ಸಾಣೇಹಳ್ಳಿ:
ನಿವೃತ್ತ ಶಿಕ್ಷಕ ಎಸ್ ಬಿ ವೀರಭದ್ರಪ್ಪನವರ ಮನೆಯಂಗಳದಲ್ಲಿ “ಅನುಭಾವದೆಡೆಗೆ” ಅನುಭಾವ ಗೋಷ್ಠಿ ನಡೆಯಿತು. ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಪ್ರಸಾರ ಮಾಡುವ ಉದ್ದೇಶದಿಂದ “ಅನುಭಾವದೆಡೆಗೆ” ಎನ್ನುವ ವಿನೂತನ ಅನುಭಾವ ಗೋಷ್ಠಿ ಕಾರ್ಯಕ್ರಮ ನಡೆಸಲಾಗುತ್ತಿದೆ.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ನಮ್ಮ ಹಿರಿಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ನಲವತ್ತು ವರ್ಷಗಳ ಕಾಲ ಸರ್ವಶರಣರ ಸಮ್ಮೇಳನ, ಸಾಮೂಹಿಕ ವಿವಾಹ, ಇಷ್ಟಲಿಂಗ ದೀಕ್ಷೆ, ತರಳಬಾಳು ಹುಣ್ಣಿಮೆ ಹೀಗೆ ಅನೇಕ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಅನೇಕ ಬದಲಾವಣೆ ತಂದರು.
ಮನುಷ್ಯನಿಗೆ ಟೀಕೆ ಟಿಪ್ಪಣೆ ಸಹಜ. ಅಂಥವುಗಳಿಗೆ ಹೆದರದೇ ಗಟ್ಟಿತನದಿಂದ ಬದುಕಿ ಹೇಳಬೇಕಾದ ವಿಚಾರಗಳನ್ನು ನೇರವಾಗಿ ನಿಷ್ಠುರವಾಗಿ ಹೇಳಬೇಕು. ಮೊದಲು ಮನುಷ್ಯ ಸರಿಯಾಗಬೇಕು. ಆಗ ಸಮಾಜ ಸರಿಯಾಗುತ್ತದೆ.
ಮನುಷ್ಯ ನಡೆಯುವವನು ಎಡವುದು ಸಹಜ. ಆದರೆ ಎಡವಿದಾಗ ಮತ್ತೆ ಜಾಗೃತನಾಗಬೇಕು. ಮನುಷ್ಯನಿಗೆ ಮನುಷ್ಯತ್ವ ಬಹಳ ಮುಖ್ಯ. ಮನುಷ್ಯ ಅವಗುಣಗಳನ್ನು ಕಳೆದುಕೊಂಡಾಗ ಶ್ರೇಷ್ಟ ವ್ಯಕ್ತಿಯಾಗುವನು.

ಪ್ರತಿಯೊಬ್ಬರು ತಮ್ಮ ತಮ್ಮ ಧರ್ಮದ ಬಗ್ಗೆ ಪ್ರೀತಿ ತೋರಿಸಬೇಕು. ಆಡುವ ಮಾತುಗಳು ನಿಷ್ಠುರವಾಗಿದ್ದರೂ ಅದರ ಹಿಂದೆ ಮಾತೃಹೃದಯವಿರುವುದು.
ಬದಲಾವಣೆ ನಮ್ಮ ಮನೆಯಿಂದ, ಮಠದಿಂದ, ಊರುಗಳಿಂದ ಆದಾಗ ಮಾತ್ರ ಸಮಾಜ ಪರಿವರ್ತನೆ ಆಗಲು ಸಾಧ್ಯ. ಪ್ರತಿಯೊಬ್ಬರೂ ಸಾತ್ವಿಕ ಜೀವನ ನಡೆಸಿ ಪ್ರೀತಿಯನ್ನು ಗಳಿಸಿಕೊಳ್ಳಬೇಕು.
ತಳಸಮುದಾಯದ ಜನರು ಅನುಭವ ಮಂಟಪದ ಸಂಪರ್ಕಕ್ಕೆ ಬಂದು ಶರಣರಾದರು. ಪಾಪಿಗೂ ಪರಿವರ್ತನೆ ಆಗುವ ಸಾಧ್ಯತೆ ಲಿಂಗಾಯತ ಧರ್ಮದಲ್ಲಿದೆ. ಮನುಷ್ಯ ತನ್ನಲ್ಲಿರುವ ಅವಗುಣ ಕಳೆದುಕೊಂಡಾಗ ಮಹಾತ್ಮನಾಗುವನು. ಏನೆಲ್ಲ ಒಳ್ಳೆಯ ವಿಚಾರ ಕೇಳಿದರೂ ಏನೂ ಬದಲಾವಣೆ ಆಗದೇ ಇರುವನು ದುರಾತ್ಮನಾಗುವನು.
ಮಹಾಮನೆ ಎಂದರೆ ಕಟ್ಟಡವಲ್ಲ. ಅದೊಂದು ಚಿಂತನಗೋಷ್ಠಿ. ಸಾಣೇಹಳ್ಳಿಯಲ್ಲಿರುವ ಪ್ರತಿಯೊಬ್ಬರು ಶರಣರ ಗುಣಗಳನ್ನು ಅಳವಡಿಸಿಕೊಡರೆ ಸಾಣೇಹಳ್ಳಿ ಪ್ರಪಂಚದ ಭೂಪಟದಲ್ಲಿ ಗುರುತಿಸಿಕೊಂಡಿದ್ದು ಸಾರ್ಥಕ.
ಮನುಷ್ಯನ ಮನಸ್ಸು ಬಲವಾಗಿದ್ದರೆ ದೇಹಕ್ಕೆ ಯಾವುದೇ ವಿಪತ್ತುಗಳು ಬರುವುದಿಲ್ಲ. ಜನರಿಗೆ ಒಳ್ಳೆಯ ಭಾವನೆ ಇದೆ. ಆದರೆ ಅವರಿಗೆ ವಿಚಾರದ ಕೊರತೆ ಎದ್ದು ಕಾಣುತ್ತದೆ. ಅಂತಹ ವಿಚಾರಗಳನ್ನು ತಲುಪಿಸುವ ಕಾರ್ಯ ಇಂತಹ ಗೋಷ್ಠಿಗಳಿಂದ ಆಗಬೇಕಾಗಿದೆ ಎಂದರು.
ಸಾಣೇಹಳ್ಳಿ ಬದಲಾದರೆ ಇಡೀ ಜಗತ್ತು ಬದಲಾವಣೆಗೆ ರಹದಾರಿ ಆಗಬೇಕು. ನಮಗೆ ಜಾತಿ ಮುಖ್ಯವಾಗದೇ ನೀತಿ, ಸಿದ್ಧಾಂತ ಮುಖ್ಯವಾಗಬೇಕು. ಇಲ್ಲಿರುವ ಎಲ್ಲರೂ ಇಷ್ಟಲಿಂಗ ನಿಷ್ಟರಾಗಬೇಕು ಎಂದರು.

ಅನುಭಾವದ ನುಡಿಗಳನ್ನಾಡಿದ ಆದ್ರಿಕಟ್ಟೆಯ ನಿವೃತ್ತ ಮುಖ್ಯ ಶಿಕ್ಷಕ ಜಿ. ಬಸವರಾಜಪ್ಪ ಇದು ಎಲ್ಲರ ಹೃದಯಗಳನ್ನು ಸಮ್ಮಿಲನಗೊಳ್ಳುವ ಮನೆಯಂಗಳದ ಕಾರ್ಯಕ್ರಮ. ಇದೊಂದು ಜಾತ್ರೆಯ ಸಮಾರಂಭವಲ್ಲ; ಅನುಭಾವ ಗೋಷ್ಠಿ. ಇದು ನಮ್ಮೆಲ್ಲರ ಅನುಭಾವದ ಅನುಭವವನ್ನು ವ್ಯಕ್ತ ಪಡಿಸುವ ಗೋಷ್ಠಿ.
ನಾವು ವೇದಿಕೆಯಲ್ಲಿ ಮಾತ್ರ ನಡೆ-ನುಡಿ ಸಿದ್ಧಾಂತ. ಆದರೆ ಆಚರಣೆಯಲ್ಲಿ ನಡೆಯೇ ಒಂದು ನುಡಿ ಮತ್ತೊಂದಾಗಿದೆ. ನಮ್ಮ ಮಹಿಳೆಯರ ಹಣೆಯ ಮೇಲೆ ವಿಭೂತಿ ಧರಿಸಿದರೆ ಅವರಿಗೆ ಎಲ್ಲಿಲ್ಲದ ಗೌರವ ಸಿಗುವುದು. ಹಣೆಯ ಮೇಲೆ ವಿಭೂತಿ ಧರಿಸಿದರೆ ಮುಂದೆ ಬರುವ ವಿಪತ್ತುಗಳು ದೂರವಾಗುವುದು.
ಶೂದ್ರರಿಗೆ ಶಕ್ತಿಕೊಟ್ಟಿದ್ದು ವಚನ ಸಾಹಿತ್ಯ. ಶರಣರು ಕೊಟ್ಟ ಸತ್ಯವನ್ನು ಅರ್ಥ ಮಾಡಿಕೊಳ್ಳದೇ ಇರುವುದು ದುರಂತ. ಶರಣ ಚಳವಳಿ ಪ್ರಾರಂಭ ಆದಾಗ ಯಾವುದೇ ಮಠಮಾನ್ಯಗಳು ಇರಲಿಲ್ಲ. ಭಕ್ತರ ಮನೆಗಳೆ ಮಠಗಳಾಗಿದ್ದವು. ಅನುಭವ ಮಂಟಪಗಳಾಗಿದ್ದವು.
ನಮಗೆ ಅಂತರಂಗ ಬಹಿರಂಗ ಶುದ್ಧವಾಗಿರಬೇಕು. ಸತ್ಯ ಶುದ್ಧವಾದ ನಡಾವಳಿಕೆ ಇರುವವರನ್ನು ಪ್ರೀತಿಸಿ. ಶ್ರಮಿಕರನ್ನು, ಅಸಹಾಯಕರನ್ನು, ಕಾಯಕ ಜೀವಿಗಳನ್ನು ಗೌರವಿಸೋಣ. ಪ್ರತಿಯೊಬ್ಬರು ಕಾಯಕ ನಿಷ್ಠೆ ಬೆಳೆಸಿಕೊಳ್ಳಬೇಕು.
ಪೋಷಕರು ತಮ್ಮ ಮಕ್ಕಳಿಗೆ ಕೈಕಸುಬುಗಳನ್ನು ಕಲಿಸಿಕೊಟ್ಟರೆ ಮುಂದೆ ಸ್ವಾವಲಂಬನೆ ಜೀವನ ನಡೆಸುವರು. ಸತ್ಯವನ್ನು ಹೃದಯದೊಳಗೆ ಹಾಕಿಕೊಳ್ಳುವ ವಿಚಾರಗಳು ವಚನಗಳಲ್ಲಿವೆ ಎಂದರು.
ಎಸ್.ಆರ್. ಚಂದ್ರಶೇಖರಯ್ಯ ಮಾತನಾಡಿ, ಶರಣರು ವಚನ ಸಾಹಿತ್ಯ ಸೃಷ್ಟಿಸದೇ ಹೋಗಿದ್ರೆ ನಾವು ಯಾವುದೋ ಕಾಡುಗಲ್ಲುಗಳಾಗಿರುತ್ತಿದ್ದೆವು. ಬಸವಣ್ಣ ಬ್ರಾಹ್ಮಣರಾಗಿ ಹುಟ್ಟಿದ್ದರು ಬ್ರಾಹ್ಮಣ್ಯವನ್ನು ತಿರಸ್ಕರಿಸಿ ಅಂಗೈಯಲ್ಲಿ ಇಷ್ಟಲಿಂಗವನ್ನು ಕೊಟ್ಟರು.
ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರಾದ ಶಿವಲಿಂಗಪ್ಪ ಮಾತನಾಡಿ; ಪಂಡಿತಾರಾಧ್ಯ ಶ್ರೀಗಳಂಥವರು ಪಡೆದ ನಾವೇ ಧನ್ಯರು. ಆದ್ರೆ ಗ್ರಾಮ ಬದಲಾವಣೆ ಇನ್ನು ಆಗದೇ ಇರುವುದು ಇನ್ನು ನೋವಿನ ಸಂಗತಿ. ಸಾಣೇಹಳ್ಳಿ ಇಡೀ ದೇಶಕ್ಕೆ ಮಾದರಿ ಗ್ರಾಮವಾಗಬೇಕು. ಸಾಣೇಹಳ್ಳಿಯ ಗ್ರಾಮಸ್ಥರಲ್ಲಿ ಮೌಢ್ಯ, ಮಧ್ಯಪಾನ, ನೈರ್ಮಲ್ಯ ಎದ್ದು ಕಾಣುತ್ತಿದೆ. ಅದು ದೂರವಾಗಬೇಕಾದ್ರೆ ಸಾಣೇಹಳ್ಳಿಯ ಗ್ರಾಮಸ್ಥರಿಗೆ ಜಾಗೃತಿ ಮೂಡಬೇಕಾಗಿದೆ.
ಶಕುಂತಲ ಮಾತನಾಡಿ; ನಾನು ಹುಟ್ಟಿದ ಊರಿನಲ್ಲಿ ವಚನ, ಶರಣರು ಎನ್ನುವ ಪರಿಚಯ ಇರಲಿಲ್ಲ. ಆದರೆ ಸಾಣೇಹಳ್ಳಿಯ ಗಂಡನ ಮನೆಗೆ ಬಂದಾಗ ಶರಣರ, ವಚನಗಳ ಬಗ್ಗೆ ತಿಳಿದುಕೊಳ್ಳಲಿಕ್ಕೆ ಅವಕಾಶವನ್ನು ಪಂಡಿತಾರಾಧ್ಯ ಶ್ರೀಗಳು ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಶಿವಸಂಚಾರದ ನಾಗರಾಜ ಹೆಚ್.ಎಸ್, ಶರಣ್ ಹಾಗೂ ಅಕ್ಕನ ಬಳಗದವರು ವಚನ ಗೀತೆಗಳನ್ನು ಹಾಡಿದರು. ಎಸ್. ಬಿ. ವೀರಭದ್ರಪ್ಪನವರು ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕ ಎಸ್.ಎಸ್. ಪ್ರಕಾಶ ವಂದನೆ ಸಲ್ಲಿಸಿದರು.
ಸಾಣೇಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ಜನವರಿ 1 ರಂದು ಸಾಣೇಹಳ್ಳಿ ಕಲ್ಲಮನ ಮನೆಯಂಗಳದಲ್ಲಿ ಅನುಭಾವದೆಡೆಗೆ ಕಾರ್ಯಕ್ರಮ ನಡೆಯುವುದು.
