ಗದಗ/ಸಾಣೇಹಳ್ಳಿ
ಬೂಕರ್ ಪ್ರಶಸ್ತಿ ಗೆದ್ದಿರುವ ಲೇಖಕಿ ಬಾನು ಮುಷ್ತಾಕ್ ಅವರನ್ನು ಗದಗ್, ಸಾಣೇಹಳ್ಳಿ ಶ್ರೀಗಳು ಅಭಿನಂದಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕನ್ನಡದ ಶ್ರೇಷ್ಠ ಲೇಖಕಿ ಮತ್ತು ಕಥೆಗಾರ್ತಿಯಾಗಿರುವ ಶ್ರೀಮತಿ ಬಾನು ಮುಷ್ತಾಕ ಅವರ ‘ಹೃದಯ ವಾಣಿ’ (ಹಾರ್ಟ್ ಲ್ಯಾಂಪ್) ಕಥಾಸಂಕಲನಕ್ಕೆ ಅಂತರರಾಷ್ಟೀಯ ಬುಕರ್ ಪ್ರಶಸ್ತಿ ಲಭಿಸಿರುವುದು ಸಮಸ್ತ ಕನ್ನಡಿಗರೆಲ್ಲ ಹೆಮ್ಮೆಪಡುವಂತಾಗಿದೆ. ಜಾಗತಿಕ ಮಟ್ಟದಲ್ಲಿ ಕನ್ನಡದ ಘನತೆ ಹಾಗೂ ಗೌರವಗಳನ್ನು ಹೆಚ್ಚಿಸಿದ ಬಾನು ಮುಷ್ತಾಕ ಅವರು ನಿಜಕ್ಕೂ ಅಭಿನಂದನಾರ್ಹರು ಎಂದು ಹೇಳಿದ್ದಾರೆ.
ಶ್ರೀಗಳು ಲೇಖಕಿ ಶ್ರೀಮತಿ ಬಾನು ಮುಷ್ತಾಕ ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಈ ಅಪೂರ್ವ ಕೊಡುಗೆಯನ್ನು ಪ್ರಶಂಸಿಸಿದ್ದಾರೆ. ಇದು ಕನ್ನಡದ ಕೃತಿಗೆ ಸಂದ ಮೊದಲ ಪ್ರಶಸ್ತಿಯಾಗಿರುವುದರಿಂದ ಕನ್ನಡಿಗರಲ್ಲಿ ವಿಶೇಷ ಸಂಭ್ರಮ ಉಂಟಾಗಿದೆ. ಭಾರತ ದೇಶಕ್ಕೆ ಲಭಿಸಿದ ಎರಡನೆಯ ಪ್ರಶಸ್ತಿಯಾಗಿದೆ. ಕರ್ನಾಟಕಕ್ಕೆ ಈ ಗೌರವ ತಂದುಕೊಟ್ಟ ಕನ್ನಡತಿ ಶ್ರೀಮತಿ ಬಾನು ಮುಷ್ತಾಕ ಹಾಗೂ ಕೃತಿಯನ್ನು ಇಂಗ್ಲೀಷಿಗೆ ಅನುವಾದಿಸಿದ ಶ್ರೀಮತಿ ದೀಪಾ ಭಾಸ್ತಿ ಅವರನ್ನು ಶ್ರೀಗಳು ಅಭಿನಂದಿಸಿದ್ದಾರೆ.
ಸಾಣೇಹಳ್ಳಿ ಶ್ರೀ
ಬಾನು ಮುಷ್ತಾಕ್ ಅವರ ಹಸಿನಾ ಮತ್ತು ಇತರ ಕತೆಗಳು ಎನ್ನುವ ಆಂಗ್ಲಭಾಷೆಯ ಅನುವಾದ ಕೃತಿಗೆ ಜಗತ್ತಿನ ಶ್ರೇಷ್ಠ “ಬುಕರ್” ಪ್ರಶಸ್ತಿ ದೊರೆತಿರುವುದು ಕನ್ನಡ ನಾಡಿಗೆ, ಕನ್ನಡ ಭಾಷೆಗೆ, ಭಾರತ ದೇಶಕ್ಕೆ ದೊರೆತ ಗೌರವ. ಅದಕ್ಕಾಗಿ ಬಾನು ಮುಷ್ತಾಕ್ ಅವರನ್ನು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿನಂದಿಸಿದ್ದಾರೆ.
ಅವರೊಬ್ಬ ಇಸ್ಲಾಮ್ ಮಹಿಳೆ. ಉತ್ತಮ ನ್ಯಾಯವಾದಿ. ಸಾಹಿತಿ. ಪ್ರಗತಿಪರ ಚಿಂತಕಿ. ಎಡಪಂಥೀಯ ವಿಚಾಧಾರೆಯ ಉತ್ತಮ ಉಪನ್ಯಾಸಕಿ. ಭಾರತಕ್ಕೆ ಆರನೆಯ ಬಾರಿ, ಕರ್ನಾಟಕಕ್ಕೆ ಮೊದಲ ಬಾರಿ ಬುಕರ್ ಪ್ರಶಸ್ತಿ ಬಂದಿರುವುದು ಅತ್ಯಂತ ಸಂತೋಷ, ಸಂಭ್ರಮದ ಸಂಗತಿ ಎಂದು ಸ್ವಾಮಿಗಳು ಬಾನು ಅವರನ್ನು ಅಭಿನಂದಿಸಿದ್ದಾರೆ.