ಕೂಡಲಸಂಗಮ
ಬಸವಣ್ಣನವರ ಕುರಿತು ಮುರ್ಖತನದ ಮಾತುಗಳನ್ನು ಯಾರು ಆಡಬಾರದು. ರಾಜಕಾರಣಿಗಳು, ಬುದ್ಧಿಜೀವಿಗಳು ಬಸವಣ್ಣನವರ ತತ್ವ, ಸಿದ್ಧಾಂತವನ್ನು ಸಮಗ್ರವಾಗಿ ಅಧ್ಯಯನ ಮಾಡಿ ಮಾತನಾಡಬೇಕು, ಎಂದು ಬಸವ ಕಲ್ಯಾಣ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಅಧ್ಯಕ್ಷೆ ಡಾ. ಅಕ್ಕ ಗಂಗಾಂಬಿಕೆ ಹೇಳಿದರು.
ಬಸವ ಧರ್ಮ ಪೀಠ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ 38ನೇ ಶರಣ ಮೇಳದ ಮಹಿಳಾ ಗೋಷ್ಠಿ ಹಾಗೂ ಪುರುಷ ಅಹಂಕಾರ ಚಿಂತನಗೋಷ್ಠಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಆಧುನಿಕ ಸಮಾಜದಲ್ಲಿ ಮೂಢನಂಬಿಕೆಗಳು ಅಧಿಕಗೊಳ್ಳುತ್ತಿರುವುದು ದುರಂತ. ಇವುಗಳನ್ನು ಹೊಗಲಾಡಿಸಲು ಮಹಿಳಾ ಜಂಗಮಮೂರ್ತಿಗಳ ಅಗತ್ಯ ಇದೆ ಎಂದರು.
ನಮ್ಮ ಜ್ಞಾನ ಸಿಮೀತ. ಶರಣರ ಜ್ಞಾನ ಸಿಮಾತೀತವಾಗಿದೆ. 12ನೇ ಶತಮಾನದಲ್ಲಿ ಶರಣರು ಕಂಡ ಸತ್ಯಗಳು 21ನೇ ಶತಮಾನದಲ್ಲಿ ಸಾಕಾರಗೊಳ್ಳುತ್ತಿರುವುದೇ ಅವರ ಜ್ಞಾನಕ್ಕೆ ಹಿಡಿದ ಕೈಗನ್ನಡಿ.
ಬೆಂಗಳೂರು ಬಸವ ತತ್ವ ಪ್ರಚಾರಕಿ ಭಾರತಿ ಕೆಂಪಯ್ಯ ಮಾತನಾಡಿ ಅಪೇಕ್ಷೆಗಳು ಹೆಚ್ಚಾದಾಗ, ಸಾಧನೆ ಕಡಿಮೆಯಾದಾಗ ಅಹಂಕಾರ ಬರುವುದು. ಭಕ್ತಿ ಇರುವಲ್ಲಿ ಅಹಂಕಾರಕ್ಕೆ ಜಾಗವಿಲ್ಲ ಎಂದರು.
ಬೀರೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಭಾಗ್ಯಮ್ಮ ಜಿ.ಎಂ. ಮಾತನಾಡಿ, ಶರಣರು ಅಂತರಂಗ ಶುದ್ಧಿ ಮಾಡುವ ಸಾಹಿತ್ಯವನ್ನು ಬಿಟ್ಟು ಹೋಗಿದ್ದಾರೆ. ನಾವು ಅಧ್ಯಯನ ಮಾಡುವ ಕಾರ್ಯ ಮಾಡಬೇಕು ಎಂದರು.
ಬಸವ ಧರ್ಮ ಪೀಠದ ಮಾತೆ ಗಂಗಾದೇವಿ, ಮನಗೂಳಿ ವಿರಕ್ತ ಮಠದ ವಿರತೀಶಾನಂದ ಸ್ವಾಮೀಜಿ, ನಾಗನೂರು ಗುರು ಬಸವ ಮಠದ ಬಸವಗೀತಾ ತಾಯಿ, ಮಹಾರಾಷ್ಟ್ರ ಮುಗಳಿ ಬಸವ ಮಂಟಪದ ಮಹಾನಂದ ತಾಯಿ, ಕಲಬುರ್ಗಿ ಅಕ್ಕಮಹಾದೇವಿ ಮಠದ ಪ್ರಭುಶ್ರೀ ತಾಯಿ ಮಾತನಾಡಿದರು.