ಭಾಲ್ಕಿ:
ಪಟ್ಟಣದಲ್ಲಿ ಏ.೧೦ ರಿಂದ ಮೂರು ದಿವಸ ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ತೋರಿರುವ ಹೆಚ್ಚಿನ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಬೇಕು ಎಂದು ಅಮೃತ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಅಮೃತ ಮಹೋತ್ಸವ ಸಮಿತಿ ಮತ್ತು ಹಿರೇಮಠ ಸಂಸ್ಥಾನದ ವತಿಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯ ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಬಸವ ಜಯಂತಿ, ವಚನ ಜಾತ್ರೆ-೨೦೨೬, ಡಾ. ಚನ್ನಬಸವ ಪಟ್ಟದ್ದೇವರ ೨೭ನೇ ಸ್ಮರಣೋತ್ಸವ ಮತ್ತು ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ನಿಮಿತ್ತ ಏ.೧೦, ೧೧ ಮತ್ತು ೧೨ ರಂದು ವಾಲಿಬಾಲ್ ಪಂದ್ಯಾವಳಿ ಜರುಗಲಿವೆ ಎಂದರು.
ಇಂದಿನ ದಿನಗಳಲ್ಲಿ ಯುವಕರು ಮೊಬೈಲ್, ಫೇಸ್‌ಬುಕ್, ವಾಟ್ಸಾಪ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಇದರಿಂದ ದೈಹಿಕ ಪರಿಶ್ರಮ ಕಡಿಮೆಯಾಗಿ ವಿವಿಧ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಇದರಿಂದ ಹೊರಬರಲು ಉತ್ತಮ ಆರೋಗ್ಯ ಶೈಲಿ ಮೈಗೂಡಿಸಿಕೊಳ್ಳಲು ಕ್ರೀಡೆಗಳು ಪೂರಕವಾಗಿವೆ. ಮೂರು ದಿವಸ ನಡೆಯಲಿರುವ ವಾಲಿಬಾಲ್ ಪಂದ್ಯಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಕ್ರೀಡೆ ಮಾನಸಿಕ, ದೈಹಿಕ ವೃದ್ಧಿಯೊಂದಿಗೆ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿವೆ ಎಂದು ತಿಳಿಸಿದರು.
ನೇತೃತ್ವ ವಹಿಸಿದ್ದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಇಂದಿನ ಯುವಶಕ್ತಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕ್ರೀಡೆಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಾಲಿಬಾಲ್ ಪಂದ್ಯಾವಳಿಯ ಅಧ್ಯಕ್ಷ ವಿಲಾಸ ಬಕ್ಕಾ ಮಾತನಾಡಿ, ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನಗಳನ್ನು ನಿಗದಿಪಡಿಸಲಾಗಿದ್ದು, ಪ್ರಥಮ ಬಹುಮಾನವಾಗಿ ೭೫,೦೭೫, ದ್ವಿತೀಯ ಬಹುಮಾನ ೫೧,೦೭೫, ತೃತೀಯ ಬಹುಮಾನ ೩೧,೦೭೫ ಮತ್ತು ನಾಲ್ಕನೇ ಬಹುಮಾನ ೨೧,೦೭೫ ರೂ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಚನ್ನಬಸವ ಪಟ್ಟದ್ದೇವರು, ಬ್ಯಾಂಕ್‌ನ ವ್ಯವಸ್ಥಾಪಕ ಗಣಪತಿ ಬಾವುಗೆ, ಪತ್ರಕರ್ತ ಜಯರಾಜ ಪಾತ್ರೆ, ದೈಹಿಕ ಶಿಕ್ಷಕ ಚೆನ್ನವೀರ ಚಕ್ರಸಾಲಿ ಸೇರಿದಂತೆ ಹಲವರು ಇದ್ದರು.
