ಬೆಂಗಳೂರಿನ ಕಲ್ಯಾಣ ಬಡಾವಣೆಯಲ್ಲಿ ವಚನ ನವರಾತ್ರಿ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಬೆಂಗಳೂರು

ಬೆಂಗಳೂರಿನ ಕಲ್ಯಾಣ ಗೃಹನಿರ್ಮಾಣ ಸಹಕಾರ ಸಂಘ ಬಡಾವಣೆಯಲ್ಲಿ ಅಕ್ಟೋಬರ್ 03ರಿಂದ 12ರವರೆಗೆ ವಚನ ನವರಾತ್ರಿ, ವಿಜಯದಶಮಿ ಕಾರ್ಯಕ್ರಮವನ್ನು ವಚನ ಜ್ಯೋತಿ ಬಳಗದಿಂದ ಆಯೋಜಿಸಲಾಗಿದೆ.

ಬಡಾವಣೆಯ ಬಸವ ಬೆಳಕು ಸ್ಥಳದಲ್ಲಿ ಪ್ರತಿದಿನ ಇದು ನಡೆಯಲಿದೆ, ಎಂದು ವಚನ ಜ್ಯೋತಿ ಬಳಗದ ಸಂಚಾಲಕ ಪ್ರಸನ್ನ ಪಂಚಾಕ್ಷರಯ್ಯ ಹೇಳಿದರು.

ಜನರಿಗೆಲ್ಲ ಬಸವಾದಿ ಶರಣರ ಸಂಸ್ಕೃತಿ, ವಿಚಾರಗಳನ್ನು ತಿಳಿಸಲು ನಿರಂತರವಾಗಿ ಕಾರ್ಯಕ್ರಮ ನಡೆಸುತ್ತಿದ್ದೇವೆ. ಮಹಾನವಮಿ, ದಸರಾದಂತ ಹಬ್ಬಗಳಲ್ಲಿ ನಮ್ಮ ಮನೆಯ ಹೆಣ್ಣುಮಕ್ಕಳು ನಮ್ಮದಲ್ಲದ ಲಲಿತ ಸಹಸ್ರನಾಮ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಅದಕ್ಕೆ ಪರ್ಯಾಯ ಕಾರ್ಯಕ್ರಮ ರೂಪಿಸುವ ಆಲೋಚನೆ ಮಾಡಿ ವಚನ ನವರಾತ್ರಿ ಆಚರಿಸುತ್ತಿದ್ದೇವೆ.

ಕಾರ್ಯಕ್ರಮದಲ್ಲಿ ನವದುರ್ಗಿಯರಿಗೆ ಪ್ರತಿಯಾಗಿ ನಮ್ಮ ಶರಣೆಯರನ್ನು ಬಿಂಬಿಸುವ ಪ್ರಯತ್ನ ಮಾಡುತ್ತೇವೆ.
ವಚನ ನವರಾತ್ರಿ ಕಾರ್ಯಕ್ರಮ ಅಂದರೆ, ಪ್ರತಿದಿನ ಒಬ್ಬ ಶರಣೆಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಆ ಶರಣೆಯ ವಿಚಾರಗಳನ್ನು ತಿಳಿದವರೊಬ್ಬರು ಮಂಡನೆ ಮಾಡುತ್ತಾರೆ. ಶರಣೆಯ ಕಾಯಕ, ದಾಸೋಹ ಅವರ ತತ್ವಜ್ಞಾನ ತಿಳಿಸಿ ಕೊಡುತ್ತೇವೆ. ನಂತರ ಆ ಶರಣೆಯ ವಚನಗಳನ್ನು ಹೇಳುವುದು, ಆ ವಚನಗಳನ್ನು ನಿರ್ವಚನ ಮಾಡಲಾಗುತ್ತದೆ. ಬಂದಂತ ಅತಿಥಿಗಳು ಬಸವ ತತ್ವಜ್ಞಾನಕ್ಕೆ ಪೂರಕವಾಗಿ ಮಾತನಾಡುತ್ತಾರೆ. ಅಂಥವರನ್ನೇ ಆಹ್ವಾನಿಸುತ್ತೇವೆ.

ಮೊದಲ ದಿನದ ಆಚರಣೆ ಶರಣೆ ಅಕ್ಕನಾಗಮ್ಮನವರು, 2ನೇ ದಿನ ಅಮುಗೆರಾಯಮ್ಮ, ಇದೇ ತರಹ ದಿನಕೊಬ್ಬ ಶರಣೆಯನ್ನು ಆಯ್ಕೆ ಮಾಡಿರುತ್ತೇವೆ. ನಮ್ಮ ಬಸವ ತತ್ವಜ್ಞಾನಕ್ಕೆ ಹೊಂದುವ ಹಾಗೆ ನಾವು ವಚನಗಳನ್ನು ಹಾಡುತ್ತ, ಹೇಳುತ್ತಾ ಹೋಗುತ್ತೇವೆ. ವಚನಗಳ ವಿಮರ್ಶೆ ಕೂಡ ಮಾಡುತ್ತೇವೆ ಹಾಗೆ ಬಂದವರೊಂದಿಗೆ ಪ್ರಶ್ನೋತ್ತರ ಕೂಡ ನಡೆಸುತ್ತೇವೆ, ಎಂದು ಹೇಳಿದರು.

ಮೊದಲು ದುರ್ಗಾ ಪೂಜೆಗೆ ಹೋಗುತ್ತಿದ್ದ ಮಹಿಳೆಯರು ಈಗ ನಮ್ಮಲ್ಲಿಯೇ ಬರುತ್ತಾರೆ. ಒಟ್ಟು 30 ಮನೆಯವರು ದೇವಸ್ಥಾನಕ್ಕೆ ಹೋಗುವುದನ್ನು ಬಿಟ್ಟಿದ್ದಾರೆ. ಕೆಲವರು ಹೋದರೂ ಒತ್ತಾಯಕ್ಕೆ ಸುಮ್ಮನೆ ಹೋಗಿ ಬರುತ್ತಾರೆ ಅಷ್ಟೇ.

09 ದಿನ ವಚನ ನವರಾತ್ರಿ ಮಾಡಿದ ಮೇಲೆ 10ನೇ ದಿನ ವಚನ ವಿಜಯದಶಮಿ ಎಂದು ಆಚರಿಸುತ್ತೇವೆ. ಆವತ್ತು ನಮ್ಮ ಧರ್ಮಗುರು ಬಸವಣ್ಣನವರ ಪುತ್ಥಳಿ ಹಾಗೂ ವಚನ ಕಟ್ಟುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಬಡಾವಣೆಯಲ್ಲಿ ಮೆರವಣಿಗೆ ಮಾಡುತ್ತೇವೆ. ಒಬ್ಬರು ಸ್ವಾಮೀಜಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುತ್ತೇವೆ. ಕಳೆದ ಎರಡು ವರ್ಷ ಬೇಲಿಮಠದ ಶಿವರುದ್ರ ಸ್ವಾಮೀಜಿ ಸ್ವಾಮೀಜಿ ಬಂದು ಹೋಗಿದ್ದಾರೆ.

ಈ ವರ್ಷ ಮೃತ್ಯುಂಜಯ ಸ್ವಾಮೀಜಿ, ಬಸವ ಗುರುಕುಲ, ಶಿವಮಠ ಮಳವಾಡಿ ಇವರನ್ನು ಆಹ್ವಾನಿಸಿದ್ದೇವೆ. ಶರಣರಾದ ಪಿನಕಪಾಣಿ, ರಾಜಾ ಗುರುಪ್ರಸಾದ, ಚನ್ನಮಲ್ಲಯ್ಯ, ಶರಣೆಯರಾದ ಕಾತ್ಯಾಯಿನಿ ಸುಭಾಷ್, ಮಧು ಶಿವಕುಮಾರ ಅವರು ಇದಕ್ಕೆಲ್ಲ ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು.

Share This Article
1 Comment

Leave a Reply

Your email address will not be published. Required fields are marked *