ಜಹಿರಾಬಾದ:
ನಡೆ ನುಡಿ ಒಂದಾಗಿಸಿಕೊಂಡು ಬದುಕಿಗೆ ದಾರಿ ತೋರಿಸಿ ಸಮಾಜ ಕಟ್ಟಿದ ಬಸವಣ್ಣ ಭವರೋಗದ ವೈದ್ಯರಾಗಿದ್ದಾರೆಂದು ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದ ಸ್ವಾಮಿಗಳು ನಿವೇದಿಸಿದರು.

ಬೀದರ ಬಸವ ಕೇಂದ್ರದ ಬೆಳ್ಳಿ ಮಹೋತ್ಸವ ನಿಮಿತ್ತ ಜಹಿರಾಬಾದದಲ್ಲಿ ಹಮ್ಮಿಕೊಂಡ ಬಸವ ಸಂದೇಶ ಯಾತ್ರೆಯ ನೇತೃತ್ವ ವಹಿಸಿ, ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನ ಎಂದು ಹೇಳಿದ ಶರಣರು ಪರಿಸರ, ಪ್ರಕೃತಿ ಜೊತೆ ಬೆರೆತು ಜೀವನ ಕಟ್ಟಿ ಕೊಂಡಿದ್ದರು.
ಬೇರೊಬ್ಬರನ್ನು ಬೆರಳು ಮಾಡಿ ತೋರಿಸದೆ ತಮ್ಮ ಆತ್ಮವಲೋಕನ ಮಾಡಿಕೊಂಡು ತಪ್ಪನ್ನು ತಿದ್ದಿಕೊಂಡು ಸಂತೋಷ ಜೀವನವೇ ನಮ್ಮ ಉಸಿರಾಗಿಸಿಕೊಳ್ಳಬೇಕು. ನಮ್ಮೆಲ್ಲರ ವರ್ತನೆ ಪರಿವರ್ತನೆ ಆದಾಗ ಮಾತ್ರ ಸುಧಾರಣೆ ಸಾಧ್ಯ. ಇದು ನಮ್ಮಿಂದಲೇ ಮೊದಲು ಪ್ರಾರಂಭವಾಗಬೇಕು. ಧರ್ಮಗುರು ಬಸವಣ್ಣನವರನ್ನು ನಂಬಿದವರು ಎಂದೂ, ಯಾವತ್ತು ಕೆಟ್ಟಿಲ್ಲ, ಕೆಟ್ಟವರು ಬಸವಣ್ಣನವರನ್ನು ನಂಬೋದಿಲ್ಲ ಎಂದರು.

ಮನಸ್ಸು ಪ್ರಾಣಲಿಂಗ ಆಗಬೇಕು, ಜ್ಞಾನದಿಂದ ಅನುಭಾವ ಮಾಡಿರಿ, ಶರಣರ ಸಂಘ ಹೆಜ್ಜೇನು ಸವಿದಂತೆ, ಇದು ಪ್ರತಿನಿತ್ಯ ನಡೆಯಬೇಕು. ಸಾಮೂಹಿಕ ಪ್ರಾರ್ಥನೆ ಸಮಷ್ಟಿ ಕಲ್ಯಾಣ. ಪ್ರಾರ್ಥನೆ, ಧರ್ಮ, ಪೂಜೆ, ನಿಷ್ಠೆ, ಜೀವನಕ್ಕೆ ನೆಮ್ಮದಿ ನೀಡುತ್ತವೆ. ನಂಬಿ ಕರೆದೊಡೆ ಓ ಎನ್ನನೇ ಶಿವನು ಎನ್ನುವ ರೀತಿಯಲ್ಲಿ ಕೆಲಸ ಮಾಡಬೇಕು. ಬಸವಣ್ಣ ಸಮಾನತೆಯ ತತ್ವ ಸಿದ್ಧಾಂತದ ಜೊತೆಗೆ ಕುಲಕಸುಬುಗಳಿಗೆ ನ್ಯಾಯ ಒದಗಿಸಿ ಕೊಟ್ಟ ಆರ್ಥಿಕ ತಜ್ಞರು.

ಹರಳನಯ್ಯನವರ ಕಾಯಕ, ಮಡಿವಾಳಯ್ಯನ ಕಾಯಕ, ನುಲಿಯ್ಯ ಚಂದಯ್ಯ, ಕುಂಬಾರ ಗುಂಡಯ್ಯ, ಸತ್ಯಕ್ಕನವರ ಕಾಯಕಗಳೆಲ್ಲವು ಸಮಾನವಾಗಿವೆ. ಕಾಯಕದಲ್ಲಿ ಮೇಲು ಕೀಳು ಅರಸುತ್ತ ಹೋಗಬಾರದು. ಬಸವಣ್ಣ ಪಶು-ಪಕ್ಷಿಗಳಿಂದ ಪಾಠ ಕಲಿತವರು. ವೇಳೆ ಗುಣವ ಕೋಳಿ ಬಲ್ಲದೆಂದು ಹೇಳಿ ಸಮಯ ಪ್ರಜ್ಞೆ ಅರಿತುಕೊಂಡರು, ಸಮಯ ಎಲ್ಲಕ್ಕೂ ಮುಖ್ಯ, ಹುಟ್ಟು, ಜೀವನ, ನಡೆ-ನುಡಿ, ಆಚಾರ-ವಿಚಾರ, ಊಟ, ಎಲ್ಲದಕ್ಕೂ ಸಮಯವೇ ಮುಖ್ಯ ಎಂದು ಹೇಳಿ ನಮ್ಮನ್ನು ಎಚ್ಚರಿಸಿದ್ದಾರೆ.
ಗಿಡ-ಮರಗಳು ಕಡಿಯದೇ ಸಂರಕ್ಷಣೆ ಮಾಡಲೇಬೇಕು. ಶುದ್ಧಗಾಳಿ ಇದ್ದರೆ ಸಮೃದ್ದಿ ಜೀವನ. ಇದರ ಕಿಮ್ಮತ್ತು ಕರೋನಾದಲ್ಲಿ ಎಲ್ಲರ ಗಮನಕ್ಕೆ ಬಂದಿದೆ. ನಮಗೆ ಹಸಿರೆ ಉಸಿರಾದಾಗ ಆರೋಗ್ಯ ವೃದ್ಧಿ ಆಗುತ್ತದೆ. ಜಹಿರಾಬಾದ ಲಿಂಗಾಯತ ಸಮಾಜ ಕಳೆದ ಎಪ್ಪತ್ತು ವರ್ಷಗಳಿಂದ ಇಲ್ಲಿ ಸಂಘಟನೆ ಬಲಿಪಡಿಸುತ್ತ ಪ್ರಾರ್ಥನೆ, ಬಸವ ಜ್ಯೋತಿಯಂಥಹ ನೂರಾರು ಕಾರ್ಯಕ್ರಮಗಳು ನಡೆಸಿರುವುದು ಹೆಮ್ಮೆಯ ಸಂಗತಿ. ಇಂದು ಯುವಕರು ಹಾದಿ ತಪ್ಪುತ್ತಿದ್ದಾರೆ, ಅವರು ಇಂಥ ಧಾರ್ಮಿಕ, ವೈಚಾರಿಕ ಕಾರ್ಯಕ್ರಮದಲ್ಲಿ ಸಹಭಾಗಿಗಳಾದರೆ ಸರಿದಾರಿಗೆ ಬರಲು ನಾಂದಿಯಾಗುತ್ತದೆ. ಈ ಬಗ್ಗೆ ಗಮನಹರಿಸಲು ಹೇಳಿದರು.
ಕಾರ್ಯಕ್ರಮದಲ್ಲಿ ಮಾನಸಿಕ ರೋಗತಜ್ಞರಾದ ಡಾ. ನಾಗೇಶ ಅಜ್ಜವಾಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ನಮ್ಮ ದೇಹ ಮತ್ತು ಮನಸ್ಸು ಅಂತರಂಗ ಬಹಿರಂಗ ಇದ್ದಂತೆ. ನಮ್ಮ ಎಲ್ಲ ಚಟುವಟಿಕೆಗಳು ಸಕರಾತ್ಕಕವಾಗಿರಬೇಕು. ನಮ್ಮ ಆಹಾರ, ವಿಹಾರ, ವಿಚಾರ ಒಂದಕ್ಕೊಂದು ಪೂರಕವಾಗಿದ್ದಾಗ ಮಾತ್ರ ಮಾನಸಿಕ, ದೈಹಿಕ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ. ಮನುಷ್ಯತ್ವ ತುಂಬಾ ದೊಡ್ಡದು, ಶರಣಾಗತಿ ಭಾವದಿಂದ ಕೆಲಸ ಮಾಡಲು ಇಂಥ ಸಂಘಟನೆ ಇಂದಿನ ಕಾಲಘಟ್ಟದಲ್ಲಿ ತುಂಬಾ ಅನಿವಾರ್ಯ ಎಂದರು.
ಇದೇ ಸಂದರ್ಭದಲ್ಲಿ ಬೀದರ ಜಿಲ್ಲಾ ಬಸವ ಕೇಂದ್ರದ ಪ್ರಧಾನ ಕಾರ್ಯದರ್ಶಿ ಡಾ. ಶಿವಶಂಕರ ಟೋಕರೆ, ವಚನ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಅಲ್ಲಮಪ್ರಭು ನಾವದಗೇರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆ ಮೇಲೆ ಲಿಂಗಾಯತ ಸಮಾಜದ ಅಧ್ಯಕ್ಷರಾದ ರಾಜಶೇಖರ ಶೆಟಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಡಾ. ಬಸವರಾಜ ಮಠಪತಿ ಸ್ವಾಗತ, ಸೋಮಶೇಖರ ಪಾಟೀಲ ನಿರೂಪಣೆ, ಪ್ರಭಾಕರ ಬಿರಾದಾರ ವಂದಿಸಿದರು. ವೀರಯ್ಯ ಮಠಪತಿ ವಚನ ಸಂಗೀತ ಪ್ರಾರ್ಥನೆ ನಡೆಸಿಕೊಟ್ಟರು.
ಬಸವ ಸಂದೇಶ ಯಾತ್ರೆ ಆಚಾರ್ಯ ಪದವಿ ಕಾಲೇಜನಿಂದ ಬಸವೇಶ್ವರ ಫಂಕ್ಷನ್ ಹಾಲ್ ವರೆಗೆ ನಡೆಯಿತು. ತೆಲಂಗಾಣ ರಾಷ್ಟ್ರೀಯ ಬಸವ ದಳ ಅಧ್ಯಕ್ಷರಾದ ಶಂಕ್ರಪ್ಪ ಪಾಟೀಲ, ಸಮಾಜದ ಕಾರ್ಯದರ್ಶಿ ಆರ್. ಸುಭಾಶ, ತಾ.ರಾಬದ ಅಧ್ಯಕ್ಷರಾದ ಡಾ. ಶರಣಪ್ಪ ಬಾಲೊದೆ, ಯುವ ಘಟಕದ ಅಧ್ಯಕ್ಷರಾದ ಅಡಕಿ ನರಹರಿ, ಮಹಿಳಾ ಘಟಕದ ಅಧ್ಯಕ್ಷರಾದ ನಿರ್ಮಲಾ ಕವಳಾಸ ಹಾಗೂ ಸ್ವಪ್ನಾ ಸೌದಿ ಸೇರಿದಂತೆ ನೂರಾರು ಶರಣ ಶರಣೆಯರು ಭಾಗವಹಿಸಿದ್ದರು.
