ಕೊಪ್ಪಳ:
ಬಸವಣ್ಣನವರು 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಇಡೀ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಮಹಾನ್ ನಾಯಕರು. ಅವರು ಲಿಂಗಭೇದ ತೊಡೆದು ಎಲ್ಲರನ್ನೂ ಸಮಾನತೆಯಿಂದ ಕಾಣುತ್ತಿದ್ದರು. ಮಹಿಳೆಯರ ಬಗ್ಗೆ ಬಸವಣ್ಣನವರಿಗೆ ಇದ್ದ ಕಾಳಜಿ ಮತ್ತು ಅವರ ತತ್ವಗಳು ಇಂದಿಗೂ ನಮ್ಮೆಲ್ಲರಿಗೂ ದಾರಿದೀಪ ಎಂದು ಬಸವಶ್ರೀ ಸೇವಾ ಟ್ರಸ್ಟ್ ನ ಬಸವಶ್ರೀ ಬಿ. ಸೋಮನಾಳ ಅವರು ಹೇಳಿದರು.
ಅವರು ಇತ್ತೀಚೆಗೆ ತಾಲೂಕ ಪಂಚಾಯತ ಆವರಣದ ಕೃಷಿ ವಿಸ್ತರಣಾ ಕೇಂದ್ರದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನ, ಸಾಧಕರಿಗೆ ಪ್ರಶಸ್ತಿ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಶ್ರೀ ಸೇವಾ ಟ್ರಸ್ಟ್ ಪ್ರತಿವರ್ಷ ಸಾಧಕ ಶರಣ, ಶರಣೆಯರನ್ನು ಗುರುತಿಸಿ ಬಸವಶ್ರೀ ಸೇವಾ ಟ್ರಸ್ಟ್ ಪ್ರಶಸ್ತಿ ಪ್ರದಾನ ಮಾಡುತ್ತಿದೆ. ಈ ವರ್ಷವೂ ಸಹ ರಾಜ್ಯ ಪ್ರಶಸ್ತಿಗೆ ಪ್ರಥಮ ಮಹಿಳಾ ಜಗದ್ಗುರು ಡಾ. ಮಾತೆ ಮಹಾದೇವಿ ತಾಯಿಯವರ ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಗೆ ಸಾಧಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಗನ್ಮಾತೆ ಅಕ್ಕಮಹಾದೇವಿತಾಯಿ ಹೆಸರಿನಲ್ಲಿ 8 ಜನ ಮಹಿಳಾ ಸಾಧಕರಿಗೆ ಪ್ರಶಸ್ತಿ ಪ್ರದಾನ, 8 ಜನ ಶರಣ ದಂಪತಿಗಳಿಗೆ ಸನ್ಮಾನಿಸಲಾಯಿತು.
ಪೂಜ್ಯ ದಾನೇಶ್ವರಿ ಮಾತಾಜಿ ಕಾರ್ಯಕ್ರಮ ಉದ್ಘಾಟಿಸಿದರು. ಕುಕನೂರಿನ ಮಹಾದೇವ ಸ್ವಾಮಿಗಳು ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ಮಹಾಂತೇಶ, ಶಿವಕುಮಾರ ಏಣಗಿ, ವೀರಣ್ಣ ಕೊರ್ಲಹಳ್ಳಿ, ಗವಿಸಿದ್ದಪ್ಪ ಸಂಗಟಿ, ಗವಿಸಿದ್ದಪ್ಪ ಯಕಲಾಸಪೂರ, ಸುಂಕಪ್ಪ ಅಮರಾಪುರ, ಎಂ.ಬಿ. ಅಳವಂಡಿ ಇದ್ದರು.
