ಬೀದರ:
ಬಸವಣ್ಣನವರು ಮೌಢ್ಯದ ಭಕ್ತಿ, ಬೇಡುವ ಭಕ್ತಿಯನ್ನು ತಿರಸ್ಕರಿಸಿ ಅರಿವಿನಿಂದ ಕೂಡಿದ ಭಕ್ತಿ ಕಲಿಸಿದರು. ಬಸವಣ್ಣ ನೀಡುವ ಭಕ್ತಿಕೊಟ್ಟರು ಎಂದು ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ ಹೇಳಿದರು.
ಲಿಂಗಾಯತ ಮಹಾಮಠದ ಗೋರ್ಟಾ ಗ್ರಾಮದಲ್ಲಿ ನಡೆದ ಚಿಂತನಾಗೋಷ್ಠಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಕಾಯಕ ಮಾಡಬೇಕು ದಾಸೋಹ ನೀಡಬೇಕೆಂಬುದು ಅವರ ನಿಲುವಾಗಿತ್ತು. ನನ್ನವರು- ನನ್ನವರದಲ್ಲದವರು ಎಂಬ ಭೇದ ಬಸವ ಆಚಾರವಲ್ಲ. ಇವ ನಮ್ಮವ ಇವ ನಮ್ಮವನೆಂದು ಸರ್ವರನ್ನು ಇಂಬಿಟ್ಟುಕೊಳ್ಳುವ ವಿಶ್ವಪ್ರೇಮಿ ಬಸವಣ್ಣ. ಅವರು ಕಳ್ಳ, ಕೊಲೆಗಡುಕರಲ್ಲಿಯೂ ಕೂಡಲಸಂಗಮದೇವರನ್ನು ಕಂಡ ಮಂತ್ರ ಪುರುಷರವರು ಎಂದು ನುಡಿದರು.
ಬಸವಣ್ಣನವರ ದೃಷ್ಟಿಗೆ ಬಿದ್ದವರೆಲ್ಲರೂ ಶರಣರಾಗಿ ಪರಿವರ್ತಿತರಾದರು. ಲಾಭ ಹಾನಿಗಳನ್ನರಸದೆ ನಿಷ್ಕಾರಣ ಪ್ರೇಮ ತತ್ಕಾಲ ಪ್ರೇಮ ಮಾಡಬೇಕೆಂಬುದು ಅವರ ಉಪದೇಶ.

ಅವರು ಕಟ್ಟಿದ ಭಕ್ತಿ ಸಾಮ್ರಾಜ್ಯ ಶಾಶ್ವತವಾಗಿದ್ದು, ಮನುಕುಲವನ್ನು ರಕ್ಷಿಸುತ್ತಿದೆ. ರಾಜ ಮಹಾರಾಜರು ಕಟ್ಟಿದ ಕೋಟೆ ಕೊತ್ತಲೆಗಳೆಲ್ಲವೂ ಅಳಿದವು. ಆದರೆ ಬಸವಣ್ಣನವರು ಕಟ್ಟಿದ ಜ್ಞಾನದ ಖನಿಜವಾದ ವಚನ ಸಾಹಿತ್ಯದ ಕೋಟೆ ಎಂದಿಗೂ ಅಳಿಯದು ಎಂದು ಮಾತಾಜಿ ತಿಳಿಸಿದರು.
ಸಾನಿಧ್ಯ ವಹಿಸಿ ಮಾತನಾಡಿದ ಲಿಂಗಾಯತ ಮಹಾಮಠದ ಪೀಠಾಧಿಪತಿಗಳಾದ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ, ಗುರುವಿನ ಕಾಯಕ ಮಡಿವಾಳನ ಕಾಯಕದಂತೆ. ಭಕ್ತನ ಮನದ ಮಲಿನತೆ ತೊಳೆಯುವುದೇ ಗುರುವಿನ ಕಾಯಕ. ಮಡಿವಾಳ ವಸ್ತ್ರಗಳನ್ನು ತಿಕ್ಕಿ ತಿಕ್ಕಿ ಕಲ್ಲಿಗೆ
ಬಡೆದು ಶುಭ್ರಗೊಳಿಸುವಂತೆ, ನಿಜಗುರುವಾದವನು ಶಿಷ್ಯನನ್ನು ಜರಿದು ಝಂಕಿಸಿ ಬುದ್ಧಿ ಹೇಳಿ ಅವರ ಮನವನ್ನು ಶುಭ್ರಗೊಳಿಸುವನು.
ರೋಗಿಯ ಶರೀರದ ಗಡ್ಡಿಯನ್ನು ವೈದ್ಯರು ನಿರ್ದಯವಾಗಿ ಕತ್ತರಿಸಿ ಎಸೆಯುವಂತೆ, ಗುರುವಾದವನು ಭಕ್ತನ ಅವಗುಣಗಳನ್ನು ಒಂದೊಂದಾಗಿ ಕಳೆಯುವನು. ಅಂತೆಯೇ ಸದ್ಗುರು ಶಸ್ತ್ರ ವೈದ್ಯನೆಂದು ಬಸವಣ್ಣನವರು ಹೇಳುತ್ತಾರೆ.
ಸದ್ಗತಿ ಬಯಸಿ ಬಂದವರ ಅಹಂಕಾರ ನಿರಸನಗೊಳಿಸುವ ಸಾಮರ್ಥ್ಯ ಉಳ್ಳವನೇ ಗುರು. ಎಂಥದ್ದೇ ಸಂದರ್ಭದಲ್ಲಿ ಪಾಪ ಕಾರ್ಯಗಳಿಗೆ ಅವನ ಸಹಕಾರವಿರದು. ಅಹಂಕಾರ ಬೆಳೆಸಿಕೊಳ್ಳಲು ಪ್ರೋತ್ಸಾಹ ನೀಡಲಾರನು. ಸತ್ಯವನ್ನು ವಜ್ರಕಠೋರವಾಗಿ ಖಂಡ ತುಂಡವಾಗಿ ಪ್ರತಿಪಾದಿಸುವವನೆ ನಿಜವಾದ ಗುರು. ಅಂತಹ ಸದ್ಗುರುವಿನ ಕಾರುಣ್ಯ ಕೊಂಬ ಶಿಷ್ಯನೆ ಧನ್ಯನೆಂದು ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿರುವ ಜಗನ್ನಾಥ ಪತಂಗೆ, ಇಂದು ಅನೇಕ ಮಠಮಾನ್ಯಗಳನ್ನು ನೋಡುತ್ತಿದ್ದೇವೆ ಅನೇಕ ಗುರುಗಳನ್ನು ನೋಡುತಿದ್ದೆವೆ. ಆದರೆ ಗೋರಟಾ ಲಿಂಗಾಯತ ಮಹಾಮಠವು ವಿಶಿಷ್ಟ ಹಾಗೂ ವಿನೂತನ ಕಾರ್ಯಕ್ರಮಗಳಿಂದ ಜನರ ಮನಸ್ಸನ್ನು ಸೂರೆಗೊಳ್ಳುತ್ತಿದೆ.
ಮಕ್ಕಳಿಗಾಗಿ ಮರಣವೇ ಮಹಾನವಮಿ ಮಹೋತ್ಸವ ಹಾಗೂ ಹೆಣ್ಣುಮಕ್ಕಳಿಗಾಗಿ ಶ್ರಾವಣ ಮಾಸದ ಒಂದು ತಿಂಗಳ ಪರಿಯಂತರ ಚಿಂತನೆ. ಮಾಸಿಕ ಶರಣ ಸಂಗಮ ಅನುಭವ ಗೋಷ್ಟಿ ನಡೆಸುವುದರ ಮುಖಾಂತರವಾಗಿ ಪೂಜ್ಯರು ಗೋರಟಾ ಗ್ರಾಮದಲ್ಲಿ ಬಸವ ಭಕ್ತಿಯ ವಾತಾವರಣವನ್ನು ತುಂಬಿದ್ದಾರೆ.
ಇಂದು ನಾಡಿನಾದ್ಯಂತ ಪ್ರವಚನಗಳಿಂದ ಹೆಸರುವಾಸಿಯಾಗಿರುವ ಪೂಜ್ಯ ಬಸವೇಶ್ವರಿತಾಯಿ ಅತ್ತಿವೇರಿಯವರು ಗೋರಟಾ ಗ್ರಾಮಕ್ಕೆ ಆಗಮಿಸಿರುವುದು ನಮ್ಮೆಲ್ಲರ ಪುಣ್ಯ ಎಂದು ನುಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನೀಲಮ್ಮನ ಬಳಗದ ಅಧ್ಯಕ್ಷರಾದ ಶರಣೆ ವಿಜಯಲಕ್ಷ್ಮಿ ರಾಜೋಳೆ ಭಾಗವಹಿಸಿದರು. ಪ್ರಜ್ವಲ್ ರಾಜೋಳೆ ನಿರೂಪಣೆಗೈದರು.
ಕರುಣದೇವಿ ಕಣಜೆ, ಶಶಿಕಲಾ ನಾಗುರೆ, ಭಾಗ್ಯ ಕಣಜೆ, ಸಂಗೀತ ಕಣಜೆ, ಗೋದಾವರಿ ರಾಜೋಳೆ ಮತ್ತಿತರರು ಭಾಗವಹಿಸಿದರು
