ಬಸವಣ್ಣನವರಿಂದ ನಾವೆಲ್ಲಾ ಬುಲೆಟ್ ಫ್ರೂಪ್: ಭಾಲ್ಕಿ ಶ್ರೀಗಳು

ಕಲಬುರಗಿ

ಬಹಳಷ್ಟು ಜನ ಶ್ರೀಮಂತರು ಇರುತ್ತಾರೆ. ಆದರೆ ಬಸವತತ್ವ ಪ್ರಸಾರದ ಕಾಳಜಿ, ಕಳಕಳಿ ಇರುವ ಜನ ಕಡಿಮೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.

ಜಿಲ್ಲೆಯ ಆಳಂದ ತಾಲ್ಲೂಕಿನ ಭೂಸನೂರ ಗ್ರಾಮದ ರಾಜಶೇಖರ ಯಂಕಂಚಿ ಅವರು ನಿರ್ಮಿಸಿದ ನೀಲಾಂಬಿಕಾ ಕಲ್ಯಾಣ ಮಂಟಪ ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಇಷ್ಟಲಿಂಗ ಪೂಜಾ ನಿರತ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬಸವಣ್ಣನವರನ್ನು ಶ್ರದ್ಧೆ, ನಿಷ್ಠೆಯಿಂದ ಅಪ್ಪಿಕೊಂಡರೆ ಬಸವಣ್ಣ ಅವರಿಗೆ ರಕ್ಷಣೆ ಮಾಡುತ್ತಾರೆ. ಬಸವಣ್ಣ ನಮಗೆಲ್ಲರಿಗೂ ಬುಲೆಟ್ ಫ್ರೂಪ್ ಇದ್ದ ಹಾಗೆ. ಬಸವ ಎಂಬ ಮೂರಕ್ಷರ ಹೃದಯದಲ್ಲಿ ನೆಲೆಗೊಂಡರೆ ಅಸಾಧ್ಯವೂ ಸಾಧ್ಯ ಎಂದು ಚೆನ್ನಬಸವಣ್ಣನವರು ಹೇಳಿದ್ದಾರೆ. ಹೀಗಾಗಿ ಅವರ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ವಿಮಾನ ನಿಲ್ದಾಣದಲ್ಲಿ ಇರುವ ಕಂಟ್ರೋಲ್ ರೂಂ ರೀತಿಯಲ್ಲಿ ಬಸವಣ್ಣನವರಿದ್ದಾರೆ. ಲಿಂಗಾಯತ ಸಮಾಜ ಕಂಟ್ರೋಲ್ ತಪ್ಪಿದೆ. ಬಸವಣ್ಣನವರ ಕನೆಕ್ಷನ್ ತೆಗೆದುಕೊಂಡರೆ ನಮ್ಮ ಸಮಾಜ ಸುರಕ್ಷಿತವಾಗಿರುತ್ತದೆ ಎಂದು ಒತ್ತಿ ಹೇಳಿದರು.

ಶ್ಲಾಘನೀಯ ಕಾರ್ಯ

ಶರಣ ರಾಜಶೇಖರ ಯಂಕಂಚಿ ಅವರು ಬಸವಣ್ಣನ ವಾರಸುದಾರರಾಗಿ ಕಾರ್ಯ ಮಾಡುತ್ತಿದ್ದು, ಅವರ ದಾಸೋಹಂ ಭಾವ ಮೆಚ್ಚುವಂಥದ್ದಾಗಿದೆ. ಬಸವಣ್ಣನಿಗೆ ಖರ್ಚು ಮಾಡುವ ವ್ಯಕ್ತಿ. ಬಸವನಿಷ್ಠೆ ಮೈಗೂಡಿಸಿಕೊಂಡ ಯಂಕಂಚಿ ಇವರನ್ನು ಎಲ್ಲರೂ ಅನುಸರಿಸಬೇಕು ಎಂದರು.

ಗೋರ್ಟಾ ಮಠದ ಪೂಜ್ಯಶ್ರೀ ಪ್ರಭುದೇವರು, ಅತ್ತಿವೇರಿಯ ಬಸವೇಶ್ವರಿ ತಾಯಿ, ಮಾದನಹಿಪ್ಪರಗಾ ಶ್ರೀಗಳು ಸೇರಿದಂತೆ ಅನೇಕ ಪೂಜ್ಯರು ಹಾಜರಿದ್ದರು.

ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಬೀದರ್ ಸಂಸದ ಸಾಗರ ಈಶ್ವರ ಖಂಡ್ರೆ, ಮುಖ್ಯಮಂತ್ರಿ ಸಲಹೆಗಾರ ಹಾಗೂ ಆಳಂದ ಕ್ಷೇತ್ರದ ಶಾಸಕ ಬಿ.ಆರ್. ಪಾಟೀಲ, ಶಾಸಕರಾದ ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ, ಕಲಬುರಗಿ- ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುರೇಶ ಸಜ್ಜನ ಮಾತನಾಡಿದರು.

ಮುಖಂಡರಾದ ಮಲ್ಲಿನಾಥ ಪಾಟೀಲ ಯಲಗೋಡ ಇತರರು ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿದ್ದರು.

ಡಾ. ರಾಜಶೇಖರ ಹೆಬಳಿ ನಿರೂಪಿಸಿದರು. ಶಂಕರ ಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಶೇಖರ ಯಂಕಂಚಿ ಸ್ವಾಗತಿಸಿದರು. ರೇವಣಸಿದ್ದಯ್ಯ ಮಠ ಶರಣು ಸಮರ್ಪಿಸಿದರು.

ನೀಲಕಂಠ ಅವಂಟಿ, ಸತೀಶ ಸಜ್ಜನಶೆಟ್ಟಿ, ರವಿ ಸಜ್ಜನ, ನಾಗರಾಜ ಕಾಮಾ, ಡಾ. ಶಿವರಂಜನ ಸತ್ಯಂಪೇಟೆ ಮತ್ತಿತರರು ಉಪಸ್ಥಿತರಿದ್ದರು.

Share This Article
2 Comments

Leave a Reply

Your email address will not be published. Required fields are marked *