ಇಂದು ಸಿಟಿ ರವಿ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಳಗಾವಿ

ವಿಧಾನ ಪರಿಷತ್ ಅಧಿವೇಶನದ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತಾಗಿ ಕೆಟ್ಟ ಪದ ಬಳಸಿರುವ ಸಿ ಟಿ ರವಿ ಸದಸ್ಯತ್ವ ವಜಾಗೊಳಿಸುವಂತೆ ಲಿಂಗಾಯತ ಪಂಚಮಸಾಲಿ ಮುಖಂಡರು ಆಗ್ರಹಿಸಿದ್ದಾರೆ.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಅಡಿವೇಶ ಇಟಗಿ ‘ಲಕ್ಷ್ಮಿ ಹೆಬ್ಬಾಳಕರ ಬಗ್ಗೆ ಸಿ.ಟಿ.ರವಿ ನೀಡಿದ ಹೇಳಿಕೆ ಖಂಡಿಸಿ, ನಗರದಲ್ಲಿ ಡಿ. 21ರಂದು ಹೆಬ್ಬಾಳಕರ ಅಭಿಮಾನಿ ಬಳಗದವರು ಪ್ರತಿಭಟನೆ ಮಾಡಲಿದ್ದೇವೆ. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಿದ್ದೇವೆ’ ಎಂದರು.

ಲಿಂಗಾಯತ ಪಂಚಮಸಾಲಿ ಮುಖಂಡ ಗುಂಡು ಪಾಟೀಲ ಅವರು ‘ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಕುರಿತಾಗಿ ಕೆಟ್ಟ ಪದ ಬಳಸಿದ್ದು ಖಂಡನೀಯ. ತಕ್ಷಣವೇ ಅವರ ಸದಸ್ಯತ್ವ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.

ಅವರು, ‘ಭಾರತದಲ್ಲಿ ಮಹಿಳೆಯರಿಗೆ ಅಪಾರವಾದ ಗೌರವವಿದೆ. ಹೆಣ್ಣು ಮಕ್ಕಳಿಗೆ ದೈವೀಸ್ಥಾನ ಕೊಡಲಾಗಿದೆ. ಹೀಗಿರುವಾಗ, ರವಿ ಅವರು ಅವಾಚ್ಯ ಶಬ್ದ ಬಳಸಿ, ಇಡೀ ಮಾನವ ಕುಲಕ್ಕೆ ಅಪಮಾನ ಮಾಡಿದ್ದಾರೆ. ನಮ್ಮ ಸಮುದಾಯ ಇದನ್ನು ತೀವ್ರವಾಗಿ ಖಂಡಿಸುತ್ತದೆ’ ಎಂದರು.

ಹೆಣ್ಣಿನ ಮೇಲೆ ಗೌರವವಿರಲಿ

‘ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಸಿ.ಟಿ.ರವಿ ಅವಾಚ್ಯ ಶಬ್ದ ಬಳಕೆ ಮಾಡಿರುವ ಆರೋಪ ಕೇಳಿಬಂದಿದ್ದು, ದೇಶದಲ್ಲಿ ಹುಟ್ಟಿರುವ ಪ್ರತಿ ಹೆಣ್ಣಿನ ಮೇಲೆ ಗೌರವವಿರಬೇಕು. ವಿಧಾನಸೌಧದಲ್ಲಾಗಲಿ, ಹೊರಗೇ ಆಗಲಿ ಅವಹೇಳನಕಾರಿಯಾಗಿ ಮಾತನಾಡಬಾರದು. ಯಾವುದೇ ಸಮುದಾಯದ ಮಹಿಳೆಗೂ ಆ ರೀತಿ ಮಾತನಾಡಬಾರದು’ ಎಂದು ಖಂಡಿಸಿದರು. ‘ಸಚಿವರ ಜೊತೆ ನಮ್ಮ ಸಮಾಜ ನಿಲ್ಲುತ್ತದೆ’ ಎಂದು ಹೇಳಿದರು.

Share This Article
Leave a comment

Leave a Reply

Your email address will not be published. Required fields are marked *