ಭಾಲ್ಕಿ ಹಿರೇಮಠ, ಇಳಕಲ್ ಮಠ ನನ್ನ ಎರಡು ಕಣ್ಣುಗಳು: ಪ್ರೊ.ಸಿದ್ಧಣ್ಣ ಲಂಗೋಟಿ

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ

ಅಮರಾವತಿ ಶಿವಯ್ಯ ಹಿರೇಮಠ ಪ್ರತಿಷ್ಠಾನ ಕೊಡಮಾಡುವ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಾಹಿತ್ಯ ಪ್ರಶಸ್ತಿ ಪ್ರೊ. ಸಿದ್ಧಣ್ಣ ಲಂಗೋಟಿ ಅವರಿಗೆ ಮಂಗಳವಾರ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಪ್ರೊ.ಸಿದ್ಧಣ್ಣ ಲಂಗೋಟಿ ಅವರು ಭಾಲ್ಕಿ ಹಿರೇಮಠದ ಜೊತೆ ಕಳೆದ ನಾಲ್ಕಾರು ದಶಕಗಳಿಂದ ನನ್ನ ಭಕ್ತಿ ಸಂಬಂಧ ಇದೆ. ಹಿರಿಯ ಪೂಜ್ಯರಿಂದಲೂ ನಾನು ಈ ಮಠದ ಆತ್ಮೀಯ ಬಸವಭಕ್ತನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಭಾಲ್ಕಿ ಹಿರೇಮಠ ಮತ್ತು ಇಳಕಲ್ ಮಠ ನನ್ನ ಎರಡು ಕಣ್ಣುಗಳಿದ್ದಂತೆ.

ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಹಿರಿಯ ಪೂಜ್ಯರ ಮಾರ್ಗದಲ್ಲಿ ಬಸವತತ್ವ ಮಣಿಹ ಪೂರೈಸುತ್ತಿರುವುದು ನೋಡಿ ಅಪಾರ ಸಂತೋಷವಾಗುತ್ತಿದೆ. ಬಸವಕಲ್ಯಾಣದ ಅನುಭವಮಂಟಪದ ಬೆಳವಣಿಗೆಯಲ್ಲಿ ಭಾಲ್ಕಿ ಮಠದ ಕೊಡುಗೆ ಅಪಾರವಾದದ್ದು.

ಬಸವಣ್ಣನವರನ್ನು ಹಾಸಿಕೊಂಡು, ಹೊದ್ದಿಕೊಂಡಿರುವ ಈ ಮಠದ ಪೂಜ್ಯರಾದ ಡಾ.ಬಸವಲಿಂಗ ಪಟ್ಟದ್ದೇವರ ಹೆಸರಿನಲ್ಲಿರುವ ಈ ಪ್ರಶಸ್ತಿ ನನಗೆ ದೊರೆತಿರುವುದು ನನ್ನ ಸೌಭಾಗ್ಯವೆಂದು ತಿಳಿದಿದ್ದೇನೆ ಎಂದು ನುಡಿದರು. ಈ ಸಂದರ್ಭದಲ್ಲಿ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ಜಯಂತಿ ನಿಮಿತ್ಯ ಡಾ.ಸಂಜುಕುಮಾರ ಜುಮ್ಮಾ ಅವರಿಂದ ಒಂದು ವಾರ ನಡೆದ ಪ್ರವಚನ ಸಮಾರಂಭದ ಮಂಗಲ ಕಾರ್ಯಕ್ರಮ ಜರುಗಿತು.

ಈ ಪ್ರಶಸ್ತಿಯನ್ನು ಡಾ.ರಾಮನಗೌಡ ನಾಡಗೌಡ ಅವರು ಪ್ರದಾನ ಮಾಡಿ, ಭಾಲ್ಕಿಯ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಕಲ್ಯಾಣ ಕರ್ನಾಟಕ ಭಾಗದ ಕಲ್ಪತರು ಆಗಿ ಎಲ್ಲ ರಂಗಗಳಲ್ಲಿ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಪೂಜ್ಯರು ಧಾರ್ಮಿಕ ಅಷ್ಟೇ ಅಲ್ಲದೆ, ಶೈಕ್ಷಣಿಕ ಮತ್ತು ಸಾಮಾಜಿಕ, ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಕೊಡುಗೆ ನೀಡುತ್ತಿದ್ದಾರೆ.

ಶ್ರೀಮಠದ ಅಡಿಯಲ್ಲಿ ಕನ್ನಡ, ಮರಾಠಿ, ತೆಲಗು, ಹಿಂದಿ ಮುಂತಾದ ಭಾಷೆಗಳಲ್ಲಿ ಶರಣ ಸಾಹಿತ್ಯ ಪ್ರಕಟಿಸುವ ಮೂಲಕ ಬಸವಾದಿ ಶರಣರ ಚಿಂತನೆಗಳು ರಾಜ್ಯಹೊರರಾಜ್ಯಗಳಲ್ಲಿ ಪ್ರಸಾರ ಮಾಡುವ ಮೂಲಕ ಶರಣರ ಕಲ್ಯಾಣ ರಾಜ್ಯ ಕಟ್ಟುತ್ತಿದ್ದಾರೆ. ಆ ದಿಶೆಯಲ್ಲಿ ಅವರ ಹೆಸರಿನಲ್ಲಿ ಈ ಪ್ರಶಸ್ತಿ ನೀಡುತ್ತಿರುವ ನಿಜಕ್ಕೂ ಅಭಿನಂದನೀಯವಾದದ್ದು ಎಂದು ನುಡಿದರು.

ಪೂಜ್ಯ ಶ್ರೀ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರ ದಿವ್ಯನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷತೆ ಎಂ.ಬಂಡೆಪ್ಪ ಶರಣರು ವಹಿಸಿದ್ದರು.

ಕಲಬುರಗಿ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಸಿದ್ಧಪ್ಪ ಭಗವತಿ, ಡಾ.ಜಯರಾಜ ಗುಳಶೆಟ್ಟಿ, ಡಾ.ಸಂಜುಕುಮಾರ ಜುಮ್ಮಾ, ವೀರಶೆಟ್ಟಿ ಬಾವುಗೆ, ಗುಂಡಪ್ಪ ಸಂಗಮಕರ, ಮೋಹನರೆಡ್ಡಿ, ಉಪಸ್ಥಿತರಿದ್ದರು. ಅಮರಾವತಿ ಶಿವಯ್ಯ ಹಿರೇಮಠ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮಕ್ತುಂಬಿ ಅವರು ಪ್ರಾಸ್ತಾವಿಕ ಮಾತನಾಡಿದರು. ದೀಪಕ ಠಮಕೆ ನಿರೂಪಿಸಿದರು. ವೀರಣ್ಣ ಕುಂಬಾರ ಶರಣು ಸಮರ್ಪಣೆ ಮಾಡಿದರು. ಅಕ್ಕನಬಳಗದ ಶರಣೆಯರಿಂಚ ವಚನ ಸಂಗೀತ ಜರುಗಿತು.

Share This Article
Leave a comment

Leave a Reply

Your email address will not be published. Required fields are marked *