ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 53ನೇ ರ್ಯಾಂಕ್, ರಾಜ್ಯಕ್ಕೆ ಪ್ರಥಮ ಸ್ಥಾನ
ಗದಗ:
‘ವಿಶ್ವಗುರು ಬಸವಣ್ಣನವರ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಫಲ ತಲುಪಿಸುವುದೇ ನನ್ನ ಅಧಿಕಾರದ ಗುರಿ’ಎಂದು ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 53ನೇ ರ್ಯಾಂಕ್, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕಿರಣ ಕಮತೆ ಹೇಳಿದರು.
ನಗರದ ಜಗದ್ಗುರು ತೋಂಟದಾರ್ಯ ಮಠದ 2026ನೇ ಜಾತ್ರಾ ಮಹೋತ್ಸವದ ಮಹಾರಥೋತ್ಸವದ ವೇದಿಕೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಲೇ ಯುಪಿಎಸ್ಸಿ ಪರೀಕ್ಷೆಯ ಕನಸು ಹೊತ್ತು ಕೋವಿಡ್ ಲಾಕ್ಡೌನ್ ಪೂರ್ವದಲ್ಲೇ ತಯಾರಿ ಪ್ರಾರಂಭಿಸಿದೆ. ಯುಪಿಎಸ್ಸಿ ಪರೀಕ್ಷೆಯ ಯಾವುದೇ ಹಂತದಲ್ಲಿ ಅನುತ್ತೀರ್ಣಗೊಂಡರೂ ಮತ್ತೇ ಮೊದಲಿನಿಂದಲೇ ಶುರು ಮಾಡಬೇಕು. ಹಾಗಾಗಿ ಇದು ಕ್ಲಿಷ್ಟಕರ ಪರೀಕ್ಷೆಯಾಗಿದ್ದು, ನಾನು ಆರನೇ ಹಾಗೂ ಕೊನೆಯ ಪ್ರಯತ್ನದಲ್ಲಿ ಯಶಸ್ಸು ಕಂಡೆ’ಎಂದು ಹೇಳಿದರು.
‘ಸತತ ಪರಿಶ್ರಮದಿಂದ ಪ್ರಾಥಮಿಕ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಪಾಸಾಗಿ ಕರ್ನಾಟಕಕ್ಕೆ ಮೊದಲ ಸ್ಥಾನ ಹಾಗೂ ದೇಶಕ್ಕೆ 53ನೇ ರ್ಯಾಂಕ್ ಪಡೆದೆ. ನನ್ನ ಕನಸಿಗೆ ಮಾರ್ಗದರ್ಶನ ನೀಡಿದ ತಂದೆ-ತಾಯಿಗಳು ಹಾಗೂ ಸ್ನೇಹಿತರಿಗೆ ಋಣಿಯಾಗಿದ್ದು, ತೋಂಟದಾರ್ಯ ಮಠದ ಆಶೀರ್ವಾದ ನನ್ನ ಮೇಲಿದೆ. 9 ಹಾಗೂ 10ನೇ ತರಗತಿಯನ್ನು ಗದುಗಿನಲ್ಲೇ ವ್ಯಾಸಂಗ ಮಾಡಿರುವ ಕಾರಣ, ಈ ಜಿಲ್ಲೆಗೂ ನನಗೂ ವಿಶೇಷವಾದ ನಂಟಿದೆ’ಎಂದು ಹೇಳಿದರು.

ನ್ಯೂಯಾರ್ಕ್ನ ವಿಶ್ವಸಂಸ್ಥೆಯ ವಿಶ್ವ ರಾಷ್ಟ್ರಗಳ ಅಭಿವೃದ್ಧಿ ಕಾರ್ಯಕ್ರಮ ಸಮಿತಿಯಿಂದ 2025ನೇ ಸಾಲಿನ ಇಕ್ವೇಟರ್ ಪ್ರಶಸ್ತಿ ಪಡೆದ ಬೀಬಿ ಫಾತಿಮಾ ಸಂಘದ ಅಧ್ಯಕ್ಷೆ ಬೀಬಿಜಾನ್ ಹಳೇಮನಿ ಹಾಗೂ ಕೆಎಲ್ಇ ಸಂಸ್ಥೆಗೆ ನೂತನ ಸದಸ್ಯರಾಗಿ ಆಯ್ಕೆಗೊಂಡ ಮಂಜುನಾಥ ಮುನವಳ್ಳಿ ಅವರನ್ನು ಸತ್ಕರಿಸಲಾಯಿತು.
ಬೀದರ ಭಾತಂಬ್ರಾ ವಿರಕ್ತಮಠದ ಗುರುಬಸವ ಸ್ವಾಮೀಜಿಯವರಿಗೆ ‘ಸಮಾಜ ಸೇವಾರತ್ನ’ಹಾಗೂ ಸಂಖ ವಿರಕ್ತಮಠದ ಶಿವಲಿಂಗೇಶ್ವರ ಸ್ವಾಮೀಜಿಯವರಿಗೆ ‘ಬಸವ ಚೇತನ’ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಮಾರಂಭ ತೋಂಟದ ಸಿದ್ಧರಾಮ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಿತು. ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜನವರು, ಕಲಬುರಗಿ ರೋಜಾ ಹಿರೇಮಠದ ಕೆಂಚಬಸವ ಶಿವಾಚಾರ್ಯ ಸ್ವಾಮೀಜಿ, ರಟಕಲ್ಲ ಹಿರೇಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು.
ಮಾಜಿ ಸಂಸದ ಐ.ಜಿ. ಸನದಿ, ತೋಂಟದಾರ್ಯ ಮಠದ ಆಡಳಿತಾಧಿಕಾರಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟರ, ಮಾಜಿ ಸಚಿವ ಎಸ್.ಎಸ್. ಪಾಟೀಲ, ದೆಹಲಿ ಲಿಂಗಾಯತ ಜಾಟವಾ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ಜಿಲ್ಲಾ ಕದಳಿ ಮಹಿಳಾ ವೇದಿಕೆ, ನಿಮಿಷಾಂಬಾ ನೃತ್ಯ ವೇದಿಕೆ ಹಾಗೂ ಬಸವೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ವಚನ ನೃತ್ಯ, ಮನರಂಜನಾ ಕಾರ್ಯಕ್ರಮಗಳು ನಡೆದವು.
ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ವಿನಾಯಕ ಮಾನ್ವಿ, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಸರ್ವರಿಗೂ ಸಮಾನನ್ಯಾಯ ನಿಷ್ಪಕ್ಷಪಾತ ಸೇವೆ ಜೀವಪರವಾದ ನಿಷ್ಕಲ್ಮಶ ಮನುಷ್ಯತ್ವವು ಎಲ್ಲರಿಗೂ ಸಿಗಬೇಕೆಂದರೆ ಅದು ವಿಶ್ವಗುರು ಬಸವಣ್ಣರವರ ಜೀವನದರ್ಶನ ತತ್ವಾದರ್ಶಗಳಿಂದ ಮಾತ್ರ ಸಾಧ್ಯ ಯಾವುದೇ ಹುದ್ದೆಗೆ ಆಯ್ಕೆಯಾದ ಯಾರೇ ಆಗಲಿ ಬಸವಮಾರ್ಗದಿಂದ ನಡೆದರೆ ಅದಕ್ಕಿಂತ ಮೌಲಿಕವಾದ ಶ್ರೇಷ್ಠ ಬದುಕು ಮತ್ತೊಂದಿರಲಾರದು ಪ್ರತಿಯೊಬ್ಬರು ಬಸವಮಾರ್ಗದಿಂದ ನಡೆದರೆ ಸತ್ಯದ ಅರಿವು ವಾಸ್ತವ ಪ್ರಜ್ಞೆ ಸ್ವ ಆತ್ಮವಿಮರ್ಶೆ ನಿಸ್ವಾರ್ಥಸೇವೆಯ ಗುಣಗಳು ಜಾಗೃತವಾಗಿ ಸುಳ್ಳು ಅವಾಸ್ತವ ಅನ್ಯಾಯ ಸ್ವಾರ್ಥ ಲಂಚಗುಳಿತನ ಭ್ರಷ್ಟಾಚಾರ ಭೇದಭಾವ ಜಾತೀಯತೆ ಧರ್ಮಾಂಧತೆ ವರ್ಗಪ್ರಜ್ಞೆಗಳೆಂಬ ಸಮಾಜಪೀಡಕ ಪಿಡುಗುಗಳು ನಾಶವಾಗುತ್ತವೆ ಆಗ ಆರೋಗ್ಯಕರವಾದ ಸರ್ವಹಿತದ ಸಮಾಜಮುಖಿ ಕಾಯಕವು ಸಾಧ್ಯವಾಗಿ ಸರ್ವಜನ ಶಾಂತಿ ನೆಮ್ಮದಿಯಿಂದ ಇರಬಹುದು ನಿಮ್ಮಂತಹ ಬಸವನಿಷ್ಠರ ಸಂತತಿ ಹೆಚ್ಚಾಗಲಿ ಸರ್ ನಿಮ್ಮಲ್ಲಿರುವ ಬಸವತಾತ್ವಿಕ ಪ್ರಜ್ಞೆಗೆ ಗೌರವದ ಅಭಿನಂದನೆಗಳು 💐💐🙏🙏
ರಾಜ್ಯಕ್ಕೆ ಕೀರ್ತಿ ತಂದ ಕಿರಣ ಕಮತೆಯವರಿಗೆ ಹೃತ್ಪೂರ್ವಕ ಅಭಿನಂದನೆಗಳು 💐💐🙏🙏 ಬಸವಾದಿ ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿ ಹೇಳಿರುವುದು ತುಂಬ ಸಂತೋಷ ಜೊತೆಗೆ ಜನಮಾನಸದಲ್ಲಿಯೂ ಬಸವಾದಿ ಶರಣರ ವಿಚಾರಗಳನ್ನು ಪಸರಿಸುವಂತೆ ಮಾಡಿರಿ. ಇತ್ತಿಚೆಗೆ ಅಪಘಾತ ದಲ್ಲಿ ನಿಧನರಾದ ಬಸವ ನಿಷ್ಠ ಐಎಎಸ್ ಅಧಿಕಾರಿಗಳಾಗಿದ್ದ ಶರಣ ಲಿಂ.ಮಹೇಶ ಬೀಳಗಿಯವರಂತೆ ಬಸವಣ್ಣನವರನ್ನು ಆದರ್ಶವಾಗಿಟ್ಟುಕೊಂಡು ಸೇವೆ ಮಾಡಿ ಕೀರ್ತಿವಂತರಾಗಿರಿ ಎಂದು ಆಶಿಸುತ್ತೇನೆ. ಶರಣುಶಣಾರ್ಥಿಗಳು. 🙏🙏