ನರಗುಂದ :
ಮಾತೃಹೃದಯ ಅಂತಃಕರಣದ ಕರುಣಾಮಯಿಗಳಾಗಿದ್ದ ಪೂಜ್ಯ ಡಾ.ತೋಂಟದ ಸಿದ್ಧಲಿಂಗ ಶ್ರೀಗಳು ಭಕ್ತರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದವರು. ಸಮಾಜ ಸೇವೆಯೇ ಶಿವಪೂಜೆ ಎಂದರಿತಿದ್ದ ಪೂಜ್ಯರು ಧಾರ್ಮಿಕ ಆಚರಣೆ ಮತ್ತು ಸಾಮಾಜಿಕ ಸುಧಾರಣೆಗಳಲ್ಲಿ ಜನಸಾಮಾನ್ಯರ ಪರ ಧ್ವನಿ ಎತ್ತಿ ಸರ್ವ ಜನಾಂಗದವರನ್ನೂ ಅಪ್ಪಿ ಒಪ್ಪಿಕೊಂಡಿದ್ದರು.
ಸಾಮಾಜಿಕ ಅಸಮಾನತೆಯ ವಿರುದ್ದ ದಣಿವರಿಯದೆ ಹೋರಾಟವನ್ನು ಮಾಡುತ್ತಾ ಬಂದ ಅವರು ತಮ್ಮ ಜೀವನದುದ್ದಕ್ಕೂ ನಡೆದದ್ದು ಕಲ್ಲು ಮುಳ್ಳಿನ ಹಾದಿಯಲ್ಲಿಯೆ ಎಂದು ನವಲಗುಂದ ಗವಿಮಠದ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀ ದೊರೆಸ್ವಾಮಿ ವಿವಿದೋದ್ದೇಶ ಟ್ರಸ್ಟ್ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕೋಮುಸೌಹಾರ್ದತೆಯ ಹರಿಕಾರ ಪೂಜ್ಯ ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ೭೭ ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಕನ್ನಡ ನಾಡು-ನುಡಿಗಾಗಿ ಅವರು ಮಾಡಿದ ಹೋರಾಟ ಕನ್ನಡ ಸಾರಸ್ವತ ಲೋಕದ ಚರಿತ್ರೆಯಲ್ಲಿ ಅಜರಾಮರವಾದುದು.

ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ ೫೦೦ ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಕೆಲಸವನ್ನು ಪೂಜ್ಯರು ಸಾದಿಸಿದ್ದು ಅವರ ಪುಸ್ತಕ ಪ್ರೀತಿಯನ್ನು ತೋರಿಸುತ್ತದೆ.
ಜಗದ್ಗುರುಗಳಾದವರು ತಮ್ಮ ಸ್ಥಾನಮಾನಗಳ ಬಿಗುಮಾನಗಳನ್ನು ಬದಿಗಿರಿಸಿ ಶ್ರೀಸಾಮಾನ್ಯರೊಂದಿಗೆ ಡಂಬಳದ ರಥಬೀದಿಯಲ್ಲಿ ನಿಂತದ್ದು, ನಡೆದದ್ದು ಅವರ ಪ್ರಗತಿಪರ ಚಿಂತನೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ವಿಶ್ರಾಂತ ಉಪನ್ಯಾಸಕರಾದ ಪ್ರೊ.ಎಸ್.ಬಿ.ಭಜಂತ್ರಿ ಅವರು ಮಾತನಾಡಿ, ದುಡಿಯುವವರ, ಶ್ರಮಿಕರ ಪರವಾದ ಉದಾರತೆಯನ್ನು ತೋರಿದ ತೋಂಟದ ಶ್ರೀಗಳು ಈ ಶತಮಾನದ ಬಸವಣ್ಣ.
ಅರಣ್ಯ, ಪ್ರಾಣಿ, ರೈತ ಹಾಗೂ ಶ್ರಮಿಕರು ಹೀಗೆ ಸಮಾಜದಲ್ಲಿರುವ ಪ್ರತಿಯೊಬ್ಬರಿಗೂ ಅನ್ಯಾಯವಾದಾಗ ಹೋರಾಟದ ಮೂಲಕ ಅವರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸಿದ ಪೂಜ್ಯರು ಸರ್ವರಿಗೂ ಆದರ್ಶಪ್ರಾಯರು.
ಜಾತಿ ಬೇಧವರಿಯದೆ ಮನುಕುಲದ ಒಳತಿಗಾಗಿ ಶ್ರಮಿಸಿದ ಎಲ್ಲ ಜನಾಂಗದ ಮಹನೀಯರ ಜಯಂತಿಯನ್ನು ಶ್ರೀಮಠದಲ್ಲಿ ಆಚರಿಸಿ ಭಾವೈಕ್ಯತೆಯ ಸಂದೇಶವನ್ನು ಸಾರಿದವರು.

ಭಾಷೆ, ನಾಡು ಜನರ ಹಿತಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು. ಕನ್ನಡ ಭಾಷೆ ಉಳಿದರೆ ನಾವು ಉಳಿದೇವು ಎಂಬ ನಿಲುವನ್ನು ಹೊಂದಿದ್ದ ಪೂಜ್ಯರು ತಮ್ಮ ಉಸಿರು ಇರುವರೆಗೂ ಕನ್ನಡದ ಸಂರಕ್ಷಕಣೆಗೆ ಕಂಕಣಬದ್ಧರಾಗಿದ್ದರು ಎಂದು ಅವರು ಹೇಳಿದರು.
ಮುಖ್ಯ ಶಿಕ್ಷಕರಾದ ವ್ಹಿ.ಜಿ.ಬೋಗಾರ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು. ವೇದಿಕೆ ಮೇಲೆ ಭೈರನಹಟ್ಟಿ-ಶಿರೋಳ ಮಠದ ಪೀಠಾಧಿಪತಿ ಪೂಜ್ಯ ಶಾಂತಲಿಂಗ ಶ್ರೀಗಳು, ಬಿ.ಎಮ್.ಲಂಕೆನ್ನವರ, ಎಸ್.ಎಸ್.ಪಾಟೀಲ, ಆರ್.ಕೆ.ಐನಾಪೂರ, ಆರ್.ಬಿ.ಚಿನಿವಾಲರ, ಮಹಾಂತೇಶ ಹಿರೇಮಠ ಪ್ರಮುಖರು ಉಪಸ್ಥಿತರಿದ್ದರು.
ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/
