ಬಸವಾನುಯಾಯಿಗಳ ಮೆಚ್ಚುಗೆ ಗಳಿಸಿದ ಬೀದರ ಬಸವ ಸಂಸ್ಕೃತಿ ಅಭಿಯಾನ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ್

ಕರ್ನಾಟಕ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ರಾಜ್ಯದಾದ್ಯಂತ ಸೆಪ್ಟೆಂಬರ್ 1 ರಿಂದ ಒಂದು ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಅಭಿಯಾನ ಬಸವ ಸಂಸ್ಕೃತಿಯನ್ನು ಜನಮಾನಸದಲ್ಲಿ ಬಿತ್ತುವಲ್ಲಿ ಯಶಸ್ವಿಯಾಯಿತು.

ಬಸವಾದಿ ಶರಣರು ನಡೆದಾಡಿದ, ಕ್ರಾಂತಿ ನಡೆಸಿದ, ವಚನ ಸಾಹಿತ್ಯ ರಚಿಸಿದ ಹಾಗೂ ಬಸವ ಸಂಸ್ಕೃತಿ ಕೊಟ್ಟ ಪಾವನ ಭೂಮಿ ಬೀದರದಲ್ಲಿ ಸೆ. 3 ರಂದು ನಡೆದ ಅದ್ಧೂರಿ ಅಭಿಯಾನ ಇಡೀ ರಾಜ್ಯದ ಗಮನ ಸೆಳೆಯಿತು.

ಅಷ್ಟು ಮಾತ್ರವಲ್ಲದೆ; ನಾಡಿನ ಇತರ ಜಿಲ್ಲೆಗಳ ಅಭಿಯಾನಕ್ಕೂ ಜೋಶ್ ತುಂಬಿತು.

ಬಸವ ಸಂಸ್ಕೃತಿಯ ಸಂವಾದ, ಅಚ್ಚುಕಟ್ಟಾದ ವಿವಿಧ ಸ್ಪರ್ಧೆಗಳ ಆಯೋಜನೆ, ಅದ್ಧೂರಿ ಮೆರವಣಿಗೆ, ವರ್ಣರಂಜಿತ ವೇದಿಕೆ ಸಮಾರಂಭ, ಚಿತ್ತಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಹೀಗೆ ಎಲ್ಲದರಲ್ಲೂ ಬೀದರ ಅಭಿಯಾನ ಮಾದರಿ ಆಯಿತು.

ಬೀದರ್ ಬಸವ ಸಂಸ್ಕೃತಿ ಅಭಿಯಾನದ ಯಶಸ್ಸು 40 ದಿನಗಳ ಅವಿರತ ಪರಿಶ್ರಮದ ಫಲ.
ತಮಗೆ ಹೊಣೆ ವಹಿಸಿ ಕೊಡುತ್ತಲೇ ಬಸವರಾಜ ಧನ್ನೂರ ಉದ್ಯಮ ಸೇರಿದಂತೆ ತಮ್ಮ ಎಲ್ಲ ಕಾರ್ಯಗಳನ್ನು ಬದಿಗೊತ್ತಿ, ಮಾದರಿ ಅಭಿಯಾನ ರೂಪಿಸುವಲ್ಲಿ ನಿರತರಾದರು. ತಮ್ಮ ತಂಡದೊಂದಿಗೆ ಬಸವ ಸಂಸ್ಕೃತಿ ಬಿಂಬಿಸುವ, ಪಸರಿಸುವ ಕಾರ್ಯಕ್ರಮಗಳ ಆಯೋಜನೆಗೆ ರೂಪು ರೇಷೆ ಸಿದ್ಧಪಡಿಸಿದರು.

ಬಸವ ಸಂಸ್ಕೃತಿ ಅಭಿಯಾನ ವಿಷಯ ಕುರಿತು ನಿಬಂಧ, ಭಾಷಣ, ಚಿತ್ರಕಲಾ, ರಂಗೋಲಿ, ವಚನ ಕಂಠಪಾಠ, ಬಾಲ ಶರಣರ ವೇಷಧಾರಿ ಸ್ಪರ್ಧೆ ಹಾಗೂ ವಯಸ್ಕರಿಗೆ ರಾಜ್ಯಮಟ್ಟದ ಕುದುರೆ ಮೇಲೆ ಬಸವಣ್ಣ ಪಾತ್ರಧಾರಿ ಸ್ಪರ್ಧೆ ಆಯೋಜಿಸಿದರು. ಏಳೂ ಸ್ಪರ್ಧೆಗಳು ದೊಡ್ಡಮಟ್ಟದ ಬಹುಮಾನ ಹೊಂದಿದ್ದು ಗಮನಾರ್ಹ.

ಅಭಿಯಾನ ನಿಮಿತ್ತ ಬೀದರನ ರಂಗ ಮಂದಿರದಲ್ಲಿ ಸಂವಾದ ಕೂಡ ಏರ್ಪಡಿಸಲಾಗಿತ್ತು.
ಸಂವಾದಕ್ಕೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಯಿತು. 20 ಶಿಕ್ಷಣ ಸಂಸ್ಥೆಗಳ 1,200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಸಂವಾದದಲ್ಲಿ ಭಾಗಿಯಾದರು. ತಮ್ಮ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಪಡೆದುಕೊಂಡರು.

ಕರ್ನಾಟಕ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಪೂಜ್ಯರು ಹಾಗೂ ಗಣ್ಯರು ಸಂವಾದ ನಡೆಸಿಕೊಟ್ಟರು.

ಬಳಿಕ ಬೀದರನ ಬಸವೇಶ್ವರ ವೃತ್ತದಿಂದ ವೇದಿಕೆ ಸಮಾರಂಭ ಆಯೋಜಿಸಿದ್ದ ಬಿ.ವಿ. ಭೂಮರಡ್ಡಿ ಕಾಲೇಜುವರೆಗೆ ನಡೆದ ಶಿಸ್ತು ಬದ್ಧ ಮೆರವಣಿಗೆ ಬಸವ ಸಂಸ್ಕೃತಿಯ ಶ್ರೇಷ್ಠತೆಯನ್ನು ಬಿಂಬಿಸಿತು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ‘ಬಸವ ಸಂಸ್ಕೃತಿ’ ಬೃಹತ್ ಫಲಕದ ಬಲೂನು ಗಾಳಿಯಲ್ಲಿ ಹಾರಿ ಬಿಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಐದು ಸಾವಿರ ಮಹಿಳೆಯರು ಸಾಂಪ್ರದಾಯಿಕ ಇಳಕಲ್ಲ ಸೀರೆ ಧರಿಸಿ ಹಾಗೂ ಸಾವಿರಕ್ಕೂ ಹೆಚ್ಚು ಪುರುಷರು ಅಂಗಿ, ಧೋತರ ತೊಟ್ಟು ಪಾಲ್ಗೊಂಡು ಗಮನ ಸೆಳೆದರು. ಮೆರವಣಿಗೆಯಲ್ಲಿ ಭಾಗವಹಿಸಿದವರೆಲ್ಲರೂ ಕೊರಳಲ್ಲಿ ರುದ್ರಾಕ್ಷಿ ಹಾಗೂ ಹಣೆ ಮೇಲೆ ವಿಭೂತಿ ಧರಿಸಿ 12ನೇ ಶತಮಾನದ ಶರಣ-ಶರಣೆಯರನ್ನು ಸ್ಮರಿಸುವಂತೆ ಮಾಡಿದರು.
ಮೆರವಣಿಗೆಯಲ್ಲಿ ಪುಷ್ಪದ ವಿಶೇಷ ರಥದಲ್ಲಿ ಬಸವಣ್ಣನವರ ಬೃಹತ್ ಭಾವಚಿತ್ರ, ವಚನ ಸಾಹಿತ್ಯ ಇಡಲಾಗಿತ್ತು. ಪ್ರತ್ಯೇಕ ರಥಗಳಲ್ಲಿ ಮೂರು ಅಡಿ ಎತ್ತರದ ಇಷ್ಟಲಿಂಗ, ಐದು ಅಡಿ ಎತ್ತರದ ವಿಭೂತಿ ಹಾಗೂ ಬೃಹತ್ ರುದ್ರಾಕ್ಷಿ ಮಾಲೆ ಇದ್ದವು.

26 ಕುದುರೆಗಳ ಮೇಲೆ ಬಸವಣ್ಣನವರು ಆದಿಯಾಗಿ ಶರಣರು, ಕರ್ನಾಟಕದ ಹಿರಿಮೆ ಎತ್ತಿ ಹಿಡಿದ ಮಹನೀಯರು ಹಾಗೂ ಬಸವ ಸಂಸ್ಕೃತಿ ಬೆಳೆಸಲು ಬದಕು ಸವೆಸಿದ ಪೂಜ್ಯರ ವೇಷಧಾರಿಗಳು ಇದ್ದರು.

ಛತ್ರಿ, ಚಾಮರ, ಬಸವ ಧ್ವಜಗಳು ಎಲ್ಲೆಡೆ ರಾರಾಜಿಸಿದವು. ಕೋಲಾಟ, ಸ್ಥಳೀಯ ಕಲಾ ತಂಡಗಳು, ವಚನ ವಡಪು, ವಚನ ನೃತ್ಯಗಳ ಪ್ರದರ್ಶನ ಮೆರವಣಿಗೆ ವೈಭವ ಹೆಚ್ಚಿಸಿದವು. ಜನ ರಸ್ತೆ ಬದಿ, ಮನೆ ಮಾಳಿಗೆ ಮೇಲೆ ನಿಂತು ಹೊಸ ಇತಿಹಾಸ ಬರೆದ ಮೆರವಣಿಗೆಯನ್ನು ಕಣ್ತುಂಬಿಕೊಂಡರು. ವಿವಿಧ ಸಮಾಜದವರು ಪ್ರಮುಖ ವೃತ್ತಗಳಲ್ಲಿ ಪುಷ್ಪವೃಷ್ಟಿ ಮಾಡಿ ಮೆರವಣಿಗೆಗೆ ಸ್ವಾಗತ ಕೋರಿದರು.

ಮೆರವಣಿಗೆ ಮಾರ್ಗದ ಉದ್ದಕ್ಕೂ ಬೀದಿಗಂಬಗಳಿಗೆ ನೇತು ಹಾಕಲಾಗಿದ್ದ ಅರಿವೇ ಗುರು, ಕಾಯಕವೇ ಕೈಲಾಸ, ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ, ನುಡಿದಂತೆ ನಡೆ ಮೊದಲಾದ ಬಸವ ಸಂಸ್ಕೃತಿ ಸಾರುವ ಶರಣರ ವಚನಗಳ ಸಾಲುಗಳು ಎಲ್ಲರ ಚಿತ್ತ ತಮ್ಮತ್ತ ಸೆಳೆದವು.

ಮೆರವಣಿಗೆಯಲ್ಲಿ ಎತ್ತ ನೋಡಿದರತ್ತ ಜನ ಸಮೂಹವೇ ಕಾಣಿಸಿತು. ಸುಮಾರು 30 ಸಾವಿರ ಜನರು ಮೆರವಣಿಗೆಯಲ್ಲಿ ಭಾಗವಹಿಸಿ ಅಭಿಯಾನಕ್ಕೆ ಸಾಕ್ಷಿಯಾದರು.

ನಂತರ ಬಿ.ವಿ. ಭೂಮರಡ್ಡಿ ಕಾಲೇಜಿನಲ್ಲಿ ಜರುಗಿದ ವೇದಿಕೆ ಸಮಾರಂಭ ಅಭಿಯಾನಕ್ಕೆ ಕಳಶಪ್ರಾಯವಾಗಿತ್ತು. ವೇದಿಕೆ ಸಮಾರಂಭ ವಿನೂತನ ರೀತಿಯಲ್ಲಿ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಸಂಘಟಿಸಲಾಗಿತ್ತು. ಸಮಾರಂಭವನ್ನು ಬಸವ ಸಂಸ್ಕೃತಿ ಅಕ್ಷರಗಳ ದೀಪ ಸ್ತಂಭ ನಿರ್ಮಿಸಿ, 251 ದೀಪ ಬೆಳಗಿಸಿ ಉದ್ಘಾಟಿಸಿದ್ದು ಎಲ್ಲರನ್ನು ಪುಳಕಿತಗೊಳಿಸಿತ್ತು.

ಪೂಜ್ಯರ ಆಶೀರ್ವಚನ, ಎರಡು ಉಪನ್ಯಾಸಗಳು ಅರ್ಥಪೂರ್ಣವಾಗಿ ನಡೆದವು.
100 ಶರಣೆಯರು ಸಮೂಹ ಗೀತೆ, ಬಸವ ಸಂಸ್ಕೃತಿ ಅಭಿಯಾನ ಗೀತೆ ತಾಳಕ್ಕೆ ತಕ್ಕಂತೆ ನೃತ್ಯಾಂಗನ ನಾಟ್ಯ ಸಂಘದ ಕಲಾವಿದರ ನೃತ್ಯ ಪ್ರದರ್ಶನ, ಸಾಣೇಹಳ್ಳಿಯ ಶಿವಸಂಚಾರ ತಂಡದ ಕಲಾವಿದರ ಜಂಗಮದೆಡೆಗೆ ನಾಟಕ ಪ್ರದರ್ಶನ ಬಸವಾನುಯಾಯಿಗಳ ಕರತಾಡನಕ್ಕೆ ಪಾತ್ರವಾದವು.

ವಿವಿಧ ಸ್ಪರ್ಧೆಯ 22 ಮಂದಿ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣ ವಿತರಿಸಲಾಯಿತು. ಅಭಿಯಾನದಲ್ಲಿ ಎಲ್ಲರನ್ನು ವಿಭೂತಿ, ರುದ್ರಾಕ್ಷಿ, ವಚನ ಗ್ರಂಥ, ಬಿಳಿ ವಸ್ತ್ರ ನೀಡಿ ಸನ್ಮಾನಿಸಿದ್ದು ವಿಶಿಷ್ಟವಾಗಿತ್ತು.

ಕರ್ನಾಟಕ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು, ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬಸವ ಧರ್ಮ ಪೀಠದ ಮಾತೆ ಡಾ. ಗಂಗಾದೇವಿ, ಅಥಣಿಯ ಪ್ರಭುಚನ್ನಬಸವ ಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಭಾಲ್ಕಿಯ ಗುರುಬಸವ ಪಟ್ಟದ್ದೇವರು ಸೇರಿದಂತೆ ನಾಡಿನ 30ಕ್ಕೂ ಅಧಿಕ ಪೂಜ್ಯರು ಉಪಸ್ಥಿತರಿದ್ದರು.

ಸ್ವಾದಿಷ್ಟ ಅಂಬಲಿ, ಕುಟ್ಟಿದ ಗೋಧಿ ಹುಗ್ಗಿ, ಅನ್ನ, ಸಾಂಬಾರು ಸವಿದ ಬಸವ ಭಕ್ತರು ಅಚ್ಚುಕಟ್ಟಾದ ವ್ಯವಸ್ಥೆ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದರು.
ಬೀದರ್ ಬಸವ ಸಂಸ್ಕೃತಿ ಅಭಿಯಾನದ ನಂತರ ಬಸವರಾಜ ಧನ್ನೂರ ಹಾಗೂ ತಂಡದವರು ಬೆಂಗಳೂರಿನಲ್ಲಿ ನಡೆದ ಅಭಿಯಾನದ ಸಮಾರೋಪ ಸಮಾರಂಭಕ್ಕೆ ವಿಶೇಷ ರೈಲು ವ್ಯವಸ್ಥೆ ಮಾಡಿಸಿ, ಅಪಾರ ಬಸವ ಭಕ್ತರನ್ನು ಕರೆದೊಯ್ದು ಸಮಾರಂಭದ ಯಶಸ್ವಿಗೂ ಮಹತ್ವದ ಕೊಡುಗೆ ನೀಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
Leave a comment

Leave a Reply

Your email address will not be published. Required fields are marked *