ಬಸವಣ್ಣನ ಫೋಟೋ ಇಡದವರು, ವಚನ ದರ್ಶನ ಬರೆದಿದ್ದಾರೆ: ಜೆ ಎಸ್ ಪಾಟೀಲ್

ಬಸವ ಮೀಡಿಯಾ
ಬಸವ ಮೀಡಿಯಾ

ಹರಪನಹಳ್ಳಿ:

ಅಂದು ಶರಣರ ಕಗ್ಗೊಲೆ ಮಾಡಿ, ವಚನಗಳನ್ನು ಸುಟ್ಟ ಸಂತತಿ ಇಂದು ಲಿಂಗಾಯತ ಸಂಸ್ಕೃತಿಯನ್ನು ನಾಶ ಮಾಡುವ ಸಲುವಾಗಿ ವಚನದರ್ಶನ ಎಂಬ ಪುಸ್ತಕ ಬರೆದು ಇಡೀ ನಾಡಿನಾದ್ಯಂತ ಬಿಡುಗಡೆ ಮಾಡಿದ್ದಾರೆ. ಇದೇ 29ರಂದು ದೆಹಲಿಯಲ್ಲಿ ಕೂಡ ಅವರು ಬಿಡುಗಡೆ ಮಾಡ್ತಾ ಇರುವಂತಹ ಸಂದಿಗ್ಧ ಕಾಲಘಟ್ಟದಲ್ಲಿ ನಾವಿದ್ದೇವೆ. ಆ ಒಂದು 30 ಸಾವಿರ ರುಪಾಯಿ ಬಂಡವಾಳದ ಪುಸ್ತಕವನ್ನು, ಮೂರರಿಂದ ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಿ ಪ್ರತಿ ಜಿಲ್ಲೆಯಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ.

ತಮ್ಮ ಮನೆಯಲ್ಲಿ ಬಸವಣ್ಣನ ಫೋಟೋ ಇಡದೇ ಇರುವವರು, ತಮ್ಮ ಸಂಘಟನೆಗಳಲ್ಲಿ ವಚನಗಳನ್ನು ಪಠಣ ಮಾಡದೇ ಇರುವವರು ಮತ್ತು ಯಾವತ್ತೂ ಲಿಂಗಾಯತ ಧರ್ಮ, ಸಂಸ್ಕೃತಿಯನ್ನು ತಮ್ಮದಾಗಿಸಿಕೊಳ್ಳದೇ ಇರುವಂತಹ ಜನಾಂಗ ಇವತ್ತು ವಚನದರ್ಶನ ಎಂಬ ಪುಸ್ತಕ ಬರೆದು, ಕಲ್ಯಾಣದಲ್ಲಿ ಶರಣರದ್ದು ಕ್ರಾಂತಿಯಲ್ಲ, ಇದೆಲ್ಲ ಕಟ್ಟುಕಥೆಯೆಂದು ಅಪಚಾರ ಎಸಗುತ್ತಿದ್ದಾರೆಂದು ಶರಣತತ್ವ ಚಿಂತಕ ಡಾ.ಜೆ.ಎಸ್ ಪಾಟೀಲ ಹೇಳಿದರು.

ಅವರು ಹರಪನಹಳ್ಳಿ ತಾಲೂಕು ಕಮ್ಮತ್ತಹಳ್ಳಿ ವಿರಕ್ತಮಠದ ಶ್ರೀ ಚನ್ನಬಸವ ಮಹಾಶಿವಯೋಗಿಗಳವರ 18ನೇ ವರ್ಷದ ಸ್ಮರಣೋತ್ಸವ ಹಾಗೂ ಬಸವತತ್ವ ಸಮ್ಮೇಳನದಲ್ಲಿ ಅನುಭಾವ ನುಡಿಗಳನ್ನು ಆಡುತ್ತಿದ್ದರು.

ಮೈಗಳ್ಳರು, ಪುರೋಹಿತಶಾಹಿಗಳು ತಮ್ಮ ಉಪಜೀವನಕ್ಕಾಗಿ ಎಲ್ಲ ಬಗೆಯ ಬಹುದೇವೋಪಾಸನೆ, ಬಹುದೇವರುಗಳನ್ನು ಸೃಷ್ಟಿ ಮಾಡಿದ್ದಾರೆ. ನೀವ್ಯಾರು ಓದಿ ಬರೆದು ಮುಂದೆ ಹೋಗಬಾರದು, ಸದಾ ಕಾಲ ದೇವರು ಮತ್ತು ಧರ್ಮದ ನಶೆ ಏರಿಸಿಕೊಂಡು ಮೌಢ್ಯದಲ್ಲಿ ಬಿದ್ದಿರಬೇಕೆಂಬ ಅವರ ಉದ್ದೇಶದ ವಿರುದ್ಧ ಹುಟ್ಟಿದ್ದು ಲಿಂಗಾಯತ ಧರ್ಮ.

ಬಸವ ತಂದೆ ಈ ಧರ್ಮಕ್ಕೆ ಮೌಡ್ಯಗಳ ಆಚೆಗೆ ಹೋಗಿ ವೈಜ್ಞಾನಿಕ, ವೈಚಾರಿಕ ತಳಹದಿಯ ಮೇಲೆ ಇಷ್ಟಲಿಂಗ ಅನುಸಂಧಾನ ಪದ್ಧತಿ ಕೊಡುವ ಮೂಲಕ 900 ವರ್ಷಗಳ ಹಿಂದೆ ನಮ್ಮನೆಲ್ಲ ರಕ್ಷಿಸಿ ಹೋಗಿದ್ದಾರೆ. ಇದೀಗ ಲಿಂಗಾಯತ ಧರ್ಮ, ಸಂಸ್ಕೃತಿ ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಲ್ಲಿ ಕುಳಿತಿರುವ ಪೂಜ್ಯರ ಮೇಲೆ ದೊಡ್ಡ ಜವಾಬ್ದಾರಿ ಇದೆಯೆಂದರು.

ಸಮಾರಂಭದ ಅಧ್ಯಕ್ಷತೆಯನ್ನು ಪೂಜ್ಯ ಗುರುಬಸವ ಮಹಾಸ್ವಾಮಿಗಳು ವಿರಕ್ತಮಠ ಪಾಂಡೋಮಟ್ಟಿ, ಕಮ್ಮತಹಳ್ಳಿ ವಹಿಸಿ ಮಾತನಾಡಿದರು.

ನೇತೃತ್ವವನ್ನು ಸೋಮಶಂಕರ ಮಹಾಸ್ವಾಮಿಗಳು, ಬಸವಲಿಂಗ ಸ್ವಾಮಿಗಳು, ಮಹಾಂತ ಶಿವಯೋಗಿ ಸ್ವಾಮಿಗಳು, ಜಯಬಸವಾನಂದ ಸ್ವಾಮಿಗಳು, ಶಾಂತಲಿಂಗ ದೇಶಿಕೇಂದ್ರ ಸ್ವಾಮಿಗಳು ವಹಿಸಿದ್ದರು.

2023-24 ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಮ್ಮತಹಳ್ಳಿ ಬಸವಗಳ ಬಳಗ ಭಜನಾ ಸಂಘದವರು ಪ್ರಾರ್ಥನೆಗೈದರು.
ಚನ್ನಬಸವ ಮಹಾಶಿವಯೋಗಿಗಳ ಭಾವಚಿತ್ರ ಮೆರವಣಿಗೆ ನಡೆಯಿತು, ಮೆರವಣಿಗೆಯಲ್ಲಿ ಜನಪದ ಕಲಾತಂಡಗಳು ಭಾಗವಹಿಸಿದ್ದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ನೀಡಿತು.

ಆರಂಭದಲ್ಲಿ ಬಸ್ಸಮ್ಮ ಕಲ್ಲಹಳ್ಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಇವರಿಂದ ಷಟಸ್ಥಲ ಧ್ವಜಾರೋಹಣ ನಡೆಯಿತು.

ಜೆ.ಎಲ್.ಎಂ. ದಾವಣಗೆರೆ ಜಿಲ್ಲಾಧ್ಯಕ್ಷ ರುದ್ರಮುನಿ ಆವರಗೆರೆ, ಕಾರ್ಯದರ್ಶಿ ಮರುಳಸಿದ್ದಯ್ಯ ಬಸವನಾಳ, ಮಲೆಬೆನ್ನೂರ ನರೇಶಪ್ಪ, ಕೆಂಚನಗೌಡ್ರು, ರಾಜೇಶ, ಮಂಜುನಾಥ, ನಂಜನಗೌಡ್ರು, ಡಿ. ಅಣ್ಣಪ್ಪ, ಬಿ. ಮಹೇಶ, ಕೋರಿ ಹಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *