ಭಾಲ್ಕಿ
ವಚನ ಜಾತ್ರೆ-೨೦೨೫ ಹಾಗೂ ಪೂಜ್ಯ ಚನ್ನಬಸವ ಪಟ್ಟದ್ದೇವರ ೨೬ನೆಯ ಸ್ಮರಣೋತ್ಸವದ ಪೂರ್ವಭಾವಿ ಸಭೆ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಪೂಜ್ಯ ಗುರುಬಸವ ಪಟ್ಟದ್ದೇವರ ದಿವ್ಯಸಾನಿಧ್ಯದಲ್ಲಿ ಯಶಸ್ವಿಯಾಗಿ ಸೋಮವಾರ ನಡೆಯಿತು.
ಸರ್ವಾನುಮತದಿಂದ ಈ ಸಮಾರಂಭದ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಜೊತೆಗೆ ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ ಅವರಿಗೆ ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಸ್ವಾಗತ ಸಮಿತಿಯ ಅಧ್ಯಕ್ಷತೆ ವಹಿಸಿದ ಈಶ್ವರ ಖಂಡ್ರೆ ಅವರು ಮಾತನಾಡಿ ಪೂಜ್ಯರ ಸಾನಿಧ್ಯದಲ್ಲಿ ನಡೆಯುವ ವಚನ ಜಾತ್ರೆ ಕಾರ್ಯಕ್ರಮ ಯಶಸ್ವಿಯಾಗಿ ಸಾಗಲು ಎಲ್ಲ ರೀತಿಯ ಸಹಕಾರ ಮತ್ತು ಸೇವೆ ಸಲ್ಲಿಸುತ್ತೇವೆ, ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ನಮ್ಮ ನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ದುಡಿದ ಮಹನೀಯರು ಆಗಿದ್ದಾರೆ.
ಅವರ ಮಾರ್ಗದಲ್ಲಿ ಮುನ್ನಡೆಯುತ್ತಲಿರುವ ಭಾಲ್ಕಿ ಹಿರೇಮಠದ ಉಭಯ ಗುರುಗಳು ಬಸವತತ್ವ ಪ್ರಸಾರವೇ ತಮ್ಮ ಪ್ರಾಣಜೀವಾಳವಾಗಿಸಿಕೊಂಡು ಕಾರ್ಯ ಮಾಡುತ್ತಿದ್ದಾರೆ. ಬಸವಣ್ಣನವರ ತತ್ವಾದರ್ಶಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. ಬಸವತತ್ವವೇ ಶಾಶ್ವತ ತತ್ವವಾಗಿದೆ. ಅದಕ್ಕಾಗಿ ಜೀವನದ ಮತ್ತು ಜಾಗತಿಕ ಸಮಸ್ಯೆಗಳ ಪರಿಹಾರಕ್ಕೆ ವಚನ ಸಾಹಿತ್ಯವೇ ದಿವ್ಯಾಔಷಧಿಯಾಗಿವೆ ಅದಕ್ಕಾಗಿ ವಚನ ಜಾತ್ರೆಯ ಮೂಲಕ ಶರಣರ ಮೌಲ್ಯಗಳನ್ನು ನಮ್ಮ ಯುವಕರಲ್ಲಿ, ಮಹಿಳೆಯರಲ್ಲಿ, ಹಿರಿಯರಲ್ಲಿ ಬಿತ್ತುವ ಕಾರ್ಯ ಪೂಜ್ಯರು ಮಾಡುತ್ತಿದ್ದಾರೆ ಎಂದು ನುಡಿದರು.
ಆಶೀರ್ವಚನ ನೀಡಿದ ಪೂಜ್ಯರು ವಚನ ಜಾತ್ರೆ ನಿಮಿತ್ಯ ವಚನ ರಥವನ್ನು ಮಾಡಬೇಕೆಂದು ಕಳೆದ ಅನೇಕ ವರ್ಷಗಳಿಂದ ಮಠಾಧೀಶರು ಮತ್ತು ಸದ್ಭಕ್ತರು ಸಲಹೆ ನೀಡುತ್ತಿದ್ದಾರೆ. ಅದಕ್ಕಾಗಿ ಎಲ್ಲ ಸದ್ಭಕ್ತರು ಈ ವಿಷಯ ಕುರಿತು ಆಸಕ್ತಿ ವಹಿಸಿ ಮುಂದಿನ ದಿನಮಾನಗಳಲ್ಲಿ ವಚನ ರಥ ತಯಾರಿಸುವ ದಿಶೆಯಲ್ಲಿ ಪ್ರಯತ್ನಸಬೇಕು ಎಂದು ನುಡಿದರು.
ಆಶಯ ನುಡಿಗಳು ನುಡಿದ ಪೂಜ್ಯ ಗುರುಬಸವ ಪಟ್ಟದ್ದೇವರು ವಚನ ಜಾತ್ರೆ ಪೂಜ್ಯರ ಸ್ಮರಣೋತ್ಸವ ಕಾರ್ಯಕ್ರಮ ದಿ: ೧೦-೦೪-೨೦೨೫ ರಿಂದ ೨೨-೦೪-೨೦೨೫ ರವರೆಗೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.
ಏಪ್ರಿಲ್ ೧೦ ರಿಂದ ನಾಡಿನ ಖ್ಯಾತ ಪ್ರವಚನಕಾರರಿಂದ ಪ್ರತಿದಿನ ಸಾಯಂಕಾಲ ಪ್ರವಚನ ನಡೆಯುತ್ತದೆ. ಏಪ್ರಿಲ್ ೧೫ ರಿಂದ ಬೆಳಿಗ್ಗೆ ೬-೦೦ ಗಂಟೆಗೆ ಸಾಮೂಹಿಕ ವಚನ ಪಾರಾಯಣ ನಡೆಯುತ್ತದೆ.
ಇದೇ ಸಂದರ್ಭದಲ್ಲಿ ಚನ್ನಬಸವಾಶ್ರಮ ಆವರಣದಲ್ಲಿ ವಿವಿಧ ಪ್ರದರ್ಶನಗಳು, ಶಿಬಿರಗಳು ಏರ್ಪಡಿಸಲಾಗಿದೆ. ೨೦, ೨೧ ಮತ್ತು ೨೨ ರಂದು ವಿಶೇಷ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದು ಆಶೀರ್ವಚನ ನೀಡಿದರು. ಪೂಜ್ಯ ಶ್ರೀ ಮಹಾಲಿಂಗ ಸ್ವಾಮಿಗಳು, ಪೂಜ್ಯ ಶ್ರೀ ಬಸವಮುರುಘೇಂದ್ರ ಸ್ವಾಮಿಗಳು ಉಪಸ್ಥಿತರಿದ್ದರು.
ಭಾರತೀಯ ಬಸವಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ ಅವರಿಂದ ಬಸವಗುರುಪೂಜೆ ನೆರವೇರಿತು. ಯುವಮುಂಖಡರಾದ ಡಿ.ಕೆ.ಸಿದ್ರಾಮ, ಸಿದ್ರಾಮಪ್ಪ ವಂಕೆ, ಸಿದ್ರಾಮಪ್ಪ ಅಣದೂರೆ, ಚಂದ್ರಕಾAತ ಪಾಟೀಲ, ಸೋಮನಾಥಪ್ಪ ಅಷ್ಟೂರೆ, ಗುಂಡಪ್ಪ ಸಂಗಮಕರ, ಬಸವರಾಜ ವಂಕೆ, ಶಿವಕುಮಾರ ಕಲ್ಯಾಣೆ, ಶಂಭುಲಿAಗ ಕಾಮಣ್ಣ, ಜೈರಾಜ ಪಾರೆ, ಸಂಗಮೇಶ ವಾಲೆ, ವಿಲಾಸ ಬಕ್ಕಾ, ಡಾ.ಅಮೀತ ಅಷ್ಟೂರೆ, ವಿಶ್ವನಾಥಪ್ಪ ಬಿರಾದಾರ, ಸಿದ್ಧಯ್ಯ ಕಾವಡಿಮಠ, ಬಾಬುರಾವ ಜಲ್ದೆ, ರೇಖಾಬಾಯಿ ಅಷ್ಟೂರೆ, ಮಲ್ಲಮ್ಮ ನಾಗನಕೇರೆ, ಮಹಾನಂದ ದೇಶಮುಖ ಮುಂತಾದವರು ಉಪಸ್ಥಿತರಿದ್ದರು. ಪೂರ್ವಸಿದ್ಧತಾ ಸಭೆಯಲ್ಲಿ ಶ್ರೀಮಠದ ಸದ್ಭಕ್ತರು, ಬಸವತತ್ವಾಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.