ಭೈರನಹಟ್ಟಿ ಸಾಹಿತ್ಯ ಶ್ರಾವಣದಲ್ಲಿ ಭಾಗಿಯಾದ ವಿದೇಶಿಗರು

ನರಗುಂದ

ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ, ಸಾಹಿತ್ಯ ಶ್ರಾವಣ-೨೦೨೫ ಕನ್ನಡ ಸಾಲು ದೀಪಗಳು ೭ ನೇ ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

“ಕನ್ನಡ ಸಾಹಿತ್ಯದಲ್ಲಿ ಮನುಷ್ಯರನ್ನು ದೇವರನ್ನಾಗಿ ಕಂಡು ಅಭೇದ ಕಲ್ಪನೆಯಿಂದ ರಚನೆ ಮಾಡಿದ ಪುಸ್ತಕ ಚಾಮರಸನ ಪ್ರಭುಲಿಂಗಲೀಲೆ. ಅದು ಅಲ್ಲಮಪ್ರಭುಗಳ ಜೀವನ ಸಂದೇಶವನ್ನು ಸಾರುವ ಕೃತಿಯಗಾಗಿದೆ. ೧೨ ನೇ ಶತಮಾನದಲ್ಲಿ ಮಾನವ ಕುಲದ ಉದ್ಧಾರಕ್ಕಾಗಿ ನಡೆದ ಶಿವಶರಣರ ಕ್ರಾಂತಿಯಲ್ಲಿ ಅಲ್ಲಮ ಪ್ರಭುಗಳು ವೈರಾಗ್ಯಮೂರ್ತಿಗಳಾಗಿ ಕಂಗೊಳಿಸುತ್ತಾರೆ” ಎಂದು ಪೂಜ್ಯ ಶಾಂತಲಿಂಗ ಶ್ರೀಗಳು ಹೇಳಿದರು.

“ಚಾಮರಸನು ಅಲ್ಲಮಪ್ರಭುಗಳ ಕುರಿತು ಕೇವಲ ೧೧ ದಿನಗಳಲ್ಲಿ ಪ್ರಭುಲಿಂಗಲೀಲೆ ಎಂಬ ಬೃಹತ್ ಕೃತಿಯನ್ನು ರಚಿಸಿದ್ದು ಚಾರಿತ್ರಿಕ ದಾಖಲೆಯಾಗಿದೆ. ಈ ಪುಸ್ತಕ ತಮಿಳು, ತೆಲಗು, ಮರಾಠಿ ಭಾಷೆಯಲ್ಲಿ ಅನುವಾದಗೊಂಡಿದೆ ಅದನ್ನು ಪ್ರತಿಯೊಬ್ಬರು ಅದ್ಯಯನ ಮಾಡಬೇಕಾಗಿದೆ. ಅಲ್ಲಮಪ್ರಭು ಕನ್ನಡದ ಶ್ರೇಷ್ಠ ತತ್ವಜ್ಞಾನಿ ೧೨ ನೇ ಶತಮಾನದ ಎಲ್ಲ ಶರಣರಿಗೆ ಮಾರ್ಗದರ್ಶನ ಮಾಡುವ ಮೂಲಕ ಮೌಡ್ಯಾಚರಣೆ ಹಾಗೂ ಸಮಾನತೆಗಾಗಿ ಹೋರಾಡಿದ ಮಹಾನ್ ಸಂತ” ಎಂದು ಬಣ್ಣಿಸಿದರು.

ವಿಯೇಟ್ನಾಂ ದೇಶದ ಸಹೋದರಿಯರು ಶ್ರೀಮಠದಲ್ಲಿ ನಡೆದ ಸಾಹಿತ್ಯ ಶ್ರಾವಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಕರ್ನಾಟಕ ಸಂಸ್ಕೃತಿ ಪರಂಪರೆಯ ಕುರಿತು ಹೆಮ್ಮೆಯ ಮಾತುಗಳನ್ನಾಡಿದರು.

ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಅಂತರಾಷ್ಟ್ರೀಯ ಯೋಗ ಶಿಕ್ಷಕ ಬಸಯ್ಯ ನಾಗಲೋಟಿಮಠ ಅವರು ಮಾತನಾಡಿ, “ಪ್ರಭುಲಿಂಗಲೀಲೆ ಗ್ರಂಥದಲ್ಲಿ ಪವಾಡಗಳಿಲ್ಲ. ಶರಣರು ವಚನ ರಚನೆಯೊಂದಿಗೆ ಯೋಗ ಸಾಧನೆಯನ್ನು ಮಾಡಿದ್ದಾರೆ. ಭಾರತದ ಯೋಗ ಪರಂಪರೆಯನ್ನು ಇವತ್ತು ವಿಶ್ವವೇ ಒಪ್ಪಿಕೊಂಡಿದೆ, ಯೋಗದಿಂದ ಆರೋಗ್ಯವಂತ ಸಮಾಜವನ್ನು ಕಟ್ಟಬಹುದಾಗಿದೆ ಹೀಗಾಗಿ ಪ್ರತಿಯೊಬ್ಬರು ಯೋಗ, ಧ್ಯಾನವನ್ನು ರೂಡಿಸಿಕೊಳ್ಳಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಯೇಟ್ನಾಂ ದೇಶದ ನೇಚರ್ ಯೋಗ ಕೇಂದ್ರದ ಮುಖ್ಯಸ್ಥರಾದ ಲೈ ತು, ಲೈ ತೈ, ಲೈ ಒನ್ ಅವರನ್ನು ಶ್ರೀಮಠದಿಂದ ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆ ಮೇಲೆ ಪತ್ರಕರ್ತ ಉಮೇಶ ಮರೆಗುದ್ದಿ, ಮಹಾಂತೇಶ ಹಿರೇಮಠ, ಯೋಗ ಶಿಕ್ಷಕ ಈರಪ್ಪ ಐನಾಪೂರ, ಲಿಂಗರಾಜ ಮೊರಬದ ಪ್ರಮುಖರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *