ರಾಮದುರ್ಗ
ಸರ್ವಕಾಲಿಕ ಸತ್ಯವಾದ ಬಸವಾದಿ ಶಿವಶರಣರ ತತ್ವಗಳನ್ನು ಜನಮನಕ್ಕೆ ತಲುಪಿಸುವದು ಬಸವ ಸಂಸ್ಕೃತಿ ಅಭಿಯಾನದ ಉದ್ದೇಶವಾಗಿದೆ. ಜಾತಿ, ಮತ ಭೇದ, ಮೇಲು ಕೀಳು, ಕಿರಿಯ ಹಿರಿಯರೆನ್ನದೆ ಸರ್ವರಿಗೂ ಸಮಪಾಲು ಸಮಬಾಳು ಸಾರಿ, ಕಾಯಕ ದಾಸೋಹ ಪ್ರಸಾದಿಕ ಜೀವನಕ್ಕೆ ಕರೆ ನೀಡಿದ ಬಸವಾದಿ ಶರಣರ ತತ್ವಗಳಿಗೆ ಜಗತ್ತು ಇಂದು ಮಾರು ಹೋಗಿದೆ. ಕರ್ನಾಟಕ ಘನ ಸರಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರು ಎಂದು ಘೋಷಿಸಿದೆ. ನಾವೆಲ್ಲರೂ ಒಂದಾಗಿ ಬಸವ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಕಂಕಣ ಬದ್ಧರಾಗಬೇಕಾಗಿದೆ ಎಂದು ಕಟಕೋಳ ವಿರಕ್ತ ಮಠದ ಸಚ್ಚಿದಾನಂದ ಶ್ರೀಗಳು ಆಶೀರ್ವಚನ ನೀಡಿದರು.
ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದ ಚೌಕಿಮಠದಲ್ಲಿ ಶ್ರಾವಣ ಮಾಸ ನಿತ್ಯ ಸಾಗಿಬಂದ ಜಂಗಮ ಪೂಜೆಯ ಮಹಾಮಂಗಲದ ಸಾನಿಧ್ಯ ವಹಿಸಿ ಅವರು ಮಾತನಾಡಿ ಸಪ್ಟಂಬರ್ 11ರಂದು ಬೆಳಗಾವಿಯಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನವನ್ನು ಯಶಸ್ವಿಗೊಳಿಸಲು ಭಕ್ತರಿಗೆ ಕರೆ ನೀಡಿದರು.
ತಿಂಗಳಪರ್ಯಂತ ಮಠದ ಪರಂಪರೆಯಂತೆ ಸಾಗಿಬಂದ ಜಂಗಮ ಪೂಜೆ ಸ್ವೀಕರಿಸಿದ ಪೀಠದ ಒಡೆಯರಾದ ನಾಗಭೂಷಣ ಶ್ರೀಗಳು ಮಾತನಾಡುತ್ತಾ, ಗುರುಲಿಂಗ ಜಂಗಮ ಆರಾಧನೆ ಲಿಂಗಾಯತರ ಶ್ರೇಷ್ಠ ಪೂಜೆ, ಸೇವೆಗೈದ ಭಕ್ತರಿಗೆ ಶುಭ ಕೋರಿ ಅಭಿಯಾನದ ಕರಪತ್ರ ಬಿಡುಗಡೆಗೊಳಿಸಿದರು.

ಬೈಲಹೊಂಗಲದ ಪತ್ರಿ ಬಸವೇಶ್ವರ ಅನುಭವ ಮಂಟಪದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಉಪನ್ಯಾಸ ನೀಡುತ್ತಾ, ಬಹುದೇವೋಪಾಸನೆಗೆ ಒಳಗಾಗುತ್ತಿರುವ ಲಿಂಗಾಯತರು ಬಸವ ಸಂಸ್ಕೃತಿಯ ನಿಜಾಚರಣೆಗಳನ್ನು ಅರಿತು ಆಚರಿಸಲು ವಚನಗಳನ್ನು ಓದಬೇಕು. ಲಿಂಗ ಪೂಜೆಗೆ ಸಲಹೆ ನೀಡಿ ಅಹಂಗ್ರೋಪಾಸನೆ ಆಚರಿಸಿ ಮೂಢನಂಬಿಕೆ ಅಂಧಾನುಕರಣೆಗೆ ಬಲಿಯಾಗದಿರಲು ಕರೆ ನೀಡಿದರು.
ಶ್ರೀ ಮಠದ ಅಕ್ಕನ ಬಳಗ, ಅನೇಕ ಮಹಿಳಾ ಸಂಘಟನೆ, ಯುವ ಸಂಘಟನೆಗಳ ಸದಸ್ಯರು, ಕಟಕೋಳದ ಗುರು ಹಿರಿಯರು ಉಪಸ್ಥಿತರಿದ್ದರು.
ವಿರಕ್ತ ಮಠದಿಂದ ಚೌಕಿ ಮಠದವರೆಗೆ ಭಜನೆ, ಆರತಿಯೊಂದಿಗೆ ಸಚ್ಚಿದಾನಂದ ಶ್ರೀಗಳವರ ನೇತೃತ್ವದಲ್ಲಿ ಭವ್ಯವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗುತ್ತಾ ಭಕ್ತರು ಸಂಭ್ರಮಿಸಿ, ಭಕ್ತಿಯ ಪರಾಕಾಷ್ಟೆ ಮೆರೆದರು.
ಶ್ರೀ ಮಹಾಂತಯ್ಯ ಶಾಸ್ತ್ರಿಗಳು ಜಂಗಮ ಪೂಜೆ ನೆರವೇರಿಸಿದರು. ಗಂಗಮ್ಮ ಕುಂಬಾರ ಪ್ರಾರ್ಥಿಸಿದರು. ಮಲ್ಲಪ್ಪ ಕುರಬೇಟ ಸ್ವಾಗತಿಸಿದರು. ಬಾಳಯ್ಯ ಹಿರೇಮಠ ಪ್ರಸ್ತಾವಿಕ ನುಡಿದರು. ಬಸವರಾಜ ಗಂಗಾಳೆ ನಿರೂಪಿಸಿದರು.