ಬೆಂಗಳೂರಿನಲ್ಲಿ ಮೂಢನಂಬಿಕೆಯ ಗ್ರಹಣದ ವಿರುದ್ಧ ಕಾರ್ಯಕ್ರಮ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಬೆಂಗಳೂರು

ಮೂಢನಂಬಿಕೆ ವಿರೋಧಿ ಒಕ್ಕೂಟ ಇಂದು ರಾತ್ರಿ 08 ಗಂಟೆಯ ನಂತರ ಟೌನ್ ಹಾಲ್ ಹತ್ತಿರ ವೈಜ್ಞಾನಿಕ ಮನೋಧರ್ಮದೊಂದಿಗೆ ಸೂರ್ಯಗ್ರಹಣ ಎಂಬ ಕಾರ್ಯಕ್ರಮ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ವೆಜಿಟೇಬಲ್ ಪಲಾವ್, ಕಾಯಿ ಒಬ್ಬಟ್ಟು, ಸಮೋಸ, ಹಣ್ಣುಗಳು, ಬಿಸ್ಕೆಟ್, ಬ್ಲಾಕ್ ಟೀ ಮತ್ತು ಇನ್ನಿತರ ತಿನಿಸುಗಳನ್ನು ಭಾಗವಹಿಸುವ ಎಲ್ಲರಿಗೂ ವಿತರಿಸಿ ಅದನ್ನು ಸಾಮೂಹಿಕವಾಗಿ ಸೇವಿಸಲಾಗುತ್ತದೆ.

ಅಕ್ಟೋಬರ್ 02ರ ರಾತ್ರಿ 09 ಗಂಟೆ 12 ನಿಮಿಷದಿಂದ ಶುರುವಾಗಿ ಸುಮಾರು 03 ಗಂಟೆ ರಾತ್ರಿಯವರೆಗೆ ನಡೆಯುವ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.

ಬಸವ ಮೀಡಿಯಾದ ಜೊತೆ ಮಾತನಾಡುತ್ತ ಒಕ್ಕೂಟದ ಟಿ. ನರಸಿಂಹಮೂರ್ತಿ ಗ್ರಹಣಗಳು ಆದಾಗಲೆಲ್ಲ ಗ್ರಹಣ ಸಮಯದ ಬಗೆಗಿನ ಮೂಢನಂಬಿಕೆಗಳು ತೊಲಗಲಿ ಎನ್ನುವ ಉದ್ದೇಶಗಳನ್ನು ಇಟ್ಟುಕೊಂಡು, ಮಹಾನ್ ಚೇತನಗಳಾದ ಬಸವಣ್ಣ, ಕುವೆಂಪು, ಬಾಬಾಸಾಹೇಬ ಅಂಬೇಡ್ಕರ್ ಅವರ ವೈಜ್ಞಾನಿಕ, ವೈಚಾರಿಕ ವಿಚಾರ, ಸಂದೇಶಗಳನ್ನು ಈ ಸಂದರ್ಭದಲ್ಲಿ ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ.

ಜ್ಯೋತಿಷಿಗಳು, ಪುರೋಹಿತಶಾಹಿಗಳು ಟಿ.ವಿ. ಚಾನೆಲ್ ನಲ್ಲಿ ಕುಳಿತುಕೊಂಡು ಈ ಗ್ರಹಣಗಳ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಹೇಳುತ್ತಾರೆ, ಕೆಟ್ಟ ಅಭಿಪ್ರಾಯಗಳನ್ನು ರೂಪಿಸುತ್ತಾರೆ. ಮೂಢನಂಬಿಕೆಗಳನ್ನು ಬಿತ್ತುವುದು ಸರಿಯಾದದ್ದಲ್ಲ. ಇದರ ಬಗ್ಗೆ ಜನರನ್ನು ಎಚ್ಚರಗೊಳ್ಳಬೇಕು, ಜನರು ಸತ್ಯವನ್ನು ಅರಿತುಕೊಳ್ಳಬೇಕು, ಜನರಿಂದ ಮೂಢನಂಬಿಕೆಗಳು ಸಂಪೂರ್ಣ ಹೋಗಬೇಕು ಎಂಬ ಆಶಯವನ್ನು ನಾವು ಹೊಂದಿದ್ದೇವೆ.

ಬಸವಣ್ಣನವರ ನಾಡಿನಲ್ಲಿ ಮೌಡ್ಯ, ಕಂದಾಚಾರ ನಡೆಯುತ್ತಿರುವುದು ನಮಗೆ ನೋವು ಎನಿಸುತ್ತದೆ. ಈಗಲಾದರೂ ಬಸವತತ್ವ, ಸಂದೇಶದಂತೆ ನಾವೆಲ್ಲ ನಡೆಯಬೇಕಾಗಿದೆ. ಅವರ ತತ್ವಗಳನ್ನು ಜನರ ಹತ್ತಿರಕ್ಕೆ ತೆಗೆದುಕೊಂಡು ಹೋಗಬೇಕಾದ ಹಂತಕ್ಕೆ ನಾವೀಗ ಬಂದಿದ್ದೇವೆ. ಬಸವ ಸಂದೇಶದ ಅರಿವು ಜನರಲ್ಲಿ ಮೂಡಬೇಕಾಗಿದೆ.

ವಿಜ್ಞಾನದೆಡೆಗೆ ನಮ್ಮ ನಡಿಗೆ, ತೊಲಗಲಿ ತೊಲಗಲಿ ಮೂಢನಂಬಿಕೆ ತೊಲಗಲಿ, ಬೆಳೆಯಲಿ ಬೆಳೆಯಲಿ ವಿಜ್ಞಾನ ಬೆಳೆಯಲಿ ಎಂಬ ಘೋಷಣೆಗಳೊಂದಿಗೆ ಸೇರಿದ ಸಮಾನಮನಸ್ಕರೆಲ್ಲ ಒಟ್ಟಾಗಿ ಉಪಹಾರ ಸೇವಿಸುತ್ತ ಈ ಕಾರ್ಯಕ್ರಮ ಮಾಡುತ್ತೇವೆ.

ಕಳೆದ 20 ವರ್ಷಗಳಿಂದ ಇಂಥ ಕಾರ್ಯಕ್ರಮ ಮಾಡುತ್ತ ಬಂದಿರುವೆ. ಕಾರ್ಯಕ್ರಮದ ಖರ್ಚುವೆಚ್ಚ ನಿಭಾಯಿಸುತ್ತಾ ಸಾಗಿರುವೆ. ಈ ರೀತಿಯ ಸೇವೆಯೊಂದಿಗೆ ಸಮಾಜವನ್ನು ವೈಜ್ಞಾನಿಕ, ವೈಚಾರಿಕ ನೆಲೆಯತ್ತ ಹೊಯ್ಯುವ ಪ್ರಯತ್ನಗಳೊಂದಿಗೆ ಸಮಾಜದಲ್ಲಿ ಕಾರ್ಯಕ್ರಮ ಮಾಡುತ್ತಾ, ಸಮಾಜಸೇವೆ ಮಾಡುತ್ತಿರುವೆ. ಕಾರ್ಯಕ್ರಮ ಮುಕ್ತಾಯದವರೆಗೂ ಇದ್ದು ಸ್ಥಳವನ್ನು ಸ್ವಚ್ಛಗೊಳಿಸಿಯೇ ಇಲ್ಲಿಂದ ತೆರುಳುವುದಾಗಿ ಒಕ್ಕೂಟದ ಸಂಚಾಲಕ ಟಿ.ನರಸಿಂಹಮೂರ್ತಿ ಅವರು ಹೇಳುತ್ತಾರೆ.

Share This Article
Leave a comment

Leave a Reply

Your email address will not be published. Required fields are marked *