ಕಾವೇರಿ ಆರತಿ ಬದಲು ವಚನ ಕಮ್ಮಟ: ದ್ರಾವಿಡ ಚಳುವಳಿಯ ಹನಕೆರೆ ಅಭಿಗೌಡ ಸಂದರ್ಶನ

ರವೀಂದ್ರ ಹೊನವಾಡ
ರವೀಂದ್ರ ಹೊನವಾಡ

ಉತ್ತರದ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಸುವುದನ್ನು ಮಂಡ್ಯದಲ್ಲಿರುವ ‘ನಾವು ದ್ರಾವಿಡ ಕನ್ನಡಿಗರು ಚಳುವಳಿ’ ಸಂಘಟನೆ ವಿರೋಧಿಸಿದೆ.

ಇದರ ಬದಲು ಬಸವಣ್ಣನವರ ವಚನಗಳ ಸಮಾಲೋಚನೆ ನಡೆಸಬೇಕೆಂದು ಒಂದು ಪರ್ಯಾಯ ಕೂಡ ಸೂಚಿಸಿದೆ.

ಸಂಘಟನೆಯ ಸಂಸ್ಥಾಪಕ, ಸಂಚಾಲಕ ಹನಕೆರೆ ಅಭಿಗೌಡ ಬಸವ ಮೀಡಿಯಾದ ರವೀಂದ್ರ ಹೊನವಾಡ ಅವರ ಜೊತೆ ಸಂವಾದದಲ್ಲಿ.

ಕಾವೇರಿ ಆರತಿ ಬೇಡ ಅನ್ನಲು ಕಾರಣ…

ಈಗಾಗಲೇ ಕೇಂದ್ರ ಸರ್ಕಾರವು ಸರ್ವಾಧಿಕಾರದಿಂದ ವರ್ತಿಸುತ್ತ, ನಮ್ಮ ಕನ್ನಡ ನಾಡು ನುಡಿ ಆಚರಣೆಗಳಿಗೆ ಅವಕಾಶ ಕೊಡದೆ ಉತ್ತರ ಭಾರತದ ಹಿಂದಿ ಮತ್ತು ಸಂಸ್ಕೃತ ಆಚರಣೆಗಳ ಹೇರಿಕೆಗೆ ಸಾವಿರಾರು ಕೋಟಿ ವ್ಯಯಿಸುತ್ತಿದೆ. ಹೀಗಿರುವಾಗ ಕರ್ನಾಟಕ ಸರ್ಕಾರ ಕೂಡ ಉತ್ತರ ಭಾರತದ ಹಿಂದಿ ಮತ್ತು ಸಂಸ್ಕೃತ ಆಚರಣೆಗಳ ಹೇರಿಕೆಗೆ ಹಣ ವ್ಯಯಿಸುವುದು ತಪ್ಪು ನಡೆಯಾಗುತ್ತದೆ.

ಕಾವೇರಿ ಆರತಿ ಬದಲು ನೀವು ಸೂಚಿಸಿರುವ ಪರ್ಯಾಯ?

ಸರಕಾರವು ಕಾವೇರಿ ಆರತಿಯ ಮಾಡುವ ಬದಲು, ಬಸವಣ್ಣನವರ ವಚನಗಳ ಸಮಾಲೋಚನೆ, ವಚನ ಕಮ್ಮಟ ಏರ್ಪಡಿಸಿದರೆ ಅದು ಬಹಳ ಒಳ್ಳೆಯದು.

ಈ ಕಾರ್ಯಕ್ರಮವನ್ನು ಕೈ ಬಿಡಿ ಅಂತ ಹೇಳಿಬಿಟ್ರೆ ಕೆಲಸ ಮುಗಿಯೋದಿಲ್ಲ. ಅದರ ಬದಲು ಏನು ಮಾಡಬೇಕು ಅಂತ ಹೇಳಬೇಕಾಗುತ್ತದೆ. ಪರ್ಯಾಯ ಕಾರ್ಯಕ್ರಮ ಹೇಳಬೇಕಾಗುತ್ತದೆ. ಸಿದ್ದಯ್ಯ ಪುರಾಣಿಕರು ಏನು ಹೇಳ್ತಾರೆ ಅಂದ್ರೆ ಕತ್ತಲೆ ಕತ್ತಲೆ ಎಂದು ಕೂಗಿ ಹೇಳಿ ದೀಪವನ್ನು ಹಚ್ಚದೆ ಹೋಗದಿರಿ ಅಂತ ಹೇಳ್ತಾರೆ.

ಪರ್ಯಾಯವಾಗಿ ಬಸವಣ್ಣ, ವಚನ ಕಮ್ಮಟ ಸೂಚಿಸಿರುವ ಕಾರಣ…

ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡಿದರೆ ಜಾತಿ ಅಸಮಾನತೆ, ಅಸ್ಪೃಶ್ಯತೆ, ಮತ್ತಿತರ ಮೌಢ್ಯಚಾರಣೆಗಳು ಕೂಡ ಜಾಸ್ತಿ ಆಗುತ್ತೆ.

ಇದರ ಬದಲು ವಚನ ಕಮ್ಮಟ ನಡೆಸಿದರೆ ಈ ಕೆಟ್ಟ ಆಚರಣೆಗಳು ಕಡಿಮೆಯಾಗುತ್ತೆ ಯಾಕಂದರೆ ಬಸವಣ್ಣ ಸಮಾನತೆಯ ಹರಿಕಾರರು. ಹಾಗಾಗಿ ಬಸವಣ್ಣನವರ ವಚನಗಳ ಸಾರ ತಿಳಿಸುವದು ಸೂಕ್ತವಾಗಿದೆ. ವಚನಗಳು ಎಲ್ಲ ಕಾಲಕ್ಕೂ ಸಲ್ಲುವಂತಹವುಗಳು.

ಸರಕಾರ ಕೂಡ ಬಸವಣ್ಣನವರನ್ನ ನಾಡಿನ ಸಾಂಸ್ಕೃತಿಕ ನಾಯಕ ಅಂತ ಘೋಷಿಸಿದ ಮೇಲೆ ಅವರ ವಿಚಾರಧಾರೆ ಹರಡುವುದಕ್ಕೆ ದುಡ್ಡು ಖರ್ಚು ಮಾಡಬೇಕು. ಅದು ಬಿಟ್ಟು ಮೌಡ್ಯ ತುಂಬುವುದಕ್ಕೆ ಖರ್ಚು ಮಾಡುವ ಪ್ರಯತ್ನಗಳನ್ನು ವಿರೋದಿಸಬೇಕಾಗುತ್ತದೆ.

ಬಸವಣ್ಣನವರು ಹೇಳಿದ್ದು ಇಂದಿಗೂ ಪ್ರಸ್ತುತವೇ?

ಖಂಡಿತವಾಗಿ. ಇವತ್ತು ಬಸವಣ್ಣನವರು ಹೇಳಿದಂತೆ ಎಲ್ಲವನ್ನು ಹಂಚಿಕೊಂಡು ತಿನ್ನಬೇಕು. ಅವರ ಕಾಯಕ, ದಾಸೋಹ, ಕನ್ನಡ ಈ ಮೂರು ಕೂಡ ಇಡೀ ಕನ್ನಡ ನಾಡಲ್ಲಿ ಪಸರಿಸಬೇಕು.

ಉತ್ತರ ಕರ್ನಾಟಕದಲ್ಲಿರುವ ಬಸವಣ್ಣನವರ ವಚನ ಚಳುವಳಿಯ ಪ್ರಭಾವ ಹಳೆ ಮೈಸೂರು ಭಾಗಕ್ಕೂ ವಿಸ್ತಾರ ಆಗಬೇಕೆನ್ನುವುದು ನಮ್ಮ ಅಭಿಲಾಷೆಯಾಗಿದೆ.

ನಿಮ್ಮ ಮಾತು ಸರಕಾರ ಕೇಳುತ್ತದೆ ಅನಿಸುತ್ತದೆಯೇ

ಮೌಢ್ಯಾಚರಣೆಗೆ ಯಾವ ಕಾರಣಕ್ಕೂ ಸರಕಾರ ಆಸ್ಪದ ಕೊಡಬಾರದು, ಇದರ ವಿರುದ್ಧ ಸಮಾನ ಮನಸ್ಕರೆಲ್ಲ ಸೇರಿ ಸರ್ಕಾರಕ್ಕೆ ಹೇಳಬೇಕು. ಸರ್ಕಾರದವರು ಕೇಳಲಿಲ್ಲ ಅಂದರೆ ನಾವೆಲ್ಲಾ ಸೇರಿ ತಡೆಯೋಣ.

Share This Article
Leave a comment

Leave a Reply

Your email address will not be published. Required fields are marked *