಳಗಾಗಿರುವ ವಿವಿಧ ಸಮುದಾಯ ಕಾಯಕ ಜೀವಿಗಳ 770 ಪ್ರತಿನಿಧಿಗಳು ಅಂದಿನ ಅನುಭವ ಮಂಟಪದ ನಿರ್ಣಯದಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರೆಲ್ಲರೂ ಒಗ್ಗೂಡಿ ಪ್ರತಿನಿತ್ಯ ಅನುಭಾವ ನಡೆಸುತ್ತಿದ್ದರು. ಅವರ ಅನುಭಾವದಿಂದ ಹೊರಹೊಮ್ಮಿದ ವಚನ ಸಾಹಿತ್ಯ ಇಂದು ಸಕಲ ಜೀವಾತ್ಮರ ಕಲ್ಯಾಣ ಬಯಸುವ ವೈಶ್ವಿಕ ಸಾಹಿತ್ಯವಾಗಿದೆ.

ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳನ್ನು ಜನಮಾನಸದಲ್ಲಿ ಅಚ್ಚಳಿಯದೇ ಇರಲು, ತಾವು ಬೆಂಗಳೂರು ಮಹಾನಗರದಲ್ಲಿ ಅರಣ್ಯ ಇಲಾಖೆಯಿಂದ 153 ಎಕರೆ ಪ್ರದೇಶದಲ್ಲಿ ‘ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ ಯೋಜನೆಗೆ’ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ ಬೆಂಗಳೂರು ಮಹಾನಗರದಲ್ಲಿ ಅತ್ಯಗತ್ಯವಾದ ಶ್ವಾಸತಾಣ ಹಾಗೂ ಮನೋಲ್ಲಾಸ ಕೇಂದ್ರವಾಗಿ ಈ ಉದ್ಯಾನವನ್ನು ಅಭಿವೃದ್ಧಿಪಡಿಸಲು ರೂ.50 ಕೋಟಿ ಅನುದಾನ ಮಂಜೂರು ಮಾಡಿರುವುದು ನಮಗೆ ಅತ್ಯಂತ ಸಂತೋಷ ತಂದಿದೆ.

ಒಂದೂವರೆ ಶತಮಾನಗಳ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಉದ್ಯಾನವನ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಷಯ.

ತಮ್ಮ ಸರಕಾರದ ವತಿಯಿಂದ ಅನೇಕ ಬಸವಪರ ಕಾರ್ಯಗಳು ನಿರಂತರ ನಡೆಯುತ್ತಿವೆ. ತಮಗೆ ಮತ್ತು ಎಲ್ಲ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇವೆಂದು ಒಕ್ಕೂಟದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *