‘ಬೇಡ ಜಂಗಮ ಪ್ರಮಾಣ ಪತ್ರ ಪಡೆದಿರುವವರ ಬಗ್ಗೆ ಸಮಗ್ರ ತನಿಖೆಯಾಗಲಿ’

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ್

ವೀರಶೈವ ಜಂಗಮರೆಲ್ಲ ಬೇಡ ಜಂಗಮರೆಂದು ಜಾತಿ ಪ್ರಮಾಣ ಪತ್ರ ಪಡೆದು, ಬಡವರಿಗೆ, ಪರಿಶಿಷ್ಟ ಜಾತಿಯ ಜನರಿಗೆ ಮೋಸ ಮಾಡುತ್ತಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ದಲಿತ ಮುಖಂಡ, ಚಿಂತಕ ಪ್ರೊ.ವಿಠಲದಾಸ್ ಪ್ಯಾಗೆ ಆಗ್ರಹಿಸಿದರು.

ಶನಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 1961 ರಲ್ಲಿ ಬೇಡ ಜಂಗಮರು ಬರೀ 16 ಜನ ಮಾತ್ರ ಇದ್ದರು. 1971 ರಲ್ಲಿ ಅವರ ಸಂಖ್ಯೆ 335 ಇತ್ತು. ಆದರೆ 1981 ರಲ್ಲಿ ಅವರ ಜನಸಂಖ್ಯೆ 27 ಸಾವಿರಕ್ಕೆ ಹೆಚ್ಚಳವಾಗಿದೆ. ಇದು ಆಶ್ಚರ್ಯಕರ ಸಂಗತಿಯಾಗಿದೆ, ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ‘ವೀರಶೈವ ಜಂಗಮ ಜಾತಿಗೆ ಸೇರಿದವರು ಪರಿಶಿಷ್ಟ ಜಾತಿಯಲ್ಲಿ ಬರುವ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆಯಲು ಅರ್ಹರಲ್ಲ ಎಂದು ಹೈಕೋರ್ಟ್‌ ದ್ವಿಸದಸ್ಯ ಪೀಠದ ತೀರ್ಪು ಐತಿಹಾಸಿಕವಾಗಿದ್ದು, ಅದನ್ನು ಸ್ವಾಗತಿಸುತ್ತೇವೆ’ ಎಂದು ಹೇಳಿದರು.

ಲಿಂಗಾಯತ ಜಂಗಮರಾಗಿರುವ ಮುಖಂಡ ರವೀಂದ್ರ ಸ್ವಾಮಿ ಎಂಬುವರು ಸತ್ಯ ಮುಚ್ಚಿಟ್ಟು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪರಿಶಿಷ್ಟ ಜಾತಿಯ ಬೇಡ ಜಂಗಮ ಪ್ರಮಾಣ ಪತ್ರ ಪಡೆದಿದ್ದರು. ಈ ಕುರಿತು ನಾನು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದಾಗ ಅವರು ಅದನ್ನು ರದ್ದುಗೊಳಿಸಿದ್ದರು. ಆದರೆ, 2019ರಲ್ಲಿ ದಾಖಲೆಗಳನ್ನು ತಿರುಚಿ ಪ್ರಮಾಣ ಪತ್ರ ಪಡೆದಿದ್ದರು. ಜಿಲ್ಲಾಧಿಕಾರಿಗೆ ಪುನಃ ದೂರು ಸಲ್ಲಿಸಿದ್ದೆ. ಸರ್ಕಾರ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಈಗ ₹1 ಲಕ್ಷ ದಂಡ ಹಾಕಿ ಛೀಮಾರಿ ಹಾಕಿದೆ ಎಂದರು.

ಈ ಸಂದರ್ಭದಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕ ಅರುಣ್ ಪಟೇಲ್, ಜಿಲ್ಲಾ ಸಂಘಟನಾ ಸಂಚಾಲಕ ರಾಜಕುಮಾರ್ ವಾಘಮಾರೆ, ಹಿರಿಯ ಮುಖಂಡ ಡಾ.ಕಾಶಿನಾಥ್ ಚಲ್ವಾ, ವಿಜಯಕುಮಾರ್ ಗಾಯಕವಾಡ್, ವಿನೋದ್ ಬಂದಗೆ ಹಾಗೂ ಸುಧಾಕರ್ ಸೇರಿದಂತೆ ಇತರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *