ಬೀದರ
ಬಸವಾದಿ ಶರಣರ ತತ್ವಗಳು ಜಾಗತಿಕ ಮೌಲ್ಯಗಳಾಗಿವೆ. ಜಾತಿ, ಧರ್ಮ, ಸಂಸ್ಕೃತಿ, ಭಾಷೆ, ಪ್ರಾಂತ, ದೇಶ ಮೀರಿ ಇಡೀ ವಿಶ್ವಕ್ಕೆ ವ್ಯಾಪಿಸತಕ್ಕಂತಹ ವಿಶ್ವ ಮಾನನೀಯ ತತ್ವಗಳಾಗಿವೆ. ಚಾಮರಸನ ಪ್ರಭುಲಿಂಗ ಲೀಲೆ ತತ್ವಗಳನ್ನು ಬಿತ್ತರಿಸುವಂತಹ ಮೊದಲ ಕಾವ್ಯವಾಗಿದೆ. ಶರಣರ ಸಂಗದಿಂದ ನಮ್ಮೊಳಗೆ ದೈವತ್ವ ಇದೆ ಎಂಬ ಅರಿವು ಬರುತ್ತದೆ. ಬಸವಾದಿ ಶರಣರ ತತ್ವಾಧಾರಿತ ಯೋಗಿಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಬಸವಕಲ್ಯಾಣ ಬಸವ ಮಹಾಮನೆ ಸಂಸ್ಥೆಯ ಪೂಜ್ಯ ಡಾ. ಸಿದ್ದರಾಮ ಬೆಲ್ದಾಳ ಶರಣರು ಹೇಳಿದರು.
ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ರವಿವಾರ ನಗರದ ಶರಣ ಉದ್ಯಾನದಲ್ಲಿ ನಡೆದ ಶ್ರಾವಣ ಮಾಸ ಪ್ರವಚನ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿಕೊಂಡು ಮಾತನಾಡಿದರು.
ಒಂದು ತಿಂಗಳ ಪರ್ಯಂತರ ಪ್ರವಚನ ಮಾಡಿದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಸ್ವತಂತ್ರ ಪ್ರಾಣಕ್ಕಿಂತ ಶ್ರೇಷ್ಠ, ಇಡೀ ಜಗತ್ತಿಗೆ ಸ್ವತಂತ್ರ, ಸಮಾನತೆಗಾಗಿ ತಮ್ಮ ಪ್ರಾಣ ಬಲಿದಾನ ಮಾಡಿ ಹೊಸ ಸಂಸ್ಕೃತಿ, ಹೊಸ ನಾಗರಿಕತೆ ನೀಡಿ ಲಿಂಗಾಯತ ಧರ್ಮದ ತತ್ವಗಳ ಮೂಲಕ ಬದುಕಲು ಕಲಿಸಿದವರು ಬಸವಾದಿ ಶರಣರು. ಲಿಂಗಾಯತ ಧರ್ಮ ಸಕಲ ಹಿತ ಸಿದ್ಧಾಂತವಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆ ಒಳ್ಳೆಯ ಸಂಸ್ಕಾರ ನೀಡಬೇಕು ಶರಣರ ತತ್ವಗಳ ಮೂಲಕ ಜೀವನ ಸಫಲತೆಯ ಕಡೆ ಸಾಗುವಂತಾಗಲಿ ಎಂದು ಸದಾಶಯ ವ್ಯಕ್ತಪಡಿಸಿದರು.
ಜಾಗತಿಕ ಲಿಂಗಾಯತ ಮಹಾಸಭೆಯ ಹಿರಿಯ ಉಪಾಧ್ಯಕ್ಷ ಬಸವರಾಜ ಬುಳ್ಳಾ ಮಾತನಾಡಿ, ಬೇಡಿದ್ದುದನ್ನು ನೀಡುವ ಶಕ್ತಿ ಇಷ್ಟಲಿಂಗದಲ್ಲಿದೆ. ಸಮಾಜ ಮತ್ತು ದೇವರು ಬೇರೆ ಇಲ್ಲ ಎಂಬ ಭಾವನೆಯಿರಬೇಕು. ಲಿಂಗಾಯತ ಧರ್ಮ ವೈಜ್ಞಾನಿಕ ಧರ್ಮವಾಗಿದೆ ಎಂದರು.

ಅಕ್ಕಮಹಾದೇವಿ ಗವಿಯ ಪೂಜ್ಯ ಸತ್ಯಕ್ಕತಾಯಿ ವಚನ ಪಠಣ ಮಾಡಿದರು. ನಿವೃತ್ತ ಡೀನ್ ಅಮರನಾಥ ಸೋಲಪುರೆ, ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಜ್ಞಾನದೇವಿ ಬಬಛೆಡೆ ಮಾತನಾಡಿದರು.
ಬಸವಕಲ್ಯಾಣ ಕ್ಷೇತ್ರ ಸಮಿತಿ ಸಂಯೋಜಕ ಬಸವರಾಜ ಪಾಟೀಲ ಸೇಡಂ, ಬಸವ ಜ್ಯೋತಿ ಬೆಳಗಿಸಿ ಮಾತನಾಡಿದರು.
ಜ್ಯೋತಿ ಸೂರ್ಯಕಾಂತ ಅಲ್ಮಾಜೆ ಧ್ವಜಾರೋಹಣ ಮಾಡಿದರು. ಬಸವರಾಜ ತೊಂಡಾರೆ, ಮಡಿವಾಳಯ್ಯ ಸ್ವಾಮಿ, ಸುನೀಲ ಹೆಗ್ಗಣೆ ಲಾತೂರ, ಪ್ರದೀಪ ಬಿರಾದಾರ ಹೈದ್ರಾಬಾದ, ಚಂದ್ರಶೇಖರ ತಂಗಾ ಮುಸ್ತರಿ ಉಪಸ್ಥಿತರಿದ್ದರು.
ನೃತ್ಯಾಂಗನ ನಾಟ್ಯ ಮತ್ತು ಕಲಾ ಕೇಂದ್ರ ಬೀದರ ತಂಡದವರು ನಡೆಸಿಕೊಟ್ಟ ವಚನ ನೃತ್ಯಗಳು ಗಮನ ಸೆಳೆದವು. ಶಿವಕುಮಾರ ಪಂಚಾಳ ಮತ್ತು ಆದಿತ್ಯ ಪಂಚಾಳ ವಚನ ಸಂಗೀತ ನಡೆಸಿಕೊಟ್ಟರು. ಉಷಾ ಮಿರ್ಚೆ ಸ್ವಾಗತಿಸಿದರೆ ರಾಜಮತಿ ಪ್ರಭುಗಂಗು ನಿರೂಪಿಸಿದರು. ಇದೇ ಸಂದರ್ಭದಲ್ಲಿ ಗಣ ನಾಯಕ, ನಾಯಕಿಯರನ್ನು ಗೌರವಿಸಿ ಸನ್ಮಾನಿಸಲಾಯಿತು.