ಕಲಬುರಗಿ:
ಚಿಂಚೋಳಿ ತಾಲೂಕಿನ ಕನಕಪುರ ಗ್ರಾಮದಲ್ಲಿ ಡಿ.6ರಿಂದ10ರ ವರೆಗೆ 12 ಅಡಿ ಎತ್ತರದ ಸಾಂಸ್ಕೃತಿಕ ನಾಯಕ ಬಸವೇಶ್ವರ ಅಶ್ವರೂಢ ಮೂರ್ತಿ ಲೋಕಾರ್ಪಣೆ ಸಮಾರಂಭ ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದು ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವೇಶ್ವರ ಅಶ್ವಾರೂಢ ಮೂರ್ತಿ ಉದ್ಘಾಟನಾ ಸಮಾರಂಭ ಸಮಿತಿ ಅಧ್ಯಕ್ಷ ರೇವಣಸಿದ್ದಯ್ಯ ಮಠ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಡಿ.6ರಿಂದ 9ರ ವರೆಗೆ ನಿತ್ಯ ಸಂಜೆ 7.30ಕ್ಕೆ ‘ಶರಣರ ಜೀವನ ಪ್ರವಚನ’ ಕುರಿತು ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಪ್ರವಚನ ನೀಡಲಿದ್ದಾರೆ. ಸಂಜೆ ನಡೆಯುವ ಕಾರ್ಯಕ್ರಮಕ್ಕೆ ಡಾ. ಬಸವಲಿಂಗ ಅವಧೂತರು ಸಮ್ಮುಖ ವಹಿಸಲಿದ್ದಾರೆ. ಸಚಿವ ಡಾ. ಶರಣಪ್ರಕಾಶ ಪಾಟೀಲ ಉದ್ಘಾಟಕರಾಗಿ ಪಾಲ್ಗೊಳ್ಳಲಿದ್ದಾರೆ. ಶಾಸಕ ಡಾ. ಅವಿನಾಶ ಜಾಧವ ಅಧ್ಯಕ್ಷತೆ ವಹಿಸಲಿದ್ದು, ಎಂಎಲ್ಸಿ ಜಗದೇವ ಗುತ್ತೇದಾರ್, ಕೆಕೆಆರ್‌ಟಿಸಿ ಅಧ್ಯಕ್ಷ ಎಂ.ವೈ. ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಡಿ.7ರಂದು ಬೆಳಗ್ಗೆ 7.30ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಲಿದೆ. ಡಿ.10ರಂದು ಬೆಳಗ್ಗೆ 8ಕ್ಕೆ ಗ್ರಾಮದಲ್ಲಿ ಬಸವೇಶ್ವರರ ಬೃಹತ್ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಸಾಂಸ್ಕೃತಿಕ ಕಲಾ ತಂಡಗಳಾದ ಡೊಳ್ಳು, ನಂದಿಧ್ವಜ, ಭಜನೆ, ಗ್ರಾಮದ ಮಹಿಳೆಯರಿಂದ ವಚನ ಸಾಹಿತ್ಯ ಪುಸ್ತಕವನ್ನು ತಲೆಯಮೇಲೆ ಹೊತ್ತು ಮೆರವಣಿಗೆ ಮಾಡಲಾಗುವುದು. ನಂತರ ಬೆಳಗ್ಗೆ 11ಕ್ಕೆ 12 ಅಡಿ ಎತ್ತರದ ಬಸವೇಶ್ವರ ಅಶ್ವರೂಢ ಮೂರ್ತಿ ಉದ್ಘಾಟನಾ ಸಮಾರಂಭ ಹಾಗೂ ಧರ್ಮಸಭೆ ನಡೆಯಲಿದೆ.
ಈ ಸಮಾರಂಭಕ್ಕೆ ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ. ಬಸವಲಿಂಗ ಪಟ್ಟದೇವರು ಸಾನಿಧ್ಯ ವಹಿಸಲಿದ್ದು, ಹಾರಕೂಡ ಹಿರೇಮಠ ಸಂಸ್ಥಾನದ ಡಾ. ಚನ್ನವೀರ ಶಿವಾಚಾರ್ಯರು, ಹುಲಸೂರಿನ ಡಾ. ಶಿವಾನಂದ ಸ್ವಾಮೀಜಿ, ಚಿಕ್ಕಗುರುನಂಜೇಶ್ವರ ಮಹಾಸ್ವಾಮೀಜಿ, ಪ್ರಭುದೇವ ಸ್ವಾಮೀಜಿ ಸೇರಿ ಅನೇಕ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ.

ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ ಉದ್ಘಾಟಕರಾಗಿ ಪಾಲ್ಗೊಳ್ಳಲಿದ್ದಾರೆ. ಶಾಸಕ ಡಾ. ಅವಿನಾಶ ಜಾಧವ ಅಧ್ಯಕ್ಷತೆ ವಹಿಸಲಿದ್ದು ಅನೇಕರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಆರ್.ಜಿ. ಶಟಗಾರ, ಸಂಗಮೇಶ ಮಠಪತಿ, ರಾಜಶೇಖರ ಯಂಕಂಚಿ, ಭೀಮಶೆಟ್ಟಿ ಪಾರಾ ಮತ್ತಿತರರು ಉಪಸ್ಥಿತರಿದ್ದರು.
ಕನ್ನೇರಿ ಸ್ವಾಮಿಗೆ ಎಚ್ಚರಿಕೆ:
ಕನ್ನೇರಿ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಬಸವ ಅನುಯಾಯಿಗಳನ್ನು ‘ಬಸವ ತಾಲಿಬಾನ್’ಗಳು ಎಂದು ಕರೆದಿರುವುದು ಮನುಷ್ಯತ್ವ ಇರುವವರಿಗೆ ನಾಚಿಕೆ ಬರುತ್ತದೆ. ಇದು ಖಂಡನೀಯ.

ಈ ಸ್ವಾಮೀಜಿ ಬಗ್ಗೆ ಮಾತನಾಡಲು ನನಗಂತೂ ನಾಚಿಕೆ ಬರುತ್ತದೆ. ಮೂರ್ಖ ಸ್ವಾಮೀಜಿ ಕುರಿತು ಮಾತನಾಡುವುದು ತಪ್ಪಾಗುತ್ತದೆ. ಇವರು ಇದೇ ರೀತಿ ನಾಲಿಗೆ ಹರಿಬಿಟ್ಟರೆ ನಾವು ಸಮ್ಮನೆ ಇರಲಿಕ್ಕೆ ಆಗುವುದಿಲ್ಲ. ಸ್ವಾಮೀಜಿ ನಾಲಿಗೆ ಹತೋಟಿಯಲ್ಲಿಟ್ಟುಕೊಳ್ಳಬೇಕು. ಸ್ವಾಮೀಜಿಯ ಹಿಂಬಾಲಕರು ಅವರನ್ನು ಕಂಟ್ರೋಲ್‌ನಲ್ಲಿ ಇಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡ ರವೀಂದ್ರ ಶಾಬಾದಿ ಎಚ್ಚರಿಸಿದರು.
