ಬೀದರ್
ವಯೋಸಹಜ ರೋಗದಿಂದ ಬಳಲುತ್ತಿರುವ ಮಾಜಿ ಸಚಿವ, ಶತಾಯುಷಿ ಭೀಮಣ್ಣ ಖಂಡ್ರೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ನಗರದ ಗುದಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭೀಮಣ್ಣ ಖಂಡ್ರೆಯವರ ಮಗ, ಸಚಿವ ಈಶ್ವರ ಬಿ. ಖಂಡ್ರೆಯವರು ನಗರದಲ್ಲೇ ಠಿಕಾಣಿ ಹೂಡಿದ್ದು, ಆಗಾಗ್ಗೆ ಆಸ್ಪತ್ರೆಗೆ ಭೇಟಿ ಕೊಟ್ಟು ವೈದ್ಯರಿಂದ ತಂದೆಯ ಆರೋಗ್ಯದ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರ್ ಖಂಡ್ರೆ ನಮ್ಮ ತಂದೆಯವರು ಒಂದು ವಾರದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಉಸಿರಾಟದಲ್ಲಿ ತೊಂದರೆಯಾಗುತ್ತಿತ್ತು. ರಕ್ತದೊತ್ತಡದಲ್ಲಿ ಏರುಪೇರಾಗುತ್ತಿದ್ದು. ವೈದ್ಯರ ತಂಡ 24 ತಾಸು ಅವರನ್ನು ನಿಗಾ ವಹಿಸಿದೆ. ಇವತ್ತು ಅವರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಇದೆ ಎಂದು ಹೇಳಿದರು.
ಭಾನುವಾರ ಮಲ್ಲಯ್ಯಗಿರಿ ಮತ್ತು ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಬಸವಲಿಂಗ ಅವಧೂತರು ಖಂಡ್ರೆಯವರ ಆರೋಗ್ಯ ವಿಚಾರಿಸಿ ವಿಭೂತಿ ಧಾರಣೆ ಮಾಡಿದರು. ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಜೈ ಭಾರತ್ ಸೇವಾ ಸಮಿತಿ ಅಧ್ಯಕ್ಷ ಹವಾ ಮಲ್ಲಿನಾಥ, ತಡೋಳಾ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಅರಣ್ಯ ಮಾಜಿಸಚಿವ ರಾಜಶೇಖರ್ ಪಾಟೀಲ್ ಹುಮನಾಬಾದ್, ಎಚ್. ಆಂಜನೇಯ, ಎಂಎಲ್ಸಿಗಳಾದ ಡಾ. ಚಂದ್ರಶೇಖರ್ ಪಾಟೀಲ್, ಭೀಮರಾವ್ ಪಾಟೀಲ್, ಚಂದ್ರಪ್ಪ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ಕೊಟ್ಟರು.
