ಬೈಲೂರ:
ನಾವು ಅನೇಕ ದೊಡ್ಡ ಕಾರ್ಯಕ್ರಮ, ಸಭೆಗಳನ್ನು ಮಾಡುತ್ತೇವೆ ಆದರೆ ಶರಣ ಸಂಸ್ಕೃತಿ ಶಿಬಿರ ಮಕ್ಕಳಿಗಾಗಿ ಆಯೋಜಿಸಿರುವುದು ಮುಂದಿನ ಜನಾಂಗಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇದರಿಂದ ವೈಜ್ಞಾನಿಕ, ವೈಚಾರಿಕತೆಯ ಮನೋಭಾವಗಳ ಜೊತೆಗೆ ಏಕದೇವೋಪಾಸನೆಯ ಕುರಿತು ಅರಿವು ಮೂಡಿ ಲಿಂಗಾಯತ ಧರ್ಮ ಉಳಿಸಿ ಬೆಳೆಸಿಕೊಂಡು ಹೋಗಲು ಸಾಧ್ಯವಿದೆ ಎಂದು ಕೆ.ಎಲ್.ಇ ಸಂಸ್ಥೆಯ ಜೆ.ಎನ್.ಎಮ್.ಸಿ ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಅವಿನಾಶ ಕವಿ ಹೇಳಿದರು.
ಬೆಳಗಾವಿ ಜಿಲ್ಲೆ, ಚೆನ್ನಮ್ಮನ ಕಿತ್ತೂರು ತಾಲೂಕ, ಬೈಲೂರ ಗ್ರಾಮದ ನಿಷ್ಕಲ ಮಂಟಪ ಚೆನ್ನಬಸವಣ್ಣನವರ ಸಭಾಭವನದಲ್ಲಿ ಪೂಜ್ಯಶ್ರೀ ನಿಜಗುಣಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಆಯೋಜಿಸಿದ ಶರಣ ಸಂಸ್ಕ್ರತಿ ಶಿಬಿರದಲ್ಲಿ, ಶಿವಯೋಗದಲ್ಲಿ ವೈಜ್ಞಾನಿಕತೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಲಿಂಗಾಯತ ಧರ್ಮದಲ್ಲಿ ಮುಖ್ಯವಾಗಿ ಮೂರು ಸಿದ್ಧಾಂತ, ತತ್ವಗಳು (ಅಷ್ಟಾವರಣ, ಪಂಚಾಚಾರ, ಷಟಸ್ಥಲ) ಇವೆ. ಅವು ಬಸವಣ್ಣನವರು ಹಾಗೂ ಸಮಕಾಲೀನ ಶರಣರು ತಮ್ಮ ದೈನಂದಿನ ಜೀವನದ ಕುರಿತು ವಚನಗಳಲ್ಲಿ ದಾಖಲಿಸಿದ್ದಾರೆ. ವಚನ ಸಾಹಿತ್ಯಕ್ಕೆ ಜಗತ್ತಿನ ಯಾವ ಸಾಹಿತ್ಯವೂ ಸರಿಸಾಟಿಯಾಗದೆ, ಅತ್ಯಂತ ಉನ್ನತ ಸ್ಥಾನದಲ್ಲಿ ಬಸವಾದಿ ಶರಣರ ವಚನ ಸಾಹಿತ್ಯ ನಿಲ್ಲುತ್ತದೆ ಎಂದರು.
ವಿಶ್ವ ಅರೋಗ್ಯ ಸಂಸ್ಥೆಯು ಆರೋಗ್ಯ ಎಂದರೆ ಒಬ್ಬ ವ್ಯಕ್ತಿಯ ಸಂಪೂರ್ಣ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಮತೋಲನ ಸ್ಥಿತಿ ಎಂದು ತಿಳಿಸಿದ್ದಾರೆ. ಅದು ನಮ್ಮ ಚೆನ್ನಬಸವಣ್ಣನವರ ಕರಣಹಸಿಗೆ ಎಂಬ ವಚನ ಗ್ರಂಥದಲ್ಲಿ ಇದೆ. ಜೊತೆಗೆ ಮನುಷ್ಯನ ಆಹಾರ, ನಿದ್ರೆ, ಮಾತು ಮಿತವಾಗಿರಬೇಕು ಎಂದು ವಚನಗಳಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಇಷ್ಟಲಿಂಗ ಕೇವಲ ಲಿಂಗಾಯತ ಧರ್ಮದ ಲಾಂಛನವಾಗಿ, ಪೂಜೆ ಮಾಡುವುದಕಷ್ಟೇ ಅಲ್ಲದೇ ಇದು ಸಾಮಾಜಿಕ, ಆರ್ಥಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ, ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ, ಆಧ್ಯಾತ್ಮಿಕ, ತತ್ವಜ್ಞಾನಗಳ ಕುರಿತು ಸಮಗ್ರವಾಗಿ ಮಾರ್ಗದರ್ಶಿಯಾಗಿ ಇಷ್ಟಲಿಂಗವೂ ವೈಜ್ಞಾನಿಕ ಪರಭಾಷೆಯ ಅಂಶಗಳನ್ನು ಹೊಂದಿದೆ ಎಂದರು. ಮಕ್ಕಳಿಗೆ ಇಷ್ಟಲಿಂಗ ಸಂಸ್ಕಾರ ಅತ್ಯಾವಶ್ಯಕವಾಗಿದೆ ಎಂದರು.
ಇಂತಹ ಶಿಬಿರಗಳು ಶುದ್ಧೀಕರಣದ ಕೇಂದ್ರಗಳು, ನಮ್ಮ ಮನಸ್ಸು, ಭಾವನೆಗಳನ್ನು ನಿತ್ಯ ಚೈತನ್ಯವಾಗಿರಿಸಲು ಇಷ್ಟಲಿಂಗದ ಕುರಿತು ಶಿಬಿರಗಳಾಗಬೇಕು. ಬಸವಣ್ಣನವರು ಧಾರ್ಮಿಕ ಸಾಮಾಜಿಕ ರಾಜಕೀಯ ಆರ್ಥಿಕ ತತ್ವಗಳ ಆಧ್ಯಾತ್ಮಿಕ ವಿಜ್ಞಾನಿ ಎಂದು ಅವಿನಾಶ ಅಭಿಪ್ರಾಯಪಟ್ಟರು.

ಪೂಜ್ಯ ನಿಜಗುಣಾನಂದಸ್ವಾಮೀಜಿ ಸಾನಿಧ್ಯವಹಿಸಿದ್ದರು. ಬಸವ ಧರ್ಮಪೀಠದ ಬಸವ ದೇವರು, ಶಿಕ್ಷಕ ಮಹಾಂತೇಶ ತೋರಣಗಟ್ಟಿ, ಬಸವರಾಜ ಲದ್ದಿಮಠ, ರುದ್ರಪ್ಪ ಇಟಗಿ, ರವಿ ಪಾಟೀಲ, ಶಂಕ್ರಣ್ಣಾ ಪತ್ತಾರ, ಸಂಗಮೇಶ ಹಿರೇಮಠ, ನಾಗೇಶ ಬೆಣ್ಣಿ, ಶಿವಾನಂದ ಮೆಟ್ಯಾಲ, ಫಕ್ಕೀರಗೌಡ ಹಾದಿಮನಿ, ರವಿ ಮಡಿವಾಳರ, ಚನ್ನಪಗೌಡ ಪಾಟೀಲ, ಸಂಜು ಕೊಟಗಿ, ಗದಿಗೆಪ್ಪ ರುಮೋಜಿ, ನವೀನ ಪುರಕಿ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಶರಣ ನಾಗರಾಜ ಹಿರೇಮಠ ಸ್ವಾಗತಿಸಿದರು, ನಾಗೇಶ ಅಜ್ಜವಾಡಿಮಠ ನಿರೂಪಿಸಿದರು ಶರಣು ಇಳಿಗೇರ ವಂದಿಸಿದರು.
