ಭಕ್ತರ ಕಣ್ಣಲ್ಲಿ ನೀರು ತರಿಸಿದ ಕಲ್ಯಾಣ ಕ್ರಾಂತಿಯ ಪ್ರವಚನ

ಬಿ. ಚನ್ನಪ್ಪ
ಬಿ. ಚನ್ನಪ್ಪ

ನಂಜನಗೂಡು

ಅತ್ತಿವೇರಿಯ ಬಸವೇಶ್ವರಿ ಮಾತಾಜಿಯವರು ‘ಬಸವಣ್ಣನವರ ಜೀವನ ದರ್ಶನ’ ವಿಚಾರವಾಗಿ ನೀಡುತ್ತಿರುವ 30 ದಿನಗಳ ಪ್ರವಚನದ 20ನೇ ದಿನ ಕಲ್ಯಾಣ ಕ್ರಾಂತಿಯ ಬಗ್ಗೆ ಪಟ್ಟಣದಲ್ಲಿ ಅನುಭಾವ ನೀಡಿದರು.

ಶರಣ ಧರ್ಮ ಸ್ವೀಕಾರ ಮಾಡಿದ್ದ ಮಧುವರಸ ಮತ್ತು ಹರಳಯ್ಯ ಶರಣರ ಮಕ್ಕಳ ಕಲ್ಯಾಣ ಮಹೋತ್ಸವವನ್ನ ಗುರಿಯಾಗಿಸಿಕೊಂಡು ಕೊಂಡಿ ಮಂಚಣ್ಣ ಪಿತೂರಿ ನಡೆಸಿ ಬಿಜ್ಜಳನಿಗೆ ತಪ್ಪು ಸಂದೇಶ ಕೊಡುತ್ತಾನೆ. ಬಸವಣ್ಣನವರನ್ನ ಪ್ರಧಾನ ಮಂತ್ರಿ ಸ್ಥಾನದಿಂದ ತೆಗೆದು, ಅವರನ್ನು ಕಲ್ಯಾಣದಿಂದ ಗಡಿಪಾರು ಮಾಡಿ, ನಂತರ ಶರಣರಿಗೆ ಏಳೆಹೂಟೆ ಶಿಕ್ಷೆ ವಿಧಿಸಲಾಗುತ್ತದೆ.

ವೈಧಿಕರಿಗೆ ನುಂಗಲಾರದ ತುತ್ತಾಗಿದ್ದ ವಚನದ ಕಟ್ಟುಗಳನ್ನು ಸುಡುವ ಪ್ರಯತ್ನ ನಡೆಯಿತು. ಮರಣವೇ ಮಹಾನಮಿ ಎಂಬ ಬಸವಣ್ಣನವರ ದ್ಯೇಯ ವಾಕ್ಯದ ಪರಿಪಾಲಕರಾದ ಶರಣರು ಪ್ರಾಣಕ್ಕೆ ಅಂಜದೆ ವಚನಗಳ ರಕ್ಷಣೆಗೆ ರಾತ್ರೋರಾತ್ರಿ ಕಲ್ಯಾಣ ತೊರೆದು ರಾಜ್ಯದ ಮೂಲೆ ಮೂಲೆಗೆ ಹೊರಟ ವಿಚಾರಗಳನ್ನು ಕೇಳಿ ನೆರೆದಿದ್ದ ಭಕ್ತರಲ್ಲಿ ಕಣ್ಣೀರು ಬಂದಿತು.

ನಂತರ ಕಲ್ಯಾಣದ ಕ್ರಾಂತಿಯ ಸುದ್ದಿಯ ಕೇಳಿ ಬಸವಣ್ಣನವರು ಲಿಂಗದಲ್ಲಿ ಬಯಲಲ್ಲಿ ಬಯಲಾದ ವಿಚಾರವನ್ನು ವಚನ ಸಾಕ್ಷಿ ಮುಖಾಂತರ ಮಾತಾಜಿ ತಿಳಿಸಿದಾಗ ಭಕ್ತರಿಗೆ ಬಸವಣ್ಣನವರು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ ಅವರು ಬಯಲಲ್ಲಿ ಕಾಯ ತ್ಯಜಿಸಿದ್ದು ಎಂಬುದು ಮನವರಿಕೆಯಾಯಿತು. ಬಸನಗೌಡ ಯತ್ನಾಳರ ಹೇಳಿಕೆ ಅವರ ಅವಿವೇಕ ಮತ್ತು ಅಜ್ಞಾನದ ಹೇಳಿಕೆ ಎಂದು ಮಾತಾಜಿಯವರು ತಿಳಿಸಿದರು.

ಪ.ಗು.ಹಳಕಟ್ಟಿಯವರು ಜನಸಾಮಾನ್ಯರ ಮನೆಗಳಲ್ಲಿದ್ದ ವಚನಗಳ ಸಾಹಿತ್ಯ ಹುಡುಕಿ ತಂದು ಶ್ರಮ ಮತ್ತು ಭಕ್ತಿಯಿಂದ ರಕ್ಷಿಸಿದನ್ನು ಸ್ಮರಿಸಿಕೊಂಡರು.

ಕಲ್ಯಾಣ ಕ್ರಾಂತಿಯ ಅನುಭಾವ ಕೇಳಿ ಭಕ್ತರು ನೊಂದು ಕಣ್ಣೀರು ಹಾಕಿದ್ದು ನೋಡಿ ಮಾತಾಜಿಯವರು ಭಾವುಕರಾದರು.

ಫ.ಗು.ಹಳಕಟ್ಟಿ ನಗರದಲ್ಲಿ ಬಸವಮಾಸ ಸಮಿತಿಯ ವತಿಯಿಂದ ಆಯೋಜಿತವಾಗಿರುವ ನಾಲ್ಕನೇ ವರ್ಷದ ಕಾರ್ಯಕ್ರಮದ ಅಂಗವಾಗಿ ಪ್ರವಚನ ನಡೆಯುತ್ತಿದೆ. ದಿನದ ಕಾರ್ಯಕ್ರಮವನ್ನು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಚಾಲನೆ ನೀಡಲಾಯಿತು.

Share This Article
1 Comment
  • ಮಾತಾಜಿ ಬಸವೇಶ್ವರಿ ಅತ್ತಿವೇರಿಯವರು ಅಪ್ರತಿಮ ಪ್ರವಚನಕಾರರು. ತಮ್ಮನ್ನು ತಾವು ಶರಣಧರ್ಮಕ್ಕೆ ತಪ್ಪಿಸಿಕೊಂಡು ಯಾವ ಫಲಾಪೇಕ್ಷೆ ಇಲ್ಲದೆ ಅತ್ತೀವೇರಿಯಲ್ಲಿ ಕಷ್ಟಪಟ್ಟು ಆಶ್ರಮ ನಿರ್ಮಿಸಿ ಆ ಭಾಗದ ಜನರಿಗೆ ಬಸವಜ್ಞಾನ ತುಂಬಿ ಲಿಂಗವಂತಿಕೆಯನ್ನು ಜೀವಂತುಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಹುಬ್ಬಳ್ಳಿಯ ಬಸವಕೇಂದ್ರದಿಂದ ಒಂದು ತಿಂಗಳ ಪರ್ಯಂತ ಪ್ರವಚನಗೈದ ಹೆಗ್ಗಳಿಕೆ ಅವರದು. ಅತ್ಯಂತ ಸಹಜತೆ, ಸರಳತೆ ಹಾಗೂ ಹಮ್ಮುಬಿಮ್ಮುಗಳಿಲ್ಲದ ಶರಣಜೀವನಕ್ಕೆ ಬಸವೇಶ್ವರಿ ಮಾತಾಜಿ ಒಂದು ಉತ್ತಮ ಉದಾಹರಣೆ. ಶರಣು ಶರಣಾರ್ಥಿಗಳು.

Leave a Reply

Your email address will not be published. Required fields are marked *

ಅಧ್ಯಕ್ಷರು, ಶ್ರೀಗುರುಬಸವೇಶ್ವರ ಸೇವಾ ಟ್ರಸ್ಟ್, ನಂಜನಗೂಡು