ಬಸವತತ್ವಕ್ಕೆ ಬದುಕಿದ ಮಹಾಂತ ಜೋಳಿಗೆಯ ನೇತಾರ

ಇಂದು ಡಾ. ಮಹಾಂತ ಸ್ವಾಮೀಜಿಯವರ ೯೫ನೇ ಜನ್ಮದಿನ, ವ್ಯಸನಮುಕ್ತ ದಿನ

ಇಲಕಲ್ಲ

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಇಲಕಲ್ಲನ್ನು ಕಾರ್ಯಕ್ಷೇತ್ರವಾಗಿಸಿಕೊಂಡ ಚಿತ್ತರಗಿ ಸಂಸ್ಥಾನಮಠದ ೧೯ನೇ ಪೀಠಾಧಿಪತಿಯಾಗಿ ಡಾ. ಮಹಾಂತ ಸ್ವಾಮೀಜಿ ೪೮ ವರ್ಷಗಳ ಕಾಲ ಬಸವತತ್ವ ಪ್ರಸಾರದಲ್ಲಿ ತೊಡಗಿ, ೨೦೧೯ ಮೇ ೧೯ರಂದು ಲಿಂಗೈಕ್ಯರಾದರು.

ಮಹಾಂತ ಜೋಳಿಗೆಯ ನೇತಾರರಾದ ಮಹಾಂತ ಸ್ವಾಮೀಜಿಯವರ ೯೫ನೇ ಜನ್ಮದಿನ ಅಗಷ್ಟ ೧, ೨೦೨೫ ರಂದು ನಡೆಯುವುದು ಅವರ ಜನ್ಮದಿನವನ್ನು ಸರ್ಕಾರ ವ್ಯಸನಮುಕ್ತ ದಿನಾಚರಣೆ’ಯಾಗಿ ರಾಜ್ಯಾದ್ಯಂತ ಆಚರಣೆ ಮಾಡುವ ಮೂಲಕ ಗೌರವ ಸಲ್ಲಿಸುತ್ತಿರುವುದು ಅವರ ಸಾಧನೆಗೆ ಹಿಡಿದ ಕೈಗನ್ನಡಿ.

ಬಸವತತ್ವ ಪ್ರಸಾರಕ

ಸಂಪ್ರದಾಯವಾದಿಗಳಿಂದ ಹಲ್ಲೆ, ನಿಂದೆಗೆ ಗುರಿಯಾಗಿದ್ದರೂ ಬಸವಣ್ಣನನ್ನು ಉಸಿರಾಗಿಸಿಕೊಂಡು, ವೈಚಾರಿಕ ಹಾದಿಯಲ್ಲಿ ಸಾಗಿ ಇಡೀ ಬದುಕು ಬಸವತತ್ವಕ್ಕೆ ಮುಡುಪಾಗಿಟ್ಟವರು ಇಳಕಲ್‌ನ ಡಾ. ಮಹಾಂತ ಸ್ವಾಮೀಜಿ.

ನಾಲ್ಕು ದಶಕಗಳ ಕಾಲ ನಾಡಿನಾದ್ಯಂತ ಬಸವಣ್ಣನ ಆಶಯಗಳಿಗೆ ಅರ್ಥಕಲ್ಪಿಸಿದ ಡಾ. ಮಹಾಂತ ಸ್ವಾಮೀಜಿ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಪಲಭಾವಿ ಮಠದ ವಿರುಪಾಕ್ಷಯ್ಯ, ನೀಲಮ್ಮ ತಾಯಿಯವರ ಮಗನಾಗಿ ೧೯೩೦ ಅಗಷ್ಟ ೧ ರಂದು ಜನಿಸಿದರು.

ಮಠವೊಂದರ ವಟುವಾಗಲು ಬೇಕಾದ ಸಂಸ್ಕೃತ, ಭಾರತೀಯ ತತ್ವಶಾಸ್ತ್ರ ಹಾಗೂ ಆಧ್ಯಾತ್ಮ ಶಿಕ್ಷಣವನ್ನು ಶಿವಯೋಗಮಂದಿರ ಹಾಗೂ ಕಾಶಿಯಲ್ಲಿ ಪಡೆದರು. ಮುಧೋಳ, ನವಲಗುಂದ ಹಾಗೂ ಸವದಿ ಮಠದ ಸ್ವಾಮೀಜಿಯಾಗಿ ನೇಮಕಗೊಂಡರು. ಸ್ವಷ್ಟ ನುಡಿ, ಅಪಾರ ಪಾಂಡಿತ್ಯ ಹಾಗೂ ಸಂಗೀತದ ಜ್ಞಾನದಿಂದಾಗಿ ಕೆಲವೇ ದಿನಗಳಲ್ಲಿ ಉತ್ತಮ ಪ್ರವಚನಕಾರರು ಎಂಬ ಖ್ಯಾತಿಗೆ ಪಾತ್ರರಾದರು.

೧೯೭೦ರ ಮೇ ೧೭ ರಂದು ಇಳಕಲ್ಲ ಮಠದ ೧೯ನೇ ಪೀಠಾಧಿಪತಿಯಾಗುವ ಮೂಲಕ ಡಾ. ಮಹಾಂತ ಶ್ರೀಗಳು ಸಮಾಜ ಸೇವೆಯ ದೀಕ್ಷೆ ಪಡೆದರು. ಬಸವತತ್ವ ಪ್ರಸಾರಕ್ಕಾಗಿ ಶರಣ ಸಿದ್ದಾಂತ ವಿದ್ಯಾಪೀಠ, ಕಾಯಕ ಜೀವಿಗಳಿಗೆ ಬಡ್ಡಿರಹಿತ ಸಾಲ ಹಾಗೂ ಉಪಕರಣ ನೀಡಲು ಕಾಯಕ ಸಂಜೀವಿನ ಸಂಸ್ಥೆ, ಶಿಕ್ಷಣ ಪ್ರಸಾರಕ್ಕಾಗಿ ಹುನಗುಂದ-ಇಳಕಲ್ಲದಲ್ಲಿ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘಗಳು ಹೀಗೆ ಅನೇಕ ರಚನಾತ್ಮಕ ಕೆಲಸಗಳಲ್ಲಿ ಶ್ರೀಗಳು ತೊಂಡಗಿಸಿಕೊಂಡಿದ್ದಾರೆ. ಅವರ ಸಮಾಜಮುಖಿ ಚಿಂತನೆಗಳು ಹಾಗೂ ವ್ಯಸನ ಮುಕ್ತ ಸಮಾಜಕ್ಕಾಗಿ ಮಾಡಿದ ಕಾರ್ಯಗಳನ್ನು ಗಮನಿಸಿ ಧಾರವಾಡದ ಕರ್ನಾಟಕ ವಿವಿ ಗೌರವ ಡಾಕ್ಟರೇಟ್ ನೀಡಿದೆ. ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ “ಸಂಯಮ” ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರ “ಬಸವ ಶ್ರೀ” ಪ್ರಶಸ್ತಿ ನೀಡಿ ಗೌರವಿಸಿದೆ. ಇದರ ಜೊತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದು ಹೆಮ್ಮೆಯ ವಿಷಯ.

ವೈಚಾರಿಕ ಕಾರ್ಯ

ರುದ್ರಾಭಿಷೇಕ, ದೀಪೋತ್ಸವ ಹೀಗೆ ಸಂಪ್ರದಾಯ, ಪರಂಪರೆಯ ಮುಸುಕಿನೊಳಗೆ ನಡೆದುಕೊಂಡು ಬರುತ್ತಿದ್ದ ಬಸವಧರ್ಮ ಸಮ್ಮತವಲ್ಲದ ಆಚರಣೆಗಳನ್ನು ನಿಲ್ಲಿಸಿದರು. ನಾಗರಪಂಚಮಿಯನ್ನು ಹಾಲು ಕುಡಿಯುವ ಹಬ್ಬವಾಗಿಸಿ, ಸಾವಿರಾರು ಲೀಟರ್ ಹಾಲು ಮಣ್ಣು ಪಾಲಾಗುವುದನ್ನು ತಡೆದರು. ಮಠದ ಶ್ರಾವಣ ಮಾಸದ ಜಾತ್ರೆ ಶರಣ ಸಂಸ್ಕೃತಿ ಮಹೋತ್ಸವವಾಯಿತು.

ವಚನ ಕಟ್ಟುಗಳ ರಥೋತ್ಸವ, ವಚನಗಳ ತಾಡೋಲೆಗಳ ಅಡ್ಡಪಲ್ಲಕಿ, ಜಾತಿಭೇದ ಇಲ್ಲದ ಲಿಂಗದೀಕ್ಷೆ, ಸಹಪಂಕ್ತಿ ಭೋಜನ, ಜೋತಿಷ್ಯಶಾಸ್ತ್ರ ವಾಸ್ತು ಶಾಸ್ತ್ರಗಳ ಟೊಳ್ಳುತನ ಬಯಲಿಗೆ ಎಳೆಯುವ ಪ್ರಯತ್ನ ಮಾಡಿದರು. ಅಕ್ಷತೆ ಬದಲಾಗಿ ಪುಷ್ಪವೃಷ್ಠಿಗೈದು ಮದುವೆ ನಡೆಸಿದರು. ಆಹಾರ ನಮ್ಮಿಂದ ಸೃಷ್ಟಿಲಾಗದು ಎಂಬ ಕಾರಣಕ್ಕೆ ಆಹಾರವಾಗುವ ಯಾವ ವಸ್ತುಗಳನ್ನು ಹಾಳು ಮಾಡಬಾರದು ಎಂಬ ನಿಲುವನ್ನು ತಾಳಿದರು.

ಲಗ್ನಗಳಲ್ಲಿ ಸಂಸ್ಕೃತ ಮಂತ್ರಗಳ ಬದಲಾಗಿ ವಚನ ಮಂತ್ರಗಳನ್ನು ಬಳಕೆಗೆ ತಂದರು. ವಿಧವಾ ಮಹಿಳೆಯರಿಗೆ ಧಾರ್ಮಿಕ ಕಾರ್ಯಗಳನ್ನು ನಡೆಸಲು ಅವಕಾಶ ನೀಡಿದರು. ಹೀಗೆ ಅನೇಕ ವೈಚಾರಿಕ ಹಾಗೂ ಪ್ರಗತಿಪರ ಕಾರ್ಯಗಳನ್ನು ಯಾವ ವಿರೋಧಕ್ಕೂ ಅಳುಕದೆ ಶ್ರೀಗಳು ಮುಂದುವರಿಸಿದ್ದರು.

ಮಹಾಂತ ಜೋಳಿಗೆ

ಲಿಂ. ವಿಜಯ ಮಹಾಂತ ಶಿವಯೋಗಿಗಳ ೬೩ನೇ ಪುಣ್ಯತಿಥಿ ಸಂದರ್ಭದಲ್ಲಿ ಜೋಳಿಗೆ ಹೊತ್ತು ಸಮಾಜದೆಡೆಗೆ ನಡೆದರು. ಪ್ರವಚನಗಳು ಜನರಲ್ಲಿ ದೀರ್ಘ ಕಾಲ ಉಳಿಯುವುದಿಲ್ಲ. ಮಾತುಗಳಿಂದ ಎಲ್ಲರನ್ನೂ ಪ್ರಭಾವಿಸಲು, ಬದಲಾಯಿಸಲು ಸಾಧ್ಯವಾಗುವುದಿಲ್ಲ ಎಂದು ಅರ್ಥವಾದ ತಕ್ಷಣ ಜೋಳಿಗೆ ಎತ್ತಿಕೊಂಡರು. ಅದುವೇ “ಮಹಾಂತ ಜೋಳಿಗೆ” ಎಂದೇ ನಾಡಿನಲ್ಲಿ ಹೆಸರುವಾಸಿಯಾಯಿತು.
ಶ್ರೀಗಳು ಹಾಕಿಕೊಂಡ ಜೋಳಿಗೆ ಯಾವತ್ತೂ ಧನ, ಧಾನ್ಯ, ಕನಕ ಬೇಡಲಿಲ್ಲ. ಅದು ಕೇಳಿದ್ದು, ಬೇಡಿದ್ದು ದುಶ್ಚಟಗಳನ್ನು ಮಾತ್ರ. ಕೇವಲ ಅರ್ಧ ಮೀಟರ್ ಬಟ್ಟೆಯ ಜೋಳಿಗೆ “ವ್ಯಸನ ಮುಕ್ತ ವ್ಯಕ್ತಿ” ಹಾಗೂ “ಆರೋಗ್ಯವಂತ ಸಮಾಜ” ಕಟ್ಟುವ ವಿನೂತನ ಆಂದೋಲನವಾಗಿ ರೂಪುಗೊಂಡಿತು. ೪ ಲಕ್ಷಕ್ಕೂ ಹೆಚ್ಚು ಜನರನ್ನು ದುಶ್ಚಟಗಳಿಂದ ಮುಕ್ತ ಮಾಡಿದ ಯಶೋಗಾಥೆ ಈ ಜೋಳಿಗೆಯದ್ದು. ೨ ದಶಕಗಳ ಕಾಲ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ನಾಡು, ದೇಶ, ವಿದೇಶ ಸಂಚರಿಸಿದರು.

ಮಹಾಂತ ಶ್ರೀಗಳು ಮಹಾಂತ ಜೋಳಿಗೆ ಹಿಡಿಯುತ್ತಿದ್ದಂತೆ ಅದರೊಳಗೆ ಮದ್ಯದ ಬಾಟಲ್‌ಗಳು, ಬೀಡಿ, ಸಿಗರೇಟ್ ಹಾಗೂ ತಂಬಾಕಿನ ಪಾಕೆಟ್‌ಗಳು, ಇಸ್ಪಿಟ್ ಎಲೆಗಳು ರಾಶಿ ರಾಶಿಯಾಗಿ ಬಿದ್ದವು. ಎಲ್ಲವನ್ನು ಸಾರ್ವಜನಿಕವಾಗಿ ಸುಟ್ಟು ಹಾಕಿ, ಮತ್ತೆ ಚಟದತ್ತ ವಾಲದಂತೆ ಮಾಡಿ, ಮುಂದಿನ ಊರಿಗೆ ನಡೆದ ಶ್ರೀಗಳು ಸಾಮಾಜಿಕ ಕ್ರಾಂತಿ ಮಾಡಿದರು.

ರಚನಾತ್ಮ ಕಾರ್ಯಗಳು

ಬಸವತತ್ವ ಪ್ರಸಾರಕ್ಕಾಗಿ ಶರಣ ಸಿದ್ದಾಂತ ವಿದ್ಯಾಪೀಠ, ಕಾಯಕ ಜೀವಿಗಳಿಗೆ ಬಡ್ಡಿರಹಿತ ಸಾಲ ಹಾಗೂ ಉಪಕರಣ ನೀಡಲು ಕಾಯಕ ಸಂಜೀವಿನ ಸಂಸ್ಥೆ, ಶಿಕ್ಷಣ ಪ್ರಸಾರಕ್ಕಾಗಿ ಹುನಗುಂದ-ಇಳಕಲ್ಲದಲ್ಲಿ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘಗಳು ಹೀಗೆ ಅನೇಕ ರಚನಾತ್ಮಕ ಕೆಲಸಗಳನ್ನು ಶ್ರೀಗಳು ಮಾಡಿದ್ದಾರೆ.

ಅಡ್ಡಫಲಕ್ಕಿ ನಿರಾಕರಣೆ

ಮಠಾಧೀಶ್ವರು ಅಡ್ಡಪಲ್ಲಕ್ಕಿಯಲ್ಲಿ ಕುಳಿತು ಮೆರೆಯುವುದನ್ನು ಪೂಜ್ಯ ಶ್ರೀಗಳು ನಿರ್ಧಾಕ್ಷಿಣ್ಯವಾಗಿ ಖಂಡಿಸಿದರು. ಭಕ್ತರ ಶೋಷಣೆ ಯಾವ ಕಾಲಕ್ಕೂ ನಡೆಯಕೊಡದು ಎಂದು ಸಾರಿದರು.

ಸಾಮೂಹಿಕ ವಿವಾಹ

ಪ್ರತಿ ವರ್ಷವೂ ವಿಜಯ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಬಸವ ತತ್ವದಡಿಯಲ್ಲಿ ಕಲ್ಯಾಣ ಮಹೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇನ್ನು ಮದುವೆಯಲ್ಲಿ ಅಕ್ಕಿ ಕಾಳು ಬದಲು ಪುಷ್ಪಗಳು ಹಾಕಲು ತಿಳಿಸಿದ್ದರು.

ದಲಿತ ಕೇರಿಯಲ್ಲಿ ಲಿಂಗಾರ್ಚನೆ

ಬಸವಣ್ಣನವರು ಅಪ್ಪನು ನಮ್ಮ ಮಾದರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ ಎಂದು ಹಾಡಿಕೊಂಡಿದ್ದಾರೆ. ಅದಕ್ಕೆಂದೇ ಮಹಾಂತ ಶ್ರೀಗಳು ದಲಿತರ ಕೇರಿಗಳಲ್ಲಿ ಸಂಚರಿಸಿ ಬಸವ ಬೋಧನೆಯನ್ನು ನೀಡಿ, ವ್ಯಸನ ಮುಕ್ತರಾಗಿ ಹಸನಾದ ಬಾಳನ್ನು ಬಾಳುವಂತೆ ದಲಿತರನ್ನು ಪ್ರೇರೇಪಿಸುವ ಕಾರ್ಯ ಮಾಡಿದ್ದಾರೆ.

ಜಡ ಪೂಜೆಯ ನಿರಾಕರಣೆ

ಶರಣ ಧರ್ಮ ಜಂಗಮ ಪೂಜೆಯನ್ನು ಸೂಚಿಸುತ್ತದಲ್ಲದೇ ಜಡ ಪೂಜೆಯನ್ನಲ್ಲ. ನಾಗರ ಪಂಚಮಿ ಹಬ್ಬದಲ್ಲಿ ಕಲ್ಲಿನ ನಾಗಪ್ಪನಿಗೆ ಹಾಲನೆರೆದು ವ್ಯರ್ಥಗೊಳಿಸುತ್ತೇವೆ. ಅದಕ್ಕೆ ಬದಲಾಗಿ ಹಸಿದ ಮಕ್ಕಳಿಗೆ ಹಾಲನುಣಿಸಿ ಹಬ್ಬವನ್ನು ಆಚರಿಸಬೇಕೆಂಬುದು ಪೂಜ್ಯ ಶ್ರೀಗಳ ಪರಿಹಾರ ಸೂತ್ರ.

ಇಂತಹ ಆಚರಣೆಯಿಂದ ಮಣಗಟ್ಟಲೆ ಎಣ್ಣೆ ಉರಿದು ಹೋಗುತ್ತದೆ. ಅದಕ್ಕೆ ಬದಲಾಗಿ ಹಸಿದ ಬಡವರ ಒಣ ರೊಟ್ಟಿಗೆ ಎಣ್ಣೆ ಆಸರೆಯಾಗಲಿ ಎಂಬುದು ಪೂಜ್ಯರ ಆಶಯ.

ದೇವದಾಸಿ ಮಕ್ಕಳಿಗೆ ಶಿಕ್ಷಣ ಸಂಸ್ಥೆ

ದೇವದಾಸಿ ಮಕ್ಕಳು ದೇವದಾಸಿಯಾಗುವ ದೃಶ್ಯಯೊಂದನ್ನು ಸವದತ್ತಿಯಲ್ಲಿ ನೋಡಿದಾಗ ಪೂಜ್ಯ ಶ್ರೀಗಳು ಇದನ್ನು ನಿಲ್ಲಿಸಬೇಕೆಂದು ಆ ದೇವದಾಸಿಯರಲ್ಲಿ ಭಕ್ತಿಯಿಂದ ಕೇಳಿಕೊಂಡಾಗ ನಮ್ಮ ಮಕ್ಕಳನ್ನು ನೋಡಿಕೊಳ್ಳುವವರು ಯಾರು ಎಂದು ದೇವದಾಸಿಯರು ವಿನಂತಿಸಿಕೊಂಡಾಗ ತಕ್ಷಣ ಪೂಜ್ಯ ಶ್ರೀಗಳು ಅಥಣಿಯಲ್ಲಿ ನ್ಯಾಯವಾದಿ ಬಿ.ಎನ್. ಪಾಟೀಲ ನೇತೃತ್ವದಲ್ಲಿ ದೇವದಾಸಿ ವಿಮೋಚನೆ ಸಂಸ್ಥೆಯನ್ನು ಆರಂಭಿಸಿ, ದೇವದಾಸಿ ಮಕ್ಕಳಿಗೆ ಶಿಕ್ಷಣ ಹಾಗೂ ವಸತಿ ಶಾಲೆಯನ್ನು ಆರಂಭಿಸಿದ್ದಾರೆ. ಶ್ರೀಗಳಿಗೆ ಯಾವುದೇ ಪ್ರಶಸ್ತಿ ಪ್ರಧಾನದ ಮೊತ್ತ ಬಂದಾಗ ಆ ಹಣವನ್ನು ಮೊದಲು ಈ ಶಾಲೆಗೆ ನೀಡುತ್ತಿದ್ದರು. ಈ ಸಂಸ್ಥೆ ಆವರಣದಲ್ಲಿ ಡಾ. ಮಹಾಂತ ಶ್ರೀಗಳ ಮೂರ್ತಿಯನ್ನು ಸ್ಥಾಪಿಸಲಾಗಿದೆ.

ಲಕ್ಷ ದೀಪೋತ್ಸವ ನಿರಾಕರಣೆ

ದಲಿತರ ತುಲಾಭಾರ

ಮಠಾಧೀಶ್ವರ ಪೀಠಾರೋಹಣದ ಮಹೋತ್ಸವಗಳ ಸಂದರ್ಭದಲ್ಲಿ ತಮ್ಮ ತುಲಾಭಾರವನ್ನು ಮಾಡಿಕೊಳ್ಳವ ವ್ಯವಸ್ಥೆ ಬದಲಾಗಿ ಬಡರೈತ, ನೇಕಾರ, ಶ್ರೇಷ್ಠ ಸಾಹಿತಿಗಳನ್ನು, ಯೋಗ್ಯ ದಲಿತ ಬಂಧುಗಳನ್ನು ಆಯ್ಕೆ ಮಾಡಿ, ಅವರ ತುಲಾಭಾರ ನಡೆಸಿ ಪೂಜ್ಯ ಶ್ರೀಗಳವರು ಇತರರಿಗೆ ಮಾದರಿಯನ್ನಿಸಿದ್ದಾರೆ.

ಶಿಕ್ಷಕ ದಂಪತಿಗಳ ಸನ್ಮಾನ

ಪ್ರತಿ ವರ್ಷ ಡಾ. ಮಹಾಂತ ಶ್ರೀಗಳ ಜನ್ಮದಿನದ ಅಂಗವಾಗಿ ಶಿಕ್ಷಕ ದಂಪತಿಗಳನ್ನು ಸನ್ಮಾನಿಸಿ ಗೌರವಿಸುತ್ತಿದ್ದರು. ಶಾಲಾ-ಕಾಲೇಜಿನಲ್ಲಿ ಲಕ್ಷಾಂತರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇವರಿಗೆ ಶಿಕ್ಷಣ ನೀಡುವ ಶಿಕ್ಷಕರನ್ನು ಸನ್ಮಾನಿಸುವ ಮೂಲಕ ವ್ಯಸನ ಮುಕ್ತವನ್ನಾಗಿ ಸಮಾಜವನ್ನು ಕಟ್ಟಬೇಕು ಎಂಬ ಸಂದೇಶವನ್ನು ನೀಡಿದ್ದಾರೆ.

ಸವಾಲು ಸ್ವೀಕರಿಸಿದ ಶ್ರೀಗಳು

೧೯೯೪ರ ಏಪ್ರೀಲ್ ೧೬,೧೭,೧೮ ರಂದು ಬೀದರ್‌ನಲ್ಲಿ ನಡೆದ ಕಲ್ಯಾಣ ನಾಡಿನ ಶರಣರ ಸಮ್ಮೇಳನದಲ್ಲಿ ಆಗಿನ ಕೇಂದ್ರ ಸಚಿವರಾದ ರಾಮ ವಿಲಾಸ್ ಪಾಸ್ವಾನ್ ಹಾಗೂ ಸ್ವಾಮೀಜಿಗಳು ಪಾಲ್ಗೊಂಡಿದ್ದರು.

ಈ ವೇಳೆ ಬಸವಣ್ಣನವರ ಅನುಯಾಯಿಗಳು ಎಂದು ಹೇಳಿಕೊಳ್ಳುವ ಇಲ್ಲಿನ ಮಠಾಧೀಶ್ವರು ತಮ್ಮ ಮಠಗಳಿಗೆ ದಲಿತರನ್ನು ಸ್ವಾಮೀಜಿಯಾಗಿ ನೇಮಕ ಮಾಡುವ ಧೈರ್ಯ ತೋರ ಬಲ್ಲರಾ? ಎಂದು ಆಗಿನ ಕೇಂದ್ರ ಸಚಿವರಾದ ರಾಮ ವಿಲಾಸ್ ಪಾಸ್ವಾನ್ ಸವಾಲ್ ಹಾಕಿದರು. ಸಭೆ ಸ್ತಬ್ಧವಾಗಿತ್ತು. ಆದರೆ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಇಳಕಲ್ಲದ ಡಾ. ಮಹಾಂತ ಶ್ರೀಗಳು ಮಾತ್ರ ಈ ಸವಾಲು ಸ್ವೀಕರಿಸಿದರು.

ಅದರಂತೆ ಮಹಾಂತ ಶ್ರೀಗಳು ತಮ್ಮ ಪೀಠದ ಲಿಂಗಸ್ಗೂರು ಶಾಖಾ ಮಠಕ್ಕೆ ಲಂಬಾಣಿ ಸಮಾಜದ ಸಿದ್ದಲಿಂಗ ಸ್ವಾಮೀಜಿ, ಕೆ.ಆರ್. ಪೇಟಿ ತಾಲೂಕಿನ ಸಿದ್ದಯ್ಯನಕೋಟಿ ಮಠಕ್ಕೆ ದಲಿತರಾದ ಬಸವಲಿಂಗ ಸ್ವಾಮೀಜಿಯನ್ನು ಗುರುವಾಗಿಸಿದರು. ೨೦೦೪ರಲ್ಲಿ ತಮ್ಮ ಉತ್ತರಾಧಿಕಾರಿಯನ್ನಾಗಿ ಜಂಗಮರಲ್ಲದ ಶಿವಯೋಗ ಮಂದಿರದ ವಟುವಲ್ಲದ ಗುರುಮಹಾಂತ ಶ್ರೀಗಳನ್ನು ಸೆಪ್ಟಂಬರ್ ೧೨ ರಂದು ನೇಮಕ ಮಾಡುವುದಾಗಿ ಘೋಷಿಸಿದರು.

ಇದನ್ನು ವಿರೋಧಿಸಿ ಕೆಲವರು ಆಗಷ್ಟ ೩೧ ರಂದು ಡಾ. ಮಹಾಂತ ಶ್ರೀಗಳ ಮೇಲೆ ಹಲ್ಲೆ ಮಾಡಿದರು. ಸುಳ್ಳು ಆರೋಪ ಕೂಡಾ ಮಾಡಿದರು. ಯಾವುದಕ್ಕೂ ಜಗ್ಗದ ಮಹಾಂತ ಶ್ರೀಗಳು ಬಸವಣ್ಣನ ಕೆಲಸ ಮಾಡುವಾಗ ಯಾರಿಗೂ ಹೆದರುವುದಿಲ್ಲ. ಹಾಗೆಯೇ ಯಾರ ಬಗ್ಗೆಯೂ ಕಹಿ ಭಾವನೆ ಇಲ್ಲ ಎಂದು ಹೇಳಿದ್ದರು.

ಅಂದು ನೇಮಕಗೊಂಡ ಗುರುಮಹಾಂತ ಶ್ರೀಗಳು ಇಂದು ತಮ್ಮ ವಿನಯ, ಸರಳತೆ, ಅಂತಃಕರಣ ಹಾಗೂ ಕ್ರೀಯಾಶೀಲತೆಯಿಂದ ವಿರೋಧಿಸಿದವರ ಮನಸ್ಸು ಗೆದ್ದಿದ್ದಾರೆ.

ಸಂಗೀತ ಪ್ರೀಯ, ಚಿಣ್ಣರೆಂದರೆ ಅಕ್ಕರೆ:

ಡಾ. ಮಹಾಂತ ಶ್ರೀಗಳಿಗೆ ಚಿಣ್ಣರೆಂದರೆ ಪಂಚಪ್ರಾಣವಾದರೆ, ಸಂಗೀತವೆಂದರೆ ಅಷ್ಟೇ ಆಸಕ್ತಿಯಿಂದ ಕೇಳುತ್ತಿದ್ದರು. ಚಿಣ್ಣರು ಹಾಗೂ ಸಂಗೀತ ಪೂಜ್ಯರನ್ನು ಮೈಮರೆಸುತ್ತಿದ್ದ ಸಂತೋಷದ ಎರಡು ಮೂಲಗಳು. ಮಠಕ್ಕೆ ಬರುತ್ತಿದ್ದ ಚಿಕ್ಕಮಕ್ಕಳೊಂದಿಗೆ ಬೆರೆತು, ಆಡಿ ಕೈ ತುಂಬಾ ಚಾಕಲೇಟ್ ಕೊಟ್ಟು ಮುದ್ದು ಮಾಡುತ್ತಿದ್ದರು. ಮಕ್ಕಳೊಂದಿಗೆ ಅವರು ಮಾಡುತ್ತಿದ್ದ ಚೇಷ್ಟೆಗಳು ನೋಡುವುದೇ ಆನಂದ. ಅವರು ತಮ್ಮ ಕೊಠಡಿಯೊಳಗಿದ್ದ ಫ್ರಿಜ್‌ನಲ್ಲಿ ಯಾವಾಗಲೂ ಬಾಕ್ಸ್ಗಟ್ಟಲೇ ಚಾಕೋಲೇಟ್, ವಿಭೂತಿ ಹಾಗೂ ಇಷ್ಟಲಿಂಗಗಳನ್ನು ಇಟ್ಟುಕೊಂಡಿರುತ್ತಿದ್ದರು. ಲಿಂಗ ಇದೆಯಾ? ಎಂಬುದು ಅವರನ್ನು ಭೇಟಿಯಾದವರೆನ್ನೆಲ್ಲಾ ಕೇಳುತ್ತಿದ್ದ ಮೊದಲ ಪ್ರಶ್ನೆಗಳು.

ವಿದ್ಯಾರ್ಥಿ ದೆಶೆಯಲ್ಲಿ ಶಾಸ್ತ್ರೀಯವಾಗಿ ಸಂಗೀತ ಕಲಿತು, ಪ್ರವಚನಕಾರರು ಆಗಿದ್ದ ಪೂಜ್ಯ ಶ್ರೀಗಳು, ಸಂಗೀತದ ವ್ಯಾಮೋಹಿ. ತೀವ್ರ ಅನಾರೋಗ್ಯದ ಸಂದರ್ಭದಲ್ಲೂ ನಾಲ್ಕೆದು ಗಂಟೆ ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಆಲಿಸುತ್ತಿದ್ದರು. ತಲೆದೂಗುತ್ತಾ ಬೆರಳಾಡಿಸುತ್ತಾ ಮೈಮರೆಯುತ್ತಿದ್ದರು.

ಪ್ರತಿ ವರ್ಷವೂ ಶ್ರೀಮಠದಲ್ಲಿ ನಾಡಿನ ಹೆಸರಾಂತ ಸಂಗೀತ ಕಲಾವಿದರನ್ನು ಕರೆಸಿ ಅವರಿಂದ ಸಂಗೀತ ಕಾರ್ಯಕ್ರಮವನ್ನು ನಡೆಸಿ ಕಲಾವಿದರಿಗೆ ಅಗತ್ಯ ನೆರವು ನೀಡಿ ಗೌರವಿಸವುದರಲ್ಲಿ ಸಂತೋಷವನ್ನು ಕಾಣುತ್ತಿದ್ದರು.

ಹಣದ ಮೇಲೆಯೂ ವ್ಯಾಮೋಹ ಇಲ್ಲ

ಕರ್ನಾಟಕ ಸರ್ಕಾರದ ಬಸವ ರಾಷ್ರೀಯ ಪ್ರಶಸ್ತಿಯೊಂದಿಗೆ ರೂ ೧೦ ಲಕ್ಷ, ಮಧ್ಯಪಾನ ಸಂಯಮ ಪ್ರಶಸ್ತಿಯೊಂದಿಗೆ ಮೂರು ಲಕ್ಷ ಗಳನ್ನು ನಾಡಿನ ಹಿರಿಯ ಸಾಹಿತಿಗಳ, ಕಲಾವಿದರ ಮನೆ ಮನಗೆಗ ತೆರಳಿ, ತಲಾ ೧ ಲಕ್ಷದಂತೆ ನೀಡಿ ಗೌರವಿಸಿದ್ದರು. ಹಾಗೆ ಗೌರವಿಸಿ ಬಂದಿದ್ದನ್ನು ಯಾರಿಗೂ ಹೇಳಲಿಲ್ಲ ಕೂಡಾ. ಮಠದೊಳಗಿದ್ದ ಕೆ.ಜಿ. ಗಟ್ಟಲೇ ಬಂಗಾರವನ್ನು ಕವಿ. ಸಾಹಿತಿ, ಸಂಗೀತ ಕಲಾವಿದರನ್ನು ಶ್ರೀಮಠಕ್ಕೆ ಕರೆಸಿ, ಉಂಗುರ ತೊಡಿಸಿ ಖಾಲಿ ಮಾಡಿದವರು. ಒಬ್ಬ ಭಕ್ತ ಕೊಟ್ಟ ಕಾಣಿಕೆಯನ್ನು ಅಗತ್ಯ ಇರುವ ಇನ್ನೊಬ್ಬ ಭಕ್ತನಿಗೋ, ಬೆಳವಣೆಗೆ ಹಂತದಲ್ಲಿ ಇರುವ ಸಂಘ-ಸಂಸ್ಥೆಗಳಿಗೆ ಕೊಟ್ಟು ನಿರುಮ್ಮಳವಾಗಿರುತ್ತಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/GC2sh4ZJxi0HaucjgFblZs

Share This Article
1 Comment
  • ಬಿ ಎಸ್ ಅಂಗಡಿ ವಿಶ್ರಾಂತ ಉಪನ್ಯಾಸಕರು ಸಿಂಧನೂರು./ಬೆಂಗಳೂರು says:

    ಜೀವನ ಚರಿತ್ರೆ, ಜೀವನ ಸಾಧನೆ ತಿಳಿದು ನಮ್ಮನ್ನು ನಾವು ನೋಡಿಕೊಳ್ಳುವಂತಾಯಿತು… ಉತ್ತಮ ಆದರ್ಶ ಗಳನ್ನು ರೂಢಿಸಿಕೊಳ್ಳುವ ಸಂಕಲ್ಪಉಂಟಾಗಿದೆ… ಇಲಕಲ್ಲ ಪೂಜ್ಯ ಮಹಾಂತ ಸ್ವಾಮಿಗಳು ಅಮರರಾಗಿದ್ದಾರೆ.. ಬಸವಣ್ಣನವರ ಆಶಯಗಳನ್ನು ಸಾಕಾರಗೊಳಿಸಿದ ಧೀರ ದಿಟ್ಟ ಸ್ವಾಮಿಗಳಾದರು…ಅವರಿಗೆ ಕೋಟಿ ನಮನಗಳು…

Leave a Reply

Your email address will not be published. Required fields are marked *