(ಅಕ್ಕನ ಅರಿವು, ಬಸವಾದಿ ಶರಣರ ಚಿಂತನಕೂಟ ಮತ್ತು ವಚನ ಅಧ್ಯಯನ ವೇದಿಕೆಯಿಂದ ನಡೆಯುತ್ತಿರುವ ಶ್ರಾವಣ ಮಾಸದ ಗೂಗಲ್ ಮೀಟ್ ನಲ್ಲಿ ನಡೆಯುತ್ತಿರುವ ಶಾರದಮ್ಮ ಪಾಟೀಲ -ಬದಾಮಿ ಅವರ ವಿಶೇಷ ದತ್ತಿಉಪನ್ಯಾಸದ ಎಂಟನೆಯ ದಿನದ ವರದಿ – ಆಗಸ್ಟ್ 11)
ಜನಪದವು ದೇಸಿಭಾಷೆಯ ಅಭಿವ್ಯಕ್ತಿ. ಶರಣ ಸಾಹಿತ್ಯ ಮತ್ತು ಜನಪದವು ಒಂದಕ್ಕೊಂದು ಪೂರಕವಾಗಿ ಬೆಳೆದವು.
ತಮ್ಮ ಕೆಲಸಕಾರ್ಯದ ಅನುಭವಗಳನ್ನು, ದಿನನಿತ್ಯದ ಆಗುಹೋಗುಗಳನ್ನು,ದೇವರಮೇಲಿನ ಭಕ್ತಿಯನ್ನು ತಮ್ಮ ದೈನಂದಿನ ಬದುಕಿನಲ್ಲಿ ಕುಟ್ಟುವಾಗ, ಬೀಸುವಾಗ, ಹರಗುವಾಗ, ಹಬ್ಬ-ಹರಿದಿನಗಳಲ್ಲಿ ಹೀಗೆ ಪ್ರತಿಯೊಂದು ಕೆಲಸ ಮಾಡುವಾಗ
ತಮ್ಮ ತ್ರಿಪದಿಗಳ ಮೂಲಕ ಜನರು ತಮ್ಮ ಒಳಗಣ ಭಾವಗಳನ್ನು ಅಭಿವ್ಯಕ್ತಿ ಪಡಿಸುತ್ತಿದ್ದರು.ಅವು ಒಬ್ಬರಿಂದ ಒಬ್ಬರ ಮೂಲಕ ಹರಡಿ ಶಾಶ್ವತವಾಗಿ ಉಳಿದವು ಎಂದು ಉಪನ್ಯಾಸಕರಾದ ಡಾ. ಸೋಮಶೇಖರ ವಾಲಿ ಅವರು
ತಮ್ಮ ಮಾತುಗಳನ್ನು ಪ್ರಾರಂಭ ಮಾಡಿದರು.
ಪ್ರತಿಯೊಂದನ್ನೂ ಮಧ್ಯ ಮಧ್ಯ ಹಾಡುತ್ತಲೇ ವಿವರಿಸಿದ ವಾಲಿ ಸರ್ ಅವರ ಉಪನ್ಯಾಸ ಕೇಳುಗರಿಗೆ ಜಾನಪದ ಲೋಕದಲ್ಲಿಯೇ ವಿಹರಿಸಿದ ಅನುಭವವಾಯ್ತು ಎಂದರೆ ತಪ್ಪಾಗಲಾರದು.
” ಶರಣರ ನೆನೆದರ ಸರಗಿಯ ಇಟ್ಟಂಗ “ಎನ್ನುತ್ತಾ ತಮ್ಮ ಪ್ರತಿನಿತ್ಯದ ಕಾರ್ಯವನ್ನು ಶರಣರನ್ನು ನೆನೆಯುವುದರ ಮೂಲಕ ಪ್ರಾರಂಭ ಮಾಡುತ್ತಿದ್ದರು, ಎಂದು ಹೇಳುತ್ತಾ ” ಜಾತಿಯೊಳು ಮಾದರನು ನೀತಿಯೊಳು ಶಿವಶರಣ” ಎನ್ನುವ ಮಾದಾರ ಚೆನ್ನಯ್ಯನವರ ಬಗೆಗೆ ಹಾಡಿದ ತ್ರಿಪದಿ, ” ಶಿವನೇ ಶರಣರು ಶರಣರೇ ಶಿವನವ್ವ ” ಎನ್ನುವ ಅವರ ಭಕ್ತಿ, ” ಕಾಯಕವೇ ಶಿವಭಕ್ತಿ ಕಾಯಕವೇ ಭಜನೆ ಕಾಯಕವೇ ಶಿವಪೂಜೆ ಕಾಯಕವೇ ಕೈಲಾಸ” ಎನ್ನುವ ತತ್ವವನ್ನು ನಂಬಿ ಬದುಕಿ ಬಾಳಿದವರು ನಮ್ಮ ಜನಪದೀಯರು ಎನ್ನುವುದನ್ನು ನಮ್ಮೊಂದಿಗೆ ಹಂಚಿಕೊಂಡರು.
“ಬಸವಣ್ಣ ದೆಸೆದೆಸೆಗೆ ನಿನ್ನೆಸರು” ಎನ್ನುತ್ತಾ ಅವರು ಕೆಲಸ ಮಾಡುವ ಪರಿ, “ಬನವಾಸಿ ಕುಂತಳಕೆ
ಅಲ್ಲಮನು ಮನೆಮಾತಾದ” ಎನ್ನುವ ಪ್ರಭುದೇವರ ಮೇಲೆ ಹಾಡಿದ ತ್ರಿಪದಿ,” ಪಲ್ಲಕ್ಕಿ ಹೊತ್ತವರ ಮೆಲ್ಲಗ ನಡಿಯಿರಿ
ಕಾಲ ಜಾರೀತ ಪಲ್ಲಕ್ಕಿಯಾಗಿನ ಮುತ್ತು ಉದರ್ಯಾವ” ಎನ್ನುವ ಸಿದ್ದರಾಮೇಶ್ವರ ಅವರ ಬಗೆಗಿನ ತ್ರಿಪದಿ, ಮಲ್ಲಿಗೆ ಹೂವು ಪಲ್ಲಕ್ಕಿ ಮ್ಯಾಲ ಇಟ್ಟು ಸಾರ್ಥಕ ಪಡೆದೆ ಎನ್ನುವ ಗುಡ್ಡಾಪುರದ ದಾನಮ್ಮ ನವರ ಮೇಲಿನ ತ್ರಿಪದಿ, ಮಡಿವಾಳ ಮಾಚಿದೇವರು ಬರುವಾಗ ಮುನ್ನೂರು ದೀವಟಿಗೆ ಹಚ್ಚಿದ ಹಾಗೆ ಕಾಣುವ ದೃಶ್ಯ, ಹೀಗೆ ಕುಂಬಾರ ಗುಂಡಯ್ಯ, ಮೇದಾರ ಕೇತಯ್ಯ, ಕಿನ್ನರಿ ಬೊಮ್ಮಯ್ಯ, ಅಮ್ಮುಗೆ ದೇವಯ್ಯ , ಹೂಗಾರ ಮಾದಯ್ಯ, ಬಿಳಿಹಾಲ ಬೊಮ್ಮಯ್ಯ, ಒಕ್ಕಲಿಗ ಮಾದಯ್ಯ, ಬಹುರೂಪಿ ಚೌಡಯ್ಯ, ಎಂದು ಎಲ್ಲ ಶರಣರ ಬಗೆಗಿನ ಹಾಡುಗಳನ್ನು
ನೆನೆಯುತ್ತಾ, ಜಾನಪದದ ಸೊಬಗನ್ನು ಇನ್ನಷ್ಟು ಹೆಚ್ಚಿಸಿದರು.
“ಎಲ್ಲ ಬಲ್ಲಿದನಯ್ಯ
ಕಲ್ಯಾಣ ಬಸವಯ್ಯ
ಚೆಲ್ಲಿದನು ತಂದು
ಶಿವನ ಬೆಳಕ” ಎನ್ನುವ ಬಸವಣ್ಣನವರನ್ನು ನೆನೆಯುವ ತ್ರಿಪದಿ “ಮುಗ್ದ ಶರಣರ ಹಾಡು
ಸಿದ್ಧಿ ಮಂತ್ರವ ನೋಡು” ಎಂದು ವಚನಗಳ ಬಗೆಗಿನ ಸಾಲುಗಳು, “ಬಸವಣ್ಣ ಬರುವಾಗ ಬಿಸಿಲು ಬೆಳದಿಂಗಳು
ಮೊಗ್ಗು ಮಲ್ಲಿಗೆ ಅರಳ್ಯಾವ ಗೊನೆಬಾಗಿ ಹಾಲ ಸುರಿದಾವ” ಎನ್ನುವ ಬಸವಣ್ಣನವರ ಬಗೆಗೆ ಅವರಿಗಿರುವ ಭಕ್ತಿ, ಮದುವೆಮನೆಯಲ್ಲಿ ಮತ್ತು ಇನ್ನಿತರ ಮನೆಯಸಮಾರಂಭಗಳಲ್ಲಿ ಆರತಿ ಮಾಡುವಾಗ ಗಂಡನ ಹೆಸರು ಹೇಳುವ ಸೊಗಡು, ಮಂಗಳಾರತಿ ಹಾಡುವಾಗ ಎಲ್ಲೆಲ್ಲೂ ಶರಣರ ಹೆಸರು ಸೇರಿಸಿಕೊಂಡು ಹಾಡುತ್ತಿದ್ದರು ಎನ್ನುವ ವೈಶಿಷ್ಟ್ಯವನ್ನು ಹಂಚಿಕೊಂಡರು.
ಒಟ್ಟಾರೆ ಅವರ ಜಾನಪದ ಸೊಗಡಿನ ಹಾಡು ಮತ್ತು ಮಾತುಗಳಿಂದ ಜಾನಪದ ಲೋಕಕ್ಕೆ ನಮ್ಮನ್ನೆಲ್ಲ ಕೊಂಡೊಯ್ದರು ಎಂದರೆ ಅತಿಶಯೋಕ್ತಿಯಾಗಲಾರದು.
ಕೊನೆಯಲ್ಲಿ ನಮ್ಮೆಲ್ಲರ ಮಾರ್ಗದರ್ಶಕರಾದ ಡಾ. ಶಶಿಕಾಂತ ಪಟ್ಟಣ ಅವರು ಬಿ. ಎಸ್. ಗದ್ದಗಿಮಠ ಅವರು ಜಾನಪದ ಲೋಕಕ್ಕೆ ತಮ್ಮ ಅಪಾರವಾದ ಕೊಡುಗೆ ಸಲ್ಲಿಸಿದ್ದು, ಹುಕ್ಕೇರಿ ಬಾಳಪ್ಪ, ಜೋಳದರಾಶಿ ದೊಡ್ಡನಗೌಡರು, ಮತ್ತು ಮುಂತಾದ ಪ್ರಸಿದ್ಧ ಜಾನಪದ ಹಾಡುಗಾರರನ್ನು ಗೌರವದಿಂದ ಸ್ಮರಿಸಿಕೊಂಡರು. ಜನಪದ ಸಾಹಿತ್ಯ ಉತ್ತರ ಕರ್ನಾಟಕದಲ್ಲಿ ಹಾಸುಹೊಕ್ಕಾಗಿದೆ ಎನ್ನುವುದನ್ನು ಹಂಚಿಕೊಂಡರು. ಬಸವಣ್ಣ ಅವರಿವರೆನ್ನದೆ ಎಲ್ಲರನ್ನೂ ಅಪ್ಪಿಕೊಂಡ ಎಂದು ನೆನೆಯುತ್ತಾ, ” ಬಸವಣ್ಣನ ಹಾಗೆ ಮಗ ಬೇಕು ” ಎನ್ನುವ ಜನಪದೀಯರ ಪ್ರೀತಿ ನೆನೆದರು.
ಸಂವಾದದಲ್ಲಿ ಪಾಲ್ಗೊಂಡ ಎಲ್ಲರೂ ವಾಲಿ ಅವರ ಉಪನ್ಯಾಸದ ಬಗೆಗೆ ಮೆಚ್ಚುಗೆಯ ಮಾತುಗಳನ್ನಾಡಿ, ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡರು.ಮಹದೇವ ಹೊರಟ್ಟಿ ಸರ್ ಅವರು ತಮ್ಮ ಅಜ್ಜನ ಜೊತೆಗೆ ಕಣಕ್ಕೆ ಹೋಗುವಾಗ ಅಜ್ಜ ಹಾಡುತ್ತಿದ್ದ ” ಬೆಳ್ಳಿ ಮೂಡಿತೋ ಅಣ್ಣ ಬಸವಣ್ಣ ಬರುವಾಗ “ಎನ್ನುವುದನ್ನು ನೆನಪು ಮಾಡಿಕೊಳ್ಳುತ್ತಾ,ದೆಹಲಿಯ ಸಮಾರಂಭದಲ್ಲಿ ಅತಿಥಿಗಳು ಮಾದಾರ ಚೆನ್ನಯ್ಯನವರ 13 ವಚನಗಳನ್ನು ಪ್ರಸ್ತಾಪ ಮಾಡಿದ್ದನ್ನು ನಮ್ಮ ಜೊತೆಗೆ ಅಭಿಮಾನದಿಂದ ಹಂಚಿಕೊಂಡರು.
ಸ್ವಾಗತ-ಪ್ರಾಸ್ತವಿಕ-ಪರಿಚಯದ ನುಡಿಗಳನ್ನು ಡಾ. ಶಾರದಾಮಣಿ ಹುನಶಾಳ ಅವರು ನಡೆಸಿಕೊಟ್ಟರು. ವಚನ ಪ್ರಾರ್ಥನೆ ಕುಮಾರಿ ಗ್ರೀಷ್ಮಾ, ವಚನಮಂಗಳವನ್ನು ಶರಣೆ ನೈನಾ ಗಿರಿಗೌಡರ ಅವರು ನಡೆಸಿಕೊಟ್ಟರು. ಕಾರ್ಯಕ್ರಮ ಎಂದಿನಂತೆ ಯಶಸ್ವಿಯಾಗಿ ನಡೆಯಿತು.