ಬಸವ ಕಲ್ಯಾಣ
ಗುರು ಬಸವಣ್ಣನವರ ಅಂತಿಮ ಜೀವನದ ಬಗ್ಗೆ ಶಾಸಕ ಬಸವನ ಗೌಡ ಯತ್ನಾಳ್ ಅಸಂಬದ್ಧವಾಗಿ ಮಾತನಾಡಿದ್ದಾರೆ. ಈ ಗಂಡಾಂತರದ ಕಾಲ ಘಟ್ಟದ ಬಗ್ಗೆ ಬಸವಣ್ಣನವರು ತಮ್ಮ ವಚನಗಳ ಮೂಲಕವೇ ಮನೋಜ್ಞವಾಗಿ ಪ್ರಸ್ತಾಪಿಸಿದ್ದಾರೆ. ಇದನ್ನು ಯತ್ನಾಳ್ ಅವರು ಗಮನಿಸಲಿ.
ಗುರು ಬಸವಣ್ಣನವರ ಆತ್ಮಸ್ಥೈರ್ಯ ವಚನಗಳು
(ಬಸವಣ್ಣನವರು ಹೇಡಿಗಳಲ್ಲ; ಪಲಾಯನವಾದಿಗಳೂ ಅಲ್ಲ ಅವರು ಮನಶಾಸ್ತ್ರಜ್ಞಾನ ಹೊಂದಿದ ದಾರ್ಶನಿಕರು)
1) ಆರು ಮುನಿದು ನಮ್ಮನೇನ ಮಾಡುವರು ಊರು ಮುನಿದು ನಮ್ಮನೆಂತು ಮಾಡುವರು ನಮ್ಮ ಕುನ್ನಿಗೆ ಕೂಸ ಕೊಡಬೇಡ. ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ. ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ, ನಮಗೆ ನಮ್ಮ ಕೂಡಲಸಂಗನುಳ್ಳನ್ನಕ್ಕ.
2) ಹಲವು ಕೊಂಬಿಂಗೆ ಹಾಯಲುಬೇಡ,
ಬರುಕಾಯಕ್ಕೆ ನೀಡಲುಬೇಡ,
ಲೋಗರಿಗೆ ಕೊಟ್ಟು ಭ್ರಮಿತನಾಗಿರಬೇಡ.
ಆಚಾರವೆಂಬುದು ಹಾವಸೆಗಲ್ಲು,
ಭಾವತಪ್ಪಿದ ಬಳಿಕ ಏಗೈದಡಾಗದು.
ಅಂಜದಿರು, ಅಳುಕದಿರು, ಪರದೈವಕ್ಕೆರಗದಿರು,
ಕೂಡಲಸಂಗಯ್ಯನ ಕೈಯಲು ಈಸುವುದೆನ್ನ ಭಾರ.
3) ಆನೆ ಅಂಕುಶಕ್ಕೆ ಅಂಜುವುದೆ, ಅಯ್ಯಾ,
ಮಾಣದೆ ಸಿಂಹದ ನಖವೆಂದು ಅಂಜುವುದಲ್ಲದೆ? ಆನೀ ಬಿಜ್ಜಳಂಗಜುವೆನೆ, ಅಯ್ಯಾ, ಕೂಡಲಸಂಗಮದೇವಾ, ನೀನು ಸರ್ವಜೀವ ದಯಾಪಾರಿಯಾದ ಕಾರಣ
ನಿನಗಂಜುವೆನಲ್ಲದೆ?
4)ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು,
ಒರೆಯಾವಿನ ಬೆನ್ನ ಹರಿಯಲದೇಕಯ್ಯಾ
ಲಜ್ಜೆಗೆಡಲೇಕೆ ನಾಣುಗೆಡಲೇಕೆ
ಕೂಡಲಸಂಗಮದೇವನುಳ್ಳನ್ನಕ್ಕ
ಬಿಜ್ಜಳನ ಭಂಡಾರವೆನಗೇಕಯ್ಯಾ.
5) ಭವಿ ಬಿಜ್ಜಳನ ಗದ್ದುಗೆ ಕೆಳಗೆ ಕುಳ್ಳಿರ್ದು ಓಲೈಸಿಹೆನೆಂದು ನುಡಿವರಯ್ಯಾ ಪ್ರಮಥರು.’, ’ಅರಸು ವಿಚಾರ, ಸಿರಿಯು ಶೃಂಗಾರ ಸ್ಥಿರವಲ್ಲ ಮಾನವಾ.’, ’ಅರಸರಿಯದ ಬಿಟ್ಟಿ’ ಕಾಣಿರೋ ಕೂಡಲ ಸಂಗಮದೇವಾ.
6)ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ,
ಭಕ್ತರ ಮನೆಯ ತೊತ್ತಾಗಿಪ್ಪುದು ಕರ ಲೇಸಯ್ಯಾ.ತಾರೌ ಅಗ್ಘವಣಿ, ನೀಡೌ ಪತ್ರೆಯ, ಲಿಂಗಕ್ಕೆ ಬೋನವ ಹಿಡಿಯೌ ಎಂಬರು.
ಕೂಡಲಸಂಗನ ಮಹಾಮನೆಯಲ್ಲು
ಒಕ್ಕುದನುಣೌ ತೊತ್ತೇ ಎಂಬರು.
7)ಅಂಜದಿರು ಅಳುಕದಿರು,
ಅಂಜದಿರು ಅಳುಕದಿರು, ಕುಂದದಿರು ಕುಸಿಯದಿರು.
ಏನೊ ಎಂತೊ ಎಂದು ಚಿಂತಿಸದಿರು,
ನಿನ್ನ ನಾನೇನುವನೂ ಬೇಡೆ, ಕೂಡಲಸಂಗಮದೇವಾ.
8) ಸ್ನೇಹ ತಪ್ಪಿದಠಾವಿನಲ್ಲಿ ಗುಣವನರಸುವರೆ ಅಯ್ಯಾ
ಹೂ ಬಾಡಿದಲ್ಲಿ ಪರಿಮಳವನರಸುವರೆ ಅಯ್ಯಾ ಎನ್ನ ತಂದೆ ಕೂಡಲಸಂಗಮದೇವಾ
ತೊರೆ ಇಳಿದಡೆ ಅಂಬಿಗಂಗೇನುಂಟು.
9)ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ. ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ. ಕೇಳು, ಕೂಡಲಸಂಗಮದೇವಾ, ಮರಣವೆ ಮಹಾನವಮಿ.
10) ಅಂಕ ಕಂಡಾ, ಕೋಲಾಸೆ ಮತ್ತೇಕಯ್ಯಾ
ಲೆಂಕ ಕಂಡಾ, ಪ್ರಾಣದಾಸೆ ಮತ್ತೇಕಯ್ಯಾ
ಭಕ್ತ ಕಂಡಾ, ತನುಮನಧನದಾಸೆ ಮತ್ತೇಕಯ್ಯಾ
ನಿಮ್ಮ ಅಂಕೆಗೆ ಝಂಕೆಗೆ ಶಂಕಿತನಾದಡೆ
ಎನ್ನ ಲೆಂಕತನಕ್ಕೆ ಹಾನಿ ಕೂಡಲಸಂಗಮದೇವಾ.
11) ಅಂಜಿದಡೆ ಮಾಣದು, ಅಳುಕಿದಡೆ ಮಾಣದು, ವಜ್ರಪಂಜರದೊಳಗಿದ್ದಡೆ ಮಾಣದು, ತಪ್ಪದುವೋ ಲಲಾಟಲಿಖಿತ.
ಕಕ್ಕುಲತೆಗೆ ಬಂದಡೆ ಆಗದು ನೋಡಾ.
ಧೃತಿಗೆಟ್ಟು, ಮನ ಧಾತುಗೆಟ್ಟಡೆ ಅಪ್ಪುದು ತಪ್ಪದು, ಕೂಡಲಸಂಗಮದೇವಾ.
ಲಿಂಗೈಕ್ಯ ವಚನಗಳು.
ಬಸವಣ್ಣನವರು ಇಚ್ಛಾಮರಣತ್ವ(ಯೋಗ ಸಾಧನೆಯ ಮೂಲಕ) ಹೊಂದಿರುವ ಸಾಧ್ಯತೆಯ ವಚನಗಳು.
1) ಅಯ್ಯಾ ಹಿಂದೆಯಾನು ಮಾಡಿದ ಮೆರಯಿಂದ ಬಂದೇನಿ ಭವದಲ್ಲಿ ನಿಮ್ಮ ಲೀಲೆ ನಿಮ್ಮ ವಿನೋದ ಸೂತ್ರದಿಂದ ಲಕ್ಷದ ಮೇಲೆ ತೊಂಭತ್ತಾರು ಸಾವಿರ ಗೀತಂಗಳ ಆಡಿ ಹಾಡಿ ಆ ದಾಸೋಹ ಎಂಬ ಮಹಾ ಗಣ ಸಂಕೊಳದೊಳೆನ್ನನಿರಿಸಿ ನಿಮ್ಮ ಭಕ್ತಿಯ ಘನವ ನೀವೇ ಮೆರೆಯಲೆಂದು ಪರವಾದಿ ಬಿಜ್ಜಳನ ತಂದೊಡ್ಡಿ ಎನ್ನನು ಅವನೊಡನೆ ಹೋರಿ, ಮುನ್ನೂರ ಅರವತ್ತು ಸತ್ತ ಪ್ರಾಣವನ್ನೆತ್ತಿಸಿ, ಮೂವತ್ತಾರು ಕೊಂಡೆಯವ ಗೆಲ್ಲಿಸಿ ಎಂಬತ್ತೆಂಟು ಪವಾಡಂಗಳ ಕೊಂಡಾಡಿ, ಮರ್ತ್ಯಲೋಕದ ಮಹಾಗಣಗಳು ಒಕ್ಕುದನಿಕ್ಕಿ ಎನ್ನ ಸಲುಹಿದಿರಿ ನಿಮ್ಮ ಮಹಾಗಣಂಗಳು ಮೆಚ್ಚಿ ಎನ್ನ ಸೂತಕವ ತೊಡೆದ ಕಾರಣ ಪ್ರಭುದೇವರ ಕರುಣದಿಂದ ಪ್ರಾಣಲಿಂಗ ಸಂಬಂಧ ಸಯವಾಯಿತ್ತು ನೀವು ಕಳುಹಿದ ಬೆಸನು ಸಂದಿತ್ತು ಉಘೇ! ಇನ್ನು ಕೂಡಿಕೊಳ್ಳಾ ಕೂಡಲಸಂಗಮದೇವ.
2) ಅರಿಯಲಿಲ್ಲದ ಅರಿವು ಅವಗ್ರಹಿಸಿತ್ತಾಗಿ ಅರಿಯಲಿಲ್ಲದ ಮರೆಯಲಿಲ್ಲದ ನಿಜವು ನಿಂದಿತ್ತಾಗಿ, ನಿರ್ನಾಮವಾಯಿತು, ನಿ:ಪತಿಯಾಯಿತ್ತು. ಅಗಮ್ಯದಲ್ಲಿ ಗಮನಕ್ಕೆಟ್ಟಿತ್ತು, ನಿಂದಲ್ಲಿ ನಿರಾಳವಾಯಿತ್ತು, ಕೂಡಲಸಂಗಮ ದೇವರಲ್ಲಿ ಶಬ್ದ ಮುಗ್ಧವಾಯಿತ್ತು.
3) ಅರಿವನ್ನಕರ ಅರ್ಚಿಸಿದೆ, ಅರಿವನ್ನಕರ ಪೂಜಿಸಿದೆ, ಅರಿವನ್ನಕ್ಕರ ಹಾಡಿ ಹೊಗಳಿದೆ, ಅರಿವುಗೆಟ್ಟು ಮರಹು ನಷ್ಟವಾಗಿ ಭಾವ ನಿರ್ಭಾವವಾಗಿ ನಿಜವೊಳಕೊಂಡಿತ್ತಾಗಿ ಕೂಡಲಸಂಗಮದೇವನಲ್ಲಿ ಸರ್ವ ನಿವಾಸಿಯಾಗಿದ್ದನು.
4) ಲಿಂಗ ಗಂಭೀರ ಗಮನವಗೆಟ್ಟುದಲ್ಲಾ ಜಂಗಮ ಗಂಭೀರ ಸುಳುಹುಗೆಟ್ಟುದಲ್ಲಾ, ಪ್ರಸಾದ ಗಂಭೀರ ರೂಪುಗೆಟ್ಟುದಲ್ಲಾ, ಆಚಾರ ಗಂಭೀರ ಅವಯವಗೆಟ್ಟುದಲ್ಲಾ, ಜ್ಞಾನಗಂಭೀರ ನಡೆಗೆಟ್ಟುದಲ್ಲಾ, ಪ್ರಭುದೇವರು ಆ ನಿಜವನೈದಲು ಕೂಡಲಸಂಗಮ ದೇವರಲ್ಲಿ ಸಂಗನ ಬಸವಣ್ಣನ ಪ್ರಾಣ ಒಡನೆ ಬಳಿಸಂದಿತ್ತಲ್ಲಾ!
5) ಅರ್ಪಿತವೆಂಬೆನೆ? ದೇವರೊಂದಿಲ್ಲವಾಗಿ, ಅರ್ಪಿಸುವ ಭಕ್ತ ಮುನ್ನವೆ ಇಲ್ಲ. ಅರ್ಪಿತ ಅನರ್ಪಿತ ನೀನೇ ಎಂಬೆ, ಕೂಡಲಸಂಗಮದೇವ.
6) ಯೋಗಾಂಗ ಭೋಗಾಂಗ ತ್ಯಾಗಾಂಗ ಈ ತ್ರಿವಿಧವನು ಮರೆದು, ಭಕ್ತಿಯೋಗದ ಮೇಲೆ ನಿಂದು, ವೈರಾಗ್ಯಯೋಗದ ಮೇಲೆ ನಿಂದು, ನಡೆದು ನುಡಿದು ತೋರುವರು ಎಮ್ಮೆ ಶರಣರು, ಗುರುಲಿಂಗಜಂಗಮ ಈ ತ್ರಿವಿಧವನು. ಸುಖ ದುಃಖ ಚಿಂತೆ ಸಂತೋಷವೆಂಬುವಂ ಕಳೆದು, ಉತ್ಪತ್ತಿಸ್ಥಿತಿಲಯವೆಂಬುವ ಸುಟ್ಟು, ದೃಕ್ಕು, [ದರ್ಶನ], ದೃಶ್ಯವೆಂಬ ತ್ರಿಕರಣವ ಏಕವಮಾಡಿ, ಪಿಂಡಾಂಡವಾ ಬ್ರಹ್ಮಾಂಡವೊಂದೆಂಬುದ ಅರಿದು, ಸಂದ ಹರಿದು, ನಿಂದ ನಿಜಾನಂದದಲ್ಲಿ ಹಿಂದುಮುಂದೆಂಬುದನರಿಯದೆ, ನಿಮ್ಮೊಳೊಂದಾದ ಲಿಂಗೈಕ್ಯಂಗೆ ವಂದಿಸಿ ವಂದಿಸಿ ಎನ್ನ ಬಂಧನ ಹರಿಯಿತ್ತು, ನಾನು ಬಟ್ಟಬಯಲಾದೆನಯ್ಯಾ, ಕೂಡಲಸಂಗಮದೇವಾ.
7) ಉರಿಯೊಳಗಣ ಕರ್ಪೂರಕ್ಕೆ ಕರಿಯುಂಟೆ ಅಯ್ಯಾ? ಬಯಲ ಮರೀಚಿ ಜಲಕ್ಕೆ ಕೆಸರುಂಟೆ? ವಾಯುವನಪ್ಪಿದ ಪರಿಮಳಕ್ಕೆ ನಿರ್ಮಾಲ್ಯವುಂಟೆ? ನೀವು ನೆರೆ ಒಲಿದ ಬಳಿಕ ನನಗೆ ಭವವುಂಟೆ? ಕೂಡಲಸಂಗಮದೇವ ನಿಮ್ಮ ಚರಣಕಮಲದೊಳಗೆನ್ನ ಇಂಬಿಟ್ಟುಕೊಳ್ಳಯ್ಯಾ.
8) ಭಕ್ತಿಯೆಂಬ ಪೃಥ್ವಿಯ ಮೇಲೆ, ಗುರುವೆಂಬಬೀಜವಂಕುರಿಸಿ,
ಲಿಂಗವೆಂಬ ಎಲೆಯಾುತ್ತು.
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾುತ್ತು,
ಆಚಾರವೆಂಬ ಕಾಯಾುತ್ತು.
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ.
9) ಧರೆಯಾಕಾಶದ ನಡುವೆ ಒಂದು ಮಾಮರ ಹುಟ್ಟಿತ್ತು ಆ ಮರಕ್ಕೆ ಕೊಂಬೆ ಎರಡು ಎಲೆ ಆರು. ಮೂವತ್ತಾರು ಪುಷ್ಪ ಕಾಯಿ ಒಂದೇ ಹಣ್ಣು ರಸ ತುಂಬಿದಲ್ಲಿ ಏನನೂ ಕಾಣೆ! ಎಲೆ ಉದುರಿದಡೆ ಹಣ್ಣು ತೊಟ್ಟು ಬಿಟ್ಟು ಬಿದ್ದಿತ್ತು. ಆ ಹಣ್ಣು ಪ್ರಭುದೇವರು ಆರೋಗಣೆಯ ಮಾಡಿ ನಿಜದಲ್ಲಿ ನಿರ್ವಯಲಾದರು ಪ್ರಭುವಿನ ಕಾರುಣ್ಯ ಪ್ರಸಾದವ ನಾನು ಕೊಂಡೆನಾಗಿ ಕೂಡಲಸಂಗಮದೇವರು ಎತ್ತ ಬಾರೆಂದು ತಮ್ಮ ಹೃದಯಕಮಲದಲ್ಲಿ ಇಂಬಿಟ್ಟುಕೊಂಡರು.
ಸಂಗ್ರಹ: ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ, ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣ.
🙏🙏🙏