ವಿಜಯಪುರ :
ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ಹಾಗೂ ದಲಿತ, ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ವಿಜಯಪುರದಲ್ಲಿ ಎಪ್ರೀಲ್ 10ರಿಂದ 14ರ ಐದು ದಿನಗಳ ಕಾಲ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳವನ್ನು ಪ್ರಥಮ ಬಾರಿಗೆ ಆಯೋಜಿಸಲಾಗಿದೆ. 12ರಂದು ಬಸವಾದಿ ಶರಣರ ವಚನಗಳ ಪ್ರದರ್ಶನದ ಮೆರವಣಿಗೆ ನಡೆಯಲಿದೆ.
ಈಗಾಗಲೇ ಮೇಳದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಲಡಾಯಿ ಪ್ರಕಾಶನದ ಮುಖ್ಯಸ್ಥ, ಪ್ರಗತಿಪರ ಚಿಂತಕ ಬಸವರಾಜ ಸೂಳಿಭಾವಿ ಹೇಳಿದ್ದಾರೆ.

ನಗರದ ಬುದ್ಧ ವಿಹಾರದಲ್ಲಿ ಈಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ಹಾಗೂ ದಲಿತ, ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಈ ಮೇಳ ಆಯೋಜಿಸಲಾಗಿದ್ದು, ಸ್ವರಚಿತ ಪುಸ್ತಕಗಳೊಂದಿಗೆ ಸಾಹಿತಿಗಳ ಜಾಥಾ ಅಪೂರ್ವ ರೀತಿಯಲ್ಲಿ ನಡೆಯಲಿದ್ದು, ಸಾಹಿತಿಗಳೇ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
10ರಂದು ಮಧ್ಯಾಹ್ನ 12ಕ್ಕೆ ಡಿಎಸ್‌ಎಸ್ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ ಪುಸ್ತಕ ಮೇಳಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಬೆಳಗಾವಿ ಪ್ರಾದೇಶಿಕ ಆಯುಕ್ತ ಕೆ.ಎಂ. ಜಾನಕಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಂಬೈನ ಖ್ಯಾತ ಲೇಖಕ ಜಿ.ವಿ. ಪವಾರ ದಿಕ್ಕೂಚಿ ಭಾಷಣ ಮಾಡಲಿದ್ದಾರೆ.

ಅದೇ ದಿನ ಮಧ್ಯಾಹ್ನ 3 ಗಂಟೆಗೆ ‘ಸಾಮಾಜಿಕ ಬದ್ಧತೆ – ಪತ್ರಕರ್ತನಾಗಿ ಅನುಭವಗಳು’ ಎಂಬ ವಿಚಾರಗೋಷ್ಠಿ ನಡೆಯಲಿದ್ದು, ಹಿರಿಯ ಪತ್ರಕರ್ತ ಬಿ.ಎಂ. ಹನೀಫ್, ಚಂದ್ರಕಾಂತ ವಡ್ಡು ವಿಚಾರ ಮಂಡಿಸಲಿದ್ದು, ಹಿರಿಯ ಪತ್ರಕರ್ತ ರಫೀ ಭಂಡಾರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಬಸವರಾಜ ಹೇಳಿದರು.
ಸಂಜೆ 5ಕ್ಕೆ ‘ನನ್ನ ನೆಚ್ಚಿನ ಪುಸ್ತಕ – ವಿದ್ಯಾರ್ಥಿಗಳ ಮಾತು’ ಎಂಬ ಸಂವಾದ, ಅನಂತರ ಸಂಜೆ 6ಕ್ಕೆ ಕವಿಗೋಷ್ಠಿ, ಸಂಜೆ 7 ಕ್ಕೆ ಬಂಜಾರಾ ನೃತ್ಯ ನಡೆಯಲಿದೆ, ಅದೇ ದಿನ ರಾತ್ರಿ 8 ಕ್ಕೆ ಗಣೇಶ ಕಾಂಬಳೆ – ರಮೇಶ ನಾಯಕ ಅವರಿಂದ ಪವಾಡ ಬಯಲು ಕಾರ್ಯಕ್ರಮ ನಡೆಯಲಿದೆ ಎಂದರು.
11ರಂದು ‘ಶಿಕ್ಷಕ ದಂಪತಿ ಮೆರವಣಿಗೆ’ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದ್ದು, ಸಾವಿತ್ರಿಬಾಯಿ ಫುಲೆ ಮಾರ್ಗದಿಂದ ಪುಸ್ತಕ ಮೇಳದ ಸ್ಥಳದವರೆಗೆ ಈ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಖ್ಯಾತ ಚಿಂತಕಿ ಡಾ. ಮೀನಾಕ್ಷಿ ಬಾಳಿ ದಿಕ್ಕೂಚಿ ಭಾಷಣ ಮಾಲಿದ್ದಾರೆ.
ಸಂಜೆ 4ಕ್ಕೆ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ಕವಿಗೋಷ್ಠಿ ನಡೆಯಲಿದೆ ಎಂದು ಬಸವರಾಜ ತಿಳಿಸಿದರು.
12ರಂದು ಬಸವಾದಿ ಶರಣರ ವಚನಗಳ ಪ್ಲೇಕಾರ್ಡ್ ಪ್ರದರ್ಶಿಸುತ್ತ ಮೆರವಣಿಗೆ ನಡೆಯಲಿದೆ. ಅನಂತರ ನಡೆಯಲಿರುವ ಬಸವತತ್ವ ಉಪನ್ಯಾಸ ಕಾರ್ಯಕ್ರಮದಲ್ಲಿ ಖ್ಯಾತ ಚಿಂತಕಿ ಡಾ.ಎಚ್. ಎಸ್. ಅನುಪಮಾ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅನಂತರ ಮುದ್ರಣ ಗುಮ್ಮಟ ಎಂಬ ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ, ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದರು.
ಅನಿಲ ಹೊಸಮನಿ, ರಾಜಶೇಖರ ಯಡಹಳ್ಳಿ, ದೊಡ್ಡಣ್ಣ ಭಜಂತ್ರಿ, ಮಿಲನಕುಮಾರ ನಾಮದಾರ, ಎಲ್.ಬಿ. ಸಜ್ಜನ, ಚನ್ನು ಕಟ್ಟಿಮನಿ, ಸುರೇಶ ಬಿಜಾಪುರ, ರಾಜೇಶ ತೊರವಿ, ವೆಂಕಟೇಶ ವಗ್ಯಾನವರ, ಸೋಮು ರಣದೇವಿ, ಲಾಯಪ್ಪ ಇಂಗಳೆ, ಸಂಘರ್ಷ ಹೊಸಮನಿ, ಕಲ್ಲು ಶಿವಶರಣ, ನಾಗನಾಥ ದೇವಕುಳೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
