ಮೂಡ ನಂಬಿಕೆಗೆ ಸೆಡ್ಡು ಹೊಡೆದು ಬಿಸಲವಾಡಿ ಗ್ರಾಮದ ಬಿ.ಚನ್ನಬಸಪ್ಪ ತಮ್ಮ ನೂತನ ಮನೆಯ ಗುರು ಪ್ರವೇಶವನ್ನು ನಿಜಾಚರಣೆಯ ಮೂಲಕ ನಡೆಸಿದರು
ಬಿಸಲವಾಡಿ (ಚಾಮರಾಜನಗರ)
ವೈದಿಕ ಸಂಪ್ರದಾಯದಲ್ಲಿ 30 ದಿನಗಳ ಕಾಲ ಇರುವ ಧನುರ್ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡುವುದು ನಿಷಿದ್ಧ. ಈ ಮಾಸದಲ್ಲಿ ಮದುವೆ, ಗೃಹಪ್ರವೇಶದಂತಹ ಯಾವುದೇ ಹೊಸ ಆರಂಭಗಳನ್ನು ಮಾಡಬಾರದು, ಇದರಿಂದ ಕೇಡಾಗುತ್ತದೆ ಎಂಬ ನಂಬಿಕೆ ಇದೆ.
ಆದರೆ ಈ ಮೂಡ ನಂಬಿಕೆಗೆ ಸೆಡ್ಡು ಹೊಡೆದು ಗ್ರಾಮದ ಬಿ.ಚನ್ನಬಸಪ್ಪ ಅವರು ತಮ್ಮ ನೂತನ ಮನೆಯ ಗುರು ಪ್ರವೇಶವನ್ನು ರವಿವಾರ ನಿಜಾಚರಣೆಯ ಮೂಲಕ ನಡೆಸಿದರು.
ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಮತ್ತು ವಚನಗಳ ಪುಸ್ತಕವನ್ನು ಹಿಡಿದು ಮನೆಯವರು ಮತ್ತು ಊರಿನ ಜನರೆಲ್ಲರೂ ಊರಿನ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಪೂಜ್ಯ ಬಸವಯೋಗಿಪ್ರಭು ಸ್ವಾಮೀಜಿ, ಚೌಹಳ್ಳಿ ಲಿಂಗರಾಜಣ್ಣ ಮತ್ತು ವಿಶ್ವಬಸವಸೇನೆಯ ಸದಸ್ಯರುಗಳು ಪಾಲ್ಗೊಂಡಿದ್ದರು.
ನಂತರ ಬಸವಗೀತೆ ಹಾಡುವ ಮುಖಾಂತರ ಷಟ್ಸ್ಥಲ ಬಸವ ಧ್ವಜಾರೋಹಣ ಜರುಗಿತು. ಬಸವಯೋಗಿಪ್ರಭು ಸ್ವಾಮೀಜಿಯವರು ಮನೆಯವರಾದ ಕಮಲಮ್ಮ, ಸುವರ್ಣಮ್ಮ ಮತ್ತು ಬಿ.ಚನ್ನಬಸಪ್ಪರವರಿಗೆ ವಚನಗಳ ಮುಖಾಂತರ ಇಷ್ಟಲಿಂಗ ಪೂಜೆ ಮಾಡುವ ಕ್ರಮಗಳನ್ನು ತಿಳಿಸಿಕೊಟರು. ಮನೆಯವರು ಗುರುಗಳಿಗೆ ಪುಷ್ಪಾರ್ಚನೆ ಮಾಡಿದರು.
ವಚನ ಮಾಂಗಲ್ಯಗಳನ್ನು ಹೆಚ್ಚಾಗಿ ನಡೆಸಬೇಕೆಂದು ನರೆದಿರುವ ಬಸವಭಕ್ತರಿಗೆ ಪೂಜ್ಯಶ್ರೀ ಬಸವಯೋಗಿಪ್ರಭು ಸ್ವಾಮೀಜಿ ವೇದಿಕೆಯಲ್ಲಿ ಹೇಳಿದರು. ಇಷ್ಟಲಿಂಗ, ರುದ್ರಾಕ್ಷಿ, ವಿಭೂತಿಗಳನ್ನು ಎಲ್ಲರೂ ಧರಿಸಬೇಕಂದು ಮೂಡುಗೂರಿನ ಪೂಜ್ಯ ಶ್ರೀಉದ್ಧಾನ ಸ್ವಾಮಿಗಳು ನುಡಿದರು.
ಮೂಢನಂಬಿಕೆ, ಕಂದಾಚಾರಗಳನ್ನು ಬಿಟ್ಟು ಬಸವಾದಿ ಶರಣರು ಹೇಳಿಕೊಟ್ಟ ಮಾರ್ಗದಲ್ಲಿ ವಚನ ಮಾಂಗಲ್ಯ, ಗುರುಪ್ರವೇಶ, ಸ್ಮರಣೋತ್ಸವ ಕಾರ್ಯಗಳನ್ನು ಲಿಂಗಾಯತರು ಮಾಡಬೇಕೆಂದು ಚೌಹಳ್ಳಿ ಲಿಂಗರಾಜಣ್ಣ ಹೇಳಿದರು.
ದೇವನೂರು ಪ್ರಶಾಂತ್, ಪ್ರಸಾದ್ ,ಮಹೇಶ್ ಕಲ್ಪುರ, ಸೋಮು ಕೀಳಲಿಪುರ, ಬಸವರಾಜು, ನಾಗೇಂದ್ರ, ನಂದೀಶ್, ಶಿವರುದ್ರಪ್ಪ, ವೃಷಭೇಂದ್ರ ಇನ್ನೂ ಅನೇಕ ಬಸವಭಕ್ತರು ಭಾಗವಹಿಸಿದ್ದರು. ಗುರುಪ್ರವೇಶ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಉತ್ತಮ ಕಾರ್ಯಕ್ರಮ. ಎಲ್ಲಾ ಭಾಗಗಳಲ್ಲೂ ಇಂತಹ ಕಾರ್ಯಕ್ರಮಗಳನ್ನ ನಡೆಸಬೇಕಿದೆ
ಉತ್ತಮ ಬೆಳವಣಿಗೆ ಸರ್ ತಮ್ಮೆಲ್ಲರಿಗೂ ಹೃದಯ ಪೂರ್ವಕ ಶರಣು ಶರಣಾರ್ಥಿ ಗಳು 🙏🙏💐