ಬೀದರ
ಲಿಂಗಾಯತ ಎರವಲು ಧರ್ಮವಲ್ಲ. ಸ್ವಂತ ಹೊಸ ಬೇರು ಆಳವಾಗಿ ಬಿಟ್ಟು ಹೆಮ್ಮರವಾಗಿ ಬೆಳೆದ ಧರ್ಮ ಎಂದು ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ಗಾಂಧಿಗಂಜ್ನ ಬಸವೇಶ್ವರ ದೇವಸ್ಥಾನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದಿಂದ ಈಚೆಗೆ ನಡೆದ ಮಾಸಿಕ ವಚನ ಮಂಟಪ ಕಾರ್ಯಕ್ರಮದಲ್ಲಿ ‘ಲಿಂಗಾಯತ ಧರ್ಮ ಪರಿಪೂರ್ಣ ಧರ್ಮ’ ಕುರಿತು ಅವರು ಅನುಭಾವ ಮಂಡಿಸಿದರು.
ಆಡು ಮುಟ್ಟದ ಸೊಪ್ಪಿಲ್ಲ. ಲಿಂಗಾಯತ ಧರ್ಮ ಬೋಧಿಸದ ತತ್ವಗಳೇ ಇಲ್ಲ. ಹೀಗಾಗಿ ಲಿಂಗಾಯತ ಪರಿಪೂರ್ಣ ಧರ್ಮವಾಗಿದೆ, ಲಿಂಗಾಯತ ಧರ್ಮದ ತತ್ವಗಳನ್ನು ಅಳವಡಿಸಿಕೊಂಡು ಕ್ರಮಬದ್ಧವಾಗಿ ನಡೆದರೆ ಮಾನವ ದೇವನಾಗಬಲ್ಲ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಬೀದರದಲ್ಲಿ ಬಸವ ಸಂಸ್ಕೃತಿ ಅಭಿಯಾನ ಅದ್ಧೂರಿಯಾಗಿ ನೆರವೇರಿದೆ. ಬೆಂಗಳೂರಿನಲ್ಲಿ ಅಭಿಯಾನದ ಸಮಾರೋಪವೂ ಐತಿಹಾಸಿಕವಾಗಿ ಜರುಗಲಿದೆ. ಬಸವಣ್ಣನವರ ಕಾರ್ಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದರು.
ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಅಭಿಯಾನದ ಯಶಸ್ವಿಗೆ ಸಹಕರಿಸಿ ದೇಶಕ್ಕೆ ಒಳ್ಳೆಯ ಸಂದೇಶ ರವಾನಿಸಬೇಕು ಎಂದು ತಿಳಿಸಿದರು.
ಮುಖಂಡ ಬಿ.ಎಸ್. ಕುದುರೆ ಮಾತನಾಡಿ, ಆತ್ಮವೆಂಬುದು ಎಲ್ಲರಿಗೂ ಇದೆ. ಹೀಗಾಗಿ ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕಬೇಕು. ಬಸವಣ್ಣನ ಕಾರ್ಯ ಮಾಡುವವರನ್ನು ಮುಕ್ತ ಮನಸ್ಸಿನಿಂದ ಬೆಂಬಲಿಸಬೇಕು. ಅಂದಾಗ ಮಾತ್ರ ಲಿಂಗಾಯತ ಧರ್ಮದ ಬೆಳವಣಿಗೆ ಆಗಲು ಸಾಧ್ಯ ಎಂದು ಹೇಳಿದರು.
ಉದ್ಘಾಟನೆ ನೆರವೇರಿಸಿದ ನಿವೃತ್ತ ಜಿಲ್ಲಾ ಶಸ್ತ್ರಚಿಕಿತ್ಸಕರೂ ಆದ ಗುದಗೆ ಆಸ್ಪತ್ರೆಯ ಮುಖ್ಯಸ್ಥ ಡಾ. ಚಂದ್ರಕಾಂತ ಗುದಗೆ ಮಾತನಾಡಿ, ಬಸವಣ್ಣನವರ ತತ್ವಗಳು ವಿಶ್ವಮಾನ್ಯವಾಗಿವೆ. ಅವುಗಳಲ್ಲಿ ಕಾಯಕವೇ ಕೈಲಾಸ ಹಾಗೂ ದಯವೇ ಧರ್ಮದ ಮೂಲ ಈ ಎರಡನ್ನೇ ಅನುಸರಿಸಿದರೂ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಬಸವ ಸಂಸ್ಕೃತಿ ಅಭಿಯಾನದ ನಿಮಿತ್ತ ಹಮ್ಮಿಕೊಂಡ ಬೆಂಗಳೂರು ಚಲೋ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಲಾಯಿತು.

ಬೀದರದಲ್ಲಿ ಜರುಗಿದ ಬಸವ ಸಂಸ್ಕೃತಿ ಅಭಿಯಾನದ ಯಶಸ್ವಿಗೆ ಸಹಕರಿಸಿದ ಅಭಿಯಾನ ಸಮಿತಿಯ ಪದಾಧಿಕಾರಿಗಳು, ಗಣ್ಯರು ಹಾಗೂ ದಾಸೋಹಿಗಳನ್ನು ಸನ್ಮಾನಿಸಲಾಯಿತು. ಬಸವಕಲ್ಯಾಣದ ಬಸವ ಮಹಾಮನೆಯ ಸಿದ್ಧರಾಮೇಶ್ವರ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಮಹಾಲಿಂಗ ದೇವರು, ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು.
ಪ್ರಮುಖರಾದ ಶಾಮರಾವ್ ಸುಲಗುಂಟೆ, ಎಸ್.ಎಂ. ಪಾಟೀಲ, ಡಾ. ಸುಭಾಷ್ ಬಶೆಟ್ಟಿ, ಸಚಿನ್ ಗುರುನಾಥ ಕೊಳ್ಳೂರ, ಜೈರಾಜ ಖಂಡ್ರೆ, ಸಹಜಾನಂದ ಕಂದಗೂಳ, ಮಲ್ಲಮ್ಮ ಆರ್. ಪಾಟೀಲ, ಜಯದೇವಿ ಯದಲಾಪುರೆ, ಕಂಟೆಪ್ಪ ಗಂದಿಗುಡಿ, ಇಂದುಧರ ಮಂಗಲಗಿ ಇದ್ದರು.
ಶಿವಕುಮಾರ ಪಾಂಚಾಳ, ವೈಜನಾಥ ಸಜ್ಜನಶೆಟ್ಟಿ ಹಾಗೂ ರೇವಣಪ್ಪ ಮೂಲಗೆ ವಚನ ಗಾಯನ ಮಾಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಸ್ವಾಗತಿಸಿದರು. ಸುರೇಶ ಸ್ವಾಮಿ ನಿರೂಪಿಸಿದರು. ಯೋಗೇಂದ್ರ ಯದಲಾಪುರೆ ವಂದಿಸಿದರು. ಕರಣ ಪಾಟೀಲ ಚಿದ್ರಿ ಭಕ್ತಿ ದಾಸೋಹಗೈದರು.